ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡುವಿನ ಸಮಯದಲ್ಲಿ ಟೆಲಿ ಎಜುಕೇಶನ್‌ ನೀಡಲಿ

ಹೋಂ ಕ್ವಾರಂಟೈನ್‌ ಅವಧಿ ಮುಗಿಸಿದ ಕುಲಪತಿ ಶರಣಪ್ಪ ಹಲಸೆ
Last Updated 31 ಮಾರ್ಚ್ 2020, 17:17 IST
ಅಕ್ಷರ ಗಾತ್ರ

ದಾವಣಗೆರೆ: ‘ಕೋವಿಡ್‌–19’ ಹಿನ್ನೆಲೆಯಲ್ಲಿ ಕಾಲೇಜುಗಳಿಗೂ ರಜೆ ನೀಡಿರುವುದರಿಂದ ಮನೆಯಲ್ಲೇ ಇರುವ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಗೆ ಸಮಯ ಕಳೆಯುವುದು ಹೇಗೆ ಎಂಬ ಚಿಂತೆ ಕಾಡುತ್ತಿರಬಹುದು. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ‘ಟೆಲಿ ಎಜುಕೇಶನ್‌’ ನೀಡುವ ಮೂಲಕ ಬಿಡುವಿನ ಈ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎನ್ನುತ್ತಾರೆ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ.

ದುಬೈನಲ್ಲಿ ನಡೆದಿದ್ದ ಜಾಗತಿಕ ಶಿಕ್ಷಣ ಮೇಳದಲ್ಲಿ ಪಾಲ್ಗೊಂಡು ನಗರಕ್ಕೆ ವಾಪಸ್ಸಾಗಿದ್ದ ಹಲಸೆ, 14 ದಿನಗಳ ಹೋಂ ಕ್ವಾರಂಟೈನ್‌ ಅವಧಿಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಲಾಕ್‌ಡೌನ್‌ ಅವಧಿಯಲ್ಲಿ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಏನು ಮಾಡಬಹುದು ಎಂಬ ಬಗ್ಗೆ ಅವರು ‘ಪ್ರಜಾವಾಣಿ’ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

‘ತರಗತಿಗಳು ನಡೆಯುತ್ತಿಲ್ಲ ಎಂದು ಚಿಂತಿಸಬೇಕಾಗಿಲ್ಲ. ಆಯಾ ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿಕೊಳ್ಳಬೇಕು. ಅದರಲ್ಲಿ ಚರ್ಚಿಸುವ ಮೂಲಕ ವಿದ್ಯಾರ್ಥಿಗಳು ತಮ್ಮ ಸಂದೇಹಗಳನ್ನು ಬಗೆಹರಿಸಿಕೊಳ್ಳಬೇಕು. ಪ್ರಾಧ್ಯಾಪಕರೂ ಮನೆಯಲ್ಲೇ ಕುಳಿತು ಮಾರ್ಗದರ್ಶನ ನೀಡಬಹುದು. ‘ಝೂಮ್‌ ಆ್ಯಪ್‌’ಗಳ ಮೂಲಕ ‘ಟೆಲಿ ಎಜುಕೇಶನ್‌’ ನೀಡಲು ಸಾಧ್ಯವಿದೆ. ವಿಶ್ವವಿದ್ಯಾಲಯದ ಕೆಲ ವಿಭಾಗಗಳಲ್ಲಿ ಇದನ್ನು ಆರಂಭಿಸಲಾಗಿದೆ’ ಎಂದು ಹಲಸೆ ತಿಳಿಸಿದರು.

ಪ್ರಾಜೆಕ್ಟ್‌ ಬರೆಯಲಿ: ದಿನನಿತ್ಯ ಪಾಠ ಪ್ರವಚನಗಳಲ್ಲಿ ತೊಡಗಿಕೊಳ್ಳುವ ಶಿಕ್ಷಕರಿಗೆ ಹೆಚ್ಚಿನ ಸಮಯ ಸಿಗುತ್ತಿರಲಿಲ್ಲ. ಈಗ ಸಿಕ್ಕ ಬಿಡುವಿನ ಅವಧಿಯಲ್ಲಿ ಪ್ರಾಜೆಕ್ಟ್‌ ಬರೆಯಬಹುದು. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಯುಜಿಸಿಯು ಒಳ್ಳೆಯ ಪ್ರಾಜೆಕ್ಟ್‌ ಬರೆದ ಪ್ರಾಧ್ಯಾಪಕರಿಗೆ ₹ 10 ಲಕ್ಷದಿಂದ ₹ 20 ಲಕ್ಷದವರೆಗೂ ಸಹಾಯಧನ ನೀಡುತ್ತದೆ. ಇಂಟರ್‌ನೆಟ್‌ನಲ್ಲಿ ಬೇರೆ ಬೇರೆ ಪೇಪರ್‌ಗಳನ್ನು ಪರಾಮರ್ಶೆ ಮಾಡಿದರೆ ಒಂದು ತಿಂಗಳ ಅವಧಿಯಲ್ಲಿ ಒಳ್ಳೆಯ ಸಂಶೋಧನಾತ್ಮಕ ಪ್ರಾಜೆಕ್ಟ್‌ ಬರೆಯಲು ಸಾಧ್ಯವಿದೆ ಎಂದು ಕುಲಪತಿ ಸಲಹೆ ನೀಡಿದರು.

ಹೋಂ ಕ್ವಾರಂಟೈನ್‌ ನೆನಪು

‘ನಾನು ಮೇಲಿಂದ ಮೇಲೆ ಬಿಸಿ ನೀರು ಕುಡಿಯುತ್ತಿದ್ದೆ. ಬಿಸಿ ಊಟ ಮಾಡುತ್ತಿದ್ದೆ. ಶನಿವಾರ ಹಾಗೂ ಮಂಗಳವಾರ ಮಧ್ಯಾಹ್ನ ಉಪವಾಸ ಮಾಡುತ್ತಿದ್ದೆ. ಹನುಮಾನ್‌ ಚಾಲೀಸ ಪಠಣ ಹಾಗೂ ಪೂಜೆ ಮಾಡುವ ಮೂಲಕ ಬೆಳಗಿನ ಅವಧಿ ಕಳೆಯುತ್ತಿದ್ದೆ. ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ವಾಟ್ಸ್‌ಆ್ಯಪ್‌ ಗ್ರೂಪ್‌ ಮಾಡಿಕೊಂಡಿದ್ದೆ. ವಾಟ್ಸ್‌ಆ್ಯಪ್‌ ಗ್ರೂಪ್‌ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಅದರಲ್ಲೇ ಅಧ್ಯಯನದ ಬಗ್ಗೆ ಮಾರ್ಗದರ್ಶನ ಮಾಡುವಂತೆ ಪ್ರಾಧ್ಯಾಪಕರಿಗೆ ಸೂಚನೆ ನೀಡುತ್ತಿದ್ದೆ. ನಾಗಪುರ ವಿಶ್ವವಿದ್ಯಾಲಯದಿಂದ ಬಂದಿದ್ದ ‍ಪಿಎಚ್‌.ಡಿ ಥಿಸೀಸ್‌ ಮೌಲ್ಯಮಾಪನ ಮಾಡಿ ಕಳುಹಿಸಿಕೊಟ್ಟೆ. ತುರ್ತಾಗಿ ವಿಲೇವಾರಿ ಮಾಡಬೇಕಾದ ಕಡತಗಳನ್ನು ಮನೆಗೇ ತರಿಸಿಕೊಂಡು ನೋಡುತ್ತಿದ್ದೆ’ ಎಂದು ಹಲಸೆ ಅವರು ಹೋಂ ಕ್ವಾರಂಟೈನ್‌ನಲ್ಲಿ ಕಳೆದ ದಿನಗಳನ್ನು ಸ್ಮರಿಸಿದರು.

‘ಹೋಂ ಕ್ವಾರಂಟೈನ್‌ನಲ್ಲಿ ಇರುವವರು ಯಾವುದೇ ಕಾರಣಕ್ಕೂ ನಿಗದಿತ ಸಮಯದವರೆಗೂ ಮನೆಯಲ್ಲೇ ಪ್ರತ್ಯೇಕವಾಗಿ ಇರಬೇಕು. ಪ್ರಧಾನಿ ನರೇಂದ್ರ ಮೋದಿ ಅವರು 21 ದಿನಗಳ ಕಾಲ ಮನೆಯಲ್ಲೇ ಉಳಿಯಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT