ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತೆ ಬರೆದರೆ ದೇಶದ್ರೋಹದ ಆರೋಪ ಸರಿಯಲ್ಲ

ಮಧ್ಯಪ್ರದೇಶದ ಮಾಜಿ ಶಾಸಕ ಡಾ.ಸುನೀಲಂ ಹೇಳಿಕೆ
Last Updated 22 ಫೆಬ್ರುವರಿ 2020, 10:37 IST
ಅಕ್ಷರ ಗಾತ್ರ

ದಾವಣಗೆರೆ: ಇಂದಿರಾಗಾಂಧಿ ಸರ್ಕಾರ ತುರ್ತು ಪರಿಸ್ಥಿತಿ ಹೇರಿದ್ದರಿಂದ ಅನೇಕರೂ ಜೈಲಿಗೆ ಹೋಗಬೇಕಾಯಿತು. ಆದರೆ ಈಗ ತುರ್ತು ಪರಿಸ್ಥಿತಿ ಬಂದಿದೆ. ಮುಂದೆ ಏನಾಗಬಹುದೋ ಗೊತ್ತಿಲ್ಲ ಎಂದು ಮಧ್ಯಪ್ರದೇಶದ ಮಾಜಿ ಶಾಸಕ ಡಾ.ಸುನೀಲಂ ಅನುಮಾನ ವ್ಯಕ್ತಪಡಿಸಿದರು.

ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ವಿರುದ್ಧ ‘ನಾವು ಭಾರತೀಯರು’ ಸಂಘಟನೆ ಇಲ್ಲಿನ ಇಮಾಮ್‌ ಅಹ್ಮದ್‌ ರಜಾ ಪಾರ್ಕ್‌ನಲ್ಲಿ ನಡೆದ ಸತ್ಯಾಗ್ರಹದಲ್ಲಿ ಅವರು ಮಾತನಾಡಿ, ‘ಜನರ ಶಕ್ತಿ ಮುಂದೆ ಏನೂ ನಡೆಯುವುದಿಲ್ಲ. ಸರ್ಕಾರ ಹಾಗೂ ಸಂಸದರನ್ನು ಬದಲಾಯಿಸುವ ಶಕ್ತಿ ಇದೆ’ ಎಂದರು.

‘ಇಂದಿನ ದಿನಗಳಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಕವಿತೆ ಬರೆದ ತಕ್ಷಣ ಅವರನ್ನು ದೇಶದ್ರೋಹದ ಹೆಸರಲ್ಲಿ ಬಂಧಿಸುವುದು ಖಂಡನೀಯ’ಎಂದರು.

‘ಸಂವಿಧಾನ ಎಲ್ಲರಿಗೂ ಸ್ವಾತಂತ್ರ್ಯ ನೀಡಿದೆ. ಕೇಂದ್ರ ಸರ್ಕಾರ ಸಿದ್ಧಾಂತ ವಿರೋಧಿ ಕೆಲಸ ಮಾಡುತ್ತಿದೆ. ಸಂವಿಧಾನ ರಕ್ಷಣೆಗೆ ಯುವಕರು ಹಾಗೂ ಮಹಿಳೆಯರು ಹೋರಾಟಕ್ಕೆ ನಿಲ್ಲಬೇಕಿದೆ. ಅವರು ಹೋರಾಟಕ್ಕೆ ನಿಂತರೆ ಸಂವಿಧಾನ ಉಳಿವು ಸಾಧ್ಯ’ ಎಂದರು.

‘ಸಂಸತ್ತಿಗೆ ಕಾನೂನು ಮಾಡಲು ಅವಕಾಶಗಳಿವೆ. ಒಂದು ವೇಳೆ ಸರ್ಕಾರ ಮಾಡುತ್ತಿರುವುದು ಸರಿ ಎಂದು ಸುಪ್ರೀಂ ಕೋರ್ಟ್ ಹೇಳಿದರೆ ಹೋರಾಟ ನಿಲ್ಲಿಸುತ್ತೀರಾ? ಎಂದು ಪತ್ರಕರ್ತರು ಕೇಳುತ್ತಿದ್ದಾರೆ. ಆದರೆ ನಮ್ಮ ಹೋರಾಟ ನಿಲ್ಲುವುದಿಲ್ಲ. ಸಂವಿಧಾನದಲ್ಲಿ ಎಲ್ಲರಿಗೂ ಹೋರಾಟ ಮಾಡುವ ಹಕ್ಕು ಇದ್ದು, ಸುಪ್ರೀಂ ಕೋರ್ಟ್ ಹೇಳಿದ ಮಾತ್ರಕ್ಕೆ ಒಪ್ಪಿಕೊಳ್ಳಬೇಕು ಎಂದೇನು ಇಲ್ಲ’ ಎಂದು ಹೇಳಿದರು.

ಮಧ್ಯಪ್ರದೇಶದ ವಕೀಲರಾದ ಆರಾಧನಾ ಭಾರ್ಗವ್‌‘ ‘ಸ್ವಾತಂತ್ರ್ಯ ಹೋರಾಟದ ವೇಳೆ ಝಾನ್ಸಿರಾಣಿ ಲಕ್ಷ್ಮೀಬಾಯಿ ಒಬ್ಬರೇ ಹೋರಾಟ ಮಾಡಿದರು. ಮಹಿಳೆಯರು ಒಟ್ಟುಗೂಡಿದರೆ ಸರ್ಕಾರ ಉರುಳಿಸಲು ಹೆಚ್ಚಿನ ಸಮಯ ಬೇಕಾಗುವುದಿಲ್ಲ. ಭಾರತವನ್ನು ಒಡೆಯಲು, ಅಶಾಂತಿಗೆ ಅವಕಾಶ ನೀಡಬಾರದು. ಎಂತಹ ಸಂದರ್ಭ ಬಂದರೂ ಪ್ರಾಣತ್ಯಾಗಕ್ಕೂ ಸಿದ್ಧ’ ಎಂದರು.

‘ಇಂದು ಹಲವು ಕ್ಷೇತ್ರಗಳಲ್ಲಿ ಖಾಸಗೀಕರಣ ನಡೆಯುತ್ತಿದ್ದು, ಭಾರತದ ಸಂಪತ್ತನ್ನು ಮಾರಾಟ ಮಾಡಲು ಅಧಿಕಾರ ಯಾರು ಕೊಟ್ಟರು? ಇದು ದ್ರೋಹ ಅಲ್ಲವೇ ಎಂದು ಹೇಳಿದ ಅವರು ಭೂಮಿ, ನದಿಗಳ ಮಾರಾಟ ನಡೆಯುತ್ತಿದೆ ಇದನ್ನು ತಪ್ಪಿಸಬೇಕು’ ಎಂದರು.

ಮಾಜಿ ಸಭಾಪತಿ ಬಿ.ಆರ್. ಪಾಟೀಲ್ ಮಾತನಾಡಿ, ‘ಇಂದಿನ ಉತ್ತಮ ಶಿಕ್ಷಣ, ಆಸ್ಪತ್ರೆ, ಯುವಕರಿಗೆ ಉದ್ಯೋಗ ಬೇಕು. ಹಾಗೂ ರೈತರ ಬೆಳೆಗೆ ಯೋಗ್ಯ ಬೆಲೆ ಸಿಗಬೇಕು. ಆದರೆ ಇಂದಿನ ಸರ್ಕಾರ ಸುಳ್ಳು ಆಸ್ವಾಸನೆ ನೀಡಿ, ಭಾವನಾತ್ಮಕ ವಿಷಬೀಜ ಬಿತ್ತುತ್ತಿದೆ. ಧರ್ಮದ ಹೆಸರಿನಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ನಿಮ್ಮ ಹೋರಾಟಕ್ಕೆ ನಾವು ಜೊತೆಯಲ್ಲಿದ್ದೇವೆ’ ಎಂದರು.

ಉತ್ತರ ಪ್ರದೇಶ ಸಮಾಜವಾದಿ ಸಮಾಗಮ್‌ ಮುಖ್ಯಸ್ಥ ಅರುಣ್‌ಕುಮಾರ ಶ್ರೀವಾತ್ಸವ ಮಾತನಾಡಿ, ‘ಇಂದು ದೇಶದಲ್ಲಿ ಮಹಾದಾಯಿ ಸೇರಿ ಹಲವು ಸಮಸ್ಯೆಗಳು ಇವೆ. ಆದರೆ ಕೇಂದ್ರ ಸರ್ಕಾರಕ್ಕೆ ಇವುಗಳು ಯಾವುವು ನಿಜವಾದ ಸಮಸ್ಯೆಗಳಲ್ಲ ಎಂಬಂತೆ ನಡೆದುಕೊಳ್ಳುತ್ತಿದೆ’ ಎಂದು ಆರೋಪಿಸಿದರು.

ಕೇರಳದ ಬಿ.ಟಿ. ಜೋಷಿ, ಹರಿಯಾಣದ ಲೋಕೇಶ್‌, ಉತ್ತರಖಂಡಾದ ಅಂಜನಾ, ‘ನಾವು ಭಾರತೀಯರು’ ಸಂಘಟನೆಯ ಸಂಚಾಲಕಿ ಜಬೀನಾಖಾನಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT