ದಾವಣಗೆರೆ: ‘ವಾಲ್ಮೀಕಿ ಸಮುದಾಯ ನನ್ನ ಸಮಾಜ. ಈ ಸಮುದಾಯಕ್ಕೆ ನ್ಯಾಯ ಕೊಡಬೇಕು ಎಂಬುದು ಒಂದೇ ಗುರಿ ನನ್ನಲ್ಲಿತ್ತು. ಆ ಗುರಿ ಸಾಧಿಸಿದ್ದೇನೆ. ನೀವು ನನ್ನ ಪರ ನಿಂತರೆ ನಿಮಗಾಗಿ ಎಲ್ಲವನ್ನೂ ಗೆದ್ದು ಕೊಡುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹರಿಹರ ತಾಲ್ಲೂಕಿನ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ನಡೆದ ವಾಲ್ಮೀಕಿ ಜಾತ್ರೆಯಲ್ಲಿ ಗುರುವಾರ ಅವರು ಮಾತನಾಡಿದರು.
ಹಲವಾರು ವರ್ಷಗಳ ನಮ್ಮ ಬೇಡಿಕೆ ಈಡೇರುತ್ತೋ ಇಲ್ವೋ ಎಂಬ ದುಗುಡ, ಆತಂಕ ಕಳೆದ ಬಾರಿಯ ವಾಲ್ಮೀಕಿ ಜಾತ್ರೆಯಲ್ಲಿತ್ತು. ಈ ಬಾರಿಯ ಜಾತ್ರೆಯಲ್ಲಿ ದುಃಖ ದುಮ್ಮಾನಗಳ ಕಾರ್ಮೋಡ ಸರಿದು ಭರವಸೆಯ ಸೂರ್ಯನ ಬೆಳಕು ಬಿದ್ದಿದೆ. ಈಗ ವಾಲ್ಮೀಕಿ ಜಾತ್ರೆಗೆ ಹೊಸ ಅರ್ಥ, ಹೊಸ ಶಕ್ತಿ, ಹೊಸ ಭರವಸೆ ಬಂದಿದೆ. ಇದಕ್ಕೆ ಪ್ರಸನ್ನಾನಂದ ಸ್ವಾಮೀಜಿಯ ಹೋರಾಟ ಕಾರಣ. ಇನ್ನು ಮುಂದೆ ಈ ಸಮಾಜವನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದರು.
ಪರಿಶಿಷ್ಟ ಪಂಗಡದ ಸಮುದಾಯಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸಲು ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಲಾಗಿದೆ. 75 ಯೂನಿಟ್ ಉಚಿತ ವಿದ್ಯುತ್ , ಸಮುದಾಯದ ರೈತರಿಗೆ ಜಮೀನು ಖರೀದಿಗೆ 25 ಲಕ್ಷದವರೆಗೆ ಅನುದಾನ, ಮನೆ ನಿರ್ಮಾಣಕ್ಕೆ 2 ಲಕ್ಷ, ವಸತಿ ನಿಲಯಗಳ ಹೆಚ್ಚಳ ಹೀಗೆ ಅನೇಕ ಕಾರ್ಯತಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಹೃದಯ ಶ್ರೀಮಂತಿಕೆಯಿರುವ ವಾಲ್ಮೀಕಿ ಸಮುದಾಯ ಎಲ್ಲ ರಂಗಗಳಲ್ಲಿಯೂ ದಕ್ಷತೆಯಿಂದ ಕೆಲಸ ಮಾಡುತ್ತಿದೆ. ಅನೇಕ ಸಾಧಕರು ಈ ಸಮಾಜದಿಂದ ಹೊರಹೊಮ್ಮಬೇಕು. ಮಾದರಿ ಸಮಾಜವನ್ನು ನಿರ್ಮಾಣವಾಗಬೇಕು. ಸಮಾಜ ಕಟ್ಟುವ ಕೆಲಸದಲ್ಲಿ ಈ ಸಮಾಜ ಮುಂಚೂಣಿಯಲ್ಲಿ ನಿಲ್ಲಬೇಕು ಎಂದು ಹಾರೈಸಿದರು.
ಮಧ್ಯಮ ಮತ್ತು ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಮಾತನಾಡಿ, ‘ದುಡಿದು ಬದುಕುವ ಸಮಾಜ ಯಾವುದಾದರೂ ಇದ್ದರೆ ಅದು ವಾಲ್ಮೀಕಿ ಸಮಾಜ. ಶಿಕ್ಷಣ, ಶ್ರೀಮಂತಿಕೆ ಕಡಿಮೆ ಇದ್ದರೂ ಸಜ್ಜನಿಕೆ, ಸ್ವಾಭಿಮಾನ ಹೆಚ್ಚಿರುವ ಸಮಾಜ ಇದು. ಮೀಸಲಾತಿಯನ್ನು ಸದುಪಯೋಗ ಪಡಿಸಿಕೊಂಡು ಮುಂದೆ ಬರಬೇಕು’ ಎಂದು
ಹಾರೈಸಿದರು.
ಒಂದೇ ಕಡೆ ವಾಲ್ಮೀಕಿ ಜಾತ್ರೆ ನಡೆಸುವ ಬದಲು ತರಳಬಾಳು ಹುಣ್ಣಿಮೆ ರೀತಿಯಲ್ಲಿ ಒಂದು ವರ್ಷ ಒಂದೊಂದು ಜಿಲ್ಲೆಯಲ್ಲಿ ನಡೆಸಬೇಕು ಎಂದು ಕೂಡ್ಲಿಗಿ ಶಾಸಕ ಎನ್.ವೈ. ಗೋಪಾಲಕೃಷ್ಣ ಸಲಹೆ ನೀಡಿದರು.
ಬೃಹತ್ ರಥ ನಿರ್ಮಾಣಕ್ಕೆ ಕೊಡುಗೆ ನೀಡಿದ್ದ ಪ್ರವಾಸೋದ್ಯಮ ಮತ್ತು ಪರಿಸರ ಖಾತೆ ಸಚಿವ ಆನಂದ ಸಿಂಗ್ ಅವರಿಗೆ ಮದಕರಿ ನಾಯಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಾಲ್ಮೀಕಿ ವಿಗ್ರಹಕ್ಕೆ 30 ಕೆ.ಜಿ. ಬೆಳ್ಳಿ ನೀಡಿರುವ ಬಂಗಾರು ಹನುಮಂತ ಅವರನ್ನು ಸನ್ಮಾನಿಸಲಾಯಿತು.
ಪ್ರಸನ್ನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಾತ್ರಾ ಸಮಿತಿ ಅಧ್ಯಕ್ಷ ಎಸ್.ವಿ. ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ವೀರೇಶ್ ಹನಗವಾಡಿ, ಶ್ರೀನಿವಾಸ್ ದಾಸಕರಿಯಪ್ಪ, ಬಿ.ಪಿ. ಹರೀಶ್, ಬಸವರಾಜ ನಾಯ್ಕ್, ಎನ್.ಎಂ, ಇಟಿಗೇರ್, ಬಳ್ಳಾರಿ ವಿರೂಪಾಕ್ಷಪ್ಪ, ನೇಮಚಂದ್ರನಾಯ್ಕ್, ಪ್ರೊ.ಎನ್. ಲಿಂಗಣ್ಣ, ಎಸ್. ಟಿ. ಬಳಿಗಾರ್, ಎಂ.ಪಿ. ರೇಣುಕಾಚಾರ್ಯ ಮುಂತಾದವರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.