ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಷಾನಗರದ ನರ್ಸ್‌, ಜಾಲಿನಗರದ ವೃದ್ಧ ಸೋಂಕು ತಂದವರಲ್ಲ

ಎರಡೂ ಕಡೆಗೆ ಒಂದೇ ಕಾಲೊನಿಯ ಲಿಂಕ್‌ನಿಂದ ಹರಡಿತ್ತಾ ಕೋವಿಡ್‌–19 ?
Last Updated 28 ಮೇ 2020, 19:30 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆ ಹಸಿರು ವಲಯಕ್ಕೆ ಬಂದ ಬಳಿಕದ ಮೊದಲ ಸೋಂಕಿತೆ ಬಾಷಾನಗರದ ಸ್ಟಾಫ್‌ ನರ್ಸ್‌ (ಪಿ.533) ಖಂಡಿತ ಅಲ್ಲ. ಪಕ್ಕದ ಕಾಲೊನಿಯಿಂದ ಬಂದಿದೆ ಎಂಬ ತೀರ್ಮಾನಕ್ಕೆ ಸರ್ವೇಕ್ಷಣಾ ಇಲಾಖೆ ಬಂದಿದೆ. ಅದಕ್ಕೆ ಹಲವು ಕಾರಣಗಳನ್ನು ತಿಳಿಸಿದೆ.

ನರ್ಸ್‌ ಅವರಲ್ಲಿ ಸೋಂಕು ಪತ್ತೆಯಾಗುವ ನಾಲ್ಕೈದು ದಿನಗಳ ಹಿಂದಷ್ಟೇ ಅವರಿಗೆ ತಗಲಿದೆ. ಹಾಗಾಗಿ ಅವರ ಮಗ ಮತ್ತು ಇನ್ನೊಬ್ಬರು ಹೀಗೆ ಮೂರೇ ಮಂದಿಗೆ ಬಾಷಾನಗರದಲ್ಲಿ ಸೋಂಕು ಪತ್ತೆಯಾಗಿದೆ. ಒಂದು ವೇಳೆ ಅದಕ್ಕಿಂತ ಮೊದಲೇ ಸೋಂಕು ಅವರಲ್ಲಿ ಇದ್ದಿದ್ದರೆ ಪತಿ, ಇನ್ನೊಬ್ಬ ಮಗ, ನೆರೆಯವರಿಗೆ ಬರಬೇಕಿತ್ತು. ಅಲ್ಲದೇ ಅವರು ಕೆಲಸ ಮಾಡಿರುವ ನಗರ ಆರೋಗ್ಯ ಕೇಂದ್ರದ ಸಿಬ್ಬಂದಿಗೆ ಬರಬೇಕಿತ್ತು. ನರ್ಸ್‌ ಅವರ ನೇರ ಸಂಪರ್ಕದ 16 ಮಂದಿಯನ್ನು 15 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇಟ್ಟು ಸತತ ಪರೀಕ್ಷೆ ಮಾಡಿದರೂ ಯಾರಿಗೂ ಸೋಂಕು ಬಾರದೇ ಇರುವುದೇ ಈ ತೀರ್ಮಾನಕ್ಕೆ ಬರಲು ಮೊದಲ ಕಾರಣ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ನರ್ಸ್‌ ಅವರಿಗೆ ಸೋಂಕು ಪತ್ತೆಯಾದ ಬಳಿಕ ಅವರು ಎಲ್ಲೆಲ್ಲಿಗೆ ಹೋಗಿದ್ದಾರೆ? ಯಾರಿಗೆಲ್ಲ ಚಿಕಿತ್ಸೆ ನೀಡಿದ್ದಾರೆ ಎಂದು ವಿಚಾರಿಸಿದಾಗ ಆ ಕಾಲೊನಿಯಲ್ಲಿ ಒಬ್ಬರಿಗೆ ಡ್ರಿಪ್‌ ಹಾಕಿ ನರ್ಸ್‌ ಚಿಕಿತ್ಸೆ ಕೊಟ್ಟಿರುವುದಾಗಿ ತಿಳಿಸಿದ್ದರು. ಅಚ್ಚರಿ ಅಂದರೆ ಚಿಕಿತ್ಸೆಯನ್ನು ಒಬ್ಬರು ಪಡೆದಿದ್ದರೂ ಅಲ್ಲಿನ ಬಹುತೇಕ ಎಲ್ಲರಲ್ಲೂ ಸೋಂಕು ಪತ್ತೆಯಾಗಿತ್ತು. ಹಾಗಾಗಿ ನರ್ಸ್‌ಗೂ ಅಲ್ಲಿಂದಲೇ ಬಂದಿದೆ. ಆದರೆ ನರ್ಸ್‌ ತನಗೆ ಸ್ವಲ್ಪ ಶೀತ ಜ್ವರ ಉಂಟಾದ ಕೂಡಲೇ ಆಸ್ಪತ್ರೆಗೆ ದಾಖಲಾಗಿದ್ದರಿಂದ ಅವರನ್ನು ಮೊದಲ ರೋಗಿ ಎಂದು ಗುರುತಿಸಲಾಗಿತ್ತು. ಆ ಕಾಲೊನಿಯ ಜನರನ್ನು ಆನಂತರ ಪರೀಕ್ಷೆ ಮಾಡಿದ್ದರಿಂದ ಅವರನ್ನು ದ್ವಿತೀಯ ಸಂಪರ್ಕವೆಂದು ಗುರುತಿಸಲಾಗಿತ್ತು ಎನ್ನುತ್ತಾರೆ ಅವರು.

ಜಾಲಿನಗರಕ್ಕೂ ಅದೇ ಕೊಂಡಿ: ನರ್ಸ್‌ ನಂತರ ಪತ್ತೆಯಾದ ಎರಡನೇ ಸೋಂಕಿತರು ಜಾಲಿನಗರದ 69 ವರ್ಷದ ವೃದ್ಧ (ಪಿ.556) ಎಂದು ಗುರುತಿಸಲಾಗಿದೆ. ಮೇ 1ರಂದು ಮೃತಪಟ್ಟಿರುವ ಅವರಿಗೂ ನರ್ಸ್‌ಗೂ ಯಾವುದೇ ಸಂಪರ್ಕ ಇರಲಿಲ್ಲ. ಈ ವೃದ್ಧರಿಗೆ ಎಲ್ಲಿಂದ ಸೋಂಕು ಬಂತು ಎಂದು ನೋಡಿದರೆ ಮತ್ತೆ ಅದೇ ಬಾಷಾನಗರದ ಪಕ್ಕದ ಕಾಲೊನಿಯೇ ಕೊಂಡಿ ತೋರಿಸುತ್ತಿದೆ.

ಮೃತಪಟ್ಟಿರುವ ವೃದ್ಧರ ಮನೆಯ ಪಕ್ಕದಲ್ಲಿ ಇನ್ನೊಂದು ಮನೆ ಇದೆ. ಆ ಮನೆಯ ದಂಪತಿ ಬಾಷಾನಗರದ ಪಕ್ಕದ ಕಾಲೊನಿಗೆ ತಮ್ಮ ಸಂಬಂಧಿಕರ ಮನೆಗೆ ಬಂದು ಒಂದು ದಿನ ಉಳಿದುಕೊಂಡು ಮರುದಿನ ತೆರಳಿದ್ದರು. ಹಾಗಾಗಿ ಜಾಲಿನಗರಕ್ಕೆ ಸೋಂಕು ಬಂದಿತ್ತು. 69 ವರ್ಷದ ವೃದ್ಧ (ಪಿ.556) ಮತ್ತು ಪಕ್ಕದ ಮನೆಯ 70 ವರ್ಷದ ವೃದ್ಧ (ಪಿ. 633) ಆತ್ಮೀಯ ಸ್ನೇಹಿತರು. ಹೀಗಾಗಿ ಪಕ್ಕದ ಮನೆಯಿಂದ ಪಿ.556 ಅವರ ಮನೆಗೆ ಸೋಂಕು ಬಂದಿದೆ. ಆರೋಗ್ಯದಿಂದ ಇದ್ದ 70 ವರ್ಷದ ವೃದ್ಧ ಕೊರೊನಾ ಸೋಂಕಿನಿಂದ ಗುಣಮುಖರಾದರೆ, ಆರೋಗ್ಯದಲ್ಲಿ ಸ್ವಲ್ಪ ದುರ್ಬಲರಾಗಿದ್ದ ಪಿ.556 ಮೃತಪಟ್ಟರು.

ಈರುಳ್ಳಿ ವ್ಯಾಪಾರಕ್ಕೆ ಬೇರೆ ಜಿಲ್ಲೆಗಳಿಗೆ ಹೋಗಿ ಬಂದ ಇಬ್ಬರು ಇದೇ ಕಾಲೊನಿಯವರು ಎಂಬುದನ್ನು ಪೊಲೀಸರು ಆರಂಭದಲ್ಲೇ ಪತ್ತೆಹಚ್ಚಿದ್ದರು.

ಆರಂಭದ ಸಡಿಲಿಕೆ ಕಾರಣವಾಯಿತಾ?

ಲಾಕ್‌ಡೌನ್‌ ಆಗಿದ್ದರೂ ಮಾರ್ಚ್‌–ಏಪ್ರಿಲ್‌ನಲ್ಲಿ ಜನರು ಗಂಭೀರವಾಗಿ ಪರಿಗಣಿಸದೇ ಓಡಾಡಿದ್ದರು. ಜತೆಗೆ ಸೋಂಕು ಪತ್ತೆಯಾಗುವ ಮೊದಲು ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡುತ್ತಿದ್ದ ವೇಳೆ ಸರಿಯಾಗಿ ಮಾಹಿತಿ ನೀಡಿರಲಿಲ್ಲ. ಸೋಂಕು ಪತ್ತೆಯಾದ ಬಳಿಕವಷ್ಟೇ ಸರಿಯಾದ ಮಾಹಿತಿ ನೀಡಿದ್ದರು. ಈ ಎರಡು ಕಾರಣಗಳಿಂದ ವೈರಸ್‌ ಅನ್ನು ಆರಂಭದಲ್ಲಿ ಮಟ್ಟಹಾಕಲು ಸಾಧ್ಯವಾಗಲಿಲ್ಲ ಎನ್ನುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳು.

ಸೋಂಕಿನ ಸಂಕೋಲೆ ತುಂಡು

‘ಈಗ ಸೋಂಕಿನ ಕೊಂಡಿಗಳನ್ನು ತುಂಡರಿಸಲಾಗಿದೆ. ಪ್ರತಿ ಸೋಂಕಿತರ ಎಲ್ಲ ಸಂಪರ್ಕಗಳನ್ನು ಹೆಕ್ಕಿ ತಂದು ಐಸೊಲೇಶನ್‌ ಮಾಡಿದ್ದೇವೆ. ಹಾಗಾಗಿ ಸಮುದಾಯದಲ್ಲಿ ಹರಡುವ ಸಾಧ್ಯತೆಯನ್ನು ಶೇ 90ರಷ್ಟು ಇಲ್ಲವಾಗಿಸಿದ್ದೇವೆ. ಹೊರರಾಜ್ಯದಿಂದ ಬಂದು ಕ್ವಾರಂಟೈನ್‌ನಲ್ಲಿ ಇರುವವರಲ್ಲಿ ಪತ್ತೆಯಾಗುವ ಪ್ರಕರಣಗಳು ಇರುತ್ತವೆ. ಅವರಿಂದ ಹರಡದಂತೆ ಪ್ರತ್ಯೇಕವಾಗಿ ಇಡಲಾಗುತ್ತದೆ. ಒಮ್ಮೆ ಸೋಂಕು ಸ್ಫೋಟವಾದ ಮೇಲೆ ಅಲ್ಲಲ್ಲಿ ಒಂದೋ ಎರಡೋ ಬರುತ್ತಾ ಇರುತ್ತವೆ. ಆದರೆ ಮೊದಲು ಬಂದಹಾಗೆ ಒಂದೇ ದಿನ 20–30 ಪ್ರಕರಣಗಳು ಪತ್ತೆಯಾಗುವುದು ನಿಂತಿದೆ. ಸರ್ವೆಲೆನ್ಸ್‌ ಪರಿಣಾಮಕಾರಿಯಾಗಿ ಕೆಲಸ ಮಾಡಿರುವುದೇ ಈ ಕುಂಠಿತಕ್ಕೆ ಕಾರಣ’ ಎಂದು ಡಾ. ರಾಘವನ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT