ಬುಧವಾರ, ಮೇ 25, 2022
29 °C
ಕೈಗಾರಿಕಾ ನೀತಿ ಅರಿವು ಕಾರ್ಯಕ್ರಮದಲ್ಲಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಕೆ.ಬಿ.ಅರಸಪ್ಪ

ಕೈಗಾರಿಕೆಗಳಿಗೆ ಹೊರೆಯಾದ ವಿದ್ಯುತ್ ದರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೊರೊನಾ ಕಾರಣದಿಂದ ಕೈಗಾರಿಕೆಗಳು ಸಂಕಷ್ಟದಲ್ಲಿದ್ದು, ವಿದ್ಯುತ್ ದರ ಹೆಚ್ಚಿಸಿರುವುದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಕೆ.ಬಿ. ಅರಸಪ್ಪ ಬೇಸರಿಸಿದರು.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ಶನಿವಾರ ನಗರದಲ್ಲಿ ನಡೆದ ‘ನೂತನ ಕೈಗಾರಿಕಾ ನೀತಿ 2020-25 ಮತ್ತು ಹೂಡಿಕೆ ಅವಕಾಶಗಳು’ ಕುರಿತ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕೊರೊನಾ ಸಂಕಷ್ಟದಿಂದ ಸುಧಾರಿಸಿಕೊಳ್ಳಲು ಒಂದು ವರ್ಷದವರೆಗೆ ವಿದ್ಯುತ್ ದರ ಹೆಚ್ಚಿಸದಂತೆ ಮನವಿ ಮಾಡಿದರೂ ದರ ಹೆಚ್ಚಿಸಿದೆ. ಅಲ್ಲದೇ ಏಪ್ರಿಲ್‌ ತಿಂಗಳಲ್ಲಿ ಇನ್ನಷ್ಟು ಹೆಚ್ಚಿಸಲು ಸರ್ಕಾರ ಆಲೋಚಿಸುತ್ತಿದೆ. ವಿದ್ಯುತ್ ದರ ಕಡಿಮೆ ಮಾಡುವಂತೆ ಮನವಿ ಮಾಡಿದ್ದೇವೆ’ ಎಂದು ಹೇಳಿದರು.

‘ಕೈಗಾರಿಕೆಗಳ ಕಚ್ಚಾವಸ್ತುಗಳ ಬೆಲೆಯೂ ಶೇ 35ರಿಂದ 40ರಷ್ಟು ಹೆಚ್ಚಿದೆ. ವಿಶೇಷವಾಗಿ ಸ್ಟೀಲ್ ದರ ಶೇ 35ರಷ್ಟು ಜಾಸ್ತಿಯಾಗಿದೆ. ಬೆಲೆ ನಿಯಂತ್ರಿಸಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಲಾಗಿದೆ. ಈ ಮೊದಲು ಕೆಎಸ್‍ಎಸ್‍ಐಡಿಸಿಯಿಂದ ಸ್ಟೀಲ್‍ ಅನ್ನು ಹಂಚಿಕೆ ಮಾಡುತ್ತಿದ್ದು, ಅದೇ ರೀತಿಯಲ್ಲಿ ಪ್ರತಿ ಜಿಲ್ಲೆಯಲ್ಲೂ ಡಿಪೊ ಸ್ಥಾಪಿಸಿ ಸ್ಟೀಲ್‍ ಅನ್ನು ಹಂಚಿಕೆ ಮಾಡುವಂತೆ ಮನವಿ ಮಾಡಲಾಗಿದೆ. ಕೆಎಸ್‍ಎಸ್‍ಐಡಿಸಿ ಎಂಡಿಯವರು ಒಪ್ಪಿದ್ದು, ಈಗಾಗಲೇ ಬೆಂಗಳೂರಿನಲ್ಲಿ ಆರಂಭವಾಗಿದೆ’ ಎಂದರು.

‘ಹೊಸ ಕೈಗಾರಿಕಾ ನೀತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆಯಾದರೂ, ಹಲವು ಇಲಾಖೆಗಳು ಈ ಕುರಿತು ಅಧಿಸೂಚನೆ ಹೊರಡಿಸಿಲ್ಲ. ಸರ್ಕಾರ ಅಧಿಸೂಚನೆಗಾಗಿ ಇಲಾಖೆಗಳಿಗೆ ಸೂಚನೆ ನೀಡುವ ಮೂಲಕ ಕೈಗಾರಿಗಳಿಗೆ ನೆರವು ತಲುಪಿಸಬೇಕು’ ಎಂದು ಆಗ್ರಹಿಸಿದರು.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹೆಚ್ಚುವರಿ ನಿರ್ದೇಶಕ ಎಚ್.ಎಂ. ಶ್ರೀನಿವಾಸ್,‘ನೂತನ ಕೈಗಾರಿಕಾ ನೀತಿಯಲ್ಲಿ ₹ 5 ಲಕ್ಷ ಕೋಟಿ ಬಂಡವಾಳ ಹೂಡಿಕೆಯ ಆಕರ್ಷಣೆ, 20 ಲಕ್ಷ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ರಾಜ್ಯವನ್ನು ದೇಶದಲ್ಲೇ 3ನೇ ಅತಿ ದೊಡ್ಡ ರಫ್ತು ರಾಜ್ಯ ಮಾಡುವುದು, ಶೇ 10ರ ಕೈಗಾರಿಕಾ ಬೆಳವಣಿಗೆ ಕಾಯ್ದುಕೊಳ್ಳುವುದರ ಜೊತೆಗೆ ತಂತ್ರಜ್ಞಾನ ಮತ್ತು ಅನ್ವೇಷಣೆಗೆ ಪೂರಕ ಪರಿಸರ ನಿರ್ಮಿಸುವ ಗುರಿ ಇದೆ’ ಎಂದು ವಿಶ್ಲೇಷಿಸಿದರು.

ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಸುರೇಶ್ ಎನ್. ತಡಕನಹಳ್ಳಿ ‘ಕರ್ನಾಟಕವು ದೇಶದ ಸಿದ್ಧ ಉಡುಪಿನ ರಾಜಧಾನಿ ಸ್ಥಾನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಂಡವಾಳ ಕ್ರೋಡೀಕರಣ, ತಂತ್ರಜ್ಞಾನ ವರ್ಗಾವಣೆ, ವಿಶ್ವದರ್ಜೆಯ ಮೂಲಸೌಕರ್ಯ ಮತ್ತು ಕೌಶಲ ಉನ್ನತೀಕರಣದ ಮೂಲಕ ಸುಸ್ಥಿರ ಬೆಳವಣಿಗೆಯನ್ನು ಸಾಧಿಸಲು ಅಣಿಗೊಳಿಸಲಾಗುತ್ತಿದೆ’ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಜಯಪ್ರಕಾಶ್ ನಾರಾಯಣ್, ಗ್ರಾಮೀಣ ವಿಭಾಗದ ಜಂಟಿ ಕಾರ್ಯದರ್ಶಿ ಸಿ.ಸಿ. ಹೊಂಡದಕಟ್ಟಿ, ಕಾಸಿಯಾ ಸದಸ್ಯರಾದ ಶೇಷಾಚಲ, ಮಂಜುನಾಥ ಲಿಂಗಾಯತ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು