ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಗೂರು ರಾಮಚಂದ್ರಪ್ಪ ಸಂದರ್ಶನ: ಮತಾಂತರ ನಿಷೇಧ ಕಾಯ್ದೆ ರಾಜಕೀಯ ಚಮತ್ಕಾರಿಕೆ

Last Updated 26 ಡಿಸೆಂಬರ್ 2021, 2:48 IST
ಅಕ್ಷರ ಗಾತ್ರ

ದಾವಣಗೆರ: ‘ಬಲವಂತವಾಗಿ ಯಾರೇ ಮತಾಂತರ ಮಾಡಿದರೂ ವಿರೋಧಿಸಬೇಕು. ಅದಕ್ಕೆ ತಕ್ಕುದಾದ ಕಾನೂನುಗಳು ಅಸ್ತಿತ್ವದಲ್ಲಿ ಇವೆ. ಹಾಗಾಗಿ ಹೊಸತಾಗಿ ಮತ್ತೊಂದು ಕಾಯ್ದೆ ಅಗತ್ಯ ಇರಲಿಲ್ಲ. ನನ್ನ ದೃಷ್ಟಿಯಲ್ಲಿ ಇದೊಂದು ರಾಜಕೀಯ ಚಮತ್ಕಾರಿಕೆ. ಇದೇ ರೀತಿ ಮತಾಂತರ ಕಾಯ್ದೆಯನ್ನು ಕೆಲವು ರಾಜ್ಯಗಳಲ್ಲಿ ತರಲಾಗಿದೆ. ಅದು ನ್ಯಾಯಾಲಯದಲ್ಲಿದೆ. ನ್ಯಾಯಾಲಯದ ತೀರ್ಪು ಏನು ಬರುತ್ತದೆ ಎಂದು ಕಾದು ನೋಡಬೇಕಿತ್ತು. ನ್ಯಾಯಾಲಯದ ನಿರ್ದೇಶನದಂತೆ ನಡೆದುಕೊಳ್ಳಬೇಕಿತ್ತು’.

ಸಾಂಸ್ಕೃತಿಕ ಚಿಂತಕ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ‘ಪ್ರಜಾವಾಣಿ’ ಸಂದರ್ಶನದಲ್ಲಿ ಹೇಳಿದ ಮಾತುಗಳು ಇವು. ಸಂದರ್ಶನದ ವಿವರ ಕೆಳಗಿದೆ.

* ಮೊಟ್ಟೆ ವಿವಾದದ ಬಗ್ಗೆ ಬಹುತೇಕ ಸಾಹಿತಿಗಳ ವಿವಾದವೇಕೆ?
– ಎಲ್ಲ ವಿಚಾರಗಳ ಬಗ್ಗೆ ಸಾಹಿತಿಗಳೇ ಮಾತನಾಡಬೇಕು ಎಂಬುದೇನಿಲ್ಲ. ಆದರೆ ಸಾಹಿತಿಗಳೂ ಮಾತನಾಡಬೇಕು. ಮೊಟ್ಟೆ ಆಹಾರ ಸಂಸ್ಕೃತಿಗೆ ಸಂಬಂಧಿಸಿದ್ದು. ಅಷ್ಟೇ ಅಲ್ಲದೇ ಮಕ್ಕಳ ಅಪೌಷ್ಟಿಕವನ್ನು ಹೋಗಲಾಡಿಸಲು ಕೂಡ ಅಗತ್ಯ. ಮೊಟ್ಟೆ ತಿನ್ನದವರಿಗೆ ತಿನ್ನಿ ಎಂದು ಒತ್ತಾಯಿಸುತ್ತಿಲ್ಲ. ಅವರಿಗೆ ಬದಲಿಯಾಗಿ ಹಣ್ಣು ನೀಡಲಾಗುತ್ತಿದೆ. ಹಾಗಾಗಿ ಇದು ವಿವಾದವೇ ಅಲ್ಲ. ಸರ್ಕಾರವೂ ಮೊಟ್ಟೆ ವಿತರಣೆಯಿಂದ ಹಿಂದೆ ಸರಿಯದೇ ಒಳ್ಳೆಯ ನಿರ್ಧಾರಕ್ಕೆ ಬದ್ಧವಾಗಿದೆ.

* ಸಾಮಾಜಿಕ ಜಾಲತಾಣಗಳಲ್ಲಿ ಬಾಡೇ ನಮ್ಮ ಗಾಡು ಎಂಬ ಅಭಿಯಾನ ನಡೆದ ಬಗ್ಗೆ ನಿಮ್ಮ ಅಭಿಪ್ರಾಯ ಏನು?
– ನಾನು ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲ. ಯಾವುದೇ ಆಹಾರವನ್ನು ಕೀಳಾಗಿ ಬಿಂಬಿಸಿದಾಗ ಅದಕ್ಕೆ ಪ್ರತಿಕ್ರಿಯೆಗಳು ಬರುವುದು ಸಹಜ. ಹಾಗಂತ ಅದೇ ತತ್ವವಲ್ಲ. ಮಾಂಸಾಹಾರವನ್ನು ಕೀಳು ಎಂದು ಯಾರಾದರೂ ಹೇಳಿದರೆ ಮಾಂಸಾಹಾರವೇ ನಮಗೆ ದೇವರು ಎಂದು ಅದಕ್ಕೆ ಪ್ರತಿಕ್ರಿಯೆ ಬಂದೇ ಬರುತ್ತದೆ. ವಾಸ್ತವದಲ್ಲಿ ಸಸ್ಯಾಹಾರ ಶ್ರೇಷ್ಠ ಅಥವಾ ಮಾಂಸಾಹಾರ ಶ್ರೇಷ್ಠ ಎನ್ನುವುದೇ ತಪ್ಪು. ಅವರವರ ಅಭ್ಯಾಸಕ್ಕೆ ತಕ್ಕುದಾಗಿ ತಿನ್ನುತ್ತಾರೆ. ಒಬ್ಬರು ಮತ್ತೊಬ್ಬರನ್ನು ಆಹಾರದ ಕಾರಣಕ್ಕೆ ಹೀಯಾಳಿಸಬಾರದು.

* ಅಡಿಗ, ಮಾಸ್ತಿ ಸಾಹಿತ್ಯದಲ್ಲಿ ಜಾತಿ ತರ್ಕದ ಚರ್ಚೆಗಳೆದ್ದಿವೆಯಲ್ಲ?
– ಅಡಿಗ, ಮಾಸ್ತಿ, ಕುವೆಂಪು ಸಹಿತ ಎಲ್ಲ ಸಾಹಿತಿಗಳನ್ನು ವಿಮರ್ಶೆ ಮಾಡಲಾಗಿದೆ. ಹುಟ್ಟಿನ ಜಾತಿ ಆಧಾರದಲ್ಲಿ ಯಾವುದೇ ಸಾಹಿತ್ಯವನ್ನು ವಿಮರ್ಶೆ ಮಾಡುವುದು ಸರಿಯಲ್ಲ. ಕೃತಿಯೊಳಗೆ ಜಾತಿವಾದ ಇದ್ದರೆ ಕೃತಿಯನ್ನು ವಿಮರ್ಶೆ ಮಾಡುವ ಮೂಲಕ ತೋರಿಸಬೇಕು. ಅದು ಹೇಳಿಕೆ ಮಟ್ಟದಲ್ಲಿ ಇರಬಾರದು. ಸಾಹಿತ್ಯದಲ್ಲಿ ಜಾತಿಯ ಪರಿಸರ ಇರೋದು ಬೇರೆ. ಜಾತಿವಾದ ಬೇರೆ. ಎಷ್ಟು ವರ್ಷಗಳಿಂದ ಬ್ರಾಹ್ಮಣ, ಶೂದ್ರ ಎಂದು ನಾವು ಮಾತನಾಡೋದು. ಹಾಗಾಗಿ ನಮ್ಮ ಪರಿಭಾಷೆ ಕೂಡ ಬದಲಾಗಬೇಕಿದೆ. ಈಗ ನಮ್ಮ ಮುಂದೆ ಇರುವ ದೊಡ್ಡ ಪಿಡುಗು ಅಂದರೆ ಧಾರ್ಮಿಕ ಮೂಲಭೂತವಾದ ಮತ್ತು ಜಾತಿವಾದ. ಇದನ್ನು ಪೋಷಿಸುವ ರೀತಿಯಲ್ಲಿ ಯಾರೇ ಬರೆದರೂ ಅದನ್ನು ವಿರೋಧಿಸಬೇಕಾಗುತ್ತದೆ.

*ಸಾಹಿತ್ಯ ಪರಿಷತ್ತಿನಲ್ಲಿ ಪಕ್ಷ ರಾಜಕಾರಣ ನುಸುಳಿರುವುದು ಸರಿಯೇ?
– ಕನ್ನಡ ಸಾಹಿತ್ಯ ಪರಿಷತ್ತಿಗೆ ಸ್ಪರ್ಧಿಸಿದವರು ಬಿಡಿ ಬಿಡಿಯಾಗಿ ಯಾವುದೇ ಪಕ್ಷಕ್ಕೆ ಸೇರಿದ ವ್ಯಕ್ತಿಗಳ ಮತ ಕೇಳುವುದರಲ್ಲಿ ತಪ್ಪಿಲ್ಲ. ಆದರೆ ರಾಜಕೀಯ ಪಕ್ಷಗಳ ಕಚೇರಿಗೆ ಹೋಗಿ ಅಧಿಕೃತವಾಗಿ ರಾಜಕೀಯ ಪಕ್ಷಗಳ ಬೆಂಬಲವನ್ನು ಪಡೆಯುವುದೇ ಸಾಂಸ್ಕೃತಿಕ ವಿಶ್ವಾಸಾರ್ಹತೆಗೆ ಧಕ್ಕೆ ತರುವ ವಿಚಾರ. ಎಡಪಂಥೀಯ ವಿಚಾರಧಾರೆಗಳನ್ನು ನಾವು ಹೊಂದಿದ್ದೇವೆ ಎಂದಾಕ್ಷಣ ನಾವು ಎಡಪಕ್ಷದವರು ಅಲ್ಲ. ಒಂದು ಪಕ್ಷವನ್ನು ವಿಮರ್ಶಾತ್ಮಕವಾಗಿ ನೋಡುವಷ್ಟು ಮಾನಸಿಕವಾಗಿ ದೂರ ಇರಬೇಕು. ಇದು ಇಲ್ಲದೇ ಇದ್ದರೆ ಒಂದು ಪಕ್ಷದ ಭಾಗವಾಗಿ ಹೋಗುತ್ತೇವೆ. ಸಾಂಸ್ಕೃತಿಕ ಸಂಸ್ಥೆಗಳು ಪಕ್ಷ ರಾಜಕಾರಣದಿಂದ ದೂರ ಇರಬೇಕು.

* ಮತ್ತೆ ಹೊಸ ಚಳವಳಿಗಳ ಹುಟ್ಟು ಅಗತ್ಯ ಇದೆಯೇ?
– ಹೊಸ ಚಳವಳಿಗಳ ಅಗತ್ಯ ಇಲ್ಲ. ಈಗ ಇರುವ ಪ್ರಗತಿಪರ ಸಂಘಟನೆಗಳು, ಪ್ರಗತಿಪರ ಹೋರಾಟಗಳು ಇನ್ನಷ್ಟು ಗಟ್ಟಿಗೊಳ್ಳುವ ಅಗತ್ಯ ಇದೆ. ಒಂದೇ ವೇದಿಕೆಯಡಿ ಬರುವ ಅಗತ್ಯ ಇದೆ. ಕಿಡಿಗೇಡಿತನದ ಬರಹಗಾರರು ಅಲ್ಲ, ಬರಹವನ್ನು ಗಂಭೀರವಾಗಿ ತೆಗೆದುಕೊಂಡ ಹೊಸ ಪೀಳಿಗೆಯ ಮೇಲೆ ದಲಿತ ಚಳವಳಿಯ, ಬಂಡಾಯ ಸಾಹಿತ್ಯ ಚಳವಳಿಯ ಪ್ರಭಾವ ಇರುವುದನ್ನು ಕಾಣಬಹುದು. ಧರ್ಮ ಮತ್ತು ರಾಜಕಾರಣವನ್ನು ಬೆರೆಸಿ ಬೆಳೆಸಲಾಗುತ್ತಿದೆ. ಮೂಲಭೂತವಾದ ಪ್ರಬಲಗೊಳ್ಳುತ್ತಿದೆ. ಮುಸ್ಲಿಂ, ಹಿಂದೂ ಸಹಿತ ಯಾವುದೇ ಧರ್ಮವಿರಲಿ ಮೂಲಭೂತವಾದದ ಕಡೆಗೆ ವಾಲುವುದನ್ನು ನಾವು ವಿರೋಧಿಸಬೇಕಿದೆ. ಅಲ್ಲಲ್ಲಿ ಸಂಘಟನೆಗಳನ್ನು, ವೇದಿಕೆಗಳನ್ನು ಕಟ್ಟಿಕೊಂಡು ಇದರ ವಿರುದ್ಧ ಕೆಲಸಗಳನ್ನು ಹಲವರು ಮಾಡುತ್ತಿದ್ದಾರೆ. ಅವರು ವಿಲೀನಗೊಳ್ಳಬೇಕಿಲ್ಲ. ಆದರೆ ಒಂದು ಒಕ್ಕೂಟವಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT