ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಮರ ಓಲೈಕೆಗೆ ಗೋಹತ್ಯೆ ಪ್ರತಿಬಂಧಕ ಕಾಯ್ದೆ ವಾಪಸ್‌ ಸಲ್ಲ

ಉಮ್ಮತ್ ಚಿಂತಕರ ವೇದಿಕೆಯಿಂದ ಮುಖ್ಯಮಂತ್ರಿಗೆ ಮನವಿ
Published 8 ಜೂನ್ 2023, 16:15 IST
Last Updated 8 ಜೂನ್ 2023, 16:15 IST
ಅಕ್ಷರ ಗಾತ್ರ

ದಾವಣಗೆರೆ: ‘ಮುಸ್ಲಿಮರ ಓಲೈಕೆಗಾಗಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ‌ವಾಪಸ್‌ ಪಡೆಯುವ ಅಗತ್ಯ ಇಲ್ಲ’ ಎಂದು ಇಲ್ಲಿನ ಉಮ್ಮತ್ ಚಿಂತಕರ ವೇದಿಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.

‘ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಾಮಾಜಿಕ ನ್ಯಾಯದ ಅಡಿಯಲ್ಲಿ ಪ್ರತಿಯೊಬ್ಬರಿಗೂ ನ್ಯಾಯ ಒದಗಿಸುವ ಪ್ರಯತ್ನ ಮಾಡುತ್ತಿರುವುದು ಸಂತಸದ ಸಂಗತಿ. ಆದರೆ, ಮುಸ್ಲಿಮರನ್ನು ಖುಷಿ ಪಡಿಸಲು ಕಾಯ್ದೆ ವಾಪಸ್ ಪಡೆಯುವುದು ಸರಿಯಲ್ಲ’ ಎಂದು ವೇದಿಕೆಯ ಅಧ್ಯಕ್ಷ ಅನೀಸ್ ಪಾಷಾ ಅವರು ಮುಖ್ಯಮಂತ್ರಿ ಮತ್ತು ಪಶು ಸಂಗೋಪನಾ ಸಚಿವರಿಗೆ ಗುರುವಾರ ಮನವಿ ಸಲ್ಲಿಸಿದ್ದಾರೆ.

‘ಈಚೆಗೆ ಕಾಯ್ದೆಯ ಬಗ್ಗೆ ಚರ್ಚೆಗಳು ಮುನ್ನೆಲೆಗೆ ಬಂದ ತಕ್ಷಣ ಕೆಲವು ಕೋಮುವಾದಿಗಳು ಅದನ್ನೇ ದಾಳವಾಗಿಟ್ಟುಕೊಂಡು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ, ರಾಜಕೀಯ ಲಾಭವನ್ನು ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ರಾಜ್ಯದ ವಾತಾವರಣ ಹಾಳಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿರುವ ಅವರು, ‘ಮುಸ್ಲಿಂ ಸಮುದಾಯ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದು, ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಯ ಗೋಜಿಗೆ ಹೋಗಿಲ್ಲ’ ಎಂದಿದ್ದಾರೆ.

‘ವಾಸ್ತವದಲ್ಲಿ ಈ ಕಾಯ್ದೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ಕಾಯ್ದೆ ಜಾರಿ ಮಾಡಿದಾಗ ಯಾವೊಬ್ಬ ಮುಸ್ಲಿಂ ‌ವ್ಯಕ್ತಿಯೂ ವಿರೋಧ ವ್ಯಕ್ತಪಡಿಸಿಲ್ಲ ಅಥವಾ ಹೇಳಿಕೆಯನ್ನೂ ನೀಡಿಲ್ಲ. ಆದರೂ ಸಮುದಾಯ ಪದೇಪದೇ ಅವಮಾನಕ್ಕೆ ಒಳಗಾಗುತ್ತಿದೆ. ಮುಸ್ಲಿಮರಿಗೆ ಸಂಬಂಧವಿಲ್ಲದ ವಿಷಯಕ್ಕೂ ಅವರನ್ನು ಎಳೆದು ಬೀದಿಗೆ ತರಲಾಗುತ್ತಿದೆ. ಇದು ಸರಿಯಲ್ಲ. ಮುಸ್ಲಿಂ ಅಥವಾ ಯಾವುದೇ ಸಮುದಾಯದ ಹೆಸರಿನಲ್ಲಿ ಕಾಯ್ದೆಯನ್ನು ವಾಪಸ್ ತೆಗೆದುಕೊಳ್ಳುವ ಅಗತ್ಯ ಇಲ್ಲ’ ಎಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT