ಗುರುವಾರ , ನವೆಂಬರ್ 21, 2019
26 °C
ನಗರದ ಹೊರ ಬಡಾವಣೆಗಳ ಜನರಿಗೆ ಕಾಡುತಿದೆ ‘ಅನಾಥ ಪ್ರಜ್ಞೆ’

ಮೂಲಸೌಲಭ್ಯ ಮರೀಚಿಕೆ... ಅಭಿವೃದ್ಧಿಯ ಕನವರಿಕೆ...

Published:
Updated:
Prajavani

ದಾವಣಗೆರೆ: ರಸ್ತೆ ಮೇಲೆ ಹರಡಿಕೊಂಡ ಕಸದ ರಾಶಿ. ಹಕ್ಕುಪತ್ರ ಸಿಗದೇ ಬೀಳುವ ಸ್ಥಿತಿಯಲ್ಲಿರುವ ಮನೆಯಲ್ಲೇ ದಿನ ದೂಡುತ್ತಿರುವ ಜನ. ಕಿತ್ತುಹೋದ ಒಳ ರಸ್ತೆಗಳು. ಮುಚ್ಚಿದ ಚರಂಡಿಯಲ್ಲಿ ಗಬ್ಬುನಾರುತ್ತಿರುವ ಕೊಳಚೆ ನೀರು. ಆಡಳಿತದ ವಿರುದ್ಧ ಒಡೆದ ನಾಗರಿಕರ ಆಕ್ರೋಶದ ಕಟ್ಟೆ...

ಇವು ಮಹಾನಗರ ಪಾಲಿಕೆಯ ವಾರ್ಡ್‌ 41ರಿಂದ 45ರಲ್ಲಿ ಸಂಚರಿಸಿದಾಗ ಕಂಡುಬಂದ ದೃಶ್ಯಾವಳಿಗಳು. ನಗರದ ಹೊರವಲಯದಲ್ಲಿರುವ ಈ ವಾರ್ಡ್‌ಗಳಲ್ಲಿ (ಸಿದ್ದವೀರಪ್ಪ ಬಡಾವಣೆ ಹೊರತುಪಡಿಸಿ) ನಾಗರಿಕರಿಗೆ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಹಳ್ಳಿಯ ಸೊಗಡಿನ ಜೊತೆಗೆ ಸಮಸ್ಯೆಗಳ ಸರಮಾಲೆಯೂ ಸುತ್ತಿಕೊಂಡಿವೆ. ಆಡಳಿತ ತಮ್ಮನ್ನು ನಿರ್ಲಕ್ಷ್ಯಿಸುತ್ತಿರುವುದಕ್ಕೆ ‘ಅನಾಥ ಪ್ರಜ್ಞೆ’ ಕಾಡುತ್ತಿದೆ. ಹೀಗಾಗಿಯೇ ಈ ಭಾಗದ ಜನ ಪಾಲಿಕೆ ಚುನಾವಣೆಯನ್ನು ಬಹಿಷ್ಕರಿಸಲು ಮುಂದಾಗಿದ್ದರು. ಅಧಿಕಾರಿಗಳು ನೀಡಿದ ಭರವಸೆಗಳು ‘ಅಭಿವೃದ್ಧಿ’ಯ ಕನಸು ಚಿಗುರುವಂತೆ ಮಾಡಿವೆ.

‘ಈಗ ವಾರಕ್ಕೆ ಒಮ್ಮೆ ಕುಡಿಯುವ ನೀರು ಬಿಡುತ್ತಿದ್ದಾರೆ. ಬೇಸಿಗೆ ಬಂದರೆ 15 ದಿನಗಳಿಗೆ ಒಮ್ಮೆ ಬರುತ್ತದೆ. ಒಳ ರಸ್ತೆಗಳು ಕಿತ್ತು ಹೋಗಿವೆ. ಕಸ ಒಯ್ಯಲು ಪೌರ ಕಾರ್ಮಿಕರು ನಿಯಮಿತವಾಗಿ ಬರುತ್ತಿಲ್ಲ’ ಎಂದು 41ನೇ ವಾರ್ಡ್‌ ವ್ಯಾಪ್ತಿಯ ಶ್ರೀರಾಮನಗರದ ಮಂಜು, ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರು. ಶ್ರೀರಾಮನಗರದ ಸರ್ಕಾರಿ ಶಾಲೆಯ ಎದುರಿನ ಮುಖ್ಯ ರಸ್ತೆ ಮೇಲಿನ ಕಸದ ರಾಶಿಯಲ್ಲಿ ಹಂದಿ–ನಾಯಿ ಆಹಾರಕ್ಕಾಗಿ ಕಿತ್ತಾಡುತ್ತಿದ್ದ ದೃಶ್ಯ ಇದಕ್ಕೆ ಪುಷ್ಟಿ ನೀಡಿತು. ಬುದ್ಧ–ಬಸವ ನಗರದಲ್ಲೂ ಕಸ ವಿಲೇವಾರಿ, ಕಿತ್ತುಹೋಗಿರುವ ರಸ್ತೆಗಳದ್ದೇ ಸಮಸ್ಯೆ ಎಂದು ಸ್ಥಳೀಯ ಬಣಜಪ್ಪ ಧ್ವನಿಗೂಡಿಸಿದರು.

ಸುಬ್ರಹ್ಮಣ್ಯನಗರ ಕೊಳೆಗೇರಿಯಲ್ಲಿನ ಸುಮಾರು 80 ಮನೆಗಳ ನಿವಾಸಿಗಳು ಹಕ್ಕುಪತ್ರ ಯಾವಾಗ ಸಿಕ್ಕೀತು ಎಂದು ಪಾಲಿಕೆಯತ್ತ ಮುಖಮಾಡಿದ್ದಾರೆ. ಸಮಸ್ಯೆಗಳ ನಡುವೆಯೇ ಬದುಕು ಸವೆಸುತ್ತಿದ್ದಾರೆ. ‘ಒಳ ರಸ್ತೆಗೆ ಡಾಂಬರು ಹಾಕಿಲ್ಲ. ಚರಂಡಿಯೇ ಇಲ್ಲದಿರುವುದರಿಂದ ಕೊಳಚೆ ನೀರು ಕಟ್ಟಿಕೊಂಡು ಸೊಳೆಗಳ ಕಾಟ ಹೆಚ್ಚಾಗಿದೆ. ಬೀದಿ ದೀಪಗಳಿಲ್ಲದೇ ಇರುವುದರಿಂದ ರಾತ್ರಿ ಸಂಚರಿಸಲು ಭಯವಾಗುತ್ತಿದೆ’ ಎಂದು ಸ್ಥಳೀಯರಾದ ಪಾರ್ವತಿ ಅಸಮಾಧಾನ ವ್ಯಕ್ತಪಡಿಸಿದರು.

ಸಿದ್ದವೀರಪ್ಪ ಬಡಾವಣೆಗೆ (42ನೇ ವಾರ್ಡ್‌) ಅಭಿವೃದ್ಧಿಯ ಸ್ಪರ್ಶ ತಕ್ಕಮಟ್ಟಿಗೆ ಆಗಿದೆ. ‘ಹಾಳಾಗಿರುವ ಒಳ ರಸ್ತೆಗಳನ್ನು ದುರಸ್ತಿಗೊಳಿಸಬೇಕು. ಕೇಬಲ್‌, ಪೈಪ್‌ ಹಾಕಲು ಭೂಮಿ ಅಗೆಯಲಾಗುತ್ತಿದೆ. ಸರಿಯಾಗಿ ಮುಚ್ಚದೇ ಇರುವುದರಿಂದ ಅಲ್ಲಲ್ಲಿ ಹೊಂಡ ಬಿದ್ದಿದೆ. ಸರಗಳ್ಳತನ ನಿಯಂತ್ರಿಸಬೇಕು’ ಎನ್ನುತ್ತಾರೆ ಬಡಾವಣೆಯ ಗೃಹಿಣಿ ಪವಿತ್ರ.

43ನೇ ವಾರ್ಡ್‌ ವ್ಯಾಪ್ತಿಯ ಶಾಮನೂರು ಬಡಾವಣೆಯಲ್ಲಿ ಸಿಸಿ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಆದರೆ, ಅಭಿವೃದ್ಧಿ ವಂಚಿತ ಹೊಸ ಕುಂದವಾಡದ ಜನ ಚುನಾವಣೆಗೆ ಬಹಿಷ್ಕಾರ ಹಾಕಲು ಮುಂದಾಗಿದ್ದರು. ‘ಹಲವೆಡೆ ಚರಂಡಿಗಳು ಮುಚ್ಚಿ ಹೋಗಿವೆ. ಒಳ ರಸ್ತೆಗಳು ಕಿತ್ತು ಹೋಗಿವೆ. ಬಸ್‌ ಸೌಲಭ್ಯ ಸೌಲಭ್ಯ ಇಲ್ಲ. ಸ್ಮಶಾನ ಇಲ್ಲದೇ ಹೆಣ ಹೂಳಲು ತೊಂದರೆಯಾಗುತ್ತಿದೆ. ಬೀದಿ ದೀಪ ಕೆಟ್ಟರೆ ಎರಡು ತಿಂಗಳಾದರೂ ದುರಸ್ತಿ ಮಾಡುವುದಿಲ್ಲ. ಹೀಗಾಗಿಯೇ ಚುನಾವಣೆ ಬಹಿಷ್ಕರಿಸಲು ಮುಂದಾಗಿದ್ದೆವು. ಅಭ್ಯರ್ಥಿಗಳು ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಮನವಿ ಮಾಡಿದ್ದರಿಂದ ಬಹಿಷ್ಕಾರ ನಿರ್ಧಾರದಿಂದ ಹಿಂದಕ್ಕೆ ಸರಿದಿದ್ದೇವೆ’ ಎಂದ ಹೊಸ ಕುಂದವಾಡದ ರಾಘವೇಂದ್ರ ಬಿ.ಪಿ. ಅವರು, ಊರಿನ ಸಮಸ್ಯೆಗಳ ದರ್ಶನ ಮಾಡಿಸಿದರು.

44ನೇ ವಾರ್ಡ್‌ ವ್ಯಾಪ್ತಿಯ ಎಸ್‌.ಎಸ್‌. ಬಡಾವಣೆ ‘ಬಿ’ ಬ್ಲಾಕ್‌, ಹಳೇ ಕುಂದವಾಡ, ವಿನಾಯಕ ನಗರ ಹಾಗೂ ಶಾಂತಿನಗರದಲ್ಲಿ ಹಲವು ಒಳ ರಸ್ತೆಗಳು ಕಿತ್ತು ಹೋಗಿವೆ. ಖಾಲಿ ನಿವೇಶನಗಳಲ್ಲಿ ಜಾಲಿ ಗಿಡಗಳು ಬೆಳೆದು ಹುಳಹುಪ್ಪಡಿಗಳ ಕಾಟ ಹೆಚ್ಚಿದೆ.

45ನೇ ವಾರ್ಡ್‌ನ ಕರೂರಿನಲ್ಲೂ ಚುನಾವಣೆ ಬಹಿಷ್ಕಾರದ ಕೂಗು ಎದ್ದಿತ್ತು. ಜಿಲ್ಲಾಧಿಕಾರಿ ಸ್ಥಳಕ್ಕೆ ತೆರಳಿ ಭರವಸೆ ನೀಡಿದ ಬಳಿಕ ಪ್ರತಿಭಟನಾನಿರತರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

‘ಒಳಚರಂಡಿ, ಮಳೆ ನೀರ ಚರಂಡಿ ವ್ಯವಸ್ಥೆಯೇ ಇಲ್ಲ. ದೊಡ್ಡ ಮಳೆ ಬಂದರೆ ಮನೆ, ಶಾಲೆ, ಅಂಗನವಾಡಿ ಒಳಗೆ ನೀರು ನುಗ್ಗುತ್ತಿದೆ. ಕಸ ಒಯ್ಯಲು ಸರಿಯಾಗಿ ಬರುವುದಿಲ್ಲ. ಚರಂಡಿಯನ್ನು ಸ್ವಚ್ಛಗೊಳಿಸುವುದಿಲ್ಲ. ಒಳ ರಸ್ತೆಗಳೆಲ್ಲ ಕಿತ್ತು ಹೋಗಿವೆ’ ಎಂದು ಕರೂರಿನ ಮುಖಂಡ ಹನುಮಂತಪ್ಪ ಬೇಸರ ವ್ಯಕ್ತಪಡಿಸಿದರು.

ಇದೇ ವಾರ್ಡಿನ ಯರಗುಂಟೆ, ಎಸ್‌.ಜೆ.ಎಂ ನಗರದಲ್ಲೂ ಒಳ ರಸ್ತೆ, ಚರಂಡಿ, ಕುಡಿಯುವ ನೀರಿನ ಸಮಸ್ಯೆಗಳಿವೆ. ನಗರದ ಹೊರವಲಯದಲ್ಲಿರುವ ಈ ಬಡಾವಣೆಗಳಿಗೆ ಅಭಿವೃದ್ಧಿಯ ಸ್ಪರ್ಶ ನೀಡಿ ಇವುಗಳನ್ನೂ ‘ಸ್ಮಾರ್ಟ್‌’ ಮಾಡಬೇಕು ಎಂಬ ಕೂಗು ಈ ಭಾಗದ ನಾಗರಿಕರದ್ದಾಗಿದೆ.

ಶಾಲೆಗೆ ಬೇಕು ಕಾಂಪೌಂಡ್‌

ಯರಗುಂಟೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಾಂಪೌಂಡ್‌ ಇಲ್ಲದೇ ಇರುವುದರಿಂದ ಸಂಜೆಯಾಗುತ್ತಲೇ ಕುಡುಕರ–ಜೂಜುಕೋರರ ಅಡ್ಡೆಯಾಗಿದೆ. ದನಕರು, ಕುರಿಗಳ ಹಿಂಡು ಶಾಲೆಯ ಆವರಣಕ್ಕೆ ಬರುತ್ತಿರುವುದರಿಂದ ಮಕ್ಕಳ ಪಾಠಕ್ಕೆ ತೊಂದರೆಯಾಗುತ್ತಿದೆ.

‘ಶಾಲೆಗೆ ಕಾಂಪೌಂಡ್‌ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದೇವೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೈಗೊಳ್ಳುವುದಾಗಿ ಹೇಳಿದ್ದಾರೆ. ನಗರಕ್ಕೆ ಹೋಗಲು ಬಸ್‌ ಸೌಲಭ್ಯ ಇಲ್ಲದಿರುವುದರಿಂದ ಇಲ್ಲಿ ಏಳನೇ ತರಗತಿ ಪಾಸಾದ ಹಲವು ಮಕ್ಕಳು ಹೈಸ್ಕೂಲ್‌ಗೆ ಹೋಗುತ್ತಿಲ್ಲ. ಇಲ್ಲಿಯೇ ಪ್ರೌಢಶಾಲೆ ಆರಂಭಿಸಿದರೆ ಮಕ್ಕಳ ಓದಿಗೆ ಅನುಕೂಲವಾಗಲಿದೆ’ ಎನ್ನುತ್ತಾರೆ ಮುಖ್ಯ ಶಿಕ್ಷಕಿ ಸಣ್ಣಪಾಪಮ್ಮ.

ಆಗಬೇಕಾಗಿರುವ ಕೆಲಸಗಳೇನು?

* ಕೊಳೆಗೇರಿ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು

* ವಾರಕ್ಕೆ ಎರಡು ದಿನವಾದರೂ ಕುಡಿಯುವ ನೀರು ಪೂರೈಸಬೇಕು

* ಒಳ ರಸ್ತೆಗಳಿಗೆ ಡಾಂಬರು ಹಾಕಬೇಕು

* ಚರಂಡಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು

* ದಿನಾಲೂ ಕಸ ಒಯ್ಯಲು ಪೌರ ಕಾರ್ಮಿಕರು ಬರಬೇಕು

* ಖಾಲಿ ನಿವೇಶನಗಳ ಗಿಡಗಂಟಿಗಳನ್ನು ತೆರವುಗೊಳಿಸಬೇಕು

ವಾರ್ಡ್‌ 41–45

ಬನಶಂಕರಿ ಬಡಾವಣೆ, ಬುದ್ಧ, ಬಸವ ನಗರ, ಕೈಗಾರಿಕಾ ಪ್ರದೇಶ; ಸಿದ್ದವೀರಪ್ಪ ಬಡಾವಣೆ; ಶಾಮನೂರು, ಹೊಸ ಕುಂದವಾಡ; ಎಸ್‌.ಎಸ್‌. ಬಡಾವಣೆ ‘ಬಿ’ ಬ್ಲಾಕ್‌, ಹಳೆ ಕುಂದವಾಡ, ವಿನಾಯಕ ನಗರ, ಶಾಂತಿನಗರ; ಎಸ್‌.ಜಿ.ಎಂ. ನಗರ, ಯರಗುಂಟೆ, ಕರೂರು

*

ಚುನಾವಣೆ ಬಂದಾಗ ಮಾತ್ರ ರಾಜಕೀಯ ಪಕ್ಷಗಳ ಮುಖಂಡರು ಮತ ಕೇಳಲು ಬರುತ್ತಾರೆ. ಗೆದ್ದ ಬಳಿಕ ಈ ಕಡೆ ಮುಖವನ್ನೂ ತಿರುಗಿಸಿ ನೋಡುವುದಿಲ್ಲ. ಹಲವು ವರ್ಷಗಳಿಂದ ಕೇಳಿದರೂ ಹಕ್ಕುಪತ್ರ ಕೊಟ್ಟಿಲ್ಲ.

– ಪಾರ್ವತಿ, ಸುಬ್ರಹ್ಮಣ್ಯನಗರ ನಿವಾಸಿ

ಒಂದು ಗಂಟೆ ಕಾಲ ನಿರಂತರ ಮಳೆಯಾದರೆ 2 ಅಡಿ ನೀರು ರಸ್ತೆಯ ಮೇಲೆ ನಿಂತು ಮನೆಯೊಳಗೆ ನುಗ್ಗುತ್ತದೆ. ಮಳೆ ನೀರು ಸರಾಗವಾಗಿ ಹರಿದು ಹೋಗಲು ಕ್ರಮ ಕೈಗೊಳ್ಳಬೇಕು.

– ಅರ್ಜುನ್‌ ಜಿ.ಎಂ., ಸಿದ್ದವೀರಪ್ಪ ಬಡಾವಣೆ ನಿವಾಸಿ

ಸಮೀಪದಲ್ಲೇ ಕುಂದವಾಡ ಕೆರೆ ಇದ್ದರೂ 15 ದಿನಗಳಿಗೆ ಒಮ್ಮೆ ಕುಡಿಯುವ ನೀರು ಬರುತ್ತಿದೆ. ಅಭಿವೃದ್ಧಿ ದೃಷ್ಟಿಯಿಂದ ನಮ್ಮ ಊರನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ.

– ರಾಘವೇಂದ್ರ ಬಿ.ಪಿ., ಹೊಸ ಕುಂದವಾಡ ನಿವಾಸಿ

ಸ್ಮಶಾನ ಇಲ್ಲದಿರುವುದರಿಂದ ಹೆಣ ಹೂಳಲು ಪರದಾಡುವಂತಾಗಿದೆ. ಸಮಸ್ಯೆ ನಿವಾರಿಸದಿದ್ದರೆ ಯಾರಾದರೂ ಸತ್ತರೆ ಹೆಣವನ್ನು ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ತೆಗೆದುಕೊಂಡು ಹೋಗುತ್ತೇವೆ.

– ಹನುಮಂತಪ್ಪ, ಕರೂರು

ಪ್ರತಿಕ್ರಿಯಿಸಿ (+)