ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಾಣಗೆರೆ ವಿಶ್ವವಿದ್ಯಾಲಯ: ಸಾಧನೆಯ ಹೊಂಬೆಳಕಿನಲ್ಲಿ ವಿದ್ಯಾರ್ಥಿಗಳ ಚಿನ್ನದ ಬೇಟೆ

ಮೀರಾಸಾಬಿಹಳ್ಳಿ ಶಿವಣ್ಣ, ಲಕ್ಷ್ಮಣ ತೆಲಗಾವಿ, ಶಶಿಕುಮಾರ್‌ಗೆ ಗೌರವ ಡಾಕ್ಟರೇಟ್‌ ಪ್ರದಾನ
Last Updated 25 ಮಾರ್ಚ್ 2022, 4:43 IST
ಅಕ್ಷರ ಗಾತ್ರ

ದಾವಣಗೆರೆ: ವಿದ್ಯಾರ್ಥಿಗಳ ಮೊಗದಲ್ಲಿ ಸಾಧನೆಯ ಹೊಂಬೆಳಕು ಪ್ರತಿಫಲಿಸುತ್ತಿತ್ತು. ಮಕ್ಕಳ ಸಾಧನೆಯನ್ನು ಕಣ್ತುಂಬಿಕೊಂಡ ಪೋಷಕರು ಸಂತೃಪ್ತಿಯ ಭಾವಸಾಗರದಲ್ಲಿ ತೇಲುತ್ತಿದ್ದರು. ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನುಶಿಷ್ಯಂದಿರು ಪಡೆಯುತ್ತಿರುವುದನ್ನು ಕಂಡು ಪ್ರಾಧ್ಯಾಪಕರು ಹೆಮ್ಮೆ ಪಡೆಯುತ್ತಿದ್ದರು... ತಮ್ಮ ಗುರಿಯನ್ನು ಮುಟ್ಟಲು ಇನ್ನಷ್ಟು ಪರಿಶ್ರಮ ಪಡಬೇಕು ಎಂಬ ಕನಸು ವಿದ್ಯಾರ್ಥಿಗಳ ಮನದಲ್ಲಿ ಗರಿ ಬಿಚ್ಚಿಕೊಳ್ಳುತ್ತಿತ್ತು...

ದಾವಣಗೆರೆ ವಿಶ್ವವಿದ್ಯಾಲಯದ ಶಿವಗಂಗೋತ್ರಿ ಕ್ಯಾಂಪಸ್‌ನಲ್ಲಿ ಗುರುವಾರ ನಡೆದ 9ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಂದ ರ‍್ಯಾಂಕ್‌ ಪಡೆದ ವಿದ್ಯಾರ್ಥಿಗಳು ಪ್ರಮಾಣಪತ್ರ ಹಾಗೂ ಚಿನ್ನದ ಪದಕಗಳಿರುವ ಫಲಕಗಳನ್ನು ಸ್ವೀಕರಿಸುತ್ತಿದ್ದಾಗ ಕಂಡುಬಂದ ದೃಶ್ಯಗಳಿವು.

ಅತಿ ಹೆಚ್ಚು ಅಂಕಗಳನ್ನು ಪಡೆದು ಐದು ಚಿನ್ನದ ಪದಕಗಳನ್ನು ರಾಜ್ಯಪಾಲರಿಂದ ಸ್ವೀಕರಿಸಿದ ಎಂಬಿಎ ವಿಭಾಗದ ವಿದ್ಯಾರ್ಥಿನಿ ಸ್ವಪ್ನ ಎಸ್‌.ಎಂ. ಅವರು 2020–21ನೇ ಶೈಕ್ಷಣಿಕ ಸಾಲಿನ ‘ಚಿನ್ನದ ಹುಡುಗಿ’ ಕೀರ್ತಿಗೆ ಪಾತ್ರರಾದರು. ಬಿ.ಕಾಂ ಮುಗಿದ ಬಳಿಕ ಎರಡು ವರ್ಷ ಕೆಲಸ ಮಾಡಿ, ಗಳಿಸಿದ ಹಣದಿಂದಲೇ ಎಂಬಿಎ ಶುಲ್ಕವನ್ನೂ ಪಾವತಿಸುವ ಮೂಲಕ ರ‍್ಯಾಂಕ್‌ನೊಂದಿಗೆ ಸ್ನಾತಕೋತ್ತರ ಪದವಿ ಪಡೆದ ಸ್ಪಪ್ನ ಅವರು ತಮ್ಮ ಸಾಧನೆಯನ್ನು ಪೋಷಕರಿಗೆ ಸಮರ್ಪಿಸುವುದಾಗಿ ಹೇಳಿದರು. ‘ಎರಡು ವರ್ಷ ಓದು ನಿಲ್ಲಿಸಿ ಪ್ರಾಯೋಗಿಕವಾಗಿ ಕೆಲಸ ಮಾಡಿದ ಅನುಭವದಿಂದ ವಿಷಯವನ್ನು ಅರ್ಥ ಮಾಡಿಕೊಂಡು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ಅನುಕೂಲವಾಯಿತು’ ಎಂದು ಅವರು ಸ್ಮರಿಸಿದರು.

ರೈತನ ಪುತ್ರಿಗೆ ಚಿನ್ನದ ಸಂಭ್ರಮ: ರೈತನ ಮಗಳಾದ ಡಿ.ಕೆ. ಅರ್ಚನಾ ಅವರು ಎಂಎಸ್ಸಿ ಗಣಿತ ವಿಷಯದಲ್ಲಿ ಮೊದಲ ರ‍್ಯಾಂಕ್‌ನೊಂದಿಗೆ ಮೂರು ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ. ‘ಮೊದಲ ವರ್ಷ ರ‍್ಯಾಂಕ್‌ ಪಡೆಯುವ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಎರಡನೇ ವರ್ಷದಲ್ಲಿ ಪರಿಶ್ರಮ ಪಟ್ಟು ಓದಿದ್ದರಿಂದ ರ‍್ಯಾಂಕ್‌ ಪಡೆಯಲು ಸಾಧ್ಯವಾಯಿತು. ಪಿಎಚ್‌.ಡಿ.ಮಾಡಿ ಉಪನ್ಯಾಸಕಿಯಾಗಿ ಬದುಕು ಕಟ್ಟಿಕೊಳ್ಳುವ ಗುರಿ ಹೊಂದಿದ್ದೇನೆ’ ಎನ್ನುತ್ತಾರೆ ಅರ್ಚನಾ.

ಐಎಎಸ್‌ ಕನಸು: ಜಗಳೂರಿನ ಉಮಾ ಜಿ. ಅವರು ಎಂ.ಎ. ಇಂಗ್ಲಿಷ್‌ನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯಾಗಿರುವುದಕ್ಕೆ ಚಿನ್ನದ ಪದಕದ ಸಾಧನೆಗೆ ಭಾಜನರಾಗಿದ್ದರು. ‘ತಂದೆ ಗಂಗಾಧರಪ್ಪ ಮಾರಿಕಾಂಬ ದೇವಸ್ಥಾನದಲ್ಲಿ ಅರ್ಚಕರಾಗಿದ್ದಾರೆ. ತಾಯಿ ಮನೆಯಲ್ಲೇ ಟೈಲರಿಂಗ್‌ ಮಾಡುತ್ತಿದ್ದಾರೆ. ನಮ್ಮದು ಮಧ್ಯಮ ವರ್ಗದ ಕುಟುಂಬ. ಕಷ್ಟದ ನಡುವೆಯೇ ನನ್ನನ್ನು ಓದಿಸಿದ್ದಾರೆ. ಉಪನ್ಯಾಸಕಿಯಾಗಿ ಬೋಧನೆ ಮಾಡುವುದು ನನ್ನ ಪ್ಯಾಷನ್‌. ಆದರೆ, ಯುಪಿಎಸ್‌ಸಿ ಪರೀಕ್ಷೆಯನ್ನು ಪಾಸ್‌ ಮಾಡಿ ಐಎಎಸ್‌ ಅಧಿಕಾರಿಯಾಗಬೇಕು ಎಂಬ ಗುರಿಯನ್ನು ಹೊಂದಿದ್ದೇನೆ’ ಎಂದು ಉಮಾ ‘ಪ್ರಜಾವಾಣಿ’ ಜೊತೆ ತಮ್ಮ ಕನಸನ್ನು ಹಂಚಿಕೊಂಡರು.

ಜಮಖಂಡಿಯ ರೈತ ಬಸಪ್ಪ ಅವರ ಪುತ್ರಿ ಅನಿತಾ ಮಮದಾಪುರ ಅವರು ದೊಡ್ಡಮ್ಮನ ಮನೆಯಲ್ಲಿದ್ದುಕೊಂಡು ಓದಿದ್ದರು. ಎಂ.ಎಸ್‌.ಡಬ್ಲ್ಯುನಲ್ಲಿ ರ‍್ಯಾಂಕ್‌ ಗಳಿಸಿರುವ ಅನಿತಾ ಅವರು ಸಿಡಿಪಿಒ ಅಧಿಕಾರಿಯಾಗಬೇಕು ಎಂಬ ಗುರಿಯನ್ನು ಹೊಂದಿದ್ದಾರೆ.

ಹಿರೇಕೆರೂರಿನಲ್ಲಿ ಟೈಲರಿಂಗ್‌ ಮಾಡಿ ಜೀವನ ಸಾಗಿಸುತ್ತಿರುವ ಗೀತಾ ಅವರ ಮಗ ದರ್ಶನ್‌ ಚಕ್ರಸಾಲಿ ಬಿವಿಎಯಲ್ಲಿ ಮೊದಲ ರ‍್ಯಾಂಕ್‌ ಪಡೆಯುವ ಮೂಲಕ ಕುಟುಂಬದಲ್ಲಿ ಸಂಭ್ರಮದ ಹೊನಲು ಹರಿಸಿದ್ದಾರೆ. ಬಾಲ್ಯದಲ್ಲೇ ತಂದೆ ತೀರಿ ಹೋಗಿದ್ದು, ಹಾಲಿವಾಣದಲ್ಲಿರುವ ತಾತನ ಮನೆಯಲ್ಲಿದ್ದುಕೊಂಡು ಓದು ಮುಂದುವರಿಸಿದ್ದರು. ಸ್ನಾತಕೋತ್ತರ ಪದವಿ ಪಡೆದು ಶಿಕ್ಷಕರಾಗಿ ಕೆಲಸ ಮಾಡಬೇಕು ಎಂಬ ಗುರಿಯನ್ನು ಹೊಂದಿದ್ದಾರೆ.

ಬಿಎಯಲ್ಲಿ ಮೊದಲ ರ‍್ಯಾಂಕ್‌ ಪಡೆದ ಚಿತ್ರದುರ್ಗದ ಕುದಾಪುರ ಲಂಬಾಣಿಹಟ್ಟಿಯ ರೈತ ಉಮೇಶ ನಾಯ್ಕ ಅವರ ಪುತ್ರಿ ಮಮತಾ ಯು. ಅವರು ಸದ್ಯ ಇತಿಹಾಸ ವಿಷಯದಲ್ಲಿ ಎಂ.ಎ ಓದುತ್ತಿದ್ದಾರೆ. ‘ಯುಪಿಎಸ್‌ಸಿ ಹಾಗೂ ಕೆಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತೇನೆ. ಜೊತೆಗೆ ಪಿಎಸ್‌ಐ ಪರೀಕ್ಷೆಯನ್ನೂ ಬರೆಯುತ್ತೇನೆ’ ಎಂದು ಮಮತಾ ಹೇಳಿದರು.

ಬಿಎ ಹಿಂದಿ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದಿರುವುದಕ್ಕೆ ಚಿನ್ನದ ಪಕದ ಸ್ವೀಕರಿಸಿದ ಹರಿಹರದ ನೂರ್‌ ಆಯಿಷಾ ಖಾನಂ ಅವರು ಸ್ಪರ್ಧಾತ್ಮ ಪರೀಕ್ಷೆ ತೆಗೆದುಕೊಂಡು ಐಎಎಸ್‌ ಇಲ್ಲವೇ ಕೆಎಎಸ್‌ ಅಧಿಕಾರಿಯಾಗಬೇಕು ಎಂಬ ಕನಸು ಕಾಣುತ್ತಿದ್ದಾರೆ.

ಒಟ್ಟು 44 ವಿದ್ಯಾರ್ಥಿಗಳಿಗೆ 79 ಸ್ವರ್ಣ ಪದಕಗಳನ್ನು ವಿತರಿಸಲಾಯಿತು. ಐವರಿಗೆ ಎಂಫಿಲ್‌, ಆರು ಜನರಿಗೆ ಪಿಎಚ್‌ಡಿ ಪದವಿ ಪ್ರದಾನ ಮಾಡಲಾಯಿತು.

ಮೂವರಿಗೆ ಗೌರವ ಡಾಕ್ಟರೇಟ್‌: ಚಳ್ಳಕೆರೆಯ ಜಾನಪದ ತಜ್ಞ ಡಾ.ಮೀರಾಸಾಬಿಹಳ್ಳಿ ಶಿವಣ್ಣ, ಚಿತ್ರದುರ್ಗ ಮೂಲದವರಾದ ಇತಿಹಾಸಕಾರ ಲಕ್ಷ್ಮಣ ತೆಲಗಾವಿ ಹಾಗೂ ದಾವಣಗೆರೆಯ ತಪೋವನ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಟ್‌ನ ಅಧ್ಯಕ್ಷ ಶಶಿಕುಮಾರ್ ವಿ.ಎಂ. ಅವರಿಗೆ ರಾಜ್ಯಪಾಲರು ಗೌರವ ಡಾಕ್ಟರೇಟ್‌ ಪದವಿ ಪ್ರದಾನ ಮಾಡಿದರು.

ಮಹಿಳಾ ಉದ್ಯಮಿಯಾಗುವ ಕನಸು

ಬಿಬಿಎಂನಲ್ಲಿ ಮೊದಲ ರ‍್ಯಾಂಕ್‌ ಪಡೆದ ಆರ್‌.ಜಿ. ಇನ್‌ಸ್ಟಿಟ್ಯೂಟ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್‌ನ ವಿದ್ಯಾರ್ಥಿನಿ ಮುಸ್ಕಾನ್‌ ಎಂ. ಅವರು ಸದ್ಯ ಬಿಐಇಟಿಯಲ್ಲಿ ಎಂಬಿಎ ಮಾಡುತ್ತಿದ್ದಾರೆ.

‘ದೃಢಸಂಕಲ್ಪ ಮಾಡಿ ಪ್ರಯತ್ನಪಟ್ಟರೆ ಸಾಧನೆ ಮಾಡುವುದು ಸುಲಭವಾಗಲಿದೆ. ಖಾಸಗಿ ಕಾಲೇಜಿನಲ್ಲಿ ಓದಿದ ನನಗೆ ಎಂದೂ ಹಿಜಾಬ್‌ ವಿಚಾರವಾಗಿ ಸಮಸ್ಯೆಯಾಗಿಲ್ಲ. ಕಾಲೇಜಿನಲ್ಲಿ ಓದಲು ಎಲ್ಲರೂ ಸಹಕಾರ ನೀಡುತ್ತಿದ್ದಾರೆ. ಸಾಧನೆ ಮಾಡಲು ದಿನದ 24 ಗಂಟೆಯೂ ಓದಬೇಕಾಗಿಲ್ಲ. ಸ್ಮಾರ್ಟ್‌ ಹಾಗೂ ಕಠಿಣ ಪರಿಶ್ರಮ ಪಡುವುದು ಮುಖ್ಯ’ ಎಂದು ಅಭಿಪ್ರಾಯಪಟ್ಟ ಮುಸ್ಕಾನ್‌ ಅವರು, ಯಶಸ್ವಿ ಮಹಿಳಾ ಉದ್ಯಮಿಯಾಗಬೇಕು ಎಂಬ ಗುರಿಯನ್ನು ಇಟ್ಟುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT