ಗುರುವಾರ , ಜನವರಿ 28, 2021
15 °C

ಮೀಸಲಾತಿಗಾಗಿ ಕ್ರಾಂತಿ ಹೆಜ್ಜೆ ಇಟ್ಟರೆ ಸರ್ಕಾರ ಹೊಣೆ: ಮೃತ್ಯುಂಜಯ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಲಿಂಗಾಯತ ಧರ್ಮದ ನಮ್ಮ ಕೆಲವು ಸಹೋದರ ಸಮುದಾಯಗಳಿಗೆ 2ಎ ಮೀಸಲಾತಿ ನೀಡಲಾಗಿದೆ. ನಮಗೂ ನೀಡಿ ಎಂದು ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದೇವೆ. ಮೀಸಲಾತಿ ನೀಡದೇ ಇದ್ದರೆ ಜ.14ರಿಂದ ನಡೆಸಲು ಉದ್ದೇಶಿಸಿರುವ ಪಾದಯಾತ್ರೆಯಲ್ಲಿ ಯುವಜನಾಂಗವು ಕ್ರಾಂತಿಯ ಹೆಜ್ಜೆ ಹಾಕಿದರೆ ಅದಕ್ಕೆ ಸರ್ಕಾರವೇ ಹೊಣೆ ಎಂದು ಕೂಡಲ ಸಂಗಮದ ಪಂಚಮಸಾಲಿ ಮಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದರು.

‘ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡಬೇಕು. ಲಿಂಗಾಯತ ಧರ್ಮದ ಎಲ್ಲ 74 ಪಂಗಡಗಳಿಗೆ ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಬೇಕು ಎಂಬ ಬೇಡಿಕೆಯನ್ನು ಎರಡು ದಶಕಗಳಿಂದ ಇಡುತ್ತಾ ಬಂದಿದ್ದೇವೆ. ಬೆಳಗಾವಿ ಸುವರ್ಣ ಸೌಧಕ್ಕೆ ಪಾದಯಾತ್ರೆ, ಉಪವಾಸ ಸತ್ಯಾಗ್ರಹ ನಡೆಸಿದ್ದೆವು. ನಮ್ಮ ಬೇಡಿಕೆ ಈಡೇರಿಸುವುದಾಗಿ ಆಗ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದರು. ಅವರಿಗೆ ಒಂದು ತಿಂಗಳ ಕಾಲಾವಕಾಶ ನೀಡಿದ್ದೆವು. ಅದಾಗಿ ಮೂರು ತಿಂಗಳಾಗಿವೆ. ಇನ್ನೂ ಮೀಸಲಾತಿ ನೀಡಿಲ್ಲ. ಹಾಗಾಗಿ ಪಾದಯಾತ್ರೆ ಅನಿವಾರ್ಯ. ಕೂಡಲ ಸಂಗಮದಿಂದ ಬೆಂಗಳೂರು ವರೆಗೆ ಸಾಗುವ ಪಾದಯಾತ್ರೆಯಲ್ಲಿ ಪ್ರತಿ 10 ಕಿಲೋ ಮೀಟರ್‌ಗೊಂದು ಬಹಿರಂಗ ಸಭೆ ನಡೆಯಲಿದೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೀಸಲಾತಿ ನೀಡಲು ಮುಖ್ಯಮಂತ್ರಿಗಳು ಎಲ್ಲ ತಯಾರಿ ಮಾಡಿಕೊಂಡಿದ್ದರು. ಅಧಿವೇಶನದಲ್ಲಿ ಮಂಡಿಸಿ, ನ.28ರ ಒಳಗೆ ಮೀಸಲಾತಿ ಕೊಡಿಸಲು ತಯಾರಾಗಿದ್ದರು. ಆದರೆ ಅವರ ಪಕ್ಷದೊಳಗಿನ ಗೊಂದಲದಿಂದಾಗಿ ಅದು ಮುಂದಕ್ಕೆ ಹೋಗಿದೆ ಎಂದು ವಿವರಿಸಿದರು.

ಪಾದಯಾತ್ರೆ ಸ್ವಾಗತ ಸಮಿತಿ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಶಾಸಕ ವಿಜಯಾನಂದ ಎಸ್.ಕಾಶೆಪ್ಪನವರ, ನಮ್ಮ ಸಮಾಜಕ್ಕೆ ಮೀಸಲಾತಿ ಕಲ್ಪಿಸುವ ಭರವಸೆ ನೀಡಿದ್ದ ಸಿಎಂ ಯಡಿಯೂರಪ್ಪ ವರೆಗೆ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಮಾಡು ಇಲ್ಲವೇ ಮಡಿ ಹೋರಾಟ ಶುರುವಾಗಲಿದೆ. 10ಲಕ್ಷದಿಂದ 15 ಲಕ್ಷ ಜನರು ಭಾಗವಹಿಸಲಿದ್ದಾರೆ. ಮೀಸಲಾತಿ ನೀಡುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ. ವಿಧಾನಸೌಧ ಮುತ್ತಿಗೆ ನಿಶ್ಚಿತ’ ಎಂದರು.

ಮಾಜಿ ಶಾಸಕ ಎಚ್.ಎಸ್.ಶಿವಶಂಕರ್, ‘ಸ್ವಾಮೀಜಿ ತಮ್ಮ ಅನುಕೂಲಕ್ಕಾಗಲಿ, ಪೀಠಕ್ಕಾಗಾಲಿ ಅಥವಾ ಸ್ವಾರ್ಥಕ್ಕಾಗಲಿ ಹೋರಾಟ ನಡೆಸುತ್ತಿಲ್ಲ. ಇಡೀ ಸಮಾಜದ ಹಿತಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಪಾದಯಾತ್ರೆ ಮೂಲಕ ಸಮಾಜದ ಒಗ್ಗಟ್ಟು ಪ್ರದರ್ಶನ ಆಗಬೇಕು. ಈ ಹೋರಾಟ ಪಕ್ಷಾಧಾರಿತವಲ್ಲ, ವ್ಯಕ್ತಿ ಆಧಾರಿತವಲ್ಲ. ಪಂಚಮಸಾಲಿ ಸಮಾಜ ಹಿಂದುಳಿದ ಸಮಾಜವಾಗಿದೆ. ಇಂತಹ ಸಮಾಜದ ಶೈಕ್ಷಣಿಕ, ಆರ್ಥಿಕ ಸಬಲತೆಗಾಗಿ ಈ ಹೋರಾಟ, ಪಾದಯಾತ್ರೆ ನಡೆಯುತ್ತಿದೆ’ ಎಂದು ತಿಳಿಸಿದರು.

ಮೇಯರ್ ಬಿ.ಜಿ. ಅಜಯಕುಮಾರ, ಸಮಾಜದ ಮುಖಂಡರಾದ ಎಂ.ಟಿ. ಸುಭಾಶ್ಚಂದ್ರ, ಮಹಾಂತೇಶ ವಿ. ಒಣರೊಟ್ಟಿ, ಪ್ರಭು ಕಲಬುರ್ಗಿ, ಎಚ್.ಎಸ್. ಅರವಿಂದ, ಅಶೋಕ್‌ ಗೋಪನಾಳ್‌, ಚನ್ನಪ್ಪ, ರುದ್ರಮ್ಮ ಮಲ್ಲಿಕಾರ್ಜುನ, ಮಂಜುಳಾ ಮಹೇಶ್‌, ಆಶಾ, ಶಶಿಕುಮಾರ ಬಸಾಪುರ ಅವರೂ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು