ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಮೂವರು ಸೋಂಕಿತರ ಪ್ರಾಥಮಿಕ ವರದಿ ನೆಗೆಟಿವ್

ಕೊರೊನಾ ನಿಯಂತ್ರಣದಲ್ಲಿ ಜಿಲ್ಲಾಡಳಿತದ ಕಾರ್ಯ ಶ್ಲಾಘನೀಯ: ಎಸ್.ಆರ್.ಉಮಾಶಂಕರ್
Last Updated 3 ಏಪ್ರಿಲ್ 2020, 16:04 IST
ಅಕ್ಷರ ಗಾತ್ರ

ದಾವಣಗೆರೆ: ಪ್ರಸ್ತುತ ಜಿಲ್ಲೆಯಲ್ಲಿರುವ 3 ಪಾಸಿಟಿವ್ ಪ್ರಕರಣಗಳ ಸೋಂಕಿತರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ಚಿಕಿತ್ಸಾ ಅವಧಿಯಲ್ಲಿಯಲ್ಲಿನ ಪ್ರಾಥಮಿಕ ಹಂತದ ಗಂಟಲು ಮಾದರಿ ಪರೀಕ್ಷೆಯಲ್ಲಿ ಇವರ ಫಲಿತಾಂಶ ನೆಗೆಟಿವ್ ಬಂದಿದೆ. ಮುಂದೆ ಜಿಲ್ಲೆಯಲ್ಲಿ ಒಂದೂ ಪಾಸಿಟಿವ್ ಪ್ರಕರಣ ವರದಿಯಾಗುವುದು ಬೇಡ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಆಶಿಸಿದರು.

ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಕೋವಿಡ್ –19 ನಿಯಂತ್ರಣ ಕುರಿತು ಜಿಲ್ಲೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಪರಿಶೀಲಿಸಲು ಶುಕ್ರವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ‘ಜಿಲ್ಲೆಯಲ್ಲಿ ಕೊರೊನಾ ವೈರಸ್ ನಿಯಂತ್ರಣ ಹಾಗೂ ಲಾಕ್‍ಡೌನ್ ಹಿನ್ನೆಲೆಯಲ್ಲಿ ಅಗತ್ಯವಸ್ತುಗಳ ಲಭ್ಯತೆ ಸೇರಿ ಜನಜೀವನ ಸುಗಮವಾಗಿ ನಡೆಯಲು ಆರಂಭದಿಂದಲೂ ಪರಿಣಾಮಕಾರಿಯಾಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯ ಕಾರ್ಯ ರಾಜ್ಯಕ್ಕೆ ಮಾದರಿಯಾಗಿದೆ’ ಎಂದರು.

‘ಜಿಲ್ಲೆಯಲ್ಲಿ ಎಪಿಸೆಂಟರ್, ಬಫರ್ ವಲಯಗಳಲ್ಲಿ ಡಿಎಸ್‍ಇನ್ಫೆಕ್ಷನ್ ಕಾರ್ಯ ಉತ್ತಮವಾಗಿ ಕೈಗೊಳ್ಳಲಾಗಿದೆ. ಕೋವಿಡ್ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಬೇಕು. ಎಲ್ಲ ಅಗತ್ಯ ಸಾಮಗ್ರಿಗಳ ಜೊತೆಗೆ ಮಾನವ ಸಂಪನ್ಮೂಲವನ್ನು ಸಿದ್ದವಿರಿಸಿಕೊಳ್ಳಬೇಕು. ಹಾಗೂ ಕೋವಿಡ್ ಸ್ಕ್ರೀನಿಂಗ್‍ಗೆ ಆಯುಷ್ ವೈದ್ಯರಿಗೆ ತರಬೇತಿ ನೀಡಿ ಬಳಸಿಕೊಳ್ಳಬಹುದು’ ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಮಾತನಾಡಿ, ‘ಮೂರು ಪಾಸಿಟಿವ್ ಪ್ರಕರಣಗಳು ಕಂಡು ಬಂದ ಇವರ ಗಂಟಲು ದ್ರವ ಮಾದರಿಯನ್ನು ಎರಡನೇ ಹಂತದಲ್ಲಿ ಕಳುಹಿಸಲಾಗುವುದು. ಎಪಿಸೆಂಟರ್ ವಲಯದಲ್ಲಿರುವ ಮನೆಗಳಿಗೆ ತೆರಳಿ ಫ್ಲೂ ಟೆಸ್ಟ್ ಮಾಡಲಾಗಿದೆ. ಈ ವಲಯಗಳಲ್ಲಿ ಡಿಸ್‍ಇನ್ಫೆಕ್ಷನ್ ಸೇರಿ ಪ್ರೊಟೊಕಾಲ್ ಪ್ರಕಾರ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ವಿವಿಧ ಸಮಿತಿಗಳನ್ನು ರಚಿಸಿಕೊಂಡು ಕೆಲಸ ಮಾಡಲಾಗುತ್ತಿದ್ದು ಆರ್‍ಆರ್‍ಟಿ ತಂಡ ಪ್ರತಿದಿನ ಕೋವಿಡ್ ಸರ್ವೆ ಕಾರ್ಯದಲ್ಲಿ ತೊಡಗಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ನಟರಾಜ್ ಮಾತನಾಡಿ, ‘ಚಿಗಟೇರಿ ಜಿಲ್ಲಾಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಿದ್ದು, 70 ಸೋಂಕಿತರಿಗೆ ಚಿಕಿತ್ಸೆಗೊಳಪಡುವಷ್ಟು ವೈದ್ಯಕೀಯ, ಸಾಮಗ್ರಿಗಳು, ಮಾನವ ಸಂಪನ್ಮೂಲವನ್ನು ಸಿದ್ದವಿಟ್ಟುಕೊಳ್ಳಲಾಗಿದೆ. 12 ಫಿವರ್ ಕ್ಲಿನಿಕ್ ಮಾಡಲಾಗುವುದು. ಬಾಪೂಜಿ, ಎಸ್.ಎಸ್. ಆಸ್ಪತ್ರೆ ಮತ್ತು 3 ಖಾಸಗಿ ಆಸ್ಪತ್ರೆ ಸೇರಿ 5 ಆಸ್ಪತ್ರೆಗಳನ್ನು ಕೋವಿಡ್ ಚಿಕಿತ್ಸೆಗಾಗಿ ಗುರುತಿಸಲಾಗಿದೆ. 100 ಬೆಡ್‍ಗಳುಳ್ಳ ಐಸಿಯು ಗುರುತಿಸಲಾಗಿದೆ’ ಎಂದರು.

ಉಸ್ತುವಾರಿ ಕಾರ್ಯದರ್ಶಿ ಮಾತನಾಡಿ, ‘ಜಿಲ್ಲೆಯಲ್ಲಿ ಕೋವಿಡ್ ಆಸ್ಪತ್ರೆಗೆ ಅಗತ್ಯವಾದ ಸಲಕರಣೆಗಳನ್ನು ತಮ್ಮ ಹಂತದಲ್ಲೇ ಖರೀದಿಸುವಂತೆ ಡಿಎಚ್‍ಓಗೆ ತಿಳಿಸಿದ ಅವರು ದೆಹಲಿಯ ನಿಜಾಮುದ್ದೀನ್ ಸಮಾವೇಶದಲ್ಲಿ ಪಾಲ್ಗೊಂಡ ಚನ್ನಗಿರಿಯ 11 ಜನರಿಗೆ ಯಾವ ರೀತಿ ಕ್ರಮ ಕೈಗೊಳ್ಳಲಾಗಿದೆ. ಅವರಿಂದ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೆ, ಇತರರಿಗೆ ಸೋಂಕು ಏನಾದರೂ ಹರಡಿರುವ ಬಗ್ಗೆ ವಿಚಾರಿಸಿದರು.

ಡಿಎಚ್‍ಓ ಡಾ.ರಾಘವೇಂದ್ರ ಸ್ವಾಮಿ ಪ್ರತಿಕ್ರಿಯಿಸಿ ‘ಈ 11ಮಂದಿ ಫೆ.28ಕ್ಕೆ ಜಿಲ್ಲೆಗೆ ವಾಪಸ್‌ ಆಗಿರುವುದರಿಂದ ಇನ್‍ಕ್ಯುಬೇಷನ್ ಅವಧಿ ಮುಗಿದಿದ್ದು, ಅವರನ್ನು ನಿಗಾವಣೆಯಲ್ಲಿ ಇರಿಸಲಾಗಿದೆ’ ಎಂದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ‘ಕೊರೊನಾ ವೈರಸ್‌ ನಿಯಂತ್ರಣ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಚೇರಿಯಲ್ಲಿ ವಾರ್ ರೂಂ ಸ್ಥಾಪಿಸಲಾಗಿದೆ. ಅಗತ್ಯ ವಸ್ತುಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲು ರೈಸ್‌ಮಿಲ್, ದಾಲ್‌ಮಿಲ್ ಮಾಲೀಕರೊಂದಿಗೆ ಸಭೆ ನಡೆಸಲಾಗಿದ್ದು, ಟ್ರಾಫಿಕ್ ಸೇರಿ ವೈದ್ಯಕೀಯ ಇತರೆ ವಸ್ತುಗಳ ವ್ಯವಸ್ಥೆ ಮಾಡಲು ಪ್ರಮೋದ್ ನಾಯಕ್ ನೋಡಲ್ ಅಧಿಕಾರಿಯನ್ನು ನೇಮಿಸಿ ಕ್ರಮ ಕೈಗೊಳ್ಳಲಾಗಿದೆ. ಕಿರಾಣಿ ಅಂಗಡಿಗಳು, ದಿನಸಿ ಅಂಗಡಿಗಳು 24X7 ತೆರೆಯಲು ಕ್ರಮ ವಹಿಸಲಾಗಿದೆ. ಗ್ರಾಮೀಣ ಭಾಗದ ಕಿರಾಣಿ ಅಂಗಡಿಗಳಿಗೆ ಪಡಿತರ ಪೂರೈಕೆ ಮಾಡಲಾಗಿದೆ’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ‘ಅನಗತ್ಯವಾಗಿ ಸಂಚರಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಇದುವರೆಗೆ 300 ವಾಹನಗಳನ್ನು ಜಪ್ತಿ ಮಾಡಲಾಗಿದೆ’ ಎಂದರು.

‌ಜಿಲ್ಲಾ ಪಂಚಾಯಿತಿ ಸಿಇಒ ಪದ್ಮಾ ಬಸವಂತಪ್ಪ ಮಾತನಾಡಿ, ‘ಬೆಂಗಳೂರು ಮತ್ತು ಇತರೆ ಪ್ರದೇಶಗಳಿಗೆ ಗ್ರಾಮೀಣ ಭಾಗಕ್ಕೆ ಒಟ್ಟು 15,600 ಜನರು ಬಂದಿದ್ದು ಕೊರೊನಾ ಹಿನ್ನೆಲೆ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಗ್ರಾಮೀಣ ಭಾಗದಲ್ಲಿ ಕಿರಾಣಿ ಅಂಗಡಿಗಳಿಗೆ, ರೈತರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಕ್ರಮ ವಹಿಸಲಾಗಿದೆ’ ಎಂದರು.

ಜಿಲ್ಲಾಧಿಕಾರಿ ಮಾತನಾಡಿ, ‘ಕೋವಿಡ್ ಸಹಾಯವಾಣಿ ಮೂಲಕ 30 ದೂರುಗಳು ಬಂದಿದ್ದು, ಅವುಗಳನ್ನು ಎಫ್‍ಎಸ್‍ಟಿ ತಂಡ ನಿರ್ವಹಣೆ ಮಾಡಿದೆ. ವಾರ್ ರೂಂ ಗೆ ಸ್ಥಳೀಯವಾಗಿ 8 ದೂರುಗಳು ಬಂದಿದ್ದು, ಪ್ರಮುಖವಾಗಿ ಜನರು ರಸ್ತೆಯಲ್ಲಿ ಸಂಚರಿಸುವ ಹಾಗೂ ಹೋಂ ಕ್ವಾರಂಟೈನ್ ಓಡಾಟದ ಬಗ್ಗೆ ಆಗಿದ್ದು, ಇವುಗಳ ಬಗ್ಗೆ ಕ್ರಮ ವಹಿಸಲಾಗಿದೆ ಎಂದರು.

ಉಸ್ತುವಾರಿ ಕಾರ್ಯದರ್ಶಿ ಉತ್ತರಿಸಿ ‘ಹಕ್ಕಿಜ್ವರದ ಹಿನ್ನೆಲೆಯಲ್ಲಿ ಪಶುಸಂಗೋಪನೆ ಇಲಾಖೆ ಉಪ ನಿರ್ದೇಶಕ ಡಾ.ಭಾಸ್ಕರ್ ನಾಯಕ್ ಉತ್ತರಿಸಿ, ‘ಬನ್ನಿಕೋಡಿನ 1ಕಿ.ಮೀ ಸೋಂಕಿತ ವಲಯವನ್ನು ಡಿಸ್‍ಇನ್‍ಫೆಕ್ಟ್ ಮಾಡಲಾಗಿದೆ. ಹಾಗೂ 1 ಕಿ.ಮೀ ವ್ಯಾಪ್ತಿಯ ಸೋಂಕಿತ ವಲಯದಲ್ಲಿ ಕೋಳಿ ಮಾಂಸ ಮತ್ತು ಮೊಟ್ಟೆ ಮಾರಾಟವನ್ನು 90 ದಿನ ನಿರ್ಬಂಧಿಸಿದ್ದು, ಉಳಿದಂತೆ ಜಿಲ್ಲೆಯ ಎಲ್ಲ ಕಡೆ ಮಾರಾಟ ಮಾಡಲಾಗುತ್ತಿದೆ’ ಎಂದರು.

ಉಸ್ತುವಾರಿ ಕಾರ್ಯದರ್ಶಿ ಪ್ರತಿಕ್ರಿಯಿಸಿ ‘ಕೋಳಿ ಅತ್ಯುತ್ತಮ ಪ್ರೋಟಿನ್ ಆಹಾರ ಆಗಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಾರಣ ಕೊರೊನಾಗೆ ಇದು ಒಳ್ಳೆಯ ಆಹಾರ. ಹಾಗಾಗಿ ಸರ್ಕಾರವೇ ಕಡ್ಡಾಯವಾಗಿ ಎಲ್ಲೆಡೆ ಕೋಳಿ ಮತ್ತು ಮೊಟ್ಟೆ ಮಾರಾಟಕ್ಕೆ ಉತ್ತೇಜನ ನೀಡಿದೆ’ ಎಂದರು.

ಸಭೆಯಲ್ಲಿ ಎಡಿಸಿ ಪೂಜಾರ್ ವೀರಮಲ್ಲಪ್ಪ, ಎಸಿ ಮಮತಾ ಹೊಸಗೌಡರ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT