ಗುರುವಾರ , ಫೆಬ್ರವರಿ 27, 2020
19 °C
ಪಾಲಿಕೆ ನೂತನ ಸದಸ್ಯರನ್ನು ಸನ್ಮಾನಿಸಿದ ಶಾಸಕ ಶಾಮನೂರು ಶಿವಶಂಕರಪ್ಪ

ಬಿಜೆಪಿಯ ವಾಮಮಾರ್ಗ ಫಲಿಸಲ್ಲ:ಶಾಸಕ ಶಾಮನೂರು ಶಿವಶಂಕರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕಾಂಗ್ರೆಸ್‌ಗೆ ಪಾಲಿಕೆಯ ಆಡಳಿತ ಸಿಕ್ಕಿಯೇ ಸಿಗುತ್ತದೆ. ಅದರಲ್ಲಿ ಅನುಮಾನ ಬೇಡ. ಬಿಜೆಪಿಯವರು ವಾಮಮಾರ್ಗದಲ್ಲಿ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರ ಪ್ರಯತ್ನ ವ್ಯರ್ಥ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.

ದಾವಣಗೆರೆ ಕಾಂಗ್ರೆಸ್‌ ಸಮಿತಿಯಿಂದ ಇಲ್ಲಿನ ತೊಗಟವೀರ ಸಭಾಂಗಣದಲ್ಲಿ ಗುರುವಾರ ನಡೆದ ಪಾಲಿಕೆಯ ನೂತನ ಸದಸ್ಯರಿಗೆ ಸನ್ಮಾನ ಹಾಗೂ ಚಿಂತನ, ಮಂಥನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಅಧಿಕಾರಕ್ಕೆ ಬಿಜೆಪಿ ಬರುವುದಿಲ್ಲ ಎಂಬುದು ಅವರಿಗೂ ಗೊತ್ತು. ಅಧಿಕಾರಕ್ಕೆ ಬರುವುದು ಅವರ ಹಣೆಬರಹದಲ್ಲಿ ಇಲ್ಲ. ಜತೆಗೆ ಕಿತ್ತಾಟ ಕೂಡ ಇದೆ. ನಾವು ಒಗ್ಗಟ್ಟಾಗಿ ಇರೋಣ. ಜತೆಗೆ ಎಚ್ಚರದಿಂದಲೂ ಇರೋಣ. ಹಣ, ಅಧಿಕಾರದ ಆಮಿಷ ಅವರು ಒಡ್ಡುತ್ತಾರೆ. ಅದಕ್ಕೆ ಬಲಿಯಾಗಬಾರದು’ ಎಂದು ಎಚ್ಚರಿಸಿದರು.

‘ಹಿಂದೆ ನಾವು ತಂದ ಕೆಲಸಗಳಷ್ಟೇ ಈಗ ನಡೆಯುತ್ತಿವೆ. ಸ್ಮಾರ್ಟ್‌ಸಿಟಿ ಇರಬಹುದು, ಜಲಸಿರಿ ಇರಬಹುದು, ವಿವಿಧ ಇಲಾಖೆಗಳಿಗೆ ಬಂದ ಯೋಜನೆಗಳು ಇರಬಹುದು. ಎಲ್ಲವೂ ಹಿಂದೆ ಅನುಮೋದನೆಗೊಂಡವುಗಳಾಗಿವೆ. ಹೊಸ ಕಾಮಗಾರಿಗಳು ಯಾವುವೂ ನಡೆಯುತ್ತಿಲ್ಲ. ಸ್ಮಾರ್ಟ್‌ಸಿಟಿ ಯೋಜನೆಯು ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಅನುಮತಿ ನೀಡಿದ್ದರಿಂದ ಬಂತು. ಈಗ ಅವರು ನಮ್ಮದು ಎಂದು ಹೇಳಿಕೊಳ್ಳುತ್ತಿದ್ದಾರೆ. ಅವರು ಹೇಳಿಕೊಳ್ಳಲಿ. ಅದಕ್ಕೆ ತಲೆಕೆಡಿಸಿಕೊಳ್ಳಬೇಡಿ’ ಎಂದು ಸಲಹೆ ನೀಡಿದರು.

‘ಸೋತ ಅಭ್ಯರ್ಥಿಗಳು ಮನೆಯಲ್ಲಿ ಕುಳಿತುಕೊಳ್ಳಬಾರದು. ತಮ್ಮ ವಾರ್ಡ್‌ಗಳಲ್ಲಿ ಜನರ ನಡುವೆ ಇರಬೇಕು. ಕಾಮಗಾರಿಗಳು ಆಗಬೇಕಿದ್ದರೆ ತಿಳಿಸಿ. ನನ್ನ ಅನುದಾನ ಒದಗಿಸುತ್ತೇನೆ. ಜತೆಗೆ ಬೇರೆ ಅನುದಾನಗಳನ್ನು ಒದಗಿಸಲಾಗುವುದು. ಬಿಜೆಪಿಯವರಿಗೆ ಕೆಲಸ ಮಾಡಲು ಗೊತ್ತಿಲ್ಲ. ಬೇರೆಯವರು ಮಾಡಿದ ಕೆಲಸವನ್ನು ತಾವೇ ಮಾಡಿದ್ದು ಎಂದು ಹೇಳಿಕೊಳ್ಳುವುದು ಮಾತ್ರ ಗೊತ್ತು’ ಎಂದು ಟೀಕಿಸಿದರು.

‘ನಾವು ಉತ್ತಮ ಆಡಳಿತ ನೀಡುವ ಮೂಲಕ ಮೇಲಕ್ಕೇರಬೇಕು. ಅಭಿವೃದ್ಧಿಗೆ ಕಾಂಗ್ರೆಸ್‌ ಬೇಕು, ಬಿಜೆಪಿಯ ಸಹವಾಸ ಬೇಡ ಎಂದು ಜನ ಹೇಳುವ ರೀತಿಯಲ್ಲಿ ಕೆಲಸಗಳನ್ನು ಮಾಡಬೇಕು’ ಎಂದು ತಿಳಿಸಿದರು.

ಪಾಲಿಕೆ ಸದಸ್ಯರ ಎ.ನಾಗರಾಜ್‌ ಪ್ರಾಸ್ತಾವಿಕವಾಗಿ ಮಾತನಾಡಿ, ‘ಪಾಲಿಕೆಗೆ ಆಯ್ಕೆಯಾಗಿ ಎರಡೂವರೆ ತಿಂಗಳು ಕಳೆದರೂ ಯಾವುದೇ ಅಧಿಕಾರ ಬಂದಿಲ್ಲ. ವಾರ್ಡಲ್ಲಿ ಕೆಲಸ ಮಾಡಲು ಆಗುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

ಪಾಲಿಕೆಗೆ 14ನೇ ಹಣಕಾಸು ನಿಧಿ, ಎಸ್‌ಎಫ್‌ಸಿ, ಮುಖ್ಯಮಂತ್ರಿ ನಿಧಿ, ಪಾಲಿಕೆ ನಿಧಿಗಳು ಬರುತ್ತವೆ. ಎಲ್ಲ ಅನುದಾನಗಳನ್ನು ನಿಮ್ಮ ವಾರ್ಡ್‌ಗೆ ಯಾವ ಕಾಮಗಾರಿ ನಡೆಸಲು ಬೇಕು ಎಂಬುದಕ್ಕೆ ನೀವು ಪ್ರಸ್ತಾವ ಸಲ್ಲಿಸಬೇಕು. ಮುಖ್ಯಮಂತ್ರಿ ವಿಶೇಷ ನಿಧಿ ₹125 ಕೋಟಿ ಬಂದಿದೆ. ಸಂಸದರು, ಶಾಸಕರು, ಪಾಲಿಕೆ ಸದಸ್ಯರು ಈ ನಿಧಿಯನ್ನು ಅಭಿವೃದ್ಧಿ ಕಾಮಗಾರಿಗೆ ಬಳಸಿಕೊಳ್ಳಬೇಕು. ಎಲ್ಲ ಪಾಲಿಕೆ ಸದಸ್ಯರು ಕೂಡಲೇ ಎಂಜಿನಿಯರ್‌ಗಳ ಮೂಲಕ ₹1.5 ಕೋಟಿಯಿಂದ ₹2 ಕೋಟಿ ವರೆಗೆ ಅಂದಾಜು ವೆಚ್ಚದ ಕಾಮಗಾರಿಗಳ ನೀಲನಕ್ಷೆ ತಯಾರಿಸಿ ನೀಡಬೇಕು’ ಎಂದು ಮಾಹಿತಿ ನೀಡಿದುರ.

ದಾವಣಗೆರೆ ದಕ್ಷಿಣ ಅಧ್ಯಕ್ಷ ಅಯೂಬ್‌ ಪೈಲ್ವಾನ್‌ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್‌ ನಾಯಕರಾದ ದಿನೇಶ್‌ ಕೆ. ಶೆಟ್ಟಿ, ಡಿ. ಬಸವರಾಜ್‌, ಅನಿತಾಬಾಯಿ ಮಾಲತೇಶ್‌, ಡೋಲಿ ಚಂದ್ರು, ನಂಜಾನಾಯ್ಕ, ವಿಜಯಾ ಅಕ್ಕಿ, ಅಲಿ ರಹಮತ್‌, ಪ್ರಕಾಶ್‌ ಪಾಟೀಲ್‌, ಲಿಂಗರಾಜ್‌, ಮುಜಾಹಿದ್‌ ಇದ್ದರು. ಮಲ್ಲಿಕಾರ್ಜುನ್‌ ಸ್ವಾಗತಿಸಿದರು.

ಎಲ್ಲರಿಗೂ ಅಧಿಕಾರ

ವರ್ಷಕ್ಕೆ ಒಬ್ಬರು ಮೇಯರ್‌, ಉಪ ಮೇಯರ್‌ ಅಂದರೆ 5 ವರ್ಷಕ್ಕೆ 10 ಮಂದಿಗೆ ಅಧಿಕಾರ ಸಿಗುತ್ತದೆ. ನಾಲ್ಕು ಸ್ಥಾಯಿ ಸಮಿತಿಗಳಿಗೆ ಐದು ವರ್ಷದಲ್ಲಿ 20 ಮಂದಿ ಅಧ್ಯಕ್ಷರಾಗಬಹುದು. ಹಾಗಾಗಿ ಎಲ್ಲರಿಗೂ ಅಧಿಕಾರ ಸಿಗುತ್ತದೆ ಎಂದು ಎ.ನಾಗರಾಜ್‌ ಅಧಿಕಾರದ ಲೆಕ್ಕಚಾರ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು