ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ವಿರೋಧ ಪಕ್ಷ

ಜಿಲ್ಲಾ ಪಂಚಾಯಿತಿಯಲ್ಲಿ ಅಣಕು ಸಂಸತ್ತು ನಡೆಸಿದ ವಿದ್ಯಾರ್ಥಿನಿಯರು
Last Updated 18 ನವೆಂಬರ್ 2022, 6:08 IST
ಅಕ್ಷರ ಗಾತ್ರ

ದಾವಣಗೆರೆ: ವಿದ್ಯಾರ್ಥಿಗಳಿಗೆ ಕಲಿಕಾ ಪರಿಕರಗಳನ್ನು ವಿತರಿಸುವಲ್ಲಿ ವಿಫಲವಾಗಿರುವ ಸರ್ಕಾರ, ಉದ್ಯೋಗಕ್ಕೆ ನೇಮಕಾತಿ ನಡೆಯುವ ಬದಲು ಹರಾಜು ನಡೆಯುತ್ತಿದೆ. ಪಿಎಸ್‌ಐ ನೇಮಕಾತಿ ಹಗರಣ ಅದಕ್ಕೆ ಸಾಕ್ಷಿ. ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ ಎಂದು ವಿರೋಧ ಪಕ್ಷದ ನಾಯಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಕೊರೊನಾ ಕಾಲದಲ್ಲಿ ವಿದ್ಯೆಯಿಂದ ಹಿಂದುಳಿದ ಮಕ್ಕಳಿಗೆ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಮಾಡಲಾಗಿದೆ. ಎಲ್ಲ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸಲಾಗಿದೆ. ಪಿಎಸ್‌ಐ ಹಗರಣದಲ್ಲಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ, ಗೃಹ ಸಚಿವರು, ಶಿಕ್ಷಣ ಸಚಿವರು ಸಮರ್ಥಿಸಿಕೊಂಡರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಯುವ ಸಂಸತ್ತು (ಅಣಕು ಸಂಸತ್ತು) ಸ್ಪರ್ಧೆಯ ಅಧಿವೇಶನದಲ್ಲಿ ನಡೆದ ವಾದ, ಪ್ರತಿವಾದಗಳ ತುಣುಕು ಇವು. ಮುಖ್ಯಕಾರ್ಯದರ್ಶಿ ಕಲಾಪದ ವರದಿ ಮಂಡಿಸಿದರು. ಸಂತಾಪ ಸೂಚನೆ, ಪ್ರಶ್ನೋತ್ತರ, ಶೂನ್ಯವೇಳೆ, ಗಮನ ಸೆಳೆಯುವ ಸೂಚನೆಗಳು, ಜರೂರು ವಿಷಯದ ಬಗ್ಗೆ ಚರ್ಚೆ, ವಿಧೇಯಕಗಳ ಮಂಡನೆ, ಶಾಸನ ರಚನೆಗಳು ನಡೆದವು.

ಸಾಲ ಮನ್ನಾ ಒಂದು ಗಿಮಿಕ್‌ ಎಂದು ವಿರೋಧ ಪಕ್ಷ ಹೇಳಿದರೆ, ರೈತರ ಕಣ್ಣೀರು ಒರೆಸುವ ಕೆಲಸ ಎಂದು ಆಡಳಿತ ಪಕ್ಷ ತಿರುಗೇಟು ನೀಡಿತು. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಬೆಲೆ ನಿಯಂತ್ರಣ ಮಾಡಲು ಸರ್ಕಾರ ವಿಫಲವಾಗಿದೆ ಎಂದರೆ, ಬೆಲೆ ಏರಿಕೆ ಅನಿವಾರ್ಯ. ಎಲ್ಲ ಕಾಲದಲ್ಲೂ ಆಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿತು. ಆಸ್ತಿ ನೋಂದಣಿ ಮಾಡಲು ಹೋದರೆ ಸರ್ವರ್‌ ಬ್ಯುಸಿ ಎಂದು ಅಧಿಕಾರಿಗಳು ಕಥೆ ಹೇಳುತ್ತಾರೆ. ಹಣ ಕೊಡದೇ ಕೆಲಸ ಆಗುತ್ತಿಲ್ಲ ಎಂದು ವಿರೋಧ ಪಕ್ಷ ಟೀಕಿಸಿತು.

ಪ್ರತಿ ತಾಲ್ಲೂಕಿನಿಂದ ಇಬ್ಬರಂತೆ 6 ತಾಲ್ಲೂಕುಗಳಿಂದ 12 ಮಂದಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮೆಳ್ಳೆಕಟ್ಟೆ ಸರ್ಕಾರಿ ಪ್ರೌಢಶಾಲೆಯ ಸಿಂಧೂ ಸಿ.ಎನ್‌. ಪ್ರಥಮ, ನ್ಯಾಮತಿ ತಾಲ್ಲೂಕು ಜಿಜಿಜೆಸಿಯ ದಿವ್ಯಾ ಎಂ. ದ್ವಿತೀಯ ಹಾಗೂ ಕೊಂಡಜ್ಜಿ ಜಿಜೆಸಿಯ ಅನು ಆರ್‌. ತೃತೀಯ ಸ್ಥಾನ ಪಡೆದರು. ಮಾಯಕೊಂಡ ಕೆಪಿಎಸ್‌ನ ಹೇಮಂತಾ ಎನ್‌., ಮೆಳ್ಳೆಕಟ್ಟೆ ಸರ್ಕಾರಿ ಪ್ರೌಢಶಾಲೆಯ ಮೇಘನಾ ಬಿ.ಆರ್‌., ಜಗಳೂರು ಗುರುಸಿದ್ಧಾಪುರ ಪ್ರೌಢಶಾಲೆಯ ಪೂಜಾ ಎಂ. ಸಮಾಧಾನಕರ ಬಹುಮಾನ ಪಡೆದರು.

ಮೊದಲ ಎರಡು ಸ್ಥಾನಗಳನ್ನು ಗಳಿಸಿದವರು ರಾಜ್ಯಮಟ್ಟದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲ 12 ಮಂದಿಯೂ ವಿದ್ಯಾರ್ಥಿನಿಯರೇ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT