ದಾವಣಗೆರೆ: ತೆವಳುತ್ತಿದೆ ‘ಪಶು ಸಂಜೀವಿನಿ’ ಯೋಜನೆ

ದಾವಣಗೆರೆ: ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷೆಯ ‘ಪಶು ಸಂಜೀವಿನಿ’ ಯೋಜನೆ ಹೈನುಗಾರರಿಗೆ ‘ಸಂಜೀವಿನಿ’ಯಾಗಿ ಪರಿಣಮಿಸಿಲ್ಲ. ಈ ಮಹತ್ವದ ಯೋಜನೆಯು ಉದ್ಘಾಟನೆಗೆ ಮಾತ್ರ ಸೀಮಿತವಾಗಿದ್ದನ್ನು ಬಿಟ್ಟರೆ ರೈತರಿಗೆ ಯಾವುದೇ ರೀತಿಯ ಪ್ರಯೋಜನ ನೀಡಿಲ್ಲ.
ಕೇಂದ್ರ ಸರ್ಕಾರದ ಶೇ 60 ಮತ್ತು ರಾಜ್ಯ ಸರ್ಕಾರದ ಶೇ 40ರಷ್ಟು ಅನುದಾನದೊಂದಿಗೆ ಹೈನುಗಾರರಿಗೆ ಅನುಕೂಲ ಕಲ್ಪಿಸಿ, ನೆರವು ನೀಡುವ ಉದ್ದೇಶದಿಂದ 2020ರ ಆಗಸ್ಟ್‌ನಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿತ್ತು. ಯೋಜನೆಯಡಿ ಮೊದಲ ಹಂತದಲ್ಲೇ ಜಿಲ್ಲೆಯ 6 ತಾಲ್ಲೂಕುಗಳಿಗೆ ಆಂಬುಲೆನ್ಸ್ ಬಂದಿದ್ದವು.
ಹೀಗೆ ಬಂದ ಆಂಬುಲೆನ್ಸ್‌ಗಳು ನಿಂತಲ್ಲೇ ನಿಂತಿದ್ದು, ಸೂಕ್ತ ಸಿಬ್ಬಂದಿಯನ್ನೂ ನೇಮಿಸಲಾಗಿಲ್ಲ.
ಜಾನುವಾರುಗಳಿಗೆ ಈಚೆಗೆ ಚರ್ಮಗಂಟು ರೋಗ ಬಂದಾಗಲೂ ಈ ಆಂಬುಲೆನ್ಸ್‌ಗಳ ಉಪಯೋಗ ದೊರೆತಿಲ್ಲ. ತುರ್ತು ಸಂದರ್ಭದಲ್ಲಿ ಬೇರೆಡೆಯಿಂದ ಚಾಲಕರನ್ನು ನಿಯೋಜಿಸಿ ಆಂಬುಲೆನ್ಸ್ ಸೇವೆ ಒದಗಿಸಿದ್ದು ಹೊರತುಪಡಿಸಿದರೆ ಇದರ ಸಮರ್ಪಕ ಉಪಯೋಗ ಮಾತ್ರ ಆಗಿಲ್ಲ.
ಪ್ರತಿ ತಾಲ್ಲೂಕಿಗೆ ಮಾಸಿಕ ₹ 2.30 ಲಕ್ಷ ಮೊತ್ತದಲ್ಲಿ ಒಂದು ಆಂಬುಲೆನ್ಸ್ ಹಾಗೂ ಅದರಲ್ಲಿ ಕಾರ್ಯನಿರ್ವಹಿಸಲು ಒಬ್ಬ ವೈದ್ಯ ಹಾಗೂ ಒಬ್ಬ ಔಷಧ ವಿತರಕ ಹಾಗೂ ಚಾಲಕರನ್ನು ನಿಯುಕ್ತಿ ಮಾಡಲಾಗುತ್ತಿದೆ. ಆದರೆ, ಆ ವ್ಯವಸ್ಥೆ ಇನ್ನೂ ಆರಂಭವಾಗಿಲ್ಲ. ಎರಡೂವರೆ ವರ್ಷ ಕಳೆದರೂ ಯೋಜನೆ ಅಡಿ ಸಿಬ್ಬಂದಿ ನೇಮಕ ಮಾಡದ್ದರಿಂದ ರೈತರಿಗೆ ಯೋಜನೆಯ ಲಾಭ ಸಿಗುತ್ತಿಲ್ಲ.
‘ಪಶು ಸಂಜೀವಿನಿ ಯೋಜನೆಯಡಿ ನೀಡಲಾದ ಆಂಬುಲೆನ್ಸ್‌ಗಳು ರೈತರಿಗೆ ಉಪಯೋಗವಾಗುತ್ತಿಲ್ಲ. ಕರೆ ಮಾಡಿದರೂ ಇಲಾಖೆ ಸಿಬ್ಬಂದಿ ಸ್ಪಂದಿಸುವುದಿಲ್ಲ. ಈ ಬಗ್ಗೆ ಹೆಚ್ಚಿನ ರೈತರಿಗೆ ಮಾಹಿತಿಯೂ ಇಲ್ಲ‘ ಎಂದು ಹಳೆ ಬಾತಿಯ ರೈತ ಷಣ್ಮುಖ ದೂರಿದರು.
‘ರಾಜ್ಯದ ಎಲ್ಲ ತಾಲ್ಲೂಕುಗಳಿಗೆ ಒಂದರಂತೆ ಒಟ್ಟು ವರ್ಷಕ್ಕೆ ₹ 72 ಕೋಟಿ ಅನುದಾನದಂತೆ ಯೋಜನೆ ಅಡಿ 290 ಆಂಬುಲೆನ್ಸ್‌ಗಳನ್ನು ಒದಗಿಸಲಾಗಿವೆ. ಆದರೆ, ಸಿಬ್ಬಂದಿ ನೇಮಕಕ್ಕೆ ಟೆಂಡರ್ ಕರೆಯಲಾಗಿದೆ. ನೇಮಕಾತಿ ಬಳಿಕ ಇವು ಕಾರ್ಯನಿರ್ವಹಿಸಲಿವೆ’ ಎಂದು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ನಿರ್ದೇಶಕ ಡಾ. ಮಂಜು ಎಸ್. ಪಾಳೇಗಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಜಿಲ್ಲೆಯ ಎಲ್ಲ 6 ತಾಲ್ಲೂಕುಗಳಿಗೂ ಮೊದಲ ಹಂತದಲ್ಲೇ ಆಂಬುಲೆನ್ಸ್‌ಗಳು ಬಂದಿವೆ. ಸಿಬ್ಬಂದಿ ನೇಮಕವಾಗಿಲ್ಲ. ಸದ್ಯ ತುರ್ತು ಸಂದರ್ಭದಲ್ಲಿ ಇಲಾಖೆಯಲ್ಲಿರುವ ಚಾಲಕರು, ವೈದ್ಯರನ್ನು ಕಳುಹಿಸುತ್ತಿದ್ದೇವೆ’ ಎಂದು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ದಾವಣಗೆರೆಯ ಉಪ ನಿರ್ದೇಶಕ ಡಾ. ಚಂದ್ರಶೇಖರ್ ಸುಂಕದ
ತಿಳಿಸಿದರು.
**
ಸಿಬ್ಬಂದಿ ನೇಮಕಕ್ಕೆ ಟೆಂಡರ್ ಕರೆಯಲಾಗಿದೆ. ಏಜೆನ್ಸಿಗಳಿಗೆ ಟೆಂಡರ್ ನೀಡಲಾಗುವುದು. ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಸಿಬ್ಬಂದಿ ನೇಮಕಾತಿ ನಡೆಯಲಿದೆ.
-ಡಾ. ಮಂಜು ಎಸ್. ಪಾಳೇಗಾರ್, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.