ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನೋತ್ತರ ಕಾಲಕ್ಕೂ ಬೇಕು ಆಮ್ಲಜನಕ ಘಟಕಗಳು

ಜಿಲ್ಲಾ ಆಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ತಯಾರಾಗಿ ನಿಂತಿವೆ ಆಕ್ಸಿಜನ್‌ ಜನರೇಟರ್‌ ಪ್ಲಾಂಟ್‌ಗಳು
Last Updated 25 ಅಕ್ಟೋಬರ್ 2021, 4:11 IST
ಅಕ್ಷರ ಗಾತ್ರ

ದಾವಣಗೆರೆ: ಕೊರೊನಾ ಎರಡನೇ ಆಲೆ ಆರಂಭದ ಕಾಲದಲ್ಲಿ ಆಮ್ಲಜನಕ ವಿಪರೀತ ಕೊರತೆಯಾಗಿ ಅತಿ ಹೆಚ್ಚು ಸಾವು–ನೋವುಗಳು ಉಂಟಾಗಿದ್ದವು. ಜಿಲ್ಲಾ ಆಸ್ಪತ್ರೆ ಮಾತ್ರವಲ್ಲ, ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿಯೂ ಆಮ್ಲಜನಕ ಉತ್ಪಾದನಾ ಘಟಕ ತೆರೆದು ಈ ಸಮಸ್ಯೆ ಪರಿಹರಿಸಲು ಸರ್ಕಾರ, ಜಿಲ್ಲಾಡಳಿತ ನಿರ್ಧರಿಸಿದ್ದವು. ಅದರಂತೆ ಈಗ ಜಿಲ್ಲಾ ಕೇಂದ್ರ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಆಕ್ಸಿಜನ್‌ ಪ್ಲಾಂಟ್‌ಗಳು ತಯಾರಾಗಿ ನಿಂತಿವೆ.

ಜಿಲ್ಲಾ ಚಿಗಟೇರಿ ಆಸ್ಪತ್ರೆಯ ಆವರಣರದಲ್ಲಿ ಕೊರೊನಾ ಕಾಲದಲ್ಲಿ 6 ಸಾವಿರ ಲೀಟರ್ ಸಾಮರ್ಥ್ಯದ ಲಿಕ್ವಿಡ್‌ ಆಕ್ಸಿಜನ್‌ ಪ್ಲಾಂಟ್‌ ನಿರ್ಮಿಸಲಾಯಿತು. ಹರಿಹರದಲ್ಲಿ ಕಾರ್ಯಾರಂಭ ಮಾಡಿದ್ದು ಆಮ್ಲಜನಕ ಸಂಗ್ರಹಾಗಾರವೇ ಹೊರತು ಉತ್ಪಾದನಾ ಘಟಕವಲ್ಲ. ಬೇರೆ ಕಡೆ ಉತ್ಪಾದನೆಯಾದ ಆಮ್ಲಜನಕವನ್ನು ದ್ರವರೂಪದಲ್ಲಿ ಸಂಗ್ರಹಿಸಲಾಗುತ್ತದೆ. ಎರಡನೇ ಅಲೆಯ ಆರಂಭದಲ್ಲಿ ಜೀವವಾಯು ಆಗಿ ಹಲವರ ಪ್ರಾಣ ಉಳಿಸಲು ಕಾರಣವಾಗಿದ್ದು ಇದೇ ಲಿಕ್ವಿಡ್ ಪ್ಲಾಂಟ್‌.

ಈಚೆಗೆ ಎರಡು ಆಮ್ಲಜನಕ ಪ್ಲಾಂಟ್‌ಗಳು ಉದ್ಘಾಟನೆಗೊಂಡಿವೆ. 1000 ಲೀಟರ್‌ ಪರ್‌ ಮಿನಿಟ್‌ (ಎಲ್‌ಪಿಎಂ) ಮತ್ತು 1000 ಎಲ್‌ಪಿಎಂ ಉತ್ಪಾದನೆಯ ಸಾಮರ್ಥ್ಯವನ್ನು ಇವು ಹೊಂದಿವೆ. ಪ್ರೆಶರ್‌ ಸ್ವಿಂಗ್‌ ಅಡ್‌ಸಾರ್ಪ್‌ಶನ್‌ ಆಕ್ಸಿಜನ್‌ ಪ್ಲಾಂಟ್‌ಗಳು ಇವಾಗಿವೆ. ಅಂದರೆ ಆಮ್ಲಜನಕವು ದ್ರವರೂಪದಲ್ಲಿರದೇ ನೇರವಾಗಿ ಗ್ಯಾಸ್‌ ರೂಪದಲ್ಲಿರುತ್ತದೆ. ಪ್ಲಾಂಟ್‌ನ ಮೇಲ್ಮೈಯಲ್ಲಿ ಹೀರಿಕೊಳ್ಳದೇ ಇರುವುದರಿಂದ ಇಲ್ಲಿ ಆಮ್ಲಜನಕ ವ್ಯರ್ಥ ಆಗುವುದಿಲ್ಲ. ಲಿಕ್ವಿಡ್‌ ಮೆಡಿಕಲ್‌ ಆಕ್ಸಿಜನ್‌ನಲ್ಲಿ ಪೈಪ್‌ಗಳ ಮೇಲೆ ಹೆಪ್ಪುಗಟ್ಟಿದಂತಾಗಿ ಆಮ್ಲಜನಕ ವ್ಯರ್ಥವಾಗುತ್ತದೆ.

ದಾವಣಗೆರೆಯಲ್ಲಿ ಪಿ.ಎಂ. ಕೇರ್‌ನ ಅನುದಾನದಲ್ಲಿ ಒಂದು ಮತ್ತು ಮಿನಿಸ್ಟ್ರಿ ಆಫ್‌ ಪೆಟ್ರೋಲಿಯಂ ಆ್ಯಂಡ್‌ ನ್ಯಾಚುರಲ್‌ ಗ್ಯಾಸ್‌ ವತಿಯಿಂದ ಒಂದು ಆಮ್ಲಜನಕ ತಯಾರಿಕಾ ಘಟಕ ನಿರ್ಮಾಣಗೊಂಡಿದೆ. ಹರಿಹರ ಮತ್ತು ಜಗಳೂರು ತಾಲ್ಲೂಕಿನಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಹೆತ್ತವರ ಹೆಸರಿನ ಟ್ರಸ್ಟ್‌ನಿಂದ ಆಮ್ಲಜನಕ ತಯಾರಿಕಾ ಘಟಕ ನಿರ್ಮಾಣಗೊಂಡಿದೆ. ಈ ಎರಡೂ ತಾಲ್ಲೂಕು ಕೇಂದ್ರಗಳ ಘಟಕಗಳು ತಲಾ 333 ಲೀಟರ್‌ ಪರ್‌ ಮಿನಿಟ್‌ ಸಾಮರ್ಥ್ಯವನ್ನು ಹೊಂದಿವೆ.

ಚನ್ನಗಿರಿಯ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ (ಕೆಎಸ್‌ಡಿಎಲ್‌) ಅಧ್ಯಕ್ಷರೂ ಆಗಿರುವುದರಿಂದ ಆ ನಿಗಮದಿಂದ ಚನ್ನಗಿರಿ ತಾಲ್ಲೂಕು ಆಸ್ಪತ್ರೆಗೆ ಆಕ್ಸಿಜನ್‌ ಜನರೇಟರ್‌ ಪ್ಲಾಂಟ್‌ ಒದಗಿಸಿದರು. ಇದು 500 ಲೀಟರ್‌ ಪರ್‌ ಮಿನಿಟ್‌ ಸಾಮರ್ಥ್ಯ ಇರುವ ಘಟಕವಾಗಿದೆ.

ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಕೆಆರ್‌ಡಿಎಲ್‌ ಜತೆ ಮಾತನಾಡಿ, ತಮ್ಮ ಕ್ಷೇತ್ರಕ್ಕೆ ಆಮ್ಲಜನಕ ಘಟಕ ಮಂಜೂರು ಮಾಡಿಸಿಕೊಂಡರು. ಈ ಘಟಕ ಕೂಡ ನಿಮಿಷಕ್ಕೆ 500 ಲೀಟರ್‌ ಉತ್ಪಾದನೆಯ ಸಾಮರ್ಥ್ಯ ಹೊಂದಿದೆ.

ಹೊಸ ತಾಲ್ಲೂಕು ಆಗಿರುವ ನ್ಯಾಮತಿಯನ್ನು ಹೊರತುಪಡಿಸಿ ಉಳಿದೆಲ್ಲ ತಾಲ್ಲೂಕುಗಳಲ್ಲಿ ಆಮ್ಲಜನಕ ಘಟಕ ಇರುವುದರಿಂದ ಮುಂದೆ ಕೊರೊನಾ ಹರಡಿ, ಉಸಿರಾಟದ ಸಮಸ್ಯೆ ಉಂಟಾದರೆ ಆಮ್ಲಜನಕ ಕೊರತೆ ಆಗದಂತೆ ನೋಡಿಕೊಳ್ಳಲಾಗಿದೆ.

ಎಲ್ಲ ಮುಗಿದ ಮೇಲೆ: ಕೊರೊನಾ ಮೊದಲ ಅಲೆಗಿಂತ ಎರಡನೇ ಅಲೆ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸಿತ್ತು. ಸಾವಿನ ಪ್ರಮಾಣ ಕೂಡ ಹೆಚ್ಚಾಗಿತ್ತು. ಅದರಲ್ಲಿ ಹೆಚ್ಚಿನವರು ಸರಿಯಾದ ಸಮಯಕ್ಕೆ ಆಮ್ಲಜನಕ ಸಿಗದೇ ಮೃತಪಟ್ಟಿದ್ದರು. ಮುಂದೆ ಈ ರೀತಿ ಸಾವು ಉಂಟಾಗಬಾರದು ಎಂದು ಆಮ್ಲಜನಕ ಘಟಕಗಳನ್ನು ತೆರೆಯುವ ಹೊತ್ತಿಗೆ ಕೊರೊನಾ ಎರಡನೇ ಅಲೆ ಇಳಿಮುಖವಾಗಿತ್ತು. ದಿನವೂ ಬೆರಳೆಣಿಕೆಯಷ್ಟು ಪ್ರಕರಣಗಳು ಪತ್ತೆಯಾಗುತ್ತಿವೆ. ಕೊರೊನಾ ಇಲ್ಲದೇ ಇದ್ದರೆ ಇಷ್ಟೊಂದು ಪ್ರಮಾಣದಲ್ಲಿ ಪ್ಲಾಂಟ್‌ಗಳು ಉಪಯೋಗಕ್ಕೆ ಬರುತ್ತವೆಯೇ ಎಂಬ ಪ್ರಶ್ನೆ ಎದ್ದಿದೆ.

‘ಕೊರೊನಾ ಸೋಂಕು ಇದ್ದರಷ್ಟೇ ಆಮ್ಲಜನಕ ಬಳಕೆ ಎಂಬುದು ಸರಿಯಲ್ಲ. ಬೇರೆ ಬೇರೆ ರೋಗಗಳಿಂದಲೂ ಉಸಿರಾಟದ ತೊಂದರೆ ಉಂಟಾಗುತ್ತದೆ. ಎಲ್ಲ ಸಮಯದಲ್ಲಿಯೂ ಆಮ್ಲಜನಕ ಬಳಕೆಯಾಗಲಿದೆ. ಇದು ವ್ಯರ್ಥ ಹೂಡಿಕೆ ಅಲ್ಲ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸ್ಪಷ್ಟನೆ.

ಲಿಕ್ವಿಡ್‌ ಮೆಡಿಕಲ್‌ ಆಮ್ಲಜನಕದಲ್ಲಿ ವ್ಯರ್ಥ ಆಗುವ ಪ್ರಮಾಣ ಸ್ವಲ್ಪ ಜಾಸ್ತಿ ಇರಬಹುದು. ಆದರೆ ತುರ್ತು ನಿಗಾ ಘಟಕಕ್ಕೆ ಅದೇ ಆಮ್ಲಜನಕ ಬೇಕಾಗುತ್ತದೆ. ಮಾಮೂಲು ಬೆಡ್‌ನಲ್ಲಿ ಐದು ಲೀಟರ್‌, ಹತ್ತು ಲೀಟರ್‌ ಆಮ್ಲಜನಕ ಸಿಕ್ಕರೆ ಆರೋಗ್ಯವಂತರಾಗಿ ಹೋಗುವವರು ಇರುತ್ತಾರೆ. ಅವರಿಗೆ ಆಕ್ಸಿಜನ್‌ ಜನರೇಟರ್‌ ಪ್ಲಾಂಟ್‌ನಿಂದ ಪೂರೈಕೆ ಆಗುವ ಆಮ್ಲಜನಕ ನೀಡಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ‌ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾವು ಮೂರನೇ ಅಲೆ ಬಂದಿಲ್ಲ ಎಂದು ನೆಮ್ಮದಿಯಿಂದ ಇದ್ದೇವೆ. ಆದರೆ ಚೀನಾ ಸಹಿತ ವಿವಿಧ ದೇಶಗಳಲ್ಲಿ ಮೂರನೇ ಅಲೆ ಆರಂಭವಾಗಿದೆ. ಹಾಗಾಗಿ ನಾವು ಮೈಮರೆಯುವಂತಿಲ್ಲ. ಮುಂದೆ ಯಾವುದೇ ತರಹದ ಸೋಂಕುಗಳು ಬಂದಾಗ ಮತ್ತೆ ಆಮ್ಲಜನಕಕ್ಕಾಗಿ ಪರದಾಡಬಾರದು. ಅದಕ್ಕಾಗಿ ಈ ಘಟಕಗಳನ್ನು ಆರಂಭಿಸಲಾಗಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಉಸಿರಾಟದ ಸಮಸ್ಯೆ ಇರುವ ಎಲ್ಲರಿಗೂ ಆಮ್ಲಜನಕ ಬೇಕಾಗುತ್ತದೆ. ಆಮ್ಲಜನಕ ಇಲ್ಲ ಎನ್ನುವ ಕಾರಣಕ್ಕೆ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳನ್ನು ಕಳುಹಿಸುವ ಪ್ರಮೇಯ ಮುಂದೆ ಇರುವುದಿಲ್ಲ’ ಎನ್ನುತ್ತಾರೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್‌.

ಹೆರಿಗೆ ಕಾಲದಲ್ಲಿ ಬಹಳಷ್ಟು ಮಹಿಳೆಯರಿಗೆ, ಅದರಲ್ಲೂ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಮಹಿಳೆಯರಿಗೆ ಆಮ್ಲಜನಕ ಬೇಕಾಗುತ್ತದೆ. ಅಸ್ತಮಾ, ತೀವ್ರ ಶ್ವಾಸನಾಳ ಸಮಸ್ಯೆ, ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ, ಉಸಿರಾಟದ ತೊಂದರೆಯೊಂದಿಗೆ ಯಾವುದೇ ಇತರ ಸೋಂಕು ಇರುವವರಿಗೆ ಆಮ್ಲಜನಕ ಬೇಕಾಗುತ್ತದೆ. ಹಾಗಾಗಿ ಆಮ್ಲಜನಕ ಉತ್ಪಾದನಾ ಘಟಕವಾಗಲಿ, ಸಂಗ್ರಹಾಗಾರವಾಗಲಿ ವ್ಯರ್ಥವಾಗುವುದಿಲ್ಲ ಎಂದು ಜಿಲ್ಲಾ ಸಂತಾನೋತ್ಪತ್ತಿ
ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ. ಮೀನಾಕ್ಷಿ ಮಾಹಿತಿ ನೀಡಿದರು.

ಹರಪನಹಳ್ಳಿಯಲ್ಲಿ ಎಲ್ಲ ಬೆಡ್‌ಗಳಿಗೆ ಆಮ್ಲಜನಕ ಸಂಪರ್ಕ

ಹರಪನಹಳ್ಳಿ: ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರು ನೀಡಿದ ಅನುದಾನದಲ್ಲಿ 330 ಎಲ್‌ಪಿಎಂ ಸಾಮರ್ಥ್ಯದ ಆಮ್ಲಜನಕ ಉತ್ಪಾದನಾ ಘಟಕವನ್ನು ನಿರ್ಮಿಸಲಾಗಿದೆ. ತಾಲ್ಲೂಕು ಆಸ್ಪತ್ರೆಯು 100 ಬೆಡ್‌ಗಳ ಸಾಮರ್ಥ್ಯ ಹೊಂದಿದ್ದು, ಈಗ ಎಲ್ಲ ಬೆಡ್‌ಗಳಿಗೆ ಆಮ್ಲಜನಕ ಪೂರೈಕೆಯ ವ್ಯವಸ್ಥೆ ಮಾಡಲಾಗಿದೆ.

ಒಳರೋಗಿಗಳಾಗಿ ದಾಖಲಾಗುವವರಲ್ಲಿ ಯಾರಿಗಾದರೂ ಆಮ್ಲಜನಕ ಅಗತ್ಯ ಬಿದ್ದರೆ ಕೂಡಲೇ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT