ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ಎಪಿಎಂಸಿಯಲ್ಲಿ ವರ್ತಕರು, ಹಮಾಲಿಗಳ ಪ್ರತಿಭಟನೆ

ಬೀದಿಗೆ ಬಂತು ಲಾರಿ ಮಾಲೀಕರು ವರ್ತಕರ ಸಂಘರ್ಷ * ಲಾರಿ ಮಾಲೀಕರ ಸಂಘದ ಅಧ್ಯಕ್ಷರಿಗೆ ಪೊಲೀಸರ ರಕ್ಷಣೆ
Last Updated 3 ನವೆಂಬರ್ 2020, 16:04 IST
ಅಕ್ಷರ ಗಾತ್ರ

ದಾವಣಗೆರೆ: ಮೆಕ್ಕೆಜೋಳ ಸಾಗಿಸಲು ಅನ್ಯ ಜಿಲ್ಲೆಗಳಿಂದ ಲಾರಿ ಕರೆಸಿದ್ದು,ಓವರ್‌ಲೋಡ್‌ ಕಾರಣಕ್ಕೆ ಲಾರಿಗಳಿಗೆ ದಂಡ ವಿಧಿಸಿರುವ ವಿಚಾರ ಸಂಬಂಧ ಎಪಿಎಂಸಿಯಲ್ಲಿ ಮಂಗಳವಾರ ಪ್ರತಿಭಟನೆ ನಡೆದು ಕೆಲಕಾಲ ಬಿಗುವಿನ ವಾತಾವರಣ ಉಂಟಾಯಿತು.

ಮಧ್ಯ ಕರ್ನಾಟಕ ಲಾರಿ ಮಾಲೀಕರ ಮತ್ತು ಟ್ರಾನ್ಸ್‌ ಪೋರ್ಟ್ ಏಜೆಂಟರ ಸಂಘದ ಅಧ್ಯಕ್ಷ ಸೈಫುಲ್ಲಾ ಅವರೇ ದಂಡ ವಿಧಿಸಲು ಕಾರಣ ಎಂದು ಆರೋಪಿಸಿ ಎಪಿಎಂಸಿಯಲ್ಲಿಲಾರಿ ಮಾಲೀಕರ ವಿರುದ್ಧ ವರ್ತಕರು, ಹಮಾಲಿಗಳು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಪರಸ್ಪರ ವಾಗ್ವಾದಗಳು ನಡೆದು ಸೈಯದ್ ಸೈಫುಲ್ಲಾ ಅವರು ಒಂದು ಗಂಟೆ ಪೊಲೀಸರ ರಕ್ಷಣೆಯಲ್ಲಿ ಇರಬೇಕಾಯಿತು.

ವಿವಾದಕ್ಕೆ ಕಾರಣ:ಸೋಮವಾರ ಎಪಿಎಂಸಿಗೆ 18 ಸಾವಿರ ಕ್ವಿಂಟಲ್‌ನಷ್ಟು ಮೆಕ್ಕೆಜೋಳ ಬಂದಿತ್ತು. ಸ್ಥಳೀಯವಾಗಿ ಲಾರಿ ಸಿಗದೇ ವರ್ತಕ ಶ್ರೀನಿವಾಸ್ ಅವರು ಚಿತ್ರದುರ್ಗದಿಂದ ಎರಡು ಲಾರಿಗಳನ್ನು ಕರೆಸಿದ್ದರು. ಹೆಚ್ಚಿನ ಆವಕ ಇದ್ದುದರಿಂದ ಲಾರಿಗಳಿಗೆ ತುಸು ಜಾಸ್ತಿಯೇ ಚೀಲಗಳನ್ನು ತುಂಬಿ ಬೆಂಗಳೂರಿಗೆ ಕಳುಹಿಸಲು ಮುಂದಾಗಿದ್ದರು. ವಿಷಯ ತಿಳಿದ ಸೈಯ್ಯದ್ ಸೈಫುಲ್ಲಾ ಅವರು ಓವರ್‌ಲೋಡ್ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವಂತೆ ಆರ್‌ಟಿಒ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ರಾತ್ರಿಯ ವೇಳೆ ಬಂದ ಅಧಿಕಾರಿಗಳು ಒಂದು ಲಾರಿಗೆ ₹20 ಸಾವಿರದಂತೆ ಎರಡು ಲಾರಿಗಳಿಗೆ ₹40 ಸಾವಿರ ದಂಡ ವಿಧಿಸಿದ್ದಾರೆ.

ಇದರಿಂದ ಉದ್ರಿಕ್ತಗೊಂಡ ಖರೀದಿದಾರರು ಹಾಗೂ ರೈತರು ಲಾರಿಗಳಿಗೆ ದಂಡ ವಿಧಿಸಿದ ಆರ್‌ಟಿಒ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸುವಂತೆಮಂಗಳವಾರಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಆರ್‌ಟಿಒ ಹಾಗೂ ಖರೀದಿದಾರರ ಮಧ್ಯೆ ವಾಗ್ವಾದ ಉಂಟಾಗಿದ್ದು, ಕ್ಷಮೆ ಯಾಚಿಸುವಂತೆ ಪಟ್ಟುಹಿಡಿದರು.

ಪೊಲೀಸರ ರಕ್ಷಣೆಯಲ್ಲಿ ಲಾರಿ ಅಸೋಸಿಯೇಷನ್ ಅಧ್ಯಕ್ಷ

ಆನಂತರ ಸಂಧಾನ ಸಭೆ ನಡೆದಿದ್ದು, ಸೈಯದ್ ಸೈಫುಲ್ಲಾ ಅವರು ಈ ಸಭೆಗೆ ಹಾಜರಾಗಿದ್ದರು. ಈ ವೇಳೆ ಹಮಾಲಿಗಳು ಹಾಗೂ ವರ್ತಕರು ಸೈಫುಲ್ಲಾ ವಿರುದ್ಧ ಕೆಲವು ಆರೋಪಗಳನ್ನು ಮಾಡಿದರು. ಸಭೆಯಲ್ಲಿ ವಾದ–ಪ್ರತಿವಾದಗಳು ನಡೆದು ತಳ್ಳಾಟವಾಗಿ ಸಭೆಯಲ್ಲಿ ಪ್ರಕ್ಷುಬ್ದ ವಾತಾವರಣ ಉಂಟಾಯಿತು. ಆಗ ಸೈಫುಲ್ಲಾ ಅವರು ಸಭೆಯಿಂದ ಹೊರಗೆ ಹೋಗಲು ಯತ್ನಿಸಿದರು. ಆದರೆ ಖರೀದಿದಾರರು, ರೈತರು, ಹಮಾಲರು ಸೈಫುಲ್ಲಾ ಅವರನ್ನು ಬಿಡಲಿಲ್ಲ. ಬಳಿಕ ಪೊಲೀಸರು ಎಪಿಎಂಸಿಯ ಕೊಠಡಿಯಲ್ಲಿ ಸೈಫುಲ್ಲಾ ಅವರನ್ನು ಕೂಡಿ ಹಾಕಿ ರಕ್ಷಿಸಿದರು. ಅವರನ್ನು ಹೊರಗೆ ಕಳುಹಿಸುವಂತೆ ರೈತರು, ಹಮಾಲರು ಪಟ್ಟು ಹಿಡಿದರು. ಕೊನೆಗೆ ಸೈಫುಲ್ಲಾ ಅವರು ಹೊರ ಬಂದು ಕ್ಷಮೆ ಯಾಚಿಸಿದ ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತು.

ಕೊನೆಗೆ ಎಪಿಎಂಸಿ ಸಭಾಂಗಣದಲ್ಲಿ ಅಧಿಕಾರಿಗಳು, ಖರೀದಿದಾರರು, ಸಭೆ ಸೇರಿ ಸಂಧಾನಕ್ಕೆ ಬಂದರು. ಡಿವೈಎಸ್‌ಪಿ ನಾಗೇಶ್ ಐತಾಳ್ ನೇತೃತ್ವದಲ್ಲಿ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದರು.

ಎಪಿಎಂಸಿ ಅಧ್ಯಕ್ಷ ಎಸ್‌.ಕೆ. ಚಂದ್ರಶೇಖರ್, ವರ್ತಕ ಪ್ರತಿನಿಧಿ ದೊಗ್ಗಳ್ಳಿ ಬಸವರಾಜು, ಆರ್‌ಟಿಒ ಶ್ರೀಧರ್ ಮಲ್ನಾಡ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT