ತಾತ್ಕಾಲಿಕ ಬದುಕು ನೀಡಿದ ಹೊಂಗೆ ಬೀಜ

ಉಚ್ಚಂಗಿದುರ್ಗ: ಬೇಸಿಗೆ ಬಿಸಿಲ ತಾಪಮಾನ ಏರುತ್ತಿದ್ದಂತೆ ಮಳೆಗಾಲದ ಕೃಷಿ ಚಟುವಟಿಕೆಯಿಂದ ನಿರಾಳರಾಗಿರುವ ಗ್ರಾಮೀಣ ಪ್ರದೇಶದ ಕೃಷಿ ಕೂಲಿಕಾರರು, ತಾತ್ಕಾಲಿಕ ಬದುಕು ಕಟ್ಟಿಕೊಳ್ಳಲು ಹೊಂಗೆ ಬೀಜ ಸಂಗ್ರಹಿಸಿ, ಮಾರಾಟ ಮಾಡುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.
ಅರಸೀಕೆರೆ ಹೋಬಳಿ ಸೇರಿದಂತೆ ಉಜ್ಜಯಿನಿ, ಕೊಟ್ಟೂರು, ಹರಪನಹಳ್ಳಿ ಸೇರಿದಂತೆ ಸ್ಥಳೀಯ ರೈತ ಕಾರ್ಮಿಕರು ರಸ್ತೆ, ಗೋಕಟ್ಟೆ, ಅರಣ್ಯ ಪ್ರದೇಶಗಳಲ್ಲಿ ಬೆಳೆದಿರುವ ಹೊಂಗೆ ಮರದ ಕಾಯಿಗಳ ಸಂಗ್ರಹಣೆಯಲ್ಲಿ ಮುಂದಾಗಿದ್ದಾರೆ.
ಫೆಬ್ರುವರಿ- ಏಪ್ರಿಲ್ ತಿಂಗಳಲ್ಲಿ ಹೊಂಗೆ ಮರಗಳು ಕಾಯಿ ಬಿಡುತ್ತವೆ. ಈ ಕಾರಣ ಹೊಂಗೆ ಬೀಜವನ್ನು ಆಯ್ದು ಮಾರಾಟ ಮಾಡಿ ಜೀವನ ನಡೆಸುವ ಹಲವು ಕುಟುಂಬಗಳು ಗ್ರಾಮದಿಂದ ಗ್ರಾಮಕ್ಕೆ ವಲಸೆ ಹೋಗುತ್ತವೆ.
‘ತಮಾಲ ವೃಕ್ಷ’ವೆಂದೇ ಕರೆಯುವ ಹೊಂಗೆ ಮರದ ಕಾಯಿಗಳಿಂದ ಉತ್ಪತ್ತಿ ಆಗುವ ಎಣ್ಣೆಗೆ ಜಾಗತಿಕ ಮಟ್ಟದಲ್ಲಿ ಉತ್ತಮ ಬೇಡಿಕೆ ಇದೆ. ಜೈವಿಕ ಡೀಸೆಲ್, ಹೆರೆ ಎಣ್ಣೆ, ಸಾಬೂನು ತಯಾರಿಕೆಯಲ್ಲಿ, ಗಜಕರ್ಣ ಸೇರಿದಂತೆ ಎಲ್ಲ ಚರ್ಮ ರೋಗಗಳಿಗೆ, ಗ್ಲಿಸರಿನ್ ತಯಾರಿಕೆಯಲ್ಲಿ ಬಹುಮುಖ್ಯವಾಗಿ ಹೊಂಗೆ ಬೀಜಗಳನ್ನು ಬಳಸಲಾಗುತ್ತದೆ. ಆದ್ದರಿಂದ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಬೀಜಕ್ಕೆ ₹ 30ರಿಂದ ₹ 40ರವರೆಗೂ ದರ ಸಿಗುತ್ತದೆ.
‘ಉಜ್ಜಯಿನಿ ಕಡೆಯ ಐದಾರು ಕುಟುಂಬಗಳು ವಾರದಿಂದ ಇಲ್ಲಿನ ಹಾಲಮ್ಮ ತೋಪಿನಲ್ಲಿ ಟೆಂಟ್ ಹಾಕಿಕೊಂಡಿದ್ದು ಬೆಳಿಗ್ಗೆಯಿಂದ ಸಂಜೆವರೆಗೂ ಅಲ್ಲಲ್ಲಿ ಬೀಜ ಆಯ್ದು ಕೊಂಡು ಬರುತ್ತಾರೆ. ಉಚ್ಚಂಗಿದುರ್ಗ, ಬೇವಿನಹಳ್ಳಿ, ಅರಸೀಕೆರೆ ಗ್ರಾಮಗಳ ಸುತ್ತಮುತ್ತಲೂ ರಸ್ತೆ, ಹೊಲದ ಮೇರೆಗಳಲ್ಲಿ ಬೆಳೆದಿರುವ ಮರಗಳಿಂದ ಹೊಂಗೆ ಕಾಯಿಗಳನ್ನು ಆಯ್ದುಕೊಂಡು, ಇಲ್ಲಿ ಅಡುಗೆ ಮಾಡಿಕೊಂಡು ವಿಶ್ರಾಂತಿ ಪಡೆಯುತ್ತಾರೆ’ ಎನ್ನುತ್ತಾರೆ ಉಚ್ಚಂಗಿದುರ್ಗದ ಸಿದ್ದಪ್ಪ.
‘ಮಳೆಗಾಲದ ಕೃಷಿ ಚಟುವಟಿಕೆ ನಂತರ ಗ್ರಾಮದಲ್ಲಿ ಕೆಲಸ ಇಲ್ಲದೆ ಬದುಕು ಕಟ್ಟಿಕೊಳ್ಳಲು ಕಷ್ಟವಾಗುತ್ತದೆ. ಆದ್ದರಿಂದ ಬದುಕು ಅರಸಿ ಬಂದಿದ್ದೇವೆ. ಇಲ್ಲಿಂದ ಕಾಯಿಗಳನ್ನು ಕೊಂಡೊಯ್ದು ಒಣಗಿಸಿ ಬೀಜಗಳಿಂದ ಸಿಪ್ಪೆಯನ್ನು ಬೇರ್ಪಡಿಸುತ್ತೇವೆ. ಇದು ತ್ರಾಸದಾಯಕ ಕಾಯಕವಾದರೂ ಬದುಕುವ ನಿಟ್ಟಿನಲ್ಲಿ ಮಾಡಲೇಬೇಕು’ ಎನ್ನುವರು ಉಜ್ಜಯಿನಿಯ ಮಾರಪ್ಪ.
***
ಹೊಂಗೆ ರೈತರ ಆದಾಯದ ಪರ್ಯಾಯ ಮೂಲ
‘ನೈಸರ್ಗಿಕವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹೊಂಗೆ ಮರಗಳಿದ್ದ ಕಾಲವಿತ್ತು. ಇತ್ತೀಚಿನ ದಿನಗಳಲ್ಲಿ ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಬಹು ಬೇಡಿಕೆಯ ಹೊಂಗೆಯನ್ನು ಸರ್ಕಾರ ವಾಣಿಜ್ಯ ಬೆಳೆಯೆಂದು ಪರಿಗಣಿಸಿ ಮರಗಳ ವೃದ್ಧಿಗೆ ಒತ್ತು ನೀಡುತ್ತಿದೆ. ಹೊಂಗೆ ಮರಗಳಿಗೆ ಔಷಧೀಯ ಗುಣವೂ ಇದೆ. ಹೊಂಗೆ ಎಣ್ಣೆ ಇಂಧನವೂ ಹೌದು. ಪೆಟ್ರೋಲ್- ಡೀಸೆಲ್‌ಗೆ ಬದಲಿಯಾಗಿ ಹೊಂಗೆ ಎಣ್ಣೆ ಬಳಸಬಹುದು. ಹೊಂಗೆ ಪರಿಸರ ಸ್ನೇಹಿ. ಅದನ್ನು ಕೀಟನಾಶಕವಾಗಿಯೂ ಬಳಸಬಹುದು. ಆದ್ದರಿಂದ ಈ ಹಿಂದೆ ಕೃಷಿ ಇಲಾಖೆಯಿಂದ ಗಿಡಗಳನ್ನು ನೀಡಿ ಬೆಳೆಸಲು ಉತ್ತೇಜಿಸಲಾಗಿತ್ತು. ಸದ್ಯ ಅರಣ್ಯ ಇಲಾಖೆಯಿಂದ ವಿವಿಧ ಯೋಜನೆ ಅಡಿಯಲ್ಲಿ ಹೊಂಗೆ ಬೆಳೆಯಲು ಉತ್ತೇಜನ ನೀಡಲಾಗುತ್ತಿದೆ. ಎಕರೆ ಜಮೀನಿನಲ್ಲಿ ಮರ ಬೆಳೆಸಿ ಅಂದಾಜು ₹ 40 ಸಾವಿರದಷ್ಟು ಆದಾಯ ಗಳಿಸಬಹುದು’ ಎನ್ನುತ್ತಾರೆ ದಾವಣಗೆರೆ ಸಹಾಯಕ ಕೃಷಿ ಉಪನಿರ್ದೇಶಕ ಆರ್.ತಿಪ್ಪೇಸ್ವಾಮಿ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.