ಬುಧವಾರ, ಮೇ 18, 2022
27 °C
ಆರೋಗ್ಯ ಕ್ಷೇತ್ರದವರೇ ಮೊದಲ ಹಂತದಲ್ಲಿದ್ದರೂ ತಲುಪದ ನಿರೀಕ್ಷಿತ ಗುರಿ

ನಿಧಾನಗತಿಯಲ್ಲಿ ಸಾಗುತ್ತಿರುವ ಲಸಿಕೆ ನೀಡಿಕೆ ಪ್ರಕ್ರಿಯೆ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಸರ್ಕಾರಿ ಹಾಗೂ ಖಾಸಗಿ ವೈದ್ಯರು, ಶುಶ್ರೂಷಕರು, ನೌಕರರಿಗೆ ಮೊದಲ ಹಂತದಲ್ಲಿ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಲಸಿಕೆ ಅಭಿಯಾನ ಆರಂಭಗೊಂಡು ಮೂರು ವಾರ ಕಳೆದ ಮೇಲೂ ಶೇ 60ರಷ್ಟು ಮಂದಿ ಇನ್ನೂ ಲಸಿಕೆ ಹಾಕಿಸಿಕೊಂಡಿಲ್ಲ.

ಮೊದಲ ಹಂತದಲ್ಲಿ ಲಸಿಕೆ ಹಾಕಿಸಿಕೊಳ್ಳಲು 21,369 ಮಂದಿಯ ಹೆಸರು ಆನ್‌ಲೈನ್‌ ಮೂಲಕ ಅಪ್‌ಲೋಡ್‌ ಆಗಿತ್ತು. ಅದರಲ್ಲಿ 7,188 ಮಂದಿ ಸರ್ಕಾರಿ ಕ್ಷೇತ್ರ ಹಾಗೂ 14,181 ಮಂದಿ ಖಾಸಗಿ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು. ಅದರಲ್ಲಿ ಈವರೆಗೆ 8,376 ಮಂದಿ ಮಾತ್ರ ವ್ಯಾಕ್ಸಿನ್‌ ಹಾಕಿಸಿಕೊಂಡಿದ್ದಾರೆ. ಅಂದರೆ ಶೇ 39.19ರಷ್ಟು ಮಂದಿ ಮಾತ್ರ ಲಸಿಕೆ ಹಾಕಿಸಿಕೊಂಡಿದ್ದಾರೆ. ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಕೊವಾಕ್ಸಿನ್‌ ಹಾಗೂ ಉಳಿದ ಕಡೆಗಳಲ್ಲಿ ಕೋವಿಶೀಲ್ಡ್‌ ಲಸಿಕೆ ನೀಡಲಾಗುತ್ತಿದೆ.

‘ಸರ್ಕಾರಿ ವೈದ್ಯರು, ಶುಷ್ರೂಷಕರು, ಫಾರ್ಮಾಸಿಸ್ಟ್‌ಗಳು, ತಂತ್ರಜ್ಞರು, ಡಿ ಗ್ರೂಪ್‌ ನೌಕರರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರು ಮುತು
ವರ್ಜಿ ವಹಿಸಿ ವ್ಯಾಕ್ಸಿನ್‌ ಹಾಕಿಸಿಕೊಂಡಿದ್ದಾರೆ. ಹಾಗಾಗಿ ಸರ್ಕಾರಿ ಕ್ಷೇತ್ರದಲ್ಲಿ ಶೇ 53ರಷ್ಟು ಸಾಧನೆಯಾಗಿದೆ. ಆದರೆ ಖಾಸಗಿ ಕ್ಷೇತ್ರದಲ್ಲಿ ಇನ್ನೂ ಆ ಉತ್ಸಾಹ ಕಾಣುತ್ತಿಲ್ಲ’ ಎಂದು ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಾಧಿಕಾರಿ ಡಾ.ಕೆ.ಎಸ್‌. ಮೀನಾಕ್ಷಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಲಸಿಕೆ ಬಗ್ಗೆ ಸ್ವಲ್ಪ ಹಿಂಜರಿಕೆ ಇದೆ. ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಹಿರಿಯರಿಗೆ ಲಸಿಕೆ ಬಂದಿರುವುದರಿಂದ ಹೊಸ ಅನುಭವ. ಅಲ್ಲದೇ ಲಸಿಕೆಯನ್ನು ಕಡ್ಡಾಯ ಮಾಡಲು ಆಗುವುದಿಲ್ಲ. ಕೊರೊನಾ ಈಗಾಗಲೇ ಬಂದು ಗುಣಮುಖರಾದವರು ನಮಗೆ ಮತ್ಯಾಕೆ ಎಂಬ ಮನೋಭಾವ ಇದೆ. ಅನಾವಶ್ಯಕವಾಗಿ ಯಾಕೆ ಹಾಕಿಸಿಕೊಳ್ಳಬೇಕು ಎಂಬುದು ಕೆಲವರಲ್ಲಿದೆ. ದೃಶ್ಯ ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ನಡೆದ ಅಪಪ್ರಚಾರಗಳೂ ಹಿಂಜರಿಯುವಂತೆ ಮಾಡಿವೆ. ವೈಜ್ಞಾನಿಕವಾಗಿ ಇನ್ನೂ ಸಂಪೂರ್ಣವಾಗಿ ದೃಢಪಟ್ಟಿಲ್ಲ ಎಂಬ ಕಾರಣವನ್ನು ಕೆಲವರು ಮುಂದೊಡ್ಡುತ್ತಿದ್ದಾರೆ. ಹೀಗೆ ನಾನಾ ಕಾರಣದಿಂದ ಲಸಿಕೆ ಹಾಕಿಸಿಕೊಳ್ಳುವವರ ಪ್ರಮಾಣ ಕಡಿಮೆಯಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ್‌ ಮಾಹಿತಿ ನೀಡಿದರು.

ಆದರೂ ದೇಶದಲ್ಲಿ ಕರ್ನಾಟಕವೇ ಲಸಿಕೆ ಕಾರ್ಯಕ್ರಮದಲ್ಲಿ ಮುಂದಿದೆ. ಈಗಾಗಲೇ ಪಟ್ಟಿ ಮಾಡಲಾಗಿರುವವರು ಸ್ವತಃ ಮುಂದೆ ಬಂದು ಹಾಕಿಸಿಕೊಂಡು ಕೊರೊನಾ ವ್ಯಾಕ್ಸಿನ್‌ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಕೋರಿದರು.

ಅಭಿಪ್ರಾಯಗಳು

ಲಸಿಕೆ ಹಾಕಿಸಿಕೊಳ್ಳಲು ಹೋಗುವಾಗ ಭಯವಾಗಿತ್ತು. ಆರ್‌ಸಿಎಚ್‌ ಮೇಡಂ ನಮಗೆ ಧೈರ್ಯ ತುಂಬಿ ಕಳುಹಿಸಿದ್ದರು. ವ್ಯಾಕ್ಸಿನ್‌ ತೆಗೆದುಕೊಂಡ ಮೇಲೆ ಯಾವುದೇ ತೊಂದರೆಯಾಗಿಲ್ಲ.

- ಜೇಷ್ಠ ಹೂಗಾರ್‌, ಜಿಲ್ಲಾ ಲಸಿಕಾ ಫಾರ್ಮಸಿ ಅಧಿಕಾರಿ

***

ನಾನು ಸಂತೇಬೆನ್ನೂರಿನಲ್ಲಿ ವ್ಯಾಕ್ಸಿನ್‌ ಹಾಕಿಸಿಕೊಂಡೆ. ಅಡ್ಡ ಪರಿಣಾಮ ಉಂಟಾದರೆ ಅದಕ್ಕೆ ಕೂಡಲೇ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಆದರೆ ಯಾವುದೇ ಸಮಸ್ಯೆ ಉಂಟಾಗಿಲ್ಲ.

- ಮೌಲಾಸಾಬ್‌ ಹಾರೋಬೀದಿ, ಜಿಲ್ಲಾ ಲಸಿಕಾ ವಾಹನ ಚಾಲಕ

***

ನಾನು ಮೊದಲು ಹಾಕಿಸಿಕೊಂಡಿರಲಿಲ್ಲ. ಸಹೋದ್ಯೋಗಿಗಳು ಹಾಕಿಸಿಕೊಂಡ ಬಳಿಕ ನಾನೂ ವ್ಯಾಕ್ಸಿನ್‌ ಚುಚ್ಚಿಸಿಕೊಂಡೆ. ಎಲ್ಲರೂ ಯಾವುದೇ ಭಯವಿಲ್ಲದೇ ಲಸಿಕೆ
ಹಾಕಿಸಿಕೊಳ್ಳಬಹುದು.

- ಅಂಬರೀಷ್‌, ಜಿಲ್ಲಾ ಲೆಕ್ಕಪತ್ರ ವ್ಯವಸ್ಥಾಪಕ

***
ಜನವರಿ 16ರಿಂದ ವ್ಯಾಕ್ಸಿನೇಶನ್‌ ಮಾಡಿಸುತ್ತಿದ್ದೇನೆ. ಯಾರಿಗೂ ಯಾವುದೇ ಅಡ್ಡಪರಿಣಾಮ ಉಂಟಾಗಿಲ್ಲ. ಯಾರೂ ಅನಗತ್ಯ ಭಯಪಡುವ ಅಗತ್ಯವಿಲ್ಲ.

- ಸಂತೋಷ್‌ ಕಾವೇರಿ, ವ್ಯಾಕ್ಸಿನ್‌ ಕೋಲ್ಡ್‌ ಚೈನ್‌ ಮ್ಯಾನೇಜರ್‌

 ***
ಜ.19ರಂದು ನಾನು ಹಾಕಿಸಿಕೊಂಡೆ. ಬರಲ್ಲ ಎಂದು ಹೇಳುತ್ತಿದ್ದ ಸಹೋದ್ಯೋಗಿಗಳನ್ನೂ ಕರೆದುಕೊಂಡು ಹೋಗಿ ವ್ಯಾಕ್ಸಿನ್‌ ಹಾಕಿಸಿದ್ದೇನೆ. ಯಾವುದೇ ಸಮಸ್ಯೆಯಾಗಿಲ್ಲ.

- ರಂಗನಾಥ, ಶೀತಲ ಸರಪಳಿ ತಂತ್ರಜ್ಞ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು