ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ಮಹಾನಗರಪಾಲಿಕೆ: ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ಚುರುಕು

ವಾಟ್ಸ್ಆ್ಯಪ್ ನಂಬರ್ ಬಿಡುಗಡೆಗೊಳಿಸಿದ ಮಹಾನಗರ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್
Last Updated 6 ಮಾರ್ಚ್ 2021, 2:30 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ ಪರಿಹಾರ ನೀಡಲು ಮಹಾನಗರಪಾಲಿಕೆ ಸಾಮಾಜಿಕ ಮಾಧ್ಯಮವನ್ನು ಬಳಸಿಕೊಳ್ಳುತ್ತಿದೆ.

ಕಡಿಮೆ ಅವಧಿಯಲ್ಲಿ ಸಾರ್ವಜನಿಕರ ಕುಂದು-ಕೊರತೆಗಳನ್ನು ಪರಿಹರಿಸುವ ಉದ್ದೇಶದಿಂದ ‘ಪರಿಹಾರ’ ಹೆಸರಿನಡಿ ವಾಟ್ಸ್‌ಆ್ಯಪ್‌ನಂಬರ್ ಅನ್ನು ಮೇಯರ್ ಎಸ್‌.ಟಿ. ವೀರೇಶ್ ಶುಕ್ರವಾರ ಮಹಾನಗರ ಪಾಲಿಕೆಯಲ್ಲಿ ಕಚೇರಿಯಲ್ಲಿ ಬಿಡುಗಡೆ ಮಾಡಿದರು.

ಕಾರ್ಯನಿರ್ವಹಣೆ ಹೇಗೆ: ನಗರದಾದ್ಯಂತ ಯಾವುದೇ ಸೌಲಭ್ಯಗಳ ಪೂರೈಕೆ ಸ್ಥಗಿತಗೊಂಡಿದ್ದಲ್ಲಿ ಅಥವಾ ಸಮಸ್ಯೆಗಳು ಇದ್ದಲ್ಲಿ ಮಹಾನಗರ ಪಾಲಿಕೆ ನೀಡಿರುವ ವಾಟ್ಸ್‌ಆ್ಯಪ್ ಸಂಖ್ಯೆಗೆ ಫೋಟೊ ತೆಗೆದು ವಿಳಾಸ ಸಹಿತ ಮೆಸೇಜ್ ಕಳುಹಿಸಿದರೆ ಸಾಕು. ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಪರಿಹರಿಸುತ್ತಾರೆ.

ಬಹಳ ದಿನಗಳಿಂದ ಕಸ ವಿಲೇವಾರಿಯಾಗದಿದ್ದರೆ ಅದನ್ನು ಚಿತ್ರ ಸಮೇತ ಕಳುಹಿಸಿದರೆ ಅದು ಪಾಲಿಕೆಯ ಕಂಟ್ರೋಲ್ ರೂಂಗೆ ಹೋಗುತ್ತದೆ. ಅಲ್ಲಿಂದ ಸಂಬಂಧಪಟ್ಟ ಅಧಿಕಾರಿಗೆ ಸಂದೇಶ ಹೋಗಲಿದ್ದು, ಅವರು ಅದನ್ನು ತೆರವು ಮಾಡಿ ಚಿತ್ರ ಸಮೇತ ತೆಗೆದು ದೂರು ನೀಡಿದವರ ಸಂಖ್ಯೆಗೆ ಕಳುಹಿಸುತ್ತಾರೆ.

ವಾಟ್ಸ್‌ಆ್ಯಪ್ ನಂಬರ್ ಬಿಡುಗಡೆಗೊಳಿಸಿದ ನಂತರ ಮಾತನಾಡಿದ ಎಸ್‌.ಟಿ. ವೀರೇಶ್, ‘ಈಗಾಗಲೇ ಕೆಲ ವಾರ್ಡ್‌ಗಳಲ್ಲಿ ಇದರ ಪ್ರಯೋಗ ಮಾಡಿದ್ದು, ಯಶಸ್ವಿಯಾದ ಕಾರಣದಿಂದಾಗಿ ನಗರದಾದ್ಯಂತ ವಿಸ್ತರಿಸುತ್ತಿದ್ದೇವೆ. ನಗರದಲ್ಲಿ ಸಮಸ್ಯೆಗಳು ಹೆಚ್ಚಾಗಿದ್ದು, ಮೊದಮೊದಲು ನಿಭಾಯಿಸಲು ಕಷ್ಟವೆನಿಸಬಹುದು. ಆದರೆ, ಇದನ್ನು ಸವಾಲಾಗಿ ಸ್ವೀಕರಿಸಿ, ಪ್ರಾಮಾಣಿಕವಾಗಿ ಪ್ರಯತ್ನಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಸಮರ್ಥವಾಗಿ ಪರಿಹರಿಸುತ್ತೇವೆ’ ಎಂದು ಭರವಸೆ ನೀಡಿದರು.

ವಾರ್ಡ್‌ಗಳಿಗೆ ಭೇಟಿ: ‘ಸಾರ್ವಜನಿಕರ ಕುಂದುಕೊರತೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನಗರ ಪಾಲಿಕೆ ಆಯುಕ್ತರು, ಅಧಿಕಾರಿಗಳು ಹಾಗೂ ಪಾಲಿಕೆ ಸದಸ್ಯರ ಜೊತೆ ವಾರದಲ್ಲಿ ನಾಲ್ಕು ದಿವಸ ಭೇಟಿ ನೀಡಿಸ್ಥಳದಲ್ಲೇ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು. ತೀವ್ರವಾದ ಸಮಸ್ಯೆಗಳು ಇದ್ದಲ್ಲಿ ಸಮಯಾವಕಾಶ ತೆಗೆದುಕೊಂಡು ಬಗೆಹರಿಸುತ್ತೇವೆ’ ಎಂದುವೀರೇಶ್ ತಿಳಿಸಿದರು.

ತಿಂಗಳ ಅಂತ್ಯದಲ್ಲಿ ಬಜೆಟ್: ‘ಈ ತಿಂಗಳ ಅಂತ್ಯದಲ್ಲಿ ಮಹಾನಗರ ಪಾಲಿಕೆ ಬಜೆಟ್ ಮಂಡನೆಯಾಗಲಿದ್ದು, ನಗರದ ಅಭಿವೃದ್ಧಿಗೆ ಅನುಕೂಲವಾಗುವ ಯೋಜನೆಗಳು, ಕಾರ್ಯಕ್ರಮಗಳು ಇದ್ದಲ್ಲಿ ಸಾರ್ವಜನಿಕರು ಸಲಹೆ ನೀಡಬಹುದು. ಈಸಲಹೆಗಳನ್ನು ಪರಿಶೀಲಿಸಿ ಬಜೆಟ್‍ನಲ್ಲಿ ಅನುಮೋದಿಸಲು ಯತ್ನಿಸುತ್ತೇನೆ’ ಎಂದು ತಿಳಿಸಿದರು.

2 ಸಾವಿರ ನೋಟ್‌ಬುಕ್‌ ಸರ್ಕಾರಿ ಶಾಲೆಗೆ: ‘ನನ್ನನ್ನು ಸನ್ಮಾನಿಸುವ ಬದಲು ನೋಟ್‌ಬುಕ್‌ಗಳನ್ನು ಕೊಡಿ ಎಂದು ಮಾಡಿದ ಮನವಿಗೆ ಸಾರ್ವಜನಿಕರು ಈಗಾಗಲೇ 2 ಸಾವಿರ ನೋಟ್‌ಬುಕ್‌ಗಳನ್ನು ನೀಡಿದ್ದು, ಸರ್ಕಾರಿ ಶಾಲೆಯ ಮಕ್ಕಳಿಗೆ ನೀಡಲಾಗುವುದು’ ಎಂದು ತಿಳಿಸಿದರು.

‘ಮೇಯರ್ ಅವಧಿ ಒಂದು ವರ್ಷ ಇದ್ದು, ಈ ಸಂಪೂರ್ಣ ಅವಧಿಯನ್ನು ಸಾರ್ವಜನಿಕರ ಸೇವೆಗೆ ಮೀಸಲಿಡುತ್ತೇನೆ. ಸಮಯದ ಅಭಾವವಿರುವುದರಿಂದ ಸಮರ್ಪಕ ಸೇವೆ ಸಲ್ಲಿಸಲು ಕಷ್ಟವಾಗುತ್ತದೆ.ಮೇಯರ್ ಅವಧಿಯಲ್ಲಿ ನಾನು ಮಾಡಿರುವ ಕೆಲಸಗಳನ್ನು ಗುರುತಿಸಿ ನಿಮಗೆ ನನ್ನ ಕಾರ್ಯಗಳು ಮೆಚ್ಚುಗೆಯಾದರೆ, ಮಾಜಿ ಮೇಯರ್ ಆದ ಬಳಿಕ ಕರೆದು ಸನ್ಮಾನ ಮಾಡಿರಿ’ ಎಂದುವೀರೇಶ್ ಮನವಿ ಮಾಡಿದರು.

ಕಾಂಗ್ರೆಸ್ ಆರೋಪದಲ್ಲಿ ಹುರುಳಿಲ್ಲ: ‘ಧೂಡಾದ ನಿಯಮ ಉಲ್ಲಂಘಿಸಿ ಮಾಜಿ ಮೇಯರ್ ಬಿ.ಜಿ. ಅಜಯ್‍ಕುಮಾರ್ ಅವಧಿಯಲ್ಲಿ 52 ಎಕರೆ ಜಮೀನಿಗೆ ಡೋರ್ ನಂ. ಕೊಟ್ಟು ಭ್ರಷ್ಟಾಚಾರ ನಡೆಸಲಾಗಿದೆ ಎಂಬ ಕಾಂಗ್ರೆಸ್‍ನವರ ಆರೋಪದಲ್ಲಿ ಯಾವುದೇ ಹುರುಳಿಲ್ಲ’ ಎಂದು ಮೇಯರ್ ಸ್ಪಷ್ಟಪಡಿಸಿದರು.

ಪಾಲಿಕೆ ಸದಸ್ಯರಾದ ಪ್ರಸನ್ನಕುಮಾರ್, ಎಲ್.ಡಿ. ಗೋಣೆಪ್ಪ, ಕೆ.ಎಂ. ವೀರೇಶ್, ಶಿವಪ್ರಕಾಶ್, ಪಿಆರ್‌ಒ ಸುನೀಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT