ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೋಮಾಲಿನ್ಯವೇ ಎಲ್ಲ ಮಾಲಿನ್ಯಗಳಿಗೆ ಮೂಲ: ಭಿಕ್ಷಾವರ್ತಿಮಠ

Last Updated 2 ಮಾರ್ಚ್ 2021, 3:49 IST
ಅಕ್ಷರ ಗಾತ್ರ

ದಾವಣಗೆರೆ: ಪರಿಸರ ಮಾಲಿನ್ಯ, ವಾಯುಮಾಲಿನ್ಯ, ಜಲಮಾಲಿನ್ಯ ಎಂದು ನಾವು ಪಟ್ಟಿ ಮಾಡುತ್ತಾ ಹೋಗುತ್ತೇವೆ. ಎಲ್ಲ ಮಾಲಿನ್ಯಗಳಿಗೆ ಮೂಲವೇ ಮನೋಮಾಲಿನ್ಯ ಎಂದು ಪ್ರೊ. ಭಿಕ್ಷಾವರ್ತಿಮಠ ವಿಶ್ಲೇಷಿಸಿದರು.

ಸಾಹಿತ್ಯ ಮತ್ತು ಸಾಂಸ್ಕೃತಿಕ ನೆಲೆಗಳು ಗೋಷ್ಠಿಯಲ್ಲಿ ಆಧುನಿಕ ಕಾವ್ಯದಲ್ಲಿ ವ್ಯಕ್ತಿ ಶೋಧದ ನೆಲೆಗಳು ಕುರಿತು ಮಾತನಾಡಿದರು.

ಮೊದಲು ಮನಸ್ಸಿನಲ್ಲಿ ಹುಟ್ಟಿ ಅವುಗಳು ಕಾರ್ಯರೂಪಕ್ಕೆ ಬರುವುದರಿಂದ ವಿವಿಧ ಮಾಲಿನ್ಯಗಳು ಉಂಟಾಗುತ್ತವೆ. ಧರ್ಮ ಮಾಲಿನ್ಯ, ರಾಜಕಾರಣದ ಮಾಲಿನ್ಯ ತಡೆದುಕೊಳ್ಳಲು ಮಾನಸಿಕ ಮಾಸ್ಕ್‌ ಹಾಕಬೇಕಿದೆ. ಕಾಡು ಕಡಿದರು, ಪರಿಸರ ನಾಶವಾಯಿತು ಎಂದು ಅದರ ಬಗ್ಗೆ ಕಾಳಜಿ ವಹಿಸಿ ಕವನ ಬರೆಯುವ ಕವಿಗಿಂತ ಗಿಡನೆಟ್ಟು ಬೆಳೆಸುವ ಕವಿ ಶ್ರೇಷ್ಠ. ಅದುವೇ ನಿಜವಾದ ಕಾವ್ಯ ಎಂದು ಹೇಳಿದರು.

ಕವಿಗಳೆಂದರೆ ಆಕಾಶದಿಂದ ಇಳಿದು ಬಂದವರಂತೆ ವರ್ತಿಸುವುದು, ಜನರೂ ಹಾಗೆ ತಿಳಿದುಕೊಳ್ಳುವುದು ಇದೆ. ಜನಸಾಮಾನ್ಯರ ಮಧ್ಯೆ ಕವಿ ಹುಟ್ಟಿಬರಬೇಕು. ಜನಸಾಮಾನ್ಯರ ಭಾಷೆಯಲ್ಲಿ ಕಾವ್ಯ ಕಟ್ಟಬೇಕು ಎಂದು ತಿಳಿಸಿದರು.

ನವ್ಯೋದಯ ಕವಿಗಳ ಮೇಲೆ ಇಂಗ್ಲಿಷ್‌ ಪ್ರಭಾವ ಇದೆ. ಇಂಗ್ಲಿಷ್‌ನ ಉತ್ತಮ ಮೌಲ್ಯಗಳಿಗೆ ಅಧ್ಯಾತ್ಮ ಸೇರಿಸಿ ನಮ್ಮ ಕವಿಗಳು ಬರೆದರು. ಅವರು ವಸಾಹತು ಶಾಹಿಗಳನ್ನು ಒಪ್ಪಿಕೊಳ್ಳಲಿಲ್ಲ. ಆದರೆ ಈಗ ಭಾರತ ಮತ್ತೆ ವಸಾಹತು ವ್ಯವಸ್ಥೆಗೆ ಬಂದು ಬಿಟ್ಟಿದೆ. ಕಂಪನಿಗಳ ಹಿಡಿತಕ್ಕೆ ಸಿಲುಕಿದೆ ಎಂದು ವಿಷಾದಿಸಿದರು.

5000 ವರ್ಷಗಳಿಂದ ಇರುವ ಮೌಢ್ಯವನ್ನೇ ತೊಡೆದು ಹಾಕಲು ಸಾಧ್ಯವಾಗಿಲ್ಲ. ಈಗ ಹೊಸ ಮೌಢ್ಯಗಳನ್ನು ತುಂಬಿಸಲಾಗುತ್ತಿದೆ. ಮನುಷ್ಯ ಮನುಷ್ಯನನ್ನು ಪ್ರೀತಿಸಲೂ ಆಗುತ್ತಿಲ್ಲ. ಅದಕ್ಕೂ ಧರ್ಮ, ಜಾತಿ, ಲಿಂಗ ಮುಂತಾದವುಗಳು ಅಡ್ಡ ಬರುತ್ತವೆ ಎಂದರು.

ಆಧುನಿಕ ಸಾಹಿತ್ಯದಲ್ಲಿ ಕೃಷಿ ಮತ್ತು ಪರಿಸರ ಸಂಸ್ಕೃತಿ ಬಗ್ಗೆ ಆನಂದ ಋಗ್ವೇದಿ ಮಾತನಾಡಿ, ‘ಕೃಷಿ ಬಗ್ಗೆ ಕನ್ನಡದಲ್ಲಿ ಹೆಚ್ಚು ಆಕಾರಗಳು ಇಲ್ಲ. ಭೂಮಿ ಇಲ್ಲದ ಕೃಷಿ ಕೂಲಿಕಾರನ ಬದುಕನ್ನು ನಿರೂಪಿಸುವ ಶಿವರಾಮ ಕಾರಂತರ ಚೋಮನ ದುಡಿ, ಪರಿಸರವನ್ನು ಕಟ್ಟಿ ಕೊಡುವ, ಪರಿಸರ ನಾಶದ ತೀವ್ರತೆಯನ್ನು ತಿಳಿಸುವ ತೇಜಸ್ವಿಯಂಥ ಮತ್ತೊಬ್ಬ ಬರಹಗಾರ ಬಂದಿಲ್ಲ. ಕುವೆಂಪು ಅವರ ಕಾದಂಬರಿಯಲ್ಲಿ ಗಾಢವಾಗಿ ಕಾಡು ಬರುತ್ತದೆ. ಆದರೆ ಆ ಕಾಡನ್ನು ಉಳಿಸುವ ಬಗ್ಗೆ ನಾವು ಚರ್ಚಿಸುತ್ತಿಲ್ಲ. ನಾವು ಮರಳಿ ಹಳ್ಳಿಗೆ, ಮರಳಿ ಕೃಷಿಗೆ, ಮರಳಿ ಗುಡಿಸಲಿಗೆ ಹೋಗಬೇಕಿದೆ’ ಎಂದು ಹೇಳಿದರು.

ಕನ್ನಡ ಸಾಹಿತ್ಯದಲ್ಲಿ ಸ್ತ್ರೀ ಅಸ್ಮಿತೆ ಬಗ್ಗೆ ಡಾ. ಅನಿತಾ ದೊಡ್ಡಗೌಡರು ಮಾತನಾಡಿ, ‘ಅಸ್ಮಿತೆ ಎಂದರೆ ಅಸ್ತಿತ್ವ ಉಳಿಸಿಕೊಳ್ಳುವುದು ಎಂದು ಅರ್ಥ. ದ್ರಾವಿಡ, ಆರ್ಯರ ಕಾಲದಿಂದಲೂ ಪುರುಷ ಪ್ರಧಾನ ವ್ಯವಸ್ಥೆ ಇತ್ತು. ಮಹಿಳೆಯನ್ನು ಎರಡನೇ ದರ್ಜೆಯಾಗಿಯೇ ನೋಡಲಾಗುತ್ತಿತ್ತು. ಅಂಥ ಸಂದರ್ಭದಲ್ಲಿಯೂ ಮಹಿಳೆ ಅಸ್ಮಿತೆ ಉಳಿಸಿಕೊಂಡು ಹೋಗಿದ್ದಾಳೆ. 12ನೇ ಶತಮಾನದಲ್ಲಿ ಕನ್ನಡ ನಾಡಿನಲ್ಲಿ ವಚನ ಸಾಹಿತ್ಯದಲ್ಲಿ ಪುರುಷರಿಗೆ ಸರಿಸಮಾನಾಗಿ ಮಹಿಳೆಗೂ ಅವಕಾಶ ಸಿಕ್ಕಿತು’ ಎಂದು ಮಹಿಳಾ ಸಾಧಕರನ್ನು ನೆನಪು ಮಾಡಿಕೊಂಡರು.

ಕೆ.ಎಂ. ಫಾಲಾಕ್ಷಪ್ಪ ಉಪಸ್ಥಿತರಿದ್ದರು. ಬುರುಡೇಕಟ್ಟೆ ಮಂಜಪ್ಪ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT