ಶುಕ್ರವಾರ, ಅಕ್ಟೋಬರ್ 2, 2020
20 °C
ಕೋವಿಡ್‌ ಅವ್ಯವಹಾರದ ಬಗ್ಗೆ ನ್ಯಾಯಾಂಗ ತನಿಖೆಗೆ ಮುನಿಯಪ್ಪ, ಹೆಬ್ಬಾಳ್ಕರ್‌ ಆಗ್ರಹ

₹ 4 ಲಕ್ಷ ಮೌಲ್ಯದ ವೆಂಟಿಲೇಟರ್‌ಗೆ ₹ 18 ಲಕ್ಷ ನೀಡಿದ ಸರ್ಕಾರ: ಹೆಬ್ಬಾಳ್ಕರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಒಂದು ವೆಂಟಿಲೇಟರ್‌ಗೆ ₹ 4 ಲಕ್ಷದಂತೆ ಕೇಂದ್ರ ಸರ್ಕಾರ ಖರೀದಿ ಮಾಡಿದೆ. ಪಕ್ಕದ ತಮಿಳುನಾಡು ಸರ್ಕಾರ ₹ 4.78 ಲಕ್ಷಕ್ಕೆ ಒಂದರಂತೆ ಖರೀದಿಸಿದೆ. ಆದೇ ವೆಂಟಿಲೇಟರ್‌ ಅನ್ನು ನಮ್ಮ ರಾಜ್ಯ ಸರ್ಕಾರ ₹ 18 ಲಕ್ಷದಂತೆ ಖರೀದಿಸಿದೆ. ಇದು ಅವ್ಯವಹಾರ ಅಲ್ಲವೇ ಎಂದು ಸ್ಪೀಕ್ ಆಫ್ ಕರ್ನಾಟಕ ಕಾರ್ಯಕ್ರಮದ ಜಿಲ್ಲೆಯ ಉಸ್ತುವಾರಿಗಳಾದ ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಪ್ರಶ್ನಿಸಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕೋವಿಡ್ ನಿರ್ವಹಣೆಗೆ ₹ 4,167 ಕೋಟಿ ವೆಚ್ಚ ಮಾಡಲಾಗಿದೆ. ಒಬ್ಬ ಸಚಿವರು ₹ 324 ಕೋಟಿ ಮಾತ್ರ ಎಂದರೆ ಮತ್ತೊಬ್ಬರು ₹ 780 ಕೋಟಿ ಎಂದಿದ್ದಾರೆ. ₹ 2,128 ಕೋಟಿ ವೆಚ್ಚ ಮಾಡಿರುವುದಾಗಿ ಸರ್ಕಾರ ಲೆಕ್ಕ ನೀಡಿದೆ. ಹಾಗಾದರೆ ನಿಜವಾಗಿ ವೆಚ್ಚ ಮಾಡಿದ್ದೆಷ್ಟು?’ ಎಂದು ಕೇಳಿದರು.

₹ 330 ಬೆಲೆಯ ಪಿಪಿಇ ಕಿಟ್‌ಗೆ ₹ 2,117 ಬಿಲ್‌ ಮಾಡಲಾಗಿದೆ. ₹ 50ಕ್ಕೆ ಸಿಗುವ ಮಾಸ್ಕ್‌ಗೆ ₹ 150 ದರ ತೋರಿಸಿದೆ. ಆಮ್ಲಜನಕ ಪೂರೈಕೆ ಉಪಕರಣವನ್ನು ಕೇರಳ ಸರ್ಕಾರ 2.6 ಲಕ್ಷಕ್ಕೆ ಖರೀದಿ ಮಾಡಿದ್ದರೆ ರಾಜ್ಯ ಸರ್ಕಾರ ₹ 4.36 ಲಕ್ಷ ನೀಡಿದೆ. ₹ 650ಕ್ಕೆ ಸಿಗುವ ಥರ್ಮಲ್‌ ಸ್ಕ್ಯಾನರ್‌ಗೆ ₹ 2,200 ತೆತ್ತಿದೆ. ಸಮಾಜ ಕಲ್ಯಾಣ ಇಲಾಖೆ ಇದರ ಮೌಲ್ಯ ₹ 9 ಸಾವಿರ ತೋರಿಸಿದೆ ಎಂದು ವಿವರಿಸಿದರು.

ಇದನ್ನೆಲ್ಲ ಭ್ರಷ್ಟಾಚಾರ ಎಂದು ಹೇಳಿದರೆ ಬಿಜೆಪಿ ನೋಟಿಸ್‌ ನೀಡುತ್ತದೆ. ಧೈರ್ಯವಿದ್ದರೆ ಸರ್ಕಾರದ ಮುಖ್ಯ ಕಾರ್ಯದರ್ಶಿ ನೋಟಿಸ್‌ ನೀಡಲಿ. ಈ ಅವ್ಯವಹಾರವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಇಲ್ಲದೇ ಇದ್ದರೆ ರಾಜ್ಯದ ಮೂಲೆಮೂಲೆಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಜನರು ಸಂಕಷ್ಟದಲ್ಲಿದ್ದಾರೆ. ಹವಲರು ಜೀವ ಕಳೆದುಕೊಂಡಿದ್ದಾರೆ. ಇಂಥ ಸಂದರ್ಭದಲ್ಲಿಯೂ ಹಣ ಮಾಡಲು ಹೊರಟಿರುವುದು ದುರಂತದ ಸಂಗತಿ. ಅಧಿವೇಶನ ಕರೆಯಿರಿ ಎಂದರೆ ಕರೆಯುತ್ತಿಲ್ಲ. ಶ್ವೇತಪತ್ರ ಹೊರಡಿಸಿ ಅಂದರೆ ಹೊರಡಿಸುತ್ತಿಲ್ಲ. ಜನವಿರೋಧಿ ಕಾಯ್ದೆಗಳನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೆ ತರುತ್ತಿದ್ದಾರೆ ಎಂದು ಟೀಕಿಸಿದರು.

ಖರೀದಿಯಲ್ಲಿ ಅವ್ಯಹಾರ ಆಗಿದೆ ಎಂದು ಅವರದ್ದೇ ಪಕ್ಷದ ಸೌರ್ವಭೌಮ ಬಗಳಿ ಪ್ರಕರಣ ದಾಖಲಿಸಿದ್ದಾರೆ ಎಂದು ಮಾಹಿತಿ ನೀಡಿದರು. ಯಡಿಯೂರಪ್ಪ, ಅಮಿತ್‌ ಶಾ ಅವರಿಗೆ ಕೊರೊನಾ ಬಂದಿದೆ. ಅವರಿಗೇ ಎಚ್ಚರ ವಹಿಸಲು ಆಗಿಲ್ಲ ಎಂದರೆ ಜನರ ಬಗ್ಗೆ ಏನು ಕಾಳಜಿ ವಹಿಸುತ್ತಾರೆ ಎಂದು ಪ್ರಶ್ನಿಸಿದರು.

ಶಾಸಕರಾದ ಶಾಮನೂರು ಶಿವಶಂಕರಪ್ಪ , ಎಸ್‌. ರಾಮಪ್ಪ, ಜಿಲ್ಲಾ‌ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ , ಮಾಜಿ ಶಾಸಕರಾದ ಎಚ್.ಪಿ.ರಾಜೇಶ್ ,  ಡಿ.ಜಿ. ಶಾಂತನಗೌಡ್ರು, ಮುಖಂಡರಾದ ಅಬ್ದುಲ್‌ ಜಬ್ಬಾರ್‌, ಕೆ.ಎಸ್. ಬಸವಂತಪ್ಪ, ವೈ ರಾಮಪ್ಪ, ಎ.ನಾಗರಾಜ್‌, ದಿನೇಶ್ ಕೆ.ಶೆಟ್ಟಿ, ಅನಿತಾಬಾಯಿ ಅವರೂ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು