ಸೋಮವಾರ, ಡಿಸೆಂಬರ್ 9, 2019
20 °C

ಡಿಸೆಂಬರ್‌ನಲ್ಲಿ ‘ಥರ್ಡ್‌ಕ್ಲಾಸ್‌‘ ಚಿತ್ರ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಬಾಂಧವ್ಯದ ಮೌಲ್ಯ ಸಾರುವ ‘ಥರ್ಡ್‌ಕ್ಲಾಸ್‌‘ ಚಿತ್ರ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಅಪ್ಪ–ಮಗಳ ಬಾಂಧವ್ಯವೇ ಚಿತ್ರದ ಹೂರಣ ಎಂದು ನಾಯಕನಟ, ನಿರ್ಮಾಪಕ ನಮ್ಮ ಜಗದೀಶ್‌ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನವಿರು ಪ್ರೇಮಕಥೆ, ಕುಟುಂಬದ ಮೌಲ್ಯ ಹೇಳುವ ಚಿತ್ರ ಇದಾಗಿದ್ದು,  ಬೆಂಗಳೂರು, ಕೇರಳ, ಗೋವಾದ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಹಿರಿಯ ನಟರಾದ ಅನಿವಾಶ್‌, ರಮೇಶ್‌ ಭಟ್‌, ಮಜಾಭಾರತದ ಪವನ್‌ ಸೇರಿ ಹಲವರ ತಾರಾಗಣ ಇದೆ. ಜೆಸ್ಸಿ ಗಿಫ್ಟ್‌ ಚಿತ್ರಕ್ಕೆ ಸಂಗೀತ ನೀಡಿದ್ದು, ಕವಿರಾಜ್‌, ನಾಗೇಂದ್ರ ಪ್ರಸಾದ್‌ರ ಸಾಹಿತ್ಯ ಇದೆ. ಕೆ.ಜಿ.ಎಫ್‌ ಖ್ಯಾತಿಯ ಶ್ರೀಕಾಂತ್‌ ಸಂಕಲನ ಚಿತ್ರಕ್ಕಿದೆ’ ಎಂದು ಹೇಳಿದರು.

ಇದೇ ಪ್ರಥಮ ಬಾರಿಗೆ ಚಿತ್ರದ ಪ್ರೀಮಿಯರ್‌ ಶೋ ಅನ್ನು ಸಾರ್ವಜನಿಕರಿಗೂ ವೀಕ್ಷಿಸಲು ಅವಕಾಶ ನೀಡಲಾಗಿದೆ. ಅಲ್ಲದೇ ರಾಜ್ಯಾದ್ಯಂತ ಚಿತ್ರದ ಫಸ್ಟ್ ಶೋ ಉಚಿತವಾಗಿದೆ. ಎರಡನೇ ವಾರದಲ್ಲಿ ಒಂದು ದಿನದ ಕಲೆಕ್ಷನ್‌ ಅನ್ನು ನೆರೆ ಪೀಡಿತ ಸಂತ್ರಸ್ತ ಜಿಲ್ಲೆಗಳ ಯಾವುದಾದರೂ ಒಂದು ಗ್ರಾಮವನ್ನು ದತ್ತು ತೆಗೆದುಕೊಳ್ಳಲು ವಿನಿಯೋಗಿಸಲಾಗುವುದು. ಸಮಾಜಸೇವೆ ಮಾಡುವ ಉದ್ದೇಶದಿಂದ ಈಗಾಗಲೇ ಅಂಧ ಮಕ್ಕಳು ಹಾಗೂ ಆಟೊ ಚಾಲಕರಿಗೆ ಆರೋಗ್ಯ ವಿಮೆ ಮಾಡಿಸಲಾಗಿದೆ. 40 ಸಾವಿರ ಜನರು ಆರೋಗ್ಯ ವಿಮೆ ಸೌಲಭ್ಯ ಪಡೆದಿದ್ದಾರೆ. ಯಾವುದೇ ಪ್ರಚಾರಕ್ಕೆ ಇದನ್ನು ಮಾಡುತ್ತಿಲ್ಲ ಎಂದು ಹೇಳಿದರು.

ನಟಿ ರೂಪಿಕಾ, ‘10 ವರ್ಷದ ವೃತ್ತಿ ಜೀವನದಲ್ಲಿ ಇದು ಉತ್ತಮವಾದ ಚಿತ್ರ. ಚಿತ್ರದ ಕಥೆ ಚೆನ್ನಾಗಿರುವ ಕಾರಣ ಒಪ್ಪಿಕೊಂಡಿದ್ದೇನೆ. ಮನರಂಜನೆ ಜೊತೆಗೆ ಸಮಾಜದ ಮೂರು ವರ್ಗಗಳ ಜೀವನ ಚಿತ್ರಿಸಲಾಗಿದೆ. ಚಿತ್ರದ ಟ್ರೇಲರ್‌ಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಈಗಾಗಲೇ ಯೂಟ್ಯೂಬ್‌ನಲ್ಲಿ 1 ಕೋಟಿ ಜನರು ವೀಕ್ಷಿಸಿದ್ದಾರೆ. ಹೆಸರು ‘ಥರ್ಡ್‌ಕ್ಲಾಸ್‌‘ ಆದರೂ ಚಿತ್ರ ‘ಫಸ್ಟ್‌ಕ್ಲಾಸ್‌‘ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬಾಡದ ಆನಂದರಾಜ್‌, ವಾಣಿ ನಾಗಭೂಷಣ್ ಇದ್ದರು.

ಪ್ರತಿಕ್ರಿಯಿಸಿ (+)