ಸೋಮವಾರ, ಮೇ 23, 2022
30 °C
ಸಿನಿಮಾ ಪ್ರಿಯರ ನಿರಾಸಕ್ತಿ

ಪೂರ್ತಿ ಆಸನಗಳ ಭರ್ತಿಗೆ ಅವಕಾಶ; ‘ಹೌಸ್‌ಫುಲ್’ ಆಗದ ಚಿತ್ರಮಂದಿರಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಥಿಯೇಟರ್‌ಗಳಲ್ಲಿ ಶೇ 100ರಷ್ಟು ಆಸನಗಳ ಭರ್ತಿಗೆ ರಾಜ್ಯ ಸರ್ಕಾರ ಅವಕಾಶ ನೀಡಿದ್ದರೂ ನಗರದ ಚಿತ್ರಮಂದಿರಗಳಲ್ಲಿ ‘ಹೌಸ್‌ಫುಲ್’ ಬೋರ್ಡ್ ಕಾಣಲಿಲ್ಲ.

ಶುಕ್ರವಾರ ಪ್ರಜ್ವಲ್ ದೇವರಾಜ್ ಅಭಿನಯದ ‘ಇನ್‌ಸ್ಪೆಕ್ಟರ್ ವಿಕ್ರಂ, ವಿನೋದ್ ಪ್ರಭಾಕರ್ ಅಭಿನಯದ ‘ಶ್ಯಾಡೊ’, ಚಂದನ್ ಆಚಾರ್ ಅಭಿನಯದ ‘ಮಂಗಳವಾರ ರಜಾದಿನ’ ಚಿತ್ರಗಳು ತೆರೆಕಂಡಿದ್ದವು. ಎಸ್‌ಎಸ್‌ ಮಾಲ್‌ನ ಮೂವಿಟೈಮ್‌ನಲ್ಲಿ ‘ಮಂಗಳವಾರ ರಜಾದಿನ’ ಎರಡು, ‘ರಾಮಾರ್ಜುನ’ ಒಂದು, ‘ಮಾನ್‌ಸ್ಟರ್ ಹಂಟರ್’ ನಾಲ್ಕು, ‘ಜಾಂಬಿರೆಡ್ಡಿ’ ಎರಡು ಹಾಗೂ ಶ್ಯಾಡೊ ಒಂದು ಪ್ರದರ್ಶನ ಕಾಣುತ್ತಿವೆ.

ನಗರದ ಅರುಣಾ ಚಿತ್ರಮಂದಿರದಲ್ಲಿ ‘ಇನ್‌ಸ್ಪೆಕ್ಟರ್ ವಿಕ್ರಂ’ ಚಿತ್ರಕ್ಕೆ ಮಧ್ಯಾಹ್ನದ ಪ್ರದರ್ಶನದಲ್ಲಿ ಶೇ 50ರಷ್ಟು ಸೀಟುಗಳು ಭರ್ತಿಯಾಗಿದ್ದು ಬಿಟ್ಟರೆ ಉಳಿದ ಚಿತ್ರಮಂದಿರಗಳಲ್ಲಿ ಬೆರಳೆಕೆಯಷ್ಟು ಜನ ಬಂದಿದ್ದರು. ಉಳಿದಂತೆ ತ್ರಿಶೂಲ್ ಚಿತ್ರಮಂದಿರದಲ್ಲಿ ‘ಶ್ಯಾಡೊ’, ತ್ರಿನೇತ್ರ ಥಿಯೇಟರ್‌ನಲ್ಲಿ ‘ರಾಮಾರ್ಜುನ’ ಪದ್ಮಾಂಜಲಿ ಹಾಗೂ ಮೂವಿಟೈಮ್‌ನಲ್ಲಿ ಪ್ರದರ್ಶನಗೊಳ್ಳುತ್ತಿರುವ ‘ಮಂಗಳವಾರ ರಜಾದಿನ’ ಚಿತ್ರಕ್ಕೆ ಬೆರಳೆಣಿಕೆಯಷ್ಟು ಜನ ಇದ್ದರು. 

ನಗರದ ಅರುಣಾ ಥಿಯೇಟರ್‌ನಲ್ಲಿ ‘ಇನ್‌ಸ್ಪೆಕ್ಟರ್ ವಿಕ್ರಂ’ ಚಿತ್ರ ಪ್ರದರ್ಶನದ ವೇಳೆ ಅಲ್ಲಲ್ಲಿ ಕಾಲೇಜು ವಿದ್ಯಾರ್ಥಿಗಳು ಸೇರಿ ಸುಮಾರು ಪ್ರೇಕ್ಷಕರು ಬಂದಿದ್ದರು. ಎಲ್ಲರಿಗೂ ಸ್ಯಾನಿಟೈಸರ್‌ ನೀಡಿ ಒಳಗೆ ಕಳುಹಿಸಲಾಯಿತು. ಮಾಸ್ಕ್ ಧರಿಸದೇ ಥಿಯೇಟರ್‌ ಒಳಪ್ರವೇಶಿಸಿದ ಕೆಲ ಮಂದಿ ಮ್ಯಾನೇಜರ್ ವಾಪಸ್ ಕಳುಹಿಸಿದರು.

‘ಒಂದು ಪ್ರದರ್ಶನ ಮುಗಿದ ಬಳಿಕ ಥಿಯೇಟರ್ ಅನ್ನು ಸ್ಯಾನಿಟೈಸ್ ಮಾಡುತ್ತೇವೆ. ಸಿನಿಮಾ ಮಂದಿರದೊಳಗೆ ಪ್ಯಾಕ್ ಆಗಿರುವ ತಿಂಡಿಗಳನ್ನು ಬಿಟ್ಟು ಬೇರೆ ತಿಂಡಿಗಳ ಮಾರಾಟಕ್ಕೆ ಅನುಮತಿ ನೀಡಿಲ್ಲ. ಸರ್ಕಾರದ ನಿರ್ದೇಶನದ ಮೇರೆಗೆ ಥಿಯೇಟರ್‌ನಲ್ಲಿ ಉಗುಳುವ ಡಬ್ಬವನ್ನು ಇಟ್ಟಿಲ್ಲ’ ಎನ್ನುತ್ತಾರೆ ಅರುಣಾ ಥಿಯೇಟರ್ ಮ್ಯಾನೇಜರ್ ವಾಲಿ ಶಂಕರ್.

ಪ್ರದರ್ಶಕರು ಹಾಗೂ ನಿರ್ಮಾಪಕರ ನಡುವೆ ಬೆಂಗಳೂರಿನಲ್ಲಿ ಸಭೆ ನಡೆಯುತ್ತಿದೆ. ಪುಷ್ಪಾಂಜಲಿ, ಅಶೋಕ, ಗೀತಾಂಜಲಿ ಹಾಗೂ ವಸಂತ ಥಿಯೇಟರ್‌ಗಳು ಆರಂಭವಾಗಿಲ್ಲ. ಈ ಚಿತ್ರ ಮಂದಿರಗಳು ಸ್ಟಾರ್ ನಟರ ಸಿನಿಮಾಗಳನ್ನು ಎದುರು ನೋಡುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು