ಸೋಮವಾರ, ಜನವರಿ 17, 2022
18 °C
ಚನ್ನಗಿರಿ ಆಸ್ಪತ್ರೆಯಲ್ಲಿ ನರ್ಸ್‌ಗಳಿಂದ ಚಿಕಿತ್ಸೆ

ಚನ್ನಗಿರಿ: ಆರೋಗ್ಯ ಕೇಂದ್ರದಲ್ಲಿ ಮಧ್ಯಾಹ್ನದ ಬಳಿಕ ವೈದ್ಯರು ಮಾಯ

ಎಚ್.ವಿ. ನಟರಾಜ್ Updated:

ಅಕ್ಷರ ಗಾತ್ರ : | |

Prajavani

ಚನ್ನಗಿರಿ: ಪಟ್ಟಣದ ಸರ್ಕಾರಿ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಸಮಯಕ್ಕೆ ಸರಿಯಾಗಿ ಬಾರದೇ ಇರುವುದರಿಂದ ಚಿಕಿತ್ಸೆಗೆ ಬಂದವರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

100 ಹಾಸಿಗೆ ಸಾಮರ್ಥ್ಯವುಳ್ಳ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಗೇನೂ ಕೊರತೆ ಇರುವುದಿಲ್ಲ. ಆದರೆ ಮಾನವೀಯ ಮೌಲ್ಯ ಹೊಂದಿ, ಸೇವಾ ಮನೋಭಾವ ಇಲ್ಲದ ವೈದ್ಯರಿಂದಾಗಿ ಈ ಆರೋಗ್ಯ ಕೇಂದ್ರ ಸದಾ ಸುದ್ದಿಯಲ್ಲಿದೆ. ಪ್ರಸ್ತುತ ಈ ಕೇಂದ್ರದಲ್ಲಿ 10 ವೈದ್ಯರು ಹಾಗೂ 25 ದಾದಿಯರು ಕಾರ್ಯನಿರ್ವಹಿಸುತ್ತಿದ್ದಾರೆ.

ಇಂತಹ ದೊಡ್ಡದಾದ ತಾಲ್ಲೂಕು ಆರೋಗ್ಯ ಕೇಂದ್ರದಲ್ಲಿ ಯಾವುದೇ ಸಮಸ್ಯೆಗಳು ಇಲ್ಲದಂತೆ ಸ್ಥಳೀಯ ಶಾಸಕರು ಸೌಕರ್ಯಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ₹ 1 ಕೋಟಿ ವೆಚ್ಚದಲ್ಲಿ ಸಾಬೂನು ನಿಗಮದಿಂದ ಆಮ್ಲಜನಕ ಉತ್ಪಾದನಾ ಘಟಕ, ವೆಂಟಿಲೇಟರ್, ಮಂಚ ಮತ್ತು ಹಾಸಿಗೆ, 4 ಆಂಬುಲೆನ್ಸ್‌ಗಳ ಸೌಲಭ್ಯ ನೀಡಿದರೂ ಈ ಆರೋಗ್ಯ ಕೇಂದ್ರದಲ್ಲಿ ಸಮಸ್ಯೆ ತಪ್ಪಿಲ್ಲ.

ಈ ಆರೋಗ್ಯ ಕೇಂದ್ರ ಮಧ್ಯಾಹ್ನ 1.30ರವರೆಗೆ ಚೆನ್ನಾಗಿ ನಡೆಯುತ್ತದೆ. ಆ ಬಳಿಕ ಯಾವ ವೈದ್ಯರೂ ಆರೋಗ್ಯ ಕೇಂದ್ರದಲ್ಲಿ ಸಿಗುವುದಿಲ್ಲ. ಇಲ್ಲಿರುವ ಬಹುತೇಕ ವೈದ್ಯರು ಖಾಸಗಿಯಾಗಿ ನರ್ಸಿಂಗ್ ಹೋಂಗಳನ್ನು ತೆರೆದಿದ್ದು, ಅಲ್ಲಿಗೆ ತೆರಳುತ್ತಾರೆ. ಆಗ ನರ್ಸ್‌ಗಳೇ ಚಿಕಿತ್ಸೆ ನೀಡುವ ಪರಿಪಾಠ ನಡೆಯುತ್ತಿದೆ.

ಇನ್ನು ಸಾಕಷ್ಟು ಔಷಧಗಳ ದಾಸ್ತಾನು ಇದ್ದರೂ ರೋಗಿಗಳಿಗೆ ನೀಡದೇ ಮೆಡಿಕಲ್ ಶಾಪ್‌ಗಳಿಗೆ ಚೀಟಿ ಬರೆದುಕೊಟ್ಟು ಕಳುಹಿಸುತ್ತಾರೆ. ಜನೌಷಧ ಕೇಂದ್ರ ಇದ್ದರೂ ಇಲ್ಲದಂತಾಗಿದ್ದು, ಔಷಧಗಳ ಲಭ್ಯತೆಯ ಬಗ್ಗೆ ಯಾರೂ ಮಾಹಿತಿ ನೀಡುವುದಿಲ್ಲ. ಇನ್ನು ಸ್ತ್ರೀರೋಗ ತಜ್ಞರು ಯಾವಾಗ ಬರುತ್ತಾರೆ, ಯಾವಾಗ ಹೋಗುತ್ತಾರೆ ಎಂದು ಗೊತ್ತಾಗುವುದಿಲ್ಲ. ಶೀತ, ಕೆಮ್ಮು ಹಾಗೂ ಜ್ವರಕ್ಕೂ ಹೊರಗಡೆ ಮೆಡಿಕಲ್‌ಗಳಿಗೆ ಚೀಟಿ ಬರೆದುಕೊಟ್ಟು ಕಳುಹಿಸುತ್ತಾರೆ. ಬಡಜನರಿಗೆ ಈ ಆರೋಗ್ಯ ಕೇಂದ್ರ ಮರೀಚಿಕೆಯಾಗುವಂತೆ ಇಲ್ಲಿನ ವೈದ್ಯರು ಮಾಡಿದ್ದಾರೆ’ ಎಂದು ರೊಪ್ಪದಹಟ್ಟಿ ಗ್ರಾಮದ ಗಂಗಾಧರ್ ಹೇಳುತ್ತಾರೆ.

‘ವೈದ್ಯರ ಕಾರ್ಯವೈಖರಿಯ ಬಗ್ಗೆ ಜನಪ್ರತಿನಿಧಿಗಳು ಪ್ರಶ್ನಿಸಿದರೆ ಕೆಲಸಕ್ಕೆ ರಾಜೀನಾಮೆ ನೀಡುವ ಬೆದರಿಕೆ ಒಡ್ಡುತ್ತಾರೆ. ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಇರುವುದನ್ನು ಮನಗಂಡ ಜನಪ್ರತಿನಿಧಿಗಳು ಕೂಡ ವೈದ್ಯರಿಗೆ ದಬಾಯಿಸಲು ಹೋಗುವುದಿಲ್ಲ’ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

‘ಹೊರಗಡೆ ಚೀಟಿ ಬರೆದುಕೊಡುತ್ತಿಲ್ಲ’

ಆರೋಗ್ಯ ಕೇಂದ್ರದಲ್ಲಿ ಬಯೊಮೆಟ್ರಿಕ್ ಇದ್ದು, ಸಮಯಕ್ಕೆ ಸರಿಯಾಗಿ ವೈದ್ಯರು ಹಾಗೂ ಸಿಬ್ಬಂದಿ ಹಾಜರಾಗುತ್ತಾರೆ. ಔಷಧ ಕೊಂಡುಕೊಳ್ಳಲು ಯಾರೂ ಚೀಟಿ ಬರೆದು ಕೊಡುವುದಿಲ್ಲ. ನ. 24ರಂದು ರಾಜ್ಯಪಾಲರು ಚಿತ್ರದುರ್ಗದಿಂದ ಶಿವಮೊಗ್ಗ ನಗರಕ್ಕೆ ಚನ್ನಗಿರಿಯ ಮೂಲಕ ಹೋಗಿದ್ದರು. 25ರಂದು ಶಿವಮೊಗ್ಗದಿಂದ ಬೆಂಗಳೂರಿಗೆ ಚನ್ನಗಿರಿಯ ಮೂಲಕ ತೆರಳಿದ್ದರು. ಈ ಸಮಯದಲ್ಲಿ ಪೊಲೀಸ್ ಇಲಾಖೆ ಝಡ್ ಪ್ಲಸ್ ರಕ್ಷಣೆ ನೀಡಿತ್ತು. ನಮ್ಮ ಆರೋಗ್ಯ ಕೇಂದ್ರದ ವೈದ್ಯರಿಗೆ ಆಂಬುಲೆನ್ಸ್ ಸಹಿತ ಅವರ ಜತೆ ಹೋಗಲು ಜಿಲ್ಲಾಧಿಕಾರಿ ಆದೇಶ ನೀಡಿದ್ದರಿಂದ ಎರಡು ದಿನ ಆಂಬುಲೆನ್ಸ್ ಹಾಗೂ ವೈದ್ಯರ ಕೊರತೆಯಾಗಿತ್ತು’ ಎಂದು ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ರಾಜಪ್ಪ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು