ಶನಿವಾರ, ಆಗಸ್ಟ್ 20, 2022
21 °C
ಕೈಚೆಲ್ಲಿದ ಸರ್ಕಾರ | ದಾನಿಗಳು, ಎಸ್‌ಡಿಎಂಸಿ ಸಹಕಾರದಲ್ಲಿ ಕ್ರಮ ಕೈಗೊಳ್ಳಲು ಸರ್ಕಾರದ ಸೂಚನೆ

ಸರ್ಕಾರಿ ಶಾಲೆಗೆ ಬಣ್ಣ ಬಳಿಯಲೂ ಬಾರದ ಅನುದಾನ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

ದಾವಣಗೆರೆ: ಕೊರೊನಾ ಬಂದಿದ್ದರಿಂದ ಸರ್ಕಾರಿ ಶಾಲೆಗಳಿಗೆ ಬರುವ ಮಕ್ಕಳ ಪ್ರಮಾಣ ಶೇ 20ರಷ್ಟು ಹೆಚ್ಚಳವಾಗಿದೆ. ಆದರೆ, ಶಾಲೆಗಳ ದುರಸ್ತಿಗೆ, ಬಣ್ಣ ಬಳಿಯುವುದಕ್ಕೆಲ್ಲ ಈ ಬಾರಿ ಅನುದಾನವೇ ಬಂದಿಲ್ಲ. ‘ದಾನಿಗಳ ಸಹಕಾರ ಪಡೆದು ನೀವೇ ಮಾಡಿಸಿಕೊಳ್ಳಿ’ ಎಂದು ಸರ್ಕಾರ ಕೈಚೆಲ್ಲಿ ಕುಳಿತಿದೆ.

ಸ್ಥಳೀಯ ಸಂಘ–ಸಂಸ್ಥೆಗಳು, ಆಸಕ್ತ ಪೋಷಕರು, ದಾನಿಗಳು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಹಕಾರ ಪಡೆದುಕೊಂಡು 2020–21ನೇ ಶೈಕ್ಷಣಿಕ ವರ್ಷದ ಪ್ರಾರಂಭಕ್ಕೆ ಮೊಲದೇ ಸುಣ್ಣ–ಬಣ್ಣ ಮಾಡಿಸಬೇಕು. ಆಯಾ ಜಿಲ್ಲಾ ಉಪನಿರ್ದೇಶಕರು ಈ ಬಗ್ಗೆ ಕ್ರಮ ವಹಿಸಲು ಶಾಲೆಗಳ ಮುಖ್ಯೋಪಾಧ್ಯಾಯರಿಗೆ ನಿರ್ದೇಶನ ನೀಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

‘ನಮ್ಮ ಶಾಲೆಯಲ್ಲಿ ಏಳು ಕೊಠಡಿಗಳಿವೆ. ಬರೀ ಪೇಂಟ್‌ಗೇ ₹ 80 ಸಾವಿರ ಅಂದಾಜು ವೆಚ್ಚವಾಗಲಿದೆ ಎಂದು ಲೆಕ್ಕಹಾಕಲಾಗಿದೆ. ಬಣ್ಣ ಬಳಿಯುವವರ ಕೂಲಿ ₹ 30 ಸಾವಿರ ಸೇರಿದರೆ ಕನಿಷ್ಠ ₹ 1.10 ಲಕ್ಷ ಬೇಕು. ಸರ್ಕಾರದಿಂದ ಸ್ವಲ್ಪವೂ ಅನುದಾನವಿಲ್ಲದೇ ಎಲ್ಲವನ್ನೂ ದಾನಿಗಳಿಂದ ಹೇಗೆ ಭರಿಸುವುದು ಎಂಬುದೇ ನಮಗೆ ಚಿಂತೆ’ ಎಂದು ದಾವಣಗೆರೆಯ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕರೊಬ್ಬರು ಅಳಲು ತೋಡಿಕೊಂಡರು.

‘ಕಾಲೇಜುಗಳ ಒಂದು ಕೊಠಡಿ ನಿರ್ಮಾಣಕ್ಕೆ ₹ 17 ಲಕ್ಷ ಅನುದಾನ ನೀಡಲಾಗುತ್ತದೆ. ಪ್ರಾಥಮಿಕ ಶಾಲೆಯ ಕೊಠಡಿಗೆ ₹ 6 ಲಕ್ಷ ಮಾತ್ರ ಅನುದಾನ ನೀಡಲಾಗುತ್ತದೆ. ಕಡಿಮೆ ಅನುದಾನದಲ್ಲಿ ಉತ್ತಮ ದರ್ಜೆಯ ಕೊಠಡಿಗಳು ನಿರ್ಮಾಣವಾಗಿಲ್ಲ. ದುರಸ್ತಿಗೆ ಬೇಗ ಬರುತ್ತವೆ. ಅದಕ್ಕೂ ಅನುದಾನ ಬಾರದೇ ಇದ್ದರೆ ಬಹಳ ಕಷ್ಟ’ ಎಂಬುದು ಅವರ ನೋವು.

‘ಕಳೆದ ವರ್ಷ ಶಾಲೆಗಳ ದುರಸ್ತಿಗೆ, ಪೇಂಟ್‌ ಮಾಡಿಸಲು ಸರ್ಕಾರದಿಂದ ಅನುದಾನ ಬಂದಿತ್ತು. ಈ ಬಾರಿ ಬಂದಿಲ್ಲ. ದಾನಿಗಳನ್ನು ಹಿಡಿದು ಮಾಡಲು ಸೂಚನೆ ಬಂದಿದೆ. ಈ ಬಗ್ಗೆ ಮುಖ್ಯೋಪಾಧ್ಯಾಯರಿಗೆ ತಿಳಿಸಿದ್ದೇನೆ’ ಎಂದು ಡಿಡಿಪಿಐ ಸಿ.ಆರ್‌. ಪರಮೇಶ್ವರಪ್ಪ ತಿಳಿಸಿದರು.

‘ಅನುದಾನ ನೀಡದೇ ಸರ್ಕಾರಿ ಶಾಲೆಗಳು ಮುಚ್ಚಿಸಬೇಕು ಎಂಬ ಚಿಂತನೆ ಸರ್ಕಾರ ಮಾಡುತ್ತಿದೆಯೋ ಎಂಬ ಅನುಮಾನ ಬರುತ್ತಿದೆ. ಎಲ್ಲದಕ್ಕೂ ಕೊರೊನಾ ಕಾರಣ ಹೇಳಬಾರದು. ಸುಣ್ಣ–ಬಣ್ಣದ ಪೂರ್ತಿ ವೆಚ್ಚವನ್ನು ಸರ್ಕಾರ ನೀಡಬೇಕು. ಆರ್ಥಿಕ ತೊಂದರೆಗಳಿದ್ದರೆ ಅರ್ಧದಷ್ಟಾದರೂ ಭರಿಸಬೇಕು. ಉಳಿದ ಅರ್ಧವನ್ನು ಜನರಲ್ಲಿ ಕೇಳಬಹುದು’ ಎನ್ನುತ್ತಾರೆ ಬಸಾಪುರ ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಸದಸ್ಯ ಹನುಮಂತಪ್ಪ.

ಕೊರೊನಾದಿಂದ ಸರ್ಕಾರ ಸಂಕಷ್ಟದಲ್ಲಿದೆಯೋ ಇಲ್ವೊ, ಜನರು ಮಾತ್ರ ಸಂಕಷ್ಟದಲ್ಲಿದ್ದಾರೆ. ಅವರಿಗೀಗ ದೇಣಿಗೆ ನೀಡಿ ಎಂದು ಕೇಳುವುದು ಹೇಗೆ ಎಂಬುದು ಅವರ ಪ್ರಶ್ನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು