ಸೋಮವಾರ, ಜನವರಿ 24, 2022
23 °C
ಶೇ 60ರಷ್ಟೇ ಪೂರ್ಣ: ಕಾಮಗಾರಿ ಶೀಘ್ರ ಮುಗಿಸಲು ಜನರ ಒತ್ತಾಯ

ನಡೆಯುತ್ತಲೇ ಇದೆ ‘ಜಲಸಿರಿ’ ಕಾಮಗಾರಿ

ಚಂದ್ರಶೇಖರ ಆರ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಪ್ರತಿ ಮನೆಗೂ 24X7 ನೀರು ಪೂರೈಸುವ ‘ಜಲಸಿರಿ’ ಯೋಜನೆಯ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. 2020ರ ಜನವರಿಯ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಕಾಮಗಾರಿ ಇನ್ನೂ ಪೂರ್ಣಗೊಳ್ಳದ ಕಾರಣ ಜನರು ಕಿರಿಕಿರಿ ಅನುಭವಿಸುವಂತಾಗಿದೆ. 

ಶೇ 60ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂಬುದು ಜಲಸಿರಿ ಯೋಜನೆಯ ಅಧಿಕಾರಿಗಳ ಮಾತು. ಆದರೆ ನಗರದಲ್ಲಿ ಎಲ್ಲಿ ನೋಡಿದರೆ ಅಲ್ಲಿ ಕಾಮಗಾರಿಗಾಗಿ ರಸ್ತೆ ಅಗೆಯುತ್ತಿರುವುದು ಸಾಮಾನ್ಯವಾಗಿದೆ. ಬೆಳಿಗ್ಗೆ ಸರಿ ಇದ್ದ ರಸ್ತೆಯನ್ನು ಮಧ್ಯಾಹ್ನ ಆಗುವುದರೊಳಗೆ ಅಗೆದಿರುತ್ತಾರೆ. ಬೆಳಿಗ್ಗೆ ಇದೇ ದಾರಿಯಲ್ಲಿ ಹೋದ ಜನರು ಸಂಜೆ ಕೆಲಸ ಮುಗಿಸಿಕೊಂಡು ಬರುವಾಗ ರಸ್ತೆ ಅಗೆದಿರುವ ಬಗ್ಗೆ ಮಾಹಿತಿ ಇಲ್ಲದೆ ಬಿದ್ದು ಗಾಯಗೊಂಡ ಉದಾಹರಣೆಗಳಿವೆ. ಕಾಮಗಾರಿ ನಡೆಯುತ್ತಿರುವ ಬಗ್ಗೆ ಮಾಹಿತಿ ಫಲಕಗಳನ್ನು, ಬ್ಯಾರಿಕೇಡ್‌ಗಳನ್ನು ಹಾಕುವುದಿಲ್ಲ ಎಂಬುದು ಸಾರ್ವಜನಿಕರ ದೂರು.

ಏನಿದು ಯೋಜನೆ:

ದಾವಣಗೆರೆ ನಗರಕ್ಕೆ ನಿತ್ಯ 770 ಲಕ್ಷ ಲೀಟರ್‌ (77 ಎಂ.ಎಲ್‌.ಡಿ) ನೀರು ಅಗತ್ಯವಿದೆ. 2046ಕ್ಕೆ ನಗರದ ಜನಸಂಖ್ಯೆ ಎಷ್ಟಾಗಬಹುದು ಎಂದು ಅಂದಾಜಿಸಿ, ನಿತ್ಯ 1,570 ಲಕ್ಷ ಲೀಟರ್‌ (157 ಎಂ.ಎಲ್‌.ಡಿ) ನೀರು ಪೂರೈಸುವ ಪರಿಕಲ್ಪನೆಯೊಂದಿಗೆ ₹ 460 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಒಟ್ಟು 97,200 ಮನೆಗಳಿಗೆ ನಲ್ಲಿ ಸಂಪರ್ಕ ಕೊಡುವ ಗುರಿ ಹೊಂದಲಾಗಿದೆ. ‘ಸುಯೇಜ್‌ ಪ್ರಾಜೆಕ್ಟ್‌ ಪ್ರೈವೇಟ್‌ ಲಿಮಿಟೆಡ್‌’ ಕಂಪನಿ ಕಾಮಗಾರಿಯ ಗುತ್ತಿಗೆ ಪಡೆದುಕೊಂಡಿದೆ. 2018ರಲ್ಲಿ ಕಾಮಗಾರಿ ಆರಂಭಗೊಂಡಿದ್ದು, 2022ರ ಜನವರಿಗೆ ಮುಗಿಯಬೇಕಿತ್ತು. ಆದರೆ ಇನ್ನೂ ಶೇ 40ರಷ್ಟು ಕಾಮಗಾರಿ ಬಾಕಿ ಇದೆ. 

ಸರಸ್ವತಿ ನಗರ, ಎಂಸಿಸಿ ‘ಎ’ ಬ್ಲಾಕ್‌ನ ‍ಪುರಂತರ ಆಸ್ಪತ್ರೆ, ಶಾಮನೂರು ಬಳಿ ಸೇರಿ ಹಲವೆಡೆ ಕಾಮಗಾರಿಗಾಗಿ ರಸ್ತೆ ಅಗೆಯುವ ಕೆಲಸ ನಡೆಯುತ್ತಿದೆ. 

ಜಲಸಿರಿ ಯೋಜನೆಗಾಗಿ ಹೊಸದಾಗಿ 18 ಓವರ್‌ಹೆಡ್‌ ಟ್ಯಾಂಕ್‌ಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಯೋಜನೆಗೆ ಮಹಾನಗರ ಪಾಲಿಕೆಯ 32 ಹಳೆಯ ಓವರ್‌ಹೆಡ್‌ ಟ್ಯಾಂಕ್‌ಗಳು ಬಳಕೆಯಾಗಲಿದೆ. ಹಳೆ ಬಾತಿ ಹಾಗೂ ಹಳೆ ಕುಂದವಾಡದಲ್ಲಿರುವ ನೀರು ಶುದ್ಧೀಕರಣ ಘಟಕಗಳ ಪುನರ್‌ ನವೀಕರಣ ಕಾಮಗಾರಿ ಪ್ರಗತಿಯಲ್ಲಿದೆ.

‘ಯೋಜನೆಗೆ ಹೆಚ್ಚುವರಿ ಸಮಯ ನಿಗದಿ ಮಾಡಿ ಸರ್ಕಾರ ಅವಕಾಶ ನೀಡಿದೆ. ಬೃಹತ್‌ ಗಾತ್ರದ ಯೋಜನೆಯಾದ ಕಾರಣ ಮುಗಿಯಲು ಇನ್ನೂ ಒಂದು ವರ್ಷ ಬೇಕಾಗಬಹುದು. ನಗರದ ಹಲವೆಡೆ ಟ್ಯಾಂಕ್‌ಗಳ ನಿರ್ಮಾಣ, ಹಳೆ ಟ್ಯಾಂಕ್‌ಗಳ ನವೀಕರಣ, ವಾಲ್‌ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಎರಡು ತಿಂಗಳಲ್ಲಿ ಸಾಫ್ಟ್‌ವೇರ್‌ ಪರೀಕ್ಷೆ ಸಂಬಂಧಿತ ಇನ್‌ಸ್ಟಾಲೇಷನ್ ಕಾಮಗಾರಿ ನಡೆಯಲಿದೆ’ ಎಂದು ಮಾಹಿತಿ ನೀಡಿದರು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ (ಕೆಯುಐಡಿಎಫ್‌ಸಿ) ಕಾರ್ಯನಿರ್ವಾಹಕ ಎಂಜಿನಿಯರ್‌ ಕೆ. ಮಂಜುನಾಥ್‌.

‘ನಗರದ ಐಟಿಐ ಕಾಲೇಜು ಬಳಿ 18 ಲಕ್ಷ ಲೀಟರ್‌ ಸಾಮರ್ಥ್ಯದ ಎರಡು ಓವರ್‌ಹೆಡ್‌ ಟ್ಯಾಂಕ್‌ಗಳ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದೆ. ಕೆಲವೆಡೆ ರಸ್ತೆಗಳನ್ನು ಒಡೆಯಬಾರದು ಎಂದು ಪರ್ಯಾಯ ಮಾರ್ಗದಲ್ಲಿ ರಸ್ತೆ ಬದಿಯಲ್ಲಿ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಶಾಮನೂರು ಬಳಿಯ ಅಚ್ಚುಕಟ್ಟು ರಸ್ತೆ ಬಳಿ ಪೈಪ್‌ಲೈನ್‌ ಕಾಮಗಾರಿ ನಡೆಯುತ್ತಿದೆ. ಇದನ್ನು ಲಕ್ಷ್ಮೀ ಫ್ಲೋರ್ ಮಿಲ್‌ ಬಳಿಯಿಂದ ನಡೆಸಬೇಕಿತ್ತು. ಆದರೆ ರಸ್ತೆ ಒಡೆಯಬಾರದು ಎಂದು ಪುರವಂತರ ಆಸ್ಪತ್ರೆ ಬಳಿಯಿಂದ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ರೀತಿ ಮಾಡಿರುವುದರಿಂದ ₹ 2 ಕೋಟಿ ಉಳಿತಾಯವಾಗಿದೆ’ ಎಂದು ವಿವರಿಸಿದರು ಅವರು. 

‘ಪೈಪ್‌ಲೈನ್‌ ಲೀಕೇಜ್ ಆಗುವ ಸಾಧ್ಯತೆ ಇಲ್ಲ. ಎಲ್ಲ ಪರೀಕ್ಷೆ ಮಾಡಿಯೇ ಕಾಮಗಾರಿ ನಡೆಸಲಾಗುತ್ತಿದೆ. ಯೋಜನೆಯ ಗುತ್ತಿಗೆ ಪಡೆದ ಕಂಪನಿ 8 ವರ್ಷಗಳ ಕಾಲ ಇದರ ನಿರ್ವಹಣೆ ಮಾಡಲಿದೆ. ಇದಕ್ಕಾಗಿ ಟೆಂಡರ್‌ ಹಣವನ್ನು ಇರಿಸಿಕೊಂಡಿದ್ದೇವೆ’ ಎಂದು ಯೋಜನೆ ಕುರಿತ ಆರೋಪಗಳನ್ನು ಅಲ್ಲಗೆಳೆಯುತ್ತಾರೆ ಅವರು.

‘ಜಲಸಿರಿ ಕಾಮಗಾರಿ ಯಾವಾಗ ಮುಗಿಯುತ್ತದೆಯೋ ತಿಳಿಯದು. ಈಚೆಗೆ ನನ್ನ ಚಿಕ್ಕಪ್ಪ ಆಸ್ಪತ್ರೆಗೆ ಹೋಗುವಾಗ ರಸ್ತೆ ಸರಿ ಇತ್ತು. ಬರುವಾಗ ರಸ್ತೆ ಅಗೆದ ಕಾರಣ ಅವರಿಗೆ ತಿಳಿಯದೇ ಬೈಕ್‌ನಿಂದ ಬಿದ್ದು ಗಾಯಗೊಂಡಿದ್ದಾರೆ. ಅಧಿಕಾರಿಗಳು ಮಾಹಿತಿ ಫಲಕ ಅಳವಡಿಸಬೇಕು’ ಎಂದು ಒತ್ತಾಯಿಸುತ್ತಾರೆ ಸರಸ್ವತಿ ನಗರದ ಅನ್ನದಾನೇಶ್ವರ ಸ್ವಾಮಿ.

ಎಂಸಿಸಿ ‘ಎ’ ಬ್ಲಾಕ್‌ನ ‍ಪುರಂತರ ಆಸ್ಪತ್ರೆ ಬಳಿ ರಸ್ತೆ ಅಗೆಯಲಾಗಿದೆ. ಮಕ್ಕಳ ಆಸ್ಪತ್ರೆ ಸೇರಿ ಹಲವು ಕ್ಲಿನಿಕ್‌ಗಳು ಇಲ್ಲಿರುವ ಕಾರಣ ಜನರ ಓಡಾಟ ಹೆಚ್ಚು. ನಿತ್ಯ ಜನರು ಈ ರಸ್ತೆಯಲ್ಲಿ ಸರ್ಕಸ್‌ ಮಾಡುತ್ತಾ ಸಾಗುವುದು ಸಾಮಾನ್ಯವಾಗಿದೆ ಎಂದರು ವ್ಯಾಪಾರಿ ಹನುಮಂತರಾವ್‌ ಸುರ್ವೆ.

‘ಜಲಸಿರಿ ಯೋಜನೆಯಡಿ ಹಲವೆಡೆ ಮೀಟರ್ ಅಳವಡಿಸಲಾಗಿದೆ. ನೀರಿಗೂ ವಿದ್ಯುತ್‌ನಂತೆ ಬಿಲ್‌ ಕಟ್ಟಲು ಬಂದರೆ ಹೇಗೆ? ಸರ್ಕಾರ ಸಾಮಾನ್ಯ ಜನರ ಬಗ್ಗೆಯೂ ಯೋಚಿಸಬೇಕು’ ಎಂದು ಒತ್ತಾಯಿಸುತ್ತಾರೆ ನಿಟುವಳ್ಳಿಯ ಜಯ ನಾಯಕ್.

ನಿಗದಿಯಾಗದ ನೀರಿನ ದರ: ಆತಂಕ

ಕುಡಿಯುವ ನೀರಿಗೆ ಪರದಾಡುವ ದಾವಣಗೆರೆ ನಾಗರಿಕರಿಗೆ ‘ಜಲಸಿರಿ’ ಯೋಜನೆ ಶಾಶ್ವತ ಪರಿಹಾರ ನೀಡುವ ಭರವಸೆ ಹುಟ್ಟಿಸಿದೆ. ಆದರೆ, ನೀರಿನ ಶುಲ್ಕದ ಬಗ್ಗೆ ಮಾಹಿತಿ ನೀಡದ ಕಾರಣ ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

‘ದರ ನಿಗದಿ ಬಗ್ಗೆ ಕಾಮಗಾರಿ ಮುಗಿದ ನಂತರದಲ್ಲಿ ಸಭೆ ಕರೆದು ತೀರ್ಮಾನಿಸಲಾಗುವುದು. ಕಾಮಗಾರಿ ಬಳಿಕ 8 ವರ್ಷ ಯೋಜನೆಯ ನಿರ್ವಹಣೆಯನ್ನು ಸಂಸ್ಥೆಗಳೇ ಮಾಡುವುದರಿಂದ ಬಳಕೆ, ನಿರ್ವಹಣೆಯ ವೆಚ್ಚ ಆಧರಿಸಿ ದರ ನಿಗದಿಪಡಿಸಲಾಗುವುದು’ ಎನ್ನುತ್ತಾರೆ ಕೆಯುಐಡಿಎಫ್‌ಸಿ ಕಾರ್ಯನಿರ್ವಾಹಕ ಎಂಜಿನಿಯರ್‌ ಕೆ. ಮಂಜುನಾಥ್‌.

‘ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಕ್ರಮ’

‘ಕೊರೊನಾ ಮತ್ತಿತರ ಕಾರಣಗಳಿಂದ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಈ ಬಗ್ಗೆ ಕಾರಣ ಕೇಳಿ ಗುತ್ತಿಗೆ ಪಡೆದಿರುವ ಕಂಪನಿಗೆ ನೋಟಿಸ್‌ ನೀಡಲಾಗಿದೆ. ಕಾಮಗಾರಿಯ ಪ್ರಗತಿ ಕುರಿತು ಪ್ರತಿ ತಿಂಗಳು ವರದಿ ನೀಡುವಂತೆ ಸೂಚಿಸಲಾಗಿದೆ. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ಇದೆ’ ಎಂದರು ಎಂಜಿನಿಯರ್‌ ಕೆ. ಮಂಜುನಾಥ.

‘ಶುಲ್ಕ ಪಾವತಿ ವ್ಯವಸ್ಥೆಗೆ ಚಿಂತನೆ ಅಗತ್ಯ’

ಮನೆ ಮನೆಗೆ ನೀರು ಕೊಡುವ ವ್ಯವಸ್ಥೆ ಸರಿ. ಆದರೆ ಶುಲ್ಕ ಪಾವತಿ ವ್ಯವಸ್ಥೆ ಸರಿ ಅಲ್ಲ. ಇದರಿಂದ ಬಡವರಿಗೆ ಶುದ್ಧ ನೀರು ಮರೀಚಿಕೆಯಾಗಲಿದೆ. ಉಚಿತ ಅಕ್ಕಿ ನೀಡುವ ಸರ್ಕಾರ ನೀರಿಗೆ ಶುಲ್ಕ ವಿಧಿಸುವ ಬಗ್ಗೆ ಚಿಂತನೆ ನಡೆಸಬೇಕಿದೆ. ಬಡವರಿಗೆ ರಿಯಾಯಿತಿ ನೀಡಬೇಕು. ದೆಹಲಿ ಸರ್ಕಾರ ಉಚಿತ ನೀರು ಒದಗಿಸುತ್ತಿದೆ. ಇಲ್ಲಿಯೂ ಅದು ಬರಲಿ. ಕಾಮಗಾರಿ ತಡವಾಗುತ್ತಿರುವ ಕಾರಣ ಹಲವೆಡೆ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಶೀಘ್ರ ಕಾಮಗಾರಿ ಮುಗಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಾರೆ ಅಖಿಲ ಭಾರತ ಯುವಜನ ಫೆಡರೇಷನ್ ರಾಜ್ಯ ಉಪಾಧ್ಯಕ್ಷ ಆವರಗೆರೆ ವಾಸು.

‘ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಲಿ’

‘ಜಲಸಿರಿ ಯೋಜನೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಈ ಸಂಬಂಧ ಜನಪ್ರತಿನಿಧಿಗಳ ಸಭೆಯನ್ನು ಒಮ್ಮೆ ಕರೆದಿದ್ದು ಬಿಟ್ಟರೆ ಮತ್ತೆ ಕರೆದಿಲ್ಲ. ಯೋಜನೆಯ ಕನಸು ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರದ್ದು. ಅವರು ಅಧಿಕಾರದಲ್ಲಿ ಇದ್ದಿದ್ದರೆ ಇಷ್ಟು ಹೊತ್ತಿಗೆ ಕಾಮಗಾರಿ ಮುಗಿಯುತ್ತಿತ್ತು. ನಗರದ ಹಲವೆಡೆ ನಲ್ಲಿ ಅಳವಡಿಸಲಾಗಿದೆ. ನೀರು ಬರುವ ಹೊತ್ತಿಗೆ ಪೈಪ್, ನಲ್ಲಿಗಳು ತುಕ್ಕು ಹಿಡಿಯುವ ಸಾಧ್ಯತೆ ಇದೆ. ಕಾಮಗಾರಿ ಮುಗಿಸಲು ಸಚಿವರು, ಸಂಸದರು, ಅಧಿಕಾರಿಗಳು ಇಚ್ಛಾಶಕ್ತಿ ತೋರಬೇಕು’ ಎಂದು ಒತ್ತಾಯಿಸುತ್ತಾರೆ ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್.

ಯೋಜನೆ ಉತ್ತಮವಾಗಿದೆ. ಮೀಟರ್‌ ಅಳವಡಿಸುವ ಕಾರಣ ಜನರು ಬಳಸುವಷ್ಟೇ ನೀರಿಗೆ ಶುಲ್ಕ ಪಾವತಿಸಿದರೆ ಸಾಕು. ಈಗಿನಂತೆ ನೀರು ಪೋಲಾಗಲು ಅವಕಾಶ ಇರುವುದಿಲ್ಲ. ಜನರಿಗೂ ನೀರಿನ ಮಿತವ್ಯಯದ ಅರಿವಾಗಲಿದೆ. ದಕ್ಷಿಣ ಭಾಗದಲ್ಲಿನ ಕಾಮಗಾರಿಯ ಪ್ರಗತಿ ಬಗ್ಗೆ ಶಾಸಕ ಶಾಮನೂರು ಶಿವಶಂಕರಪ್ಪ ಅವರು ನಿಗಾ ವಹಿಸಿದ್ದಾರೆ. ವಾರ್ಡ್‌ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ಕಾಮಗಾರಿಯ ನಿಗಾ ವಹಿಸಬೇಕು. ವಿವಿಧ ಯೋಜನೆಗಳ ಕಾಮಗಾರಿ ನಿರ್ವಹಿಸುತ್ತಿರುವ ಅಧಿಕಾರಿಗಳಲ್ಲಿ ಸಮನ್ವಯ ಇದ್ದರೆ ಕಾಮಗಾರಿ ಶೀಘ್ರ ಮುಗಿಯಲಿದೆ ಎನ್ನುತ್ತಾರೆ ಅವರು.

 

ರಸ್ತೆ ಬೇಕಾಬಿಟ್ಟಿ ಅಗೆಯುವ ಕಾರಣ ಬೈಕ್‌ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಕಾಮಗಾರಿ ಮಾಡುವ ಮುನ್ನ ಅಧಿಕಾರಿಗಳು ಮಾಹಿತಿ ಫಲಕ ಅಳವಡಿಸಬೇಕು.

ಅನ್ನದಾನೇಶ್ವರ ಸ್ವಾಮಿ, ಸರಸ್ವತಿ ನಗರ

ಎಂಸಿಸಿ ‘ಎ’ ಬ್ಲಾಕ್‌ನ ‍ಪುರಂತರ ಆಸ್ಪತ್ರೆ ಬಳಿ ದಿನಕ್ಕೆ ನೂರಾರು ಜನರು ಬರುತ್ತಾರೆ. ಎರಡು ತಿಂಗಳಾದರೂ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ಮುಗಿಸಿಲ್ಲ. ಹಲವರು ಇಲ್ಲಿ ಬಿದ್ದು ಗಾಯಗೊಂಡಿದ್ದಾರೆ.

ಹನುಮಂತರಾವ್‌ ಸುರ್ವೆ, ವ್ಯಾಪಾರಿ, ಎಂಸಿಸಿ ‘ಎ’ ಬ್ಲಾಕ್

ಕೊರೊನಾ ಕಾರಣ ಕಾಮಗಾರಿಗಳಿಗೆ ಹಿನ್ನಡೆಯಾಗಿದೆ. ಸಮಸ್ಯೆ ಇರುವುದನ್ನು ಸರಿಪಡಿಸಿ ಮಾರ್ಚ್‌ ಒಳಗೆ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು. ಜನರಿಗೆ ಅನುಕೂಲ ಕಲ್ಪಿಸಲು ಎಲ್ಲ ಕ್ರಮ ಕೈಗೊಳ್ಳಲಾಗುವುದು. ಜಿ.ಎಂ. ಸಿದ್ದೇಶ್ವರ, ಸಂಸದ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.