ಶನಿವಾರ, ಸೆಪ್ಟೆಂಬರ್ 25, 2021
24 °C
ಬಸವ ಜಯಂತಿ ಪ್ರಯುಕ್ತ ಮಕ್ಕಳ ನಾಮಕರಣ ನೆರವೇರಿಸಿದ ವಿರಕ್ತಮಠದ ಬಸವಪ್ರಭು ಸ್ವಾಮೀಜಿ

ಮನುಷ್ಯನ ಕೊಲ್ಲುವವರಿಗೆ ಧರ್ಮವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಮನುಷ್ಯರನ್ನು ಕೊಲ್ಲುವವರು ಯಾವ ಧರ್ಮಕ್ಕೂ ಸೇರಿದವರಲ್ಲ. ಕೊಲ್ಲುವುದೇ ಅವರ ಧರ್ಮ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.

ಬಸವ ಜಯಂತಿ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ದೊಡ್ಡಪೇಟೆಯ ವಿರಕ್ತಮಠದಲ್ಲಿ ಮಕ್ಕಳಿಗೆ ತೊಟ್ಟಿಲು ಕಾರ್ಯಕ್ರಮ, ನಾಮಕರಣವನ್ನು ನೆರವೇರಿಸಿ ಅವರು ಮಾತನಾಡಿದರು.

ದೇಶಗಳ ನಡುವೆ ಸಂಘರ್ಷ ನಡೆಯುತ್ತಿವೆ. ಮುಗ್ಧರ ಹತ್ಯೆ ಆಗುತ್ತಿವೆ. ಹಿಂಸೆ, ಅಶಾಂತಿ, ರಕ್ತಪಾತಗಳು ನಿರಂತರ ನಡೆಯುತ್ತಿವೆ. ಸಮಾಜವೇ ತುರ್ತುಪರಿಸ್ಥಿತಿಗೆ ಒಳಗಾದಂತಿದೆ. ಇವೆಲ್ಲದಕ್ಕೂ ಬಸವ ತತ್ವದಲ್ಲಿ ಪರಿಹಾರ ಇದೆ. ರೋಗಗ್ರಸ್ತ ಸಮಾಜಕ್ಕೆ ಬಸವ ತತ್ವ ಇಂಜೆಕ್ಷನ್‌ ಇದ್ದಂತೆ ಎಂದು ತಿಳಿಸಿದರು.

ಮನುಷ್ಯ ದಾನವನಾಗುತ್ತಿದ್ದಾನೆ. ಒಳ್ಳೆಯ ಯೋಚನೆಗಳ ಬದಲು ದುರಾಲೋಚನೆಗಳನ್ನೇ ತುಂಬಿಕೊಂಡಿದ್ದಾನೆ. ಬಸವಣ್ಣ ಹೇಳಿದ ಸಪ್ತ ಸೂತ್ರಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಮಾಜ ಸುಧಾರಣೆಯಾಗಲು ಸಾಧ್ಯ. ಶಾಂತಿ ನೆಲೆಗೊಳ್ಳಲು ಸಾಧ್ಯ ಎಂದು ವಿಶ್ಲೇಷಿಸಿದರು.

ಬಸವಣ್ಣ ಜ್ಞಾನ, ಭಕ್ತಿ ಮತ್ತು ಕ್ರಾಂತಿಯ ಭಂಡಾರ. ಆತನ ಹೆಸರು ಹೇಳುವುದರಿಂದ ಬದುಕಿನ ದುಃಖ ದೂರುವಾಗುತ್ತದೆ ಎಂದರು.

16 ಮಕ್ಕಳಿಗೆ ನಾಮಕರಣ ಮಾಡಲಾಯಿತು. ಮಹಾದೇವಿ, ಗಂಗಾಂಬಿಕೆ, ಪ್ರಭುದೇವ, ನೀಲಾಂಬಿಕೆ, ಬಸವಾದಿ ಶರಣರ ಹೆಸರನ್ನು ಮಕ್ಕಳಿಗೆ ಇಡಲಾಯಿತು.

ಶಿಕಾರಿಪುರ ವಿರಕ್ತಮಠದ ಚನ್ನಬಸವ ಸ್ವಾಮೀಜಿ, ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್‌, ಶಿವಸಿಂಪಿ ಸಮಾಜದ ಅಧ್ಯಕ್ಷ ಗುರುಬಸಪ್ಪ ಬೂಸ್ನೂರು, ಬಸವಣ್ಣನ ಅಭಿಮಾನಿ ಅಬ್ದುಲ್‌ ಘನಿ, ದಮಯಂತಿ ಗೌಡ, ಮಹಾದೇವಮ್ಮ ಅವರೂ ಉಪಸ್ಥಿತರಿದ್ದರು.

ನಾಮಕರಣ ಕಾರ್ಯಕ್ರಮಕ್ಕಿಂತ ಮೊದಲು ಕಾಯಿಪೇಟೆಯಲ್ಲಿ ಸಂಭ್ರಮದಿಂದ ಬಸವ ಪ್ರಭಾತ್‌ ಫೇರಿ ನಡೆಯಿತು. ಹಲವು ಮಂದಿ ಭಾಗವಹಿಸಿದ್ದರು.

‘ಜ್ಞಾನದ ಚಿನ್ನ ಖರೀದಿಸಿ’

ಅಕ್ಷಯ ತೃತೀಯ ಎಂದು ಬಂಗಾರ ಖರೀದಿಗೆ ಹೋಗುತ್ತಾರೆ. ಆದರೆ ಆ ಬಂಗಾರ ಬಹಳ ಸಮಯ ನಮ್ಮಲ್ಲಿ ಉಳಿಯುವುದಿಲ್ಲ. ಅದರ ಬದಲು ಜ್ಞಾನವೆಂಬ ಚಿನ್ನವನ್ನು ಸಂಪಾದಿಸಿ. ಅದು ನಮ್ಮ ಜತೆ ಶಾಶ್ವತವಾಗಿ ಇರುತ್ತದೆ ಎಂದು ಬಸವಪ್ರಭು ಸ್ವಾಮೀಜಿ ಹೇಳಿದರು.

ಜ್ಞಾನದ ಚಿನ್ನ ಗುರುವಿನ ಮೂಲಕ ಸಿಗುತ್ತದೆ. ಅದು ಕ್ಷಯ ಆಗುವುದಿಲ್ಲ. ಜೀವನದಲ್ಲಿ ಎದುರಾಗುವ ಎಲ್ಲ ಸವಾಲುಗಳನ್ನು ಜ್ಞಾನದ ಮೂಲಕ ಎದುರಿಸಬಹುದು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು