ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಸಿದ್ದು ನ್ಯಾಮಗೌಡ ಸಾವು

ಪಣಜಿಯಿಂದ ಮರಳುವಾಗ ಘಟನೆ
Last Updated 28 ಮೇ 2018, 19:30 IST
ಅಕ್ಷರ ಗಾತ್ರ

ಬಾಗಲಕೋಟೆ: ತಾಲ್ಲೂಕಿನ ಕಲಾದಗಿ ಬಳಿ ಸೋಮವಾರ ನಸುಕಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಜಮಖಂಡಿಯ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ (70) ಮೃತಪಟ್ಟಿದ್ದಾರೆ.

ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರು ಇದ್ದಾರೆ. ಗೋವಾದ ಪಣಜಿಯಿಂದ ಜಮಖಂಡಿಗೆ ಮರಳುವಾಗ ಜೊತೆಯಲ್ಲಿದ್ದ ಸ್ನೇಹಿತ ಡಾ.ಅಬ್ದುಲ್ ರಶೀದ್ ಸಾಲರ್ ಅವರನ್ನು ಬಾಗಲಕೋಟೆಗೆ ಬಿಡಲು ತೆರಳುವ ವೇಳೆ ಕಲಾದಗಿ– ತುಳಸಿಗೇರಿ ನಡುವಿನ ಬೆಳಗಾವಿ– ರಾಯಚೂರು ರಾಜ್ಯ ಹೆದ್ದಾರಿಯಲ್ಲಿ ಬೆಳಗಿನ ಜಾವ 4.30ರ ವೇಳೆ ಈ ಅವಘಡ ಸಂಭವಿಸಿದೆ.

ಸಿದ್ದು ನ್ಯಾಮಗೌಡ ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಮುಂದಿನ ಸೀಟಿನಲ್ಲಿ ಕುಳಿತಿದ್ದ ಶಾಸಕರ ಎದೆ ಭಾಗ ಹಾಗೂ ಮೊಣಕಾಲಿಗೆ ತೀವ್ರ ಪೆಟ್ಟಾಗಿ ಪ್ರಜ್ಞಾಹೀನರಾಗಿದ್ದಾರೆ. ಕೂಡಲೇ ಅವರನ್ನು ಬಾಗಲಕೋಟೆಯ ಕೆರೂಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ. ಚಾಲಕ ಪರಮಾನಂದ ಅಂಬಿ ಹಾಗೂ ಕಾರಿನಲ್ಲಿದ್ದ ಶಾಸಕರ ಬೆಂಬಲಿಗರಾದ ಮೌಲಾನಾ ರಜ್ವಿ, ಅನ್ವರ್ ಮೊಮಿನ್ ಗಾಯಗೊಂಡಿದ್ದಾರೆ.

ಸತತ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ನ್ಯಾಮಗೌಡ ಜೆಡಿಎಸ್‌– ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರದಲ್ಲಿ ಸಚಿವ ಸ್ಥಾನದ
ಆಕಾಂಕ್ಷಿಯಾಗಿದ್ದರು.

ಅಂತ್ಯಕ್ರಿಯೆ: ಮಂಗಳವಾರ ಬೆಳಿಗ್ಗೆ 10ಗಂಟೆಗೆ ಹಿರೇಪಡಸಲಗಿಯ ಜಮಖಂಡಿ ಶುಗರ್ಸ್ ಆವರಣದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

‘ಏರ್‌ಬ್ಯಾಗ್‌ ಬಿಚ್ಚಿಕೊಂಡರೂ ಬದುಕಲಿಲ್ಲ...’

‘ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದ ರಭಸಕ್ಕೆ ಇನ್ನೋವಾ ಕಾರಿನ ಏರ್‌ಬ್ಯಾಗ್ ಬಿಚ್ಚಿಕೊಂಡಿದೆ. ಆದರೂ ಸಿದ್ದು ನ್ಯಾಮಗೌಡ ಮಾತ್ರ ಬದುಕುಳಿಯಲಿಲ್ಲ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ತಂಡ ಕೂಡ ಇದನ್ನು ಖಚಿತಪಡಿಸಿದ್ದು, ಕಾರಣವಾದ ಅಂಶಗಳ ಬಗ್ಗೆ ತನಿಖೆ ನಡೆಸಿದ್ದಾರೆ.

‘ಶಾಸಕರು ಸೀಟ್‌ ಬೆಲ್ಟ್‌ ಕೂಡ ಧರಿಸಿರಲಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT