ಕಿತ್ತಾಡಿದರೆ ವೀರಶೈವರಿಗೆ ಉಳಿಗಾಲವಿಲ್ಲ: ಶಾಮನೂರು ಶಿವಶಂಕರಪ್ಪ

7

ಕಿತ್ತಾಡಿದರೆ ವೀರಶೈವರಿಗೆ ಉಳಿಗಾಲವಿಲ್ಲ: ಶಾಮನೂರು ಶಿವಶಂಕರಪ್ಪ

Published:
Updated:
Deccan Herald

ದಾವಣಗೆರೆ: ‘ಕರ್ನಾಟಕದಲ್ಲಿ ವೀರಶೈವ–ಲಿಂಗಾಯತರೇ ಹೆಚ್ಚಿನ ಸಂಖ್ಯೆಯಲ್ಲಿದ್ದೇವೆ. ಲಿಂಗಾಯತರು– ವೀರಶೈವರ ಪ್ರತ್ಯೇಕ ಎಂದು ಕಿತ್ತಾಡಿದರೆ ನಮ್ಮ ಸಮಾಜಕ್ಕೆ ಉಳಿಗಾಲ ಇಲ್ಲ’ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರೂ ಆಗಿರುವ ಶಾಸಕ ಶಾಮನೂರು ಶಿವಶಂಕರಪ್ಪ ಎಚ್ಚರಿಕೆ ನೀಡಿದರು.

ಶ್ರೀ ಮದ್ವೀರಶೈವ ಸದ್ಬೋಧನಾ ಸಂಸ್ಥೆಯ ದಾವಣಗೆರೆ ಜಿಲ್ಲಾ ಘಟಕದ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 23ನೇ ವರ್ಷದ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಜನಜಾಗೃತಿ ಧರ್ಮ ಸಮ್ಮೇಳನವನ್ನು ಉದ್ಘಾಟಿಸಿ ಅವರು ಅವರು ಮಾತನಾಡಿದರು.

‘ನಾವು ಸಾದರು, ಬಣಜಿಗ, ಜಂಗಮ, ಗಾಣಿಗ ಎಂದು ಪ್ರತ್ಯೇಕ ಎಂದು ಕಿತ್ತಾಡಿಕೊಂಡರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಇನ್ನೂ ಹೀನಾಯ ಸ್ಥಿತಿಗೆ ಹೋಗಬೇಕಾದ ಪರಿಸ್ಥಿತಿ ಬರುತ್ತದೆ. ಅದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ವೀರಶೈವ– ಲಿಂಗಾಯತರು ಒಂದೇ. ಒಟ್ಟಾಗಿ ಕೆಲಸ ಮಾಡೋಣ, ಒಟ್ಟಾಗಿದ್ದರೆ ಶಕ್ತಿ ಇರುತ್ತದೆ ಎಂದು ಅರ್ಥ ಮಾಡಿಕೊಳ್ಳಬೇಕು. ಕರ್ನಾಟಕದಲ್ಲಿ ಮತ್ತೆ ವೀರಶೈವ ಮುಖಂಡತ್ವವನ್ನು ಮುಂಚೂಣಿಗೆ ತರೋಣ’ ಎಂದು ಹೇಳುವ ಮೂಲಕ ಮುಂದಿನ ಚುನಾವಣೆಯಲ್ಲಿ ವೀರಶೈವ ನಾಯಕರನ್ನೇ ಆಯ್ಕೆ ಮಾಡಲು ಮುಂದಾಗಬೇಕು ಎಂದು ಪರೋಕ್ಷವಾಗಿ ಹೇಳಿದರು.

‘ನೀನು ಲಿಂಗಾಯತ, ಅವನು ವೀರಶೈವ ಎಂದು ಬಸವಣ್ಣ ಎಲ್ಲಿಯೂ ಹೇಳಿಲ್ಲ. ಕಾಯಕವೇ ಕೈಲಾಸ ಎಂದು ಅವರು ಹೇಳಿದ್ದಾರೆ. ಮನುಷ್ಯ ಒಂದೇ ಜಾತಿ. ಅದರಲ್ಲಿ ಗಂಡು ಹಾಗೂ ಹೆಣ್ಣು ಎಂಬ ಎರಡು ಪಂಗಡಗಳಿವೆ ಎಂದಷ್ಟೇ ಹೇಳಿದ್ದಾರೆ ಹೊರತು, ಬೇರೆ ಜಾತಿ ಇದೆ ಎಂದು ಹೇಳಿಲ್ಲ’ ಎಂದು ಪ್ರತಿಪಾದಿಸಿದರು.

ಇತ್ತೀಚಿನ ದಿನಗಳಲ್ಲಿ ದೊಡ್ಡ ಗೊಂದಲ ಮೂಡಿಸಿ ಸಮಾಜದ ಜನರಲ್ಲಿ ತಳಮಳ ಉಂಟುಮಾಡಿದ್ದರು. ಹಳೆ ಮೈಸೂರು ಭಾಗದ ಬಹುತೇಕ ಜನ ವೀರಶೈವ ಎನ್ನುತ್ತಾರೆ. ಈ ಕಡೆ ಭಾಗದಲ್ಲಿ ಅರ್ಧ ವೀರಶೈವ, ಇನ್ನರ್ಧ ಲಿಂಗಾಯತ ಎನ್ನುತ್ತಾರೆ. ಇಲ್ಲಿ ವೀರಶೈವ ಹಾಗೂ ಲಿಂಗಾಯತ ಖಾನಾವಳಿ ಎಂದು ಹೆಸರು ಇಟ್ಟುಕೊಳ್ಳುತ್ತಿದ್ದಾರೆ. ಇದುವರೆಗೂ ಎರಡೂ ಒಂದೇ ಎಂದು ಭಾವಿಸಿಕೊಂಡು ಬಂದಿದ್ದೇವೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೆಟ್ಟ ಮನಸ್ಸಿನ ಕೆಲವರು ಸಮಾಜ ಒಡೆಯುವ ದುರದ್ದೇಶದಿಂದ ಪ್ರತ್ಯೇಕ ಧರ್ಮದ ಕೂಗನ್ನು ಹುಟ್ಟಿಸಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಾವಣಗೆರೆಯಲ್ಲೂ ಕೆಲವು ಕುತಂತ್ರಿಗಳಿದ್ದಾರೆ. ಅಂಥವರಿಂದ ಸಮಾಜಕ್ಕೆ ಹಾನಿಯಾಗುತ್ತದೆ. ನಮ್ಮ ನಮ್ಮಲ್ಲೇ ಜಗಳ ಹಚ್ಚಿಸುತ್ತಿದ್ದಾರೆ. ನಾವೇ ಕಿತ್ತಾಡುವ ಪರಿಸ್ಥಿತಿ ತಂದಿಟ್ಟಿದ್ದಾರೆ. ಮೊನ್ನೆ ನಡೆದ ಚುನಾವಣೆಯಲ್ಲಿ ಲಿಂಗಾಯತರು ಎನ್ನುವವರು ವೀರಶೈವರ ವಿರುದ್ಧ ಹಾಗೂ ವೀರಶೈವರು ಎನ್ನುವವರು ಲಿಂಗಾಯತ ವಿರುದ್ಧ ಮತ ಹಾಕಿದ್ದಾರೆ. ಇದು ಒಳ್ಳೆಯ ಫಲಿತಾಂಶ ಅಲ್ಲ. ಸಮಾಜಕ್ಕೆ ಹೆಸರು ತರುವ ಕೆಲಸವಲ್ಲ ಎಂದು ಹೇಳಿದರು.

ಚಾಮರಾಜನಗರದಲ್ಲಿ ಲಿಂಗಾಯತ ಸಮಾಜ ಎನ್ನುವವರು ಕಚೇರಿ ತೆರೆಯಲು ಹೋದಾಗ ಅಲ್ಲಿನ ವೀರಶೈವರು ಪ್ರತಿಭಟಿಸಿದ್ದಾರೆ. ಬಳಿಕ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ. ಸಾವಿರಾರು ವರ್ಷಗಳಿಂದ ವೀರಶೈವ– ಲಿಂಗಾಯತರು ಒಂದಾಗಿ ನಡೆದಿದ್ದಾರೆ. ನಾವು ಒಗ್ಗಟ್ಟಿನಿಂದ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂದು ಹೇಳಿದರು.

ವೀರಶೈವ ಮಹಾಸಭಾದ ಉಪಾಧ್ಯಕ್ಷ ಅಥಣಿ ವೀರಣ್ಣ ಮಾತನಾಡಿ, ‘ಸಮಾಜಕ್ಕೆ ಸಂಕಷ್ಟ ಬಂದಾಗ ಶಾಮನೂರು ಶಿವಶಂಕರಪ್ಪ ಅವರು ಕಲ್ಲು ಬಂಡೆಯಂತೆ ಗಟ್ಟಿಯಾಗಿ ನಿಂತರು. ಅವರು ದಿಟ್ಟ ನಿಲುವು ತಳೆಯದೇ ಇದ್ದರೆ ಸಮಾಜ ಇಂದು ಒಡೆದು ಹೋಗುತ್ತಿತ್ತು. ಉತ್ತರ ಕರ್ನಾಟಕದ ಕೆಲವು ಶಾಸಕರಿಗೆ ವೀರಶೈವರು ತಕ್ಕ ಬುದ್ಧಿ ಕಲಿಸಿದ್ದಾರೆ. ಸಮಾಜದ ಮೇಲೆ ಕವಿದಿದ್ದ ಮೋಡ ಇಂದು ಸರಿದಿದೆ’ ಎಂದರು.

ಬಾಳೆಹೊನ್ನೂರಿನ ರಂಭಾಪುರಿ ಮಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಆವರಗೊಳ್ಳದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಅಕ್ಕಿಲಾಊರಿನ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಹೊನ್ನಾಳಿಯ ವಿಶ್ವೇಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.

ಜಾನಪದ ಕಲಾವಿದ ಯುಗಧರ್ಮ ರಾಮಣ್ಣ ಹಾಡಿದರು. ಪಾಲಿಕೆ ಸದಸ್ಯ ದಿನೇಶ್‌ ಶೆಟ್ಟಿ, ಆಯುಕ್ತ ಮಂಜುನಾಥ ಬಳ್ಳಾರಿ, ಉದ್ಯಮಿ ಮೋತಿ ಗುರುಪ್ರಸಾದ್‌, ಮಂಗಳ ಬಿ.ಪಿ. ಗಣೇಶಪ್ಪ, ಚನ್ನಮ್ಮ ಯೋಗಿಮಠ, ಶ್ರೀಕಾಂತ ಬಂಗೇರ ಅವರೂ ಹಾಜರಿದ್ದರು. ಶ್ರೀಮದ್ವೀರಶೈವ ಸದ್ಬೋಧನಾ ಸಂಸ್ಥೆಯ ಜಿಲ್ಲಾ ಘಟಕ ಅಧ್ಯಕ್ಷ ದೇವರಮನೆ ಶಿವಕುಮಾರ್‌ ಸ್ವಾಗತಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !