ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವು ರಸ್ತೆಗಳಲ್ಲ.. ‘ಗುಂಡಿ’ ಮಾರ್ಗಗಳು

ಹದಗೆಟ್ಟ ನಗರದ ರಸ್ತೆಗಳು l ಸವಾರರ ಸಂಕಷ್ಟ
Last Updated 8 ನವೆಂಬರ್ 2022, 7:07 IST
ಅಕ್ಷರ ಗಾತ್ರ

ದಾವಣಗೆರೆ: ರಸ್ತೆ ಮೇಲಿನ ಒಂದು ಗುಂಡಿ ತಪ್ಪಿಸಲು ಹೋದರೆ ಇನ್ನೊಂದು ಗುಂಡಿ ಸಿಗುತ್ತದೆ. ಇದರಿಂದಾಗಿ, ವಾಹನ ಸವಾರರು ಬಿದ್ದು ಗಾಯಗೊಳ್ಳುವುದು ಸಾಮಾನ್ಯ ಎಂಬಂತಾಗಿದೆ. ಒಟ್ಟಿನಲ್ಲಿ ರಸ್ತೆಯಲ್ಲಿ ಗುಂಡಿಗಳಿವೆಯೋ, ಗುಂಡಿಗಳಲ್ಲಿ ರಸ್ತೆ ಇದೆಯೋ ಎಂಬ ಗೊಂದಲ ಸಾರ್ವಜನಿಕರದ್ದು.

‘ಸ್ಮಾರ್ಟ್‌ ಸಿಟಿ’ ಹೆಗ್ಗಳಿಕೆಗೆ ಪಾತ್ರವಾಗಿರುವ ದಾವಣಗೆರೆಯಲ್ಲಿ ಮುಖ್ಯ ರಸ್ತೆ, ಪ್ರತಿ ಬಡಾವಣೆಯ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಹಲವು ವರ್ಷಗಳಿಂದ ದುರಸ್ತಿ ಕಾಣದ ರಸ್ತೆಗಳನ್ನು ಕಂಡು ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಜನರು ಆಕ್ರೋಶ ಹೊರಹಾಕುತ್ತಿದ್ದಾ‌ರೆ.

ಇಲ್ಲಿನ ಪಿ.ಬಿ. ರಸ್ತೆ, ಹದಡಿ ರಸ್ತೆಯ ವಿದ್ಯಾರ್ಥಿ ಭವನ ವೃತ್ತ, ಐಟಿಐ ಕಾಲೇಜು, ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದ ಎದುರಿನ ರಸ್ತೆ, ವಿನೋಬನಗರ, ಸರಸ್ವತಿ ನಗರ, ಪಿ.ಜೆ. ಬಡಾವಣೆ, 60 ಅಡಿ ರಸ್ತೆ, ರಿಂಗ್‌ ರಸ್ತೆ, ಎಸ್‌.ಎಸ್‌. ಲೇಔಟ್‌, ಚಿಗಟೇರಿ ಆಸ್ಪತ್ರೆ, ಹಳೆ ದಾವಣಗೆರೆ... ಹೀಗೆ ನಗರದ ಎಲ್ಲ ಪ್ರಮುಖ ರಸ್ತೆಗಳು ಗುಂಡಿಮಯವಾಗಿವೆ. ಇದಕ್ಕೆ ಪ್ರಮುಖ ವೃತ್ತವಾದ ‘ಗುಂಡಿ ವೃತ್ತವೂ ಹೊರತಲ್ಲ’ ಎಂಬ ಸ್ಥಿತಿ ಇದೆ.

ರಸ್ತೆಯಲ್ಲಿ ಉದ್ಭವವಾಗಿರುವ ಗುಂಡಿಗಳಿಂದಾಗಿ ವಾಹನ ಸವಾರರು ದರಾಗ ಸಂಚಾರವೇ ದುಸ್ತರವಾಗಿದೆ. ಎಚ್ಚರ ತಪ್ಪಿದರೆ ಬೀದ್ದು ಕೈ–ಕಾಲು ಮುರಿದುಕೊಳ್ಳುವುದು ಖಚಿತ ಎಂಬ ಭಯ ಬೈಕ್‌ ಸವಾರರನ್ನು ಕಾಡುತ್ತಿದೆ. ಗುಂಡಿಗಳನ್ನು ತಪ್ಪಿಸಲು ಬೈಕ್‌ ಹಾಗೂ ಆಟೊ ಸವಾರರು ಸರ್ಕಸ್‌ ಮಾಡಬೇಕಾದ ಸ್ಥಿತಿ ಇದೆ.

ಬೈಕ್‌ನಲ್ಲಿ ಗರ್ಭಿಣಿಯರನ್ನು ಕೂರಿಸಿಕೊಂಡು ಆಸ್ಪತ್ರೆಗೆ ಹೋಗಲೂ ಹೆದರುವ ಸ್ಥಿತಿ ಇದೆ. ಹಲವರು ಬಿದ್ದು ಆಸ್ಪತ್ರೆ ಸೇರಿದ್ದಾರೆ. ಆಸ್ಪತ್ರೆಗೆ ಹೋಗುವ ರೋಗಿಗಳು ಮಾರ್ಗದಲ್ಲೇ ಬಿದ್ದು ಗಾಯಕ್ಕೂ, ರೋಗಕ್ಕೂ ಚಿಕಿತ್ಸೆ ಪಡೆಯುವಂತಾಗಿದೆ.

‘ಒಂದು ಗುಂಡಿ ತಪ್ಪಿಸಿದರೆ ಮತ್ತೊಂದು ಗುಂಡಿ ಸಿಗುತ್ತದೆ. ಪ್ರಯಾಣಿಕರು ಹೇಗೆ ಆಟೊ ಓಡಿಸುತ್ತೀಯಾ ಎಂದು ನಮ್ಮನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಇಂತಹ ರಸ್ತೆಗಳಿಂದಾಗಿ ದುಡಿದ ದುಡ್ಡನ್ನೆಲ್ಲ ಆಟೊ ರಿಪೇರಿ, ಪೆಟ್ರೋಲ್‌ಗೆ ಸುರಿಯುವಂತಾಗಿದೆ’ ಎಂದು ಆಟೊ ಚಾಲಕ ತಿಪ್ಪೇಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಇದು ಅವರೊಬ್ಬರ ಮಾತಲ್ಲ. ಬಹುತೇಕ ಆಟೊ, ಬೈಕ್‌, ಕಾರು ಚಾಲಕರೂ ಇದನ್ನೇ ಹೇಳುತ್ತಾರೆ.

‘ಪಿ.ಬಿ. ರಸ್ತೆಯ ರಸ್ತೆಯೊಂದರಲ್ಲಿ ಗುಂಡಿ ಬಿದ್ದು ಹಲವು ವರ್ಷಗಳಾಗಿವೆ. ಇಲ್ಲಿ ಸಪ್ತಗಿರಿ ಶಾಲೆ, ಖಾಸಗಿ ಆಸ್ಪತ್ರೆ ಇದೆ. ಆಸ್ಪತ್ರೆಗೆ ಡಯಾಲಿಸಿಸ್‌ಗೆ ಹೋಗುವ ವೃದ್ಧರನ್ನು ಕೈಹಿಡಿದು ಗುಂಡಿ ದಾಟಿಸಬೇಕು. ಪ್ರತಿದಿನ ಇದೇ ಕೆಲಸವಾಗಿದೆ. ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ತಾಯಂದಿರು, ವಿದ್ಯಾರ್ಥಿಗಳು ಗುಂಡಿ ತಪ್ಪಿಸಲು ಪಡುವ ಪ್ರಯಾಸ ನೋಡಿದರೆ ಬೇಸರವಾಗುತ್ತದೆ’ ಎಂದರು ಗ್ಯಾರೇಜ್‌ ಮಾಲೀಕ ಮಹಮ್ಮದ್‌ ಇಲಿಯಾಸ್.

‘4 ವರ್ಷಗಳಿಂದ ರಸ್ತೆಯಲ್ಲಿನ ಗುಂಡಿ ಹಾಗೆಯೇ ಇದೆ. ಹಲವರು ಬಿದ್ದು ಗಾಯಗೊಂಡಿದ್ದಾರೆ. ರಾತ್ರಿ ವೇಳೆ ಅಪಾಯ ಖಚಿತ’ ಎಂದರು ವಿದ್ಯಾನಗರದ ಗಾಂಧಿ ಪ್ರತಿಮೆ ಬಳಿಯ ವ್ಯಾಪಾರಿ ರುದ್ರೇಶ್‌.

‘ಪಿ.ಬಿ. ರಸ್ತೆಯ ರಾಜನಹಳ್ಳಿ ಹನುಮಂತಪ್ಪ ಛತ್ರದ ಎದುರು ಸಾಲುಸಾಲು ಗುಂಡಿ ಬಿದ್ದಿವೆ. 10 ವರ್ಷಗಳಿಂದ ಇದೇ ಸ್ಥಿತಿ. ಸಿಗ್ನಲ್‌ ಬಿತ್ತು ಎಂದು ಗಾಡಿ ಓಡಿಸಿದರೆ ಗುಂಡಿಯಲ್ಲಿ ಬೀಳುವುದು ಖಚಿತ. ಸಂಚಾರ ದಟ್ಟಣೆ ಇದ್ದಾಗ ಇಲ್ಲಿ ಬರದೆ ಒಳಮಾರ್ಗದಲ್ಲಿ ಹೋಗುತ್ತೇನೆ’ ಎಂದರು ಬೈಕ್‌ ಸವಾರ ಕೌಶಿಕ್‌ ಕುಲಕರ್ಣಿ.

‘ಗುಂಡಿ ಸರ್ಕಲ್‌ ಬಳಿಯೇ ದೊಡ್ಡ ಗುಂಡಿಗಳಿವೆ. ಪ್ರಮುಖವಾದ ಇಂತಹ ಸ್ಥಳದಲ್ಲೇ ರಸ್ತೆ ಹೀಗಿದ್ದರೆ ಇನ್ನು ಬಡಾವಣೆಗಳ ಒಳರಸ್ತೆಗಳ ಸ್ಥಿತಿ ಹೇಳಬೇಕಿಲ್ಲ. ವಾಹನ ದಟ್ಟಣೆ ಇದ್ದಾಗ ಗುಂಡಿ ತಪ್ಪಿಸಲು ಹರಸಾಹಸ ಪಡಬೇಕು. ಸ್ವಲ್ಪ ನಿಧಾನ ಮಾಡಿದರೆ ಹಿಂದಿನ ವಾಹನದವರು ಬೈಯುತ್ತಾರೆ. ಮಹಿಳೆಯರು, ಮಕ್ಕಳನ್ನು ಕೂರಿಸಿಕೊಂಡು ಬೈಕ್‌ ಓಡಿಸುವುದು ಸವಾಲಿನ ಕೆಲಸ’ ಎಂದು ದೂರಿದರು ಜಾಕೀರ್‌ ಹುಸೇನ್‌.

ಮುಗಿಯದ ರಸ್ತೆ ಅಗೆಯುವ ಕೆಲಸ

ನಗರದ ಎಲ್ಲ ಕಡೆ ಜಲಸಿರಿ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಕಾಂಕ್ರೀಟ್‌ ರಸ್ತೆಯನ್ನು ಅಗೆಯಲಾಗುತ್ತಿದೆ. ಒಂದು ಬದಿ ಅಗೆದ 15 ದಿನಗಳಲ್ಲೇ ಮತ್ತೊಂದು ಬದಿ ಅಗೆಯಲಾಗುತ್ತದೆ. ಅಗೆದ ರಸ್ತೆಗೆ ಮಣ್ಣು ಹಾಕಿ ತೇಪೆ ಹಚ್ಚಲಾಗುತ್ತದೆ. ಮಳೆ ನೀರು ಹಾಗೂ ಕೊಳಚೆ ನೀರು ಹರಿದು ಮಣ್ಣು ಹೋಗಿ ಮತ್ತೆ ಗುಂಡಿ ಬೀಳುತ್ತಿದೆ. ಈ ರಸ್ತೆಯಲ್ಲಿ ಸಂಚರಿಸುವ ಬೈಕ್‌, ಆಟೊ, ಕಾರುಗಳು ಹಾಳಾಗುತ್ತಿವೆ.

ದುರಸ್ತಿ ಕಾರ್ಯ ಆರಂಭ

‘ಒಳ ರಸ್ತೆ ಸೇರಿ ನಗರದ ಎಲ್ಲ ಬಡಾವಣೆಗಳ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಟೆಂಡರ್‌ ಕರೆಯಲಾಗಿದೆ. ಪಿ.ಜೆ. ಬಡಾವಣೆಯಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಮಳೆ ಇದ್ದ ಕಾರಣ ದುರಸ್ತಿ ಕಾಮಗಾರಿ ವಿಳಂಬವಾಗಿದೆ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುವ ರಸ್ತೆಗಳನ್ನೂ ಅವರ ಸಹಕಾರದಲ್ಲಿ ದುರಸ್ತಿ ಮಾಡಲಾಗುವುದು’ ಎಂದು ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು ಸೇರಿ ಹಲವು ಅಧಿಕಾರಿಗಳು, ಜನಪ್ರತಿನಿಧಿಗಳು ವಾಣಿ ಹೊಂಡ ಶೋ ರೂಂ ಎದುರಿನ ರಸ್ತೆಯಲ್ಲಿ ಓಡಾಡುತ್ತಾರೆ. ಆದರೆ ಗುಂಡಿ ಮಾತ್ರ ದುರಸ್ತಿಯಾಗಿಲ್ಲ. ಹಲವರಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ.

ಮಹಮ್ಮದ್‌ ಇಲಿಯಾಸ್‌, ಗ್ಯಾರೇಜ್‌ ಮಾಲೀಕ

ಪ್ರತಿದಿನ ವಿನೋಬನಗರದಿಂದ ಡಿಆರ್‌ಎಂ ಕಾಲೇಜಿಗೆ ಸೇಂಟ್‌ ಥಾಮಸ್‌ ಚರ್ಚ್‌ ರಸ್ತೆಯಲ್ಲಿ ಬರುತ್ತೇನೆ. ಗುಂಡಿ ತಪ್ಪಿಸಲು ಹೋಗಿ ಬೈಕ್‌ನಿಂದ ಬಿದ್ದು ಗಾಯಗೊಂಡಿದ್ದೇನೆ. ಪಾಲಿಕೆ ಆಯುಕ್ತರ ನಿವಾಸ ಇಲ್ಲೇ ಇದೆ. ಆದರೂ ಪ್ರಯೋಜನವಿಲ್ಲ.

ಪವನ್‌ಕುಮಾರ್‌, ಬಿಎಸ್‌ಸಿ ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT