ಸೋಮವಾರ, ಆಗಸ್ಟ್ 15, 2022
20 °C
ಆರೋಗ್ಯ, ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ 30 ಅಂಗವಿಕಲರಿಗೆ ಇಂದು ಗೌರವ

ಇವರು ಅಂಗವಿಕಲ ‘ಕೋವಿಡ್ ವಾರಿಯರ್‌’ಗಳು

ಡಿ.ಕೆ. ಬಸವರಾಜು Updated:

ಅಕ್ಷರ ಗಾತ್ರ : | |

ದಾವಣಗೆರೆ: ಸಾಧಿಸುವ ಛಲ ಎಂಥವರಲ್ಲೂ ಕಿಚ್ಚನ್ನು ಹಚ್ಚಿಸುತ್ತದೆ. ಸಾಧಿಸಬೇಕೆಂಬ ಮನಸ್ಸಿದ್ದರೆ ಅಂಗವೈಕಲ್ಯವೂ ತಡೆಯಾಗುವುದಿಲ್ಲ ಎಂಬುದನ್ನು ತೋರಿಸಿದ್ದಾರೆ ಇವರು. ಕೋವಿಡ್ ಸಮಯದಲ್ಲೂ ಆರೋಗ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿದ ಅಂತಹ 17 ಮಂದಿಯನ್ನು  ವಾರಿಯರ್‌ಗಳಾಗಿ ಗುರುತಿಸಲಾಗಿದೆ. ಅಲ್ಲದೇ ಇತರೆ ರೈತರಿಗೆ ತಾವೇನೂ ಯಾವುದರಲ್ಲೂ ಕಡಿಮೆ ಇಲ್ಲ ಎಂಬುದನ್ನು ಅಂಗವಿಕಲ ರೈತರು ನಿರೂಪಿಸಿದ್ದಾರೆ.

23 ಗುಂಟೆಯಲ್ಲೇ ಹಲವು ಬೆಳೆ: 8–10 ಎಕರೆ ಜಮೀನು ಇರುವ ದೊಡ್ಡ ರೈತರು ಕೃಷಿಯಲ್ಲಿ ಕೆಲವೊಮ್ಮೆ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ತೆಗೆಯುವಲ್ಲಿ ವಿಫಲರಾಗುತ್ತಾರೆ. ಆದರೆ, ಹರಿಹರ ತಾಲ್ಲೂಕಿನ ಮಲೇಬೆನ್ನೂರು ಹೋಬಳಿಯ ಹಾಲಿವಾಣದ ರೈತ ಎಂ.ಕೆ.ಆಂಜನೇಯ ಅವರು 23 ಗುಂಟೆಗಳಲ್ಲಿ ಅನೇಕ ಬೆಳೆಗಳನ್ನು ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ. ಜಮೀನಿನ ತಗ್ಗು ತುಂಬಲು ಕೊಮಾರನಹಳ್ಳಿ ಕೆರೆಯಿಂದ 1,500 ಟ್ರ್ಯಾಕ್ಟರ್ ಲೋಡ್  ಮಣ್ಣು ಹಾಕಿಸಿ ಅಡಿಕೆ, ಬಾಳೆ ತರಕಾರಿ ಕೃಷಿ ಮಾಡಿ ಯಶಸ್ಸು ಕಂಡಿದ್ದಾರೆ. ಟೊಮೆಟೊ, ನಿಂಬೆ, ಕರಿಬೇವು, ಮುಳಗಾಯಿ, ಬೀನ್ಸ್, ಬೀಟ್‌ರೂಟ್ ಬೆಳೆದು ಯಶಸ್ಸು ಕಂಡಿದ್ದಾರೆ.

ರೈತರಿಗೆ ಭಾರವಾಗುವ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳನ್ನು ಬಳಸದೇ ಜೀವಾಮೃತ ಬಳಸಿ ಸಾವಯವ ಕೃಷಿ ಮಾಡಿದ್ದಾರೆ. ಕೃಷಿಯ ಜೊತೆಗೆ ಅಂಗವಿಕಲರ ಸಂಘ, ಭಾರತ್ ನಿರ್ಮಾಣ್ ಸಂಘದಲ್ಲೂ ಇವರು ತೊಡಗಿಸಿಕೊಂಡಿದ್ದಾರೆ. 2013ರಲ್ಲಿ ಅಸ್ಸಾಂ ರಾಜ್ಯಕ್ಕೆ ಅಧ್ಯಯನ ಪ್ರವಾಸ ಮಾಡಿ ಬಂದಿದ್ದಾರೆ.

‘ಎರಡು ಗುಂಟೆ ಜಮೀನಿನಲ್ಲಿ 3 ಕ್ವಿಂಟಲ್ ಚೆಂಡು ಹೂ ಬೆಳೆದು ಆಯುಧಪೂಜೆ ಹಾಗೂ ದೀಪಾವಳಿ ಹಬ್ಬಗಳಲ್ಲಿ ಮಾರಾಟ ಮಾಡಿದೆ. ಒಳ್ಳೆಯ ಲಾಭವೂ ಸಿಕ್ಕಿತು’ ಎನ್ನುತ್ತಾರೆ ರೈತ ಆಂಜನೇಯ.

ಮತ್ತೊಬ್ಬ ಸಾಧಕ ಚನ್ನಗಿರಿ ತಾಲ್ಲೂಕಿನ ಇನಾಯತ್ ಉಲ್ಲಾ ಅವರು ಕಾಲುಗಳು ಸ್ವಾಧೀನ ಇಲ್ಲದಿದ್ದರೂ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇರುವ ಮೂರೂವರೆ ಎಕರೆಯಲ್ಲಿ ಅಡಿಕೆ, ಗುಲಾಬಿ ಹೂ ಬೆಳೆದಿದ್ದಾರೆ. ಅಲ್ಲದೇ ಕೋಳಿ ಸಾಕಣೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಜಗಳೂರು ತಾಲ್ಲೂಕು ಪಲ್ಲಾಗಟ್ಟೆಯ ಕೆ.ಪಿ.ಪರಮೇಶ್ವರಪ್ಪ ಅವರು ಮೆಕ್ಕೆಜೋಳ ಹಾಗೂ ತರಕಾರಿಗಳನ್ನು ಬೆಳೆದು ಸಾಧನೆ ಮಾಡಿದ್ದಾರೆ.

ಕೋವಿಡ್ ವಾರಿಯರ್‌ಗಳು: ಅಂಗವೈಕಲ್ಯವನ್ನು ಮರೆತು ಕೊರೊನಾ ಸಮಯದಲ್ಲಿ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಅಂಗವಿಕಲ ಕೋವಿಡ್‌ ವಾರಿಯರ್‌ಗಳು ಕೆಲಸ ಮಾಡಿದ್ದಾರೆ. ಪ್ರಯೋಗ ತಂತ್ರಜ್ಞರು, ಕಿರಿಯ ಆರೋಗ್ಯ ಸಹಾಯಕರು, ಲಿಫ್ಟ್ ಆಪರೇಟರ್, ವಿಆರ್‌ಡಬ್ಲ್ಯುಗಳು ಹಾಗೂ ‘ಡಿ’ ಗ್ರೂಪ್ ನೌಕರರು ಸೇರಿದ್ದಾರೆ. ಜಿಲ್ಲಾಡಳಿತದಿಂದ ಗುರುವಾರ ನಡೆಯುವ ಅಂಗವಿಕಲರ ದಿನಾಚರಣೆಯಲ್ಲಿ ಇವರನ್ನು ಸನ್ಮಾನಿಸಲಾಗುವುದು.

ಪ್ರಯೋಗಾಲಯ ತಂತ್ರಜ್ಞರು: ಹುಚ್ಚವ್ವನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಯಶವಂತ್ ಇ.ಎಂ, ನೇರ್ಲಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಮಾಲತೇಶ್ ಎಚ್.ಬಿ, ಆಜಾದ್‌ನಗರದ ಸತೀಶ್ ಕುಮಾರ್, ಮಲೇಬೆನ್ನೂರು ಕಾಟಲಿಂಗಪ್ಪ, ಹರಿಹರದ ಉಮ್ಲಾನಾಯ್ಕ.

ಕಿರಿಯ ಆರೋಗ್ಯ ಸಹಾಯಕರು: ಹದಡಿ ಪ್ರಾಥಮಿಕ ಕೇಂದ್ರದ ಮಹದೇವಯ್ಯ ಎಂ.ಎಸ್, ಧೀರೇಂದ್ರಕುಮಾರ್, ತೋಳಹುಣಸೆಯ ಸುರೇಶ್, ಆನಗೋಡಿನ ಅಂಜನಪ್ಪ, ಸಿ.ಜಿ. ಆಸ್ಪತ್ರೆಯ ರೇಷ್ಮಾ, ಪಿ.ರುಸ್ತುಂ, ಬಿದರಕೆರೆಯ ಪ್ರಭು, ನಲ್ಲೂರಿನ ಕೆ.ಎಚ್.ಚಂದ್ರಪ್ಪ, ಕುಳಗಟ್ಟೆಯ ವಿ.ಆರ್.ಡಬ್ಲ್ಯು ಸತೀಶ್‌ಕುಮಾರ್, ಸಿ.ಜಿ. ಆಸ್ಪತ್ರೆಯ ಲಿಫ್ಟ್ ಆಪರೇಟರ್ ಶಿವಕುಮಾರ್. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.