ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಯನ್ನು ವೈಜ್ಞಾನಿಕಗೊಳಿಸಲು ಚಿಂತಿಸಿ

‘ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಹಬ್ಬದಲ್ಲಿ ಶಾಸಕ ಎಸ್‌.ಎ.ರವೀಂದ್ರನಾಥ್ ಸಲಹೆ
Last Updated 27 ಡಿಸೆಂಬರ್ 2019, 13:36 IST
ಅಕ್ಷರ ಗಾತ್ರ

ದಾವಣಗೆರೆ: ವಿಜ್ಞಾನ ಎಂದರೆ ಹೊಸ ಹೊಸ ಸಂಶೋಧನೆಗಳಲ್ಲಿ ತೊಡಗುವುದು ಹಾಗೂ ವೈಜ್ಞಾನಿಕ ಚಿಂತನೆ ಮಾಡುವುದಾಗಿದ್ದು, ಕೃಷಿಯನ್ನೂ ವೈಜ್ಞಾನಿಕವಾಗಿ ಬೆಳೆಸುವ ಮೂಲಕ ಮಕ್ಕಳು ಉತ್ತಮ ವಿಜ್ಞಾನಿಗಳಾಗಿ ಹೊರಹೊಮ್ಮಬೇಕು ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಿಟುವಳ್ಳಿಯ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ‘ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಹಬ್ಬ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ‘ಪ್ರಸಕ್ತ ಮಾಧ್ಯಮಗಳ ಮೂಲಕ ವೈಜ್ಞಾನಿಕ ವಿಷಯಗಳು ಮಕ್ಕಳನ್ನು ತಲುಪುತ್ತಿವೆ. ಮಕ್ಕಳು ಆಧಾರಸಹಿತವಾಗಿ ಚರ್ಚಿಸಿ ವಿಜ್ಞಾನವನ್ನು ತಿಳಿದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ನಮ್ಮಲ್ಲಿ ಹಸಿರು ಕಡಿಮೆಯಾಗುತ್ತಿದೆ. ನಗರಗಳಲ್ಲಿ ಪಾರ್ಕ್‍ಗಳೂ ಮಾಯವಾಗುತ್ತಿವೆ. ಕಬ್ಬನ್‍ಪಾರ್ಕ್ ಮತ್ತು ಲಾಲ್‍ಭಾಗ್‍ಗಳನ್ನು ನೋಡಿ ಪಾರ್ಕ್ ಉಳಿಸುವುದನ್ನು ಕಲಿಯಬೇಕು. ನಿಟುವಳ್ಳಿಯಲ್ಲಿಯೂ ಉತ್ತಮ ಪಾರ್ಕ್ ಇದ್ದು ಉತ್ತಮವಾಗಿ ನಿರ್ವಹಿಸುವ ಮೂಲಕ ಉಳಿಸಿಕೊಳ್ಳಬೇಕು. ಇಂದು ಎಲ್ಲ ಪಾರ್ಕ್‍ಗಳು ಸೈಟ್‍ಗಳಾಗುತ್ತಿವೆ. ಹೀಗಾಗದಂತೆ ನಿಗಾ ವಹಿಸಿ ಪರಿಸರ ನಾಶವಾಗದಂತೆ ಎಚ್ಚರ ವಹಿಸಿ ಕೆಲಸ ಮಾಡಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಅಂಧಕಾರವನ್ನು ಅಳಿಸಿ ಬೆಳಕು ಮೂಡಿಸುವಲ್ಲಿ ವಿಜ್ಞಾನದ ಪಾತ್ರ ದೊಡ್ಡದು. ಈ ನಿಟ್ಟಿನಲ್ಲಿ ವೈಜ್ಞಾನಿಕ ವಿಚಾರಗಳಲ್ಲಿ ಮಕ್ಕಳು ಆಸಕ್ತಿಯಿಂದ ಪಾಲ್ಗೊಳ್ಳಲು ಇಂತಹ ಮಕ್ಕಳ ವಿಜ್ಞಾನ ಹಬ್ಬ ಉತ್ತಮ ಪ್ರೇರಣೆಯಾಗಿದೆ. ವೈಜ್ಞಾನಿಕ ಹಬ್ಬಗಳು ಮಕ್ಕಳ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಿವೆ’ ಎಂದು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ(ಅಭಿವೃದ್ದಿ) ಎಚ್.ಕೆ. ಲಿಂಗರಾಜ್ ಮಾತನಾಡಿ, ‘ವೈಜ್ಞಾನಿಕ ಕಲಿಕೆಗೆ ಹಬ್ಬ ಎಂದು ಹೆಸರಿಸಿರುವುದು ಅತ್ಯಂತ ಸೂಕ್ತವಾಗಿದೆ. ಹಿಂದೆ ನಮ್ಮ ದೇಶವನ್ನು ಅತ್ಯಂತ ಹಿಂದುಳಿದ ಬಡ ದೇಶವೆಂದು ಪರಿಗಣಿಸಲಾಗುತ್ತಿತ್ತು. ಆದರೆ ಇಂದು ಶಿಕ್ಷಣದ ಗುಣಮಟ್ಟ ಹೆಚ್ಚುತ್ತಿದ್ದು ದೇಶ ಅಭಿವೃದ್ದಿಯತ್ತ ಸಾಗಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್ವರ, ಸದಸ್ಯೆ ಸಾಕಮ್ಮ, ಮಹಾನಗರಪಾಲಿಕೆ ಸದಸ್ಯೆ ಉಮಾ ಪ್ರಕಾಶ್, ಎಸ್.ಡಿ.ಎಂ.ಸಿ ಪ್ರೌಢಶಾಲಾ ಅಧ್ಯಕ್ಷ ಎಸ್.ಎಂ. ರಾಜು, ಎಸ್.ಡಿ.ಎಂ.ಸಿ ಪ್ರಾಥಮಿಕ ಶಾಲಾ ಅಧ್ಯಕ್ಷ ಜಮೀಲ್ ಅಹಮದ್, ದಕ್ಷಿಣ ಬಿಇಒ ಸಿದ್ದಪ್ಪ, ಬಿಆರ್‍ಸಿ ಉಮಾ, ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ದುರುಗಪ್ಪ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಚಂದ್ರಪ್ಪ, ತಿಪ್ಪೇಸ್ವಾಮಿ, ಮಲ್ಲಿಕಾರ್ಜುನ, ರಂಗನಾಥ ಹವಾಲ್ದಾರ್, ವಕೀಲ ಪ್ರಕಾಶ್ ಇದ್ದರು. ವಿಜ್ಞಾನ ಶಿಕ್ಷಕ ಬಸವರಾಜ್ ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT