ದಾವಣಗೆರೆಯಲ್ಲಿ ತಾತ್ಕಾಲಿಕ ಜಾಹೀರಾತು ಫಲಕ ನಿಷೇಧಕ್ಕೆ ಚಿಂತನೆ

7
ನಗರದಲ್ಲಿ ಫ್ಲೆಕ್ಸ್‌, ಬ್ಯಾನರ್‌ಗಳ ಅಬ್ಬರಕ್ಕೆ ಕಡಿವಾಣ ಹಾಕಿದ ಮಹಾನಗರ ಪಾಲಿಕೆ

ದಾವಣಗೆರೆಯಲ್ಲಿ ತಾತ್ಕಾಲಿಕ ಜಾಹೀರಾತು ಫಲಕ ನಿಷೇಧಕ್ಕೆ ಚಿಂತನೆ

Published:
Updated:
Deccan Herald

ದಾವಣಗೆರೆ: ಮನಬಂದಂತೆ ಹಾಕುತ್ತಿದ್ದ ಹೋರ್ಡಿಂಗ್‌, ಫೆಕ್ಸ್‌ಗಳಿಗೆ ಈಗಾಗಲೇ ಕಡಿವಾಣ ಹಾಕಿರುವ ಮಹಾನಗರ ಪಾಲಿಕೆಯು, ನಗರದ ಅಂದವನ್ನು ಹಾಳು ಮಾಡುತ್ತಿರುವ ತಾತ್ಕಾಲಿಕ ಫ್ಲೆಕ್ಸ್‌, ಬ್ಯಾನರ್‌ಗಳನ್ನು ಹಾಕುವುದನ್ನು ನಿಷೇಧಿಸಲು ಚಿಂತನೆ ನಡೆಸಿದೆ. 

ಪಾಲಿಕೆಯಿಂದ ಪರವಾನಗಿ ಪಡೆಯದೇ ನಗರದ ಪ್ರಮುಖ ಸ್ಥಳಗಳಲ್ಲಿ ಫ್ಲೆಕ್ಸ್‌, ಬ್ಯಾನರ್‌ಗಳನ್ನು ಹಾಕಿ ಪುಕ್ಕಟೆ ಪ್ರಚಾರ ಗಿಟ್ಟಿಸಲಾಗುತ್ತಿತ್ತು. ಪಾಲಿಕೆಯ ಅಧಿಕಾರಿಗಳೂ ಈ ಹಿಂದೆ ‘ಜಾಣ ಕುರುಡು’ ಪ್ರದರ್ಶಿಸುತ್ತಿದ್ದರು. ಮೂರ್ನಾಲ್ಕು ತಿಂಗಳಿನಿಂದ ಎಚ್ಚೆತ್ತುಕೊಂಡ ಪಾಲಿಕೆಯ ಅಧಿಕಾರಿಗಳು ಚುರುಕಿನಿಂದ ನಗರದಾದ್ಯಂತ ತೆರವು ಕಾರ್ಯಾಚರಣೆಗಳನ್ನು ನಡೆಸಿ ಅವುಗಳ ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ. ಅನಧಿಕೃತ ಫೆಕ್ಸ್‌ಗಳಿಗೆ ಕಡಿವಾಣ ಹಾಕಿರುವುದರ ಜೊತೆಗೆ ಆದಾಯವನ್ನೂ ಹೆಚ್ಚಿಸಿಕೊಂಡಿದ್ದಾರೆ.

ಬ್ಯಾನರ್‌ಗಳಿಂದ ಬಂತು ಆದಾಯ:

ಈ ಹಿಂದೆ ನಗರದಲ್ಲಿ ಸಭೆ– ಸಮಾರಂಭ; ಹಬ್ಬ, ಜಯಂತಿಗಳು ಬಂತೆಂದರೆ ಎಗ್ಗಿಲ್ಲದೆ ಫ್ಲೆಕ್ಸ್‌, ಬ್ಯಾನರ್‌ಗಳು ರಾರಾಜಿಸುತ್ತಿದ್ದವು. ಜಾಹೀರಾತು ಫಲಕಗಳ ನಿರ್ವಹಣೆಯನ್ನು ಆಗ ಮಾಡುತ್ತಿದ್ದ ಆರೋಗ್ಯ ಶಾಖೆಯು ಅನಧಿಕೃತ ಫೆಕ್ಸ್‌ಗಳ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಕಳೆದ ಜನವರಿಯಿಂದ ಈ ವಿಭಾಗದ ಜವಾಬ್ದಾರಿಯನ್ನು ಕಂದಾಯ ಶಾಖೆಗೆ ಹಸ್ತಾಂತರಿಸಲಾಗಿದೆ. ಆ ಬಳಿಕ ಅನಧಿಕೃತ ಫಲಕಗಳಿಗೆ ಕಡಿವಾಣ ಹಾಕಿ ಆದಾಯ ಹೆಚ್ಚಿಸಿಕೊಳ್ಳಲು ಪಾಲಿಕೆ ಕ್ರಮ ಕೈಗೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ.

ವಿಶೇಷವಾಗಿ ಹಬ್ಬದ ಸಂದರ್ಭಗಳಲ್ಲಿ ನಗರದ ಕೆಲವು ಪ್ರಮುಖ ಜವಳಿ ಮಳಿಗೆಗಳು ‘ಡಬಲ್‌ ಡಿಸ್ಕೌಂಟ್‌’ಗಳನ್ನು ನೀಡಿ ಗ್ರಾಹಕರನ್ನು ಆಕರ್ಷಿಸುತ್ತಿವೆ. ಜೊತೆಗೆ ಎಲೆಕ್ಟ್ರಾನಿಕ್ಸ್‌ ಮಳಿಗೆಗಳೂ ಪೈಪೋಟಿಗೆ ಬಿದ್ದು ಬ್ಯಾನರ್‌ಗಳನ್ನು ಅಳವಡಿಸುತ್ತಿದ್ದವು. ‘ಡಬಲ್‌ ಡಿಸ್ಕೌಂಟ್‌’ ಸೇರಿ ವಿಶೇಷ ರಿಯಾಯಿತಿ ಕುರಿತ ಬ್ಯಾನರ್‌, ಫ್ಲೆಕ್ಸ್‌ಗಳು ನಗರದ ಎಲ್ಲೆಂದರೆಲ್ಲಿ ರಾರಾಜಿಸುತ್ತಿದ್ದವು. ಇದೀಗ ಪಾಲಿಕೆ ದಿಟ್ಟ ಕ್ರಮ ಕೈಗೊಂಡಿರುವುದರಿಂದ ಬಹುತೇಕ ಎಲ್ಲ ಮಳಿಗೆಯವರೂ ಈ ಬಾರಿ ಪರವಾನಗಿ ಪಡೆದು ತಾತ್ಕಾಲಿಕ ಜಾಹೀರಾತು ಫಲಕಗಳನ್ನು ಹಾಕುತ್ತಿರುವುದು ಕಂಡು ಬಂದಿದೆ. ಈ ಬಾರಿ ಜುಲೈ ತಿಂಗಳಲ್ಲಿ 26 ಅರ್ಜಿಗಳು ಬಂದಿದ್ದು, ₹ 3.29 ಲಕ್ಷ ಶುಲ್ಕ ಸಂಗ್ರಹಿಸಲಾಗಿದೆ. ಇದರಲ್ಲಿ ದೊಡ್ಡ ಪಾಲು ‘ಡಿಸ್ಕೌಂಟ್‌’ಗಳ ಫಲಕಗಳದ್ದೇ ಆಗಿದೆ ಎನ್ನಲಾಗಿದೆ.

ಫ್ಲೆಕ್ಸ್‌ ನಿಷೇಧಕ್ಕೆ ಪ್ರಸ್ತಾಪ

‘ತಾತ್ಕಾಲಿಕ ಫ್ಲೆಕ್ಸ್‌, ಬ್ಯಾನರ್‌ಗಳನ್ನು ಹಾಕುವುದಕ್ಕೆ ಬೆಂಗಳೂರಿನಲ್ಲಿ ಹೈಕೋರ್ಟ್‌ ನಿಷೇಧ ಹೇರಿದೆ. ಹೈಕೋರ್ಟ್‌ ಮಾರ್ಗಸೂಚಿಯಂತೆ ಬೆಂಗಳೂರಿನ ಮಾದರಿಯಲ್ಲಿ ದಾವಣಗೆರೆ ನಗರದಲ್ಲೂ ತಾತ್ಕಾಲಿಕ ಫೆಕ್ಸ್‌, ಬ್ಯಾನರ್‌ಗಳನ್ನು ಹಾಕುವುದಕ್ಕೆ ನಿಷೇಧ ಹೇರುವ ಬಗ್ಗೆ ಚಿಂತನೆ ನಡೆಸಲಾಗಿದೆ. ಈ ವಿಷಯವನ್ನು ಮುಂಬರುವ ಪರಿಷತ್‌ ಸಭೆಯಲ್ಲಿ ಮಂಡಿಸಿ ಸದಸ್ಯರ ಜೊತೆಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮೂವರಿಗೂ ನೋಟಿಸ್‌ ನೀಡಲು ಸಿದ್ಧತೆ

‘ಅನಧಿಕೃತ ಜಾಹೀರಾತು ಫಲಕಗಳಿಗೆ ಕಡಿವಾಣ ಹಾಕಲು ಈಗಾಗಲೇ ನಗರದ ಫೆಕ್ಸ್‌ ಹಾಗೂ ಬ್ಯಾನರ್‌ ಮುದ್ರಣ ಮಾಡುವ ಪ್ರಿಂಟಿಂಗ್‌ ಪ್ರೆಸ್‌ ಮಾಲೀಕರನ್ನು ಕರೆದು ಸಭೆ ನಡೆಸಲಾಗಿದೆ. ಪಾಲಿಕೆಯ ಪರವಾನಗಿ ಪತ್ರವನ್ನು ತಂದವರಿಗೆ ಮಾತ್ರ ಮುದ್ರಣ ಮಾಡಿಕೊಡುವಂತೆ ಸೂಚಿಸಲಾಗಿದೆ. ಫೆಕ್ಸ್‌ಗಳನ್ನು ಕಟ್ಟಿಕೊಡುತ್ತಿರುವ ಬಂಬೂ ಡೀಲರ್ಸ್‌ಗಳ ಸಭೆಯನ್ನು ಶೀಘ್ರದಲ್ಲೇ ಕರೆದು ಈ ಬಗ್ಗೆ ಅವರಿಗೂ ಸೂಚನೆ ನೀಡಲಾಗುವುದು’ ಎಂದು ಪಾಲಿಕೆ ಉಪ ಆಯುಕ್ತ (ಕಂದಾಯ) ರವೀಂದ್ರ ಮಲ್ಲಾಪುರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಇನ್ನು ಮುಂದೆ ಅನಧಿಕೃತ ಫೆಕ್ಸ್‌ಗಳು ಕಂಡು ಬಂದರೆ, ಅದನ್ನು ಹಾಕಿದ ಮಾಲೀಕರು, ಮುದ್ರಿಸಿದ ಪ್ರಿಂಟಿಂಗ್‌ ಪ್ರೆಸ್‌ ಹಾಗೂ ಅದನ್ನು ಅಳವಡಿಸಿದ ಬಂಬೂ ಡೀಲರ್‌ಗಳಿಗೆ ನೋಟಿಸ್‌ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದೂ ಅವರು ತಿಳಿಸಿದರು.

ವಾರದಲ್ಲಿ ಎರಡು ದಿನ ಕಾರ್ಯಾಚರಣೆ

ಅನಧಿಕೃತ ಫಲಕಗಳನ್ನು ತೆರವುಗೊಳಿಸಲು ಕಂದಾಯ ಶಾಖೆಯು ಮಂಗಳವಾರ ಹಾಗೂ ಶುಕ್ರವಾರವನ್ನು ನಿಗದಿಗೊಳಿಸಿದೆ. ಈ ಎರಡು ದಿನಗಳಂದು ಸಿಬ್ಬಂದಿ ನಗರದ ವಿವಿಧೆಡೆ ಕಾರ್ಯಾರಚರಣೆ ನಡೆಸುತ್ತಿದ್ದಾರೆ. ಇದರ ಪರಿಣಾಮ ನಗರದಲ್ಲಿ ಈಗ ಅನಧಿಕೃತ ಫೆಕ್ಸ್‌ಗಳಿಗೆ ಕಡಿವಾಣ ಬಿದ್ದಿದೆ.

‘ಹಿಂದೆ ತಾತ್ಕಾಲಿಕ ಜಾಹೀರಾತು ಫಲಕಗಳನ್ನು 15 ದಿನ ಹಾಕಲು ಅವಕಾಶ ನೀಡಲಾಗುತ್ತಿತ್ತು. ಕ್ರಮೇಣ ಇದನ್ನು ಎಂಟು ದಿನಗಳಿಗೆ ಇಳಿಸಲಾಯಿತು. ಸೆಪ್ಟೆಂಬರ್‌ನಿಂದ ಕೇವಲ ಐದು ದಿನಗಳ ಕಾಲ ಫೆಕ್ಸ್‌ಗಳನ್ನು ಹಾಕಲು ಪರವಾನಗಿ ನೀಡಲಾಗುತ್ತಿದೆ. 15 ದಿನಗಳಿಗೆ ನಿಗದಿಗೊಳಿಸಿದ ಶುಲ್ಕವನ್ನೇ ಐದು ದಿನಗಳಿಗೂ ಭರಿಸಬೇಕಾಗಿದ್ದರಿಂದ ಫ್ಲೆಕ್ಸ್‌ ಅಳವಡಿಸುವವರ ಸಂಖ್ಯೆಯೂ ಸ್ವಲ್ಪ ಕಡಿಮೆಯಾಗಿದೆ’ ಎಂದು ರವೀಂದ್ರ ಮಲ್ಲಾಪುರ ಹೇಳಿದರು.

ಪರಿಸರಕ್ಕೆ ಹಾನಿಕಾರ ಫ್ಲೆಕ್ಸ್‌ ನಿಷೇಧಿಸಲಿ

ದಾವಣಗೆರೆಯಲ್ಲಿ ಹೆಚ್ಚಿನ ಪಾಲು ಪ್ಲಾಸ್ಟಿಕ್‌ ಫ್ಲೆಕ್ಸ್‌ಗಳೇ ಬಳಕೆಯಾಗುತ್ತಿದ್ದು, ಇದು ಪರಿಸರಕ್ಕೆ ಹಾನಿಕಾರವಾಗಿದೆ. ಹೀಗಾಗಿ ಪ್ಲಾಸ್ಟಿಕ್‌ ಫ್ಲೆಕ್ಸ್‌ಗಳನ್ನು ಮಾಡುವ ಪ್ರಿಂಟಿಂಗ್‌ ಪ್ರೆಸ್‌ಗೆ ದಂಡ ವಿಧಿಸಬೇಕು. ‘ಸ್ಮಾರ್ಟ್‌ ಸಿಟಿ’ ಯೋಜನೆಗೆ ಆಯ್ಕೆಯಾಗಿರುವ ದಾವಣಗೆರೆಯಲ್ಲಿ ಫ್ಲೆಕ್‌ ಹಾಕುವುದನ್ನು ಸಂಪೂರ್ಣವಾಗಿ ನಿಷೇಧಿಸಿದರೆ ಬಹಳ ಒಳ್ಳೆಯದು. ಕೊನೆ ಪಕ್ಷ ಪರಿಸರಕ್ಕೆ ಹಾನಿ ಉಂಟುಮಾಡುವ ಪ್ಲಾಸ್ಟಿಕ್‌ ಫ್ಲೆಕ್ಸ್‌– ಬ್ಯಾನರ್‌ಗಳಿಗಾದರೂ ಕಡಿವಾಣ ಹಾಕಬೇಕು ಎಂದು ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಗಿರೀಶ್‌ ದೇವರಮನಿ ಒತ್ತಾಯಿಸಿದ್ದಾರೆ.

ಕಾಯಂ ಹೋರ್ಡಿಂಗ್‌ಗಳ ಮಾಹಿತಿ

* 40 ನಗರದಲ್ಲಿ ಜಾಹೀರಾತು ಫಲಕ ಹಾಕುತ್ತಿರುವ ಏಜನ್ಸಿಗಳು

* 196 ನಗರದಲ್ಲಿ ಹಾಕಿರುವ ಕಾಯಂ ಹೋರ್ಡಿಂಗ್‌ಗಳು

* ₹ 69.60 ಲಕ್ಷ ಪ್ರಸಕ್ತ ಸಾಲಿನಲ್ಲಿ ಕಾಯಂ ಹೋರ್ಡಿಂಗ್‌ಗಳಿಂದ ನಿರೀಕ್ಷಿಸಿದ ಆದಾಯ

* ₹ 14.84 ಲಕ್ಷ ಕಾಯಂ ಹೋರ್ಡಿಂಗ್‌ಗಳಿಂದ ಸಂಗ್ರಹಿಸಿದ ಶುಲ್ಕ

ತಾತ್ಕಾಲಿಕ ಜಾಹೀರಾತು ಫಲಕಗಳ ವಿವರ

ತಿಂಗಳು→ಅರ್ಜಿ ಸಂಖ್ಯೆ→ಆದಾಯ (₹ ಗಳಲ್ಲಿ)

ಏಪ್ರಿಲ್‌→27→1,47,250

ಮೇ→22→63,778

ಜೂನ್‌→19→45,595

ಜುಲೈ→26→3,29,602

ಆಗಸ್ಟ್‌→18→63,254

ಒಟ್ಟು→112→6,49,479

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !