ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಗ್ರ ಪ್ರವಾಸಿ ನೀತಿ ತರಲು ಚಿಂತನೆ

ಪ್ರವಾಸೋದ್ಯಮ, ಕನ್ನಡ, ಸಂಸ್ಕೃತಿ ಇಲಾಖೆಯ ಪ್ರಗತಿ ಪರಿಶೀಲನಾ ಕಾರ್ಯಕ್ರಮದಲ್ಲಿ ಸಚಿವ ಸಿ.ಟಿ. ರವಿ
Last Updated 24 ಸೆಪ್ಟೆಂಬರ್ 2019, 13:19 IST
ಅಕ್ಷರ ಗಾತ್ರ

ದಾವಣಗೆರೆ: ಪ್ರವಾಸಿಕೇಂದ್ರಗಳನ್ನು ಇನ್ನಷ್ಟು ಬೆಳೆಸಿ, ಅದಕ್ಕೆ ಸಾಂಸ್ಕೃತಿ ಸಂಬಂಧ ಬೆಸೆದು ಸಮಗ್ರ ಪ್ರವಾಸಿ ನೀತಿ ತರಬೇಕು ಎಂಬ ಚಿಂತನೆ ಇದೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಮೂರು ವಿಶ್ವ ಪಾರಂಪರಿಕ ಸ್ಥಳಗಳಿವೆ. 320 ಕಿಲೋಮೀಟರ್‌ ಉದ್ದದ ಕಡಲ ಕಿನಾರೆ ಇದೆ. 5 ರಾಷ್ಟ್ರೀಯ ಉದ್ಯಾನಗಳಿವೆ. 30 ವನ್ಯಜೀವಿ ಅಭಯಾರಣ್ಯ, 17 ಗಿರಿಗಳು, ಎರಡು ವಿಶ್ವಪ್ರಸಿದ್ಧ ಜಲಪಾತ ಸೇರಿ 40 ಜಲಪಾತಗಳು ನಮ್ಮಲ್ಲಿವೆ. ಜಿಎಸ್‌ಟಿಗೆ ರಾಷ್ಟ್ರದ ಸರಾಸರಿ ಕೊಡುಗೆ ಶೇ 10 ಇದ್ದರೆ, ಕರ್ನಾಟಕದಲ್ಲಿ ಶೇ 15 ಇದೆ. ಇಷ್ಟೊಂದು ವೈವಿಧ್ಯಮಯ ಬೇರೆಲ್ಲೂ ಕಾಣ ಸಿಗದು. ಕಂಬಳ, ಜೋಡೆತ್ತಿನ ಓಟ, ಗ್ರಾಮೀಣ ಕುಸ್ತಿ, ಆಹಾರ ವೈವಿಧ್ಯ ಹೀಗೆ ಎಲ್ಲವನ್ನೂ ಒಳಗೊಳ್ಳುವಂತೆ ಪ್ರವಾಸೋದ್ಯಮ ನೀತಿ ರೂಪಿಸಬೇಕಿದೆ ಎಂದರು.

ರಾಜ್ಯದ ಪ್ರವಾಸಿಕೇಂದ್ರದ ಪಟ್ಟಿಯಲ್ಲಿ 5 ತಾಣಗಳಿವೆ. ಅಲ್ಲದೇ 20 ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ. ಜಿಲ್ಲೆಗೆ ಒಂದು ವರ್ಷದಲ್ಲಿ 21 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. 136 ಮಂದಿ ವಿದೇಶಿ ಪ್ರವಾಸಿಗರು ಬಂದಿದ್ದಾರೆ ಎಂದು ಮಾಹಿತಿ ನೀಡಿದರು.

ಗ್ರಾಮದ ಇತಿಹಾಸ ವಿಕಿಪೀಡಿಯ ಮಾದರಿಯಲ್ಲಿ ದಾಖಲು: ಪ್ರತಿ ಗ್ರಾಮದಲ್ಲಿ ಪುರಾತನ ದೇವಸ್ಥಾನಗಳು, ವೀರಗಲ್ಲುಗಳು, ಸೈನಿಕರಾಗಿ ಪ್ರಾಣ ತೆತ್ತವರು, ಹೀಗೆ ಅನೇಕ ಐತಿಹಾಸಿಕ ವಿಚಾರಗಳು ಇರುತ್ತವೆ. ಆದರೆ ಅದರ ಬಗ್ಗೆ ಈಗಿನ ಮಕ್ಕಳಿಗೇ ಮಾಹಿತಿ ಇರುವುದಿಲ್ಲ. ಅದಕ್ಕಾಗಿ ವಿಕಿಪೀಡಿಯ ಮಾದರಿಯಲ್ಲಿ ಎಲ್ಲಾ ಗ್ರಾಮಗಳ ಮಾಹಿತಿಯನ್ನು ದಾಖಲಿಸಿ ಆನ್‌ಲೈನ್‌ಗೆ ಅಪ್‌ಲೋಡ್‌ ಮಾಡಲು ನಿರ್ಧರಿಸಲಾಗಿದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಪ್ರಾಥಮಿಕ ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿ ಮಾಹಿತಿ ಸಂಗ್ರಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಪಿಯು ಮತ್ತು ಪದವಿ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಮಾಹಿತಿ ಸಂಗ್ರಹಕ್ಕೆ ಬಳಸಿಕೊಳ್ಳಲಾಗುವುದು. ವಿದ್ಯಾರ್ಥಿಗಳು ಎರಡು ದಿನ ಹಳ್ಳಿಗಳಿಗೆ ಹೋಗಿ ಮಾಹಿತಿ ಸಂಗ್ರಹಿಸಿ ನೋಡಲ್‌ ಅಧಿಕಾರಿಗೆ ನೀಡುತ್ತಾರೆ. ತಪ್ಪುಗಳಿದ್ದರೆ ತಿದ್ದಿಕೊಳ್ಳಲು, ಮಾಹಿತಿ ಬಿಟ್ಟು ಹೋಗಿದ್ದರೆ ಸೇರಿಸಿಕೊಳ್ಳಲು ನಿರಂತರ ಅವಕಾಶಗಳಿರುತ್ತವೆ ಎಂದು ತಿಳಿಸಿದರು.

ಪ್ರವಾಸಿ ಕೇಂದ್ರವನ್ನು ಉಳಿದೆಡೆ ಹೇಗೆ ಬ್ರ್ಯಾಂಡ್‌ ಮಾಡಲಾಗಿದೆ ಎಂಬುದನ್ನು ಗಮನಿಸಿಕೊಂಡು ನಮ್ಮ ಜಿಲ್ಲೆಯ ತಾಣಗಳನ್ನೂ ಕಟ್ಟಿಕೊಡಬೇಕು. ಸಾರ್ವಜನಿಕರಿಗೆ ಮಾರ್ಗ ಸೂಚಿಸಲು ಸೂಚನಾ ಫಲಕಗಳನ್ನು ಶೀಘ್ರದಲ್ಲಿಯೇ ಹಾಕಿಸಲಾಗುವುದು. ಪ್ರವಾಸಿ ತಾಣಗಳ ಕುರಿತು ವೆಬ್‌ಸೈಟ್‌, ಸಾಮಾಜಿಕ ಜಾಲತಾಣದಲ್ಲೂ ಹೆಚ್ಚಿನ ಪ್ರಚಾರ ನೀಡಬೇಕು ಎಂದು ಸಲಹೆ ನೀಡಿದರು.

ಶಾಸಕ ಪ್ರೊ.ಲಿಂಗಣ್ಣ, ವಿಧಾನ ಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಜಾನಕಿ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪಂಚಾಯಿತಿ ಸಿಇಒ ಪದ್ಮಾ ಬಸವಂತಪ್ಪ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಅವರೂ ಇದ್ದರು.

ಮಾಹಿತಿ ಇಲ್ಲದ ಅಧಿಕಾರಿಗಳು

‘ಒಂದು ಇಲಾಖೆಯ ಮಂತ್ರಿ ಬಂದಾಗ ನಡೆದುಕೊಳ್ಳುವ ರೀತಿಯ ಇದು’ ಎಂದು ಸರಿಯಾಗಿ ಮಾಹಿತಿ ನೀಡದ ಅಧಿಕಾರಿಗಳನ್ನು ಸಚಿವ ಸಿ.ಟಿ. ರವಿ ಪ್ರಶ್ನಿಸಿದರು.

ಅಧಿಕಾರಿಗಳು ಅರೆಬರೆ ಮಾಹಿತಿ ನೀಡುತ್ತಿದ್ದಾರೆ. ಜಿಲ್ಲಾಧಿಕಾರಿ ಇನ್ನೊಮ್ಮೆ ಪ್ರಗತಿ ಪರಿಶೀಲನೆ ಮಾಡಿ ಎಲ್ಲ ಮಾಹಿತಿ ಪಡೆದುಕೊಳ್ಳಬೇಕು ಎಂದು ಸೂಚಿಸಿದರು.

ಜನರು ಸಲ್ಲಿಸಿದ ಅಹವಾಲು

* ಜಿಲ್ಲಾ ರಂಗಮಂದಿರ 2010–11ರಲ್ಲಿ ಆರಂಭಗೊಂಡಿದ್ದರೂ ಇನ್ನೂ ಮುಗಿದಿಲ್ಲ. ಮುಗಿದರೂ ರೈಲು ಹಳಿ ಸಮೀಪ ಇರುವುದರಿಂದ ರಂಗ ಚಟುವಟಿಕೆ ಮಾಡಲು ಕಷ್ಟ. ಮಧ್ಯೆ ಇರುವ ಕಂಬ ತೆರವುಗೊಳಿಸಿ, ಅಲ್ಲಿ ಕಲಾ ಗ್ಯಾಲರಿ ಮಾಡಿ.

* ಪ್ರಶಸ್ತಿಗೆ ಆಯ್ಕೆ ಪ್ರಕ್ರಿಯೆಯನ್ನು ಒಂದು ತಿಂಗಳ ಒಳಗೆ ಮುಗಿಸಿ ಕೂಡಲೇ ಪ್ರಶಸ್ತಿ ಪ್ರದಾನ ಮಾಡಬೇಕು. ಒಬ್ಬರು ಕಲಾವಿದರನ್ನು ಆಯ್ಕೆ ಮಾಡಲಾಗಿತ್ತು. ನಾಲ್ಕೈದು ತಿಂಗಳು ಕಳೆದರೂ ಪ್ರಶಸ್ತಿ ಪ್ರದಾನ ನಡೆಯಲಿಲ್ಲ. ಅವರು ಅಷ್ಟು ಹೊತ್ತಿಗೆ ಮೃತಪಟ್ಟರು. ಹಾಗೆಯೇ ಈ ಬಾರಿ ಇಬ್ಬರು ಕಲಾವಿದರು ಆಸ್ಪತ್ರೆಯಲ್ಲಿದ್ದಾರೆ. ತಕ್ಷಣ ನೀಡುವುದು ಒಳ್ಳೆಯದು.

* ಕಲಾವಿದರ ಮಾಸಾಸನ ಕನಿಷ್ಠ ₹ 3 ಸಾವಿರಕ್ಕೆ ಏರಿಸಿ. ಕಲಾವಿದರನ್ನು ಗುರುತಿಸುವ ಕೆಲಸ ಸರಳಗೊಳಿಸಿ. ಮಾಸಾಸನ ನೀಡಲು ವಯಸ್ಸನ್ನು 58ರ ಬದಲು 50ಕ್ಕೆ ಇಳಿಸಿ.

* ಇಲಾಖೆ ಸೂಚನೆ ಮೇರೆಗೆ ಮಾಡಿದ ಸಾಂಸ್ಕೃತಿಕ ಕಾರ್ಯಕ್ರಮಗಳ ಹಣ ಒಂದೂವರೆ ವರ್ಷಗಳಿಂದ ಸಿಕ್ಕಿಲ್ಲ. ಕೂಡಲೇ ದೊರಕಿಸಿಕೊಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT