ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊರು ಇಬ್ಭಾಗವಾಗಿಸೊ ಕಾಮಗಾರಿಗೆ ವಿರೋಧ

ಬೀರೂರು–ಸಮ್ಮಸಗಿ ರಾಜ್ಯ ಹೆದ್ದಾರಿ ವಿರುದ್ಧ ತೋಳಹುಣಸೆ ಗ್ರಾಮಸ್ಥರ ಪ್ರತಿಭಟನೆ
Last Updated 12 ಡಿಸೆಂಬರ್ 2018, 14:02 IST
ಅಕ್ಷರ ಗಾತ್ರ

ದಾವಣಗೆರೆ: ಊರು ಇಬ್ಭಾಗವಾಗಿಸುವ ಬೀರೂರು–ಸಮ್ಮಸಗಿ ರಾಜ್ಯ ಹೆದ್ದಾರಿಯ ಮೇಲ್ಸೇತುವೆ ಕಾಮಗಾರಿ ವಿರೋಧಿಸಿ ತಾಲ್ಲೂಕಿನ ತೋಳಹುಣಸೆ ತಾಂಡಾ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.

ಊರ ನಡುವೆ ಹಾದು ಹೋಗಿರುವ ಹೆದ್ದಾರಿಗೆ ತಡೆಗೋಡೆ ನಿರ್ಮಿಸಿ ಮೇಲ್ಸೇತುವೆ ನಿರ್ಮಿಸಲಾಗಿದೆ. ಇದರಿಂದಾಗಿ ಗ್ರಾಮ ಇಬ್ಭಾಗವಾಗಿದೆ. ಸಂಬಂಧಿಕರು, ಅಣ್ಣ–ತಮ್ಮಂದಿರ ಮನೆಗೆ ಹೋಗಬೇಕೆಂದರೂ ಒಂದು ಕಿ.ಮೀ. ಸುತ್ತಿಕೊಂಡು ಓಡಾಡಬೇಕಾಗಿದೆ. ಕೇವಲ 10 ಅಡಿ ಸರ್ವಿಸ್‌ ರಸ್ತೆ ನಿರ್ಮಾಣ ಮಾಡಿದ್ದು, ಸರಾಗ ವಾಹನ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಅಲವತ್ತುಕೊಂಡರು.

ತಡೆಗೋಡೆ ಕಟ್ಟಿ ಮೇಲ್ಸೇತುವೆ ನಿರ್ಮಿಸುವ ಬದಲು, ಪಿಲ್ಲರ್‌ ಕಟ್ಟಿ ಸೇತುವೆ ನಿರ್ಮಾಣ ಮಾಡುವಂತೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಪ್ರೊ. ಲಿಂಗಣ್ಣ ಅವರು ಸ್ಥಳಕ್ಕೆ ಭೇಟಿ ನೀಡಿ, ‘ಹೆಚ್ಚುವರಿ ನಿರ್ಮಾಣ ವೆಚ್ಚವನ್ನು ಸರ್ಕಾರದಿಂದ ಕೊಡಿಸಲಾಗುವುದು. ಪಿಲ್ಲರ್‌ ಕಟ್ಟಿಯೇ ಮೇಲ್ಸೇತುವೆ ನಿರ್ಮಾಣ ಮಾಡಿ’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆಗ ಒಪ್ಪಿಕೊಂಡಿದ್ದ ಅಧಿಕಾರಿಗಳು, ಸಂಸದ ಮತ್ತು ಶಾಸಕ ಕಲಾಪಗಳಿಗೆ ತೆರಳಿರುವಾಗ ಪೊಲೀಸ್‌ ಭದ್ರತೆ ಪಡೆದು ತಡೆಗೋಡೆ ಮಾದರಿಯ ಮೇಲ್ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಊರ ಹೊರಭಾಗದಲ್ಲಿ ಪಿಲ್ಲರ್‌ ಕಟ್ಟಿ ಮೇಲ್ಸೇತುವರ ನಿರ್ಮಾಣ ಮಾಡಲಾಗಿದೆ. ಆದರೆ, ಊರಿನೊಳಗೆ ತಡೆಗೋಡೆ ಮಾದರಿಯ ಮೇಲ್ಸೇತುವೆ ಕಟ್ಟಲಾಗಿದೆ. ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಕಾಮಗಾರಿ ನಡೆಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಂಜ್ಯಾನಾಯ್ಕ ಎಚ್ಚರಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಲೋಚನಮ್ಮ, ಉಪಾಧ್ಯಕ್ಷ ನಾಗೇಂದ್ರನಾಯ್ಕ, ಸದಸ್ಯೆ ಜಾನಿಬಾಯಿ, ಮುಖಂಡರಾದ ಲೋಕ್ಯಾನಾಯ್ಕ, ಎಸ್‌. ಮೂರ್ತಿನಾಯ್ಕ, ಕುಬೇರನಾಯ್ಕ, ಲೋಕೇಶ್‌ನಾಯ್ಕ, ಶಾಂತಿಬಾಯಿ, ಪ್ರೇಮಿಬಾಯಿ, ಸಕ್ರಿಬಾಯಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಸಭೆಯ ನಿರ್ಣಯದಂತೆ ಕಾಮಗಾರಿ

ಈ ಮೊದಲಿನ ಕಾಮಗಾರಿಯ ಯೋಜನೆಯಂತೆ ಗ್ರಾಮದಲ್ಲಿ ತಡೆಗೋಡೆ ಮಾದರಿಯಲ್ಲೇ ಮೇಲ್ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಗ್ರಾಮಸ್ಥರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ, ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ, ಮೇಲ್ಸೇತುವೆಯ ದಾವಣಗೆರೆ ಕಡೆಗೆ 100 ಮೀಟರ್‌ ಮತ್ತು ಚನ್ನಗಿರಿಯ ಕಡೆಗೆ 60 ಮೀಟರ್‌ನಷ್ಟು ದೂರ ಪಿಲ್ಲರ್‌ ಕಟ್ಟಿ ಕಾಮಗಾರಿ ನಡೆಸಲಾಗಿದೆ ಎಂದು ರಾಜ್ಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಎಂಜಿನಿಯರ್‌ ಮರಿಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಇದೀಗ ಗ್ರಾಮಸ್ಥರು ಹೆಚ್ಚುವರಿಯಾಗಿ 50 ಮೀಟರ್‌ನಷ್ಟು ಪಿಲ್ಲರ್‌ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಆದರೆ, ಇದಕ್ಕೆ ತಾಂತ್ರಿಕ ಅಡಚಣೆಗಳಿವೆ. ಕಾಮಗಾರಿ ವೆಚ್ಚವೂ ಶೇ 25ರಷ್ಟು ಏರಿಕೆಯಾಗಿದೆ. ಈಗಾಗಲೇ ಯೋಜನಾ ಅವಧಿ ಕೂಡ ಮುಗಿಯುತ್ತಾ ಬಂದಿದೆ. ಎಡಿಬಿ ಬ್ಯಾಂಕ್‌ನಿಂದ ಅನುಮತಿ ಪಡೆಯುವುದೂ ಅಸಾಧ್ಯ. ಹೀಗಾಗಿ, ಪೊಲೀಸ್‌ ರಕ್ಷಣೆ ಪಡೆದು ಕೆಲಸ ಆರಂಭಿಸಲಾಗಿದೆ ಎಂದು ಹೇಳಿದರು.

ಸರ್ವಿಸ್‌ ರಸ್ತೆಯಲ್ಲಿ ತೋಳಹುಣಸೆ ಗ್ರಾಮದ ವಾಹನಗಳು ಮಾತ್ರ ಸಂಚರಿಸುತ್ತವೆ. ಈಗ ಇರುವ ಹತ್ತು ಅಡಿ ಸರ್ವಿಸ್‌ ರಸ್ತೆ ಇಷ್ಟು ವಾಹನಗಳಿಗೆ ಸಾಕಾಗುತ್ತದೆ. ಯೋಜನೆಯಂತೆಯೇ ಕೆಲಸ ಮಾಡಲಾಗಿದೆ ಎಂದರು.

* * *

ಗ್ರಾಮಸ್ಥರಿಗೆ ತೊಂದರೆಯಾಗದಂತೆ ಕಾಮಗಾರಿ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಸಂಸದ ಜಿ.ಎಂ. ಸಿದ್ದೇಶ್ವರ ಜತೆ ಚರ್ಚೆ ನಡೆಸಿ, ಸಮಸ್ಯೆ ಪರಿಗರಿಸಲಾಗುವುದು.
-ಪ್ರೊ. ಎನ್‌. ಲಿಂಗಣ್ಣ, ಮಾಯಕೊಂಡ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT