ಬಾಳಿನ ಮಹತ್ವ ಅರಿತವರು ಮಹನೀಯರು

7
ಇಷ್ಟಲಿಂಗ ಮಹಾಪೂಜೆ, ಜನಜಾಗೃತಿ ಧರ್ಮ ಸಮ್ಮೇಳನದಲ್ಲಿ ತೆಗ್ಗಿನಮಠ ಸ್ವಾಮೀಜಿ

ಬಾಳಿನ ಮಹತ್ವ ಅರಿತವರು ಮಹನೀಯರು

Published:
Updated:
Deccan Herald

ದಾವಣಗೆರೆ: ಹೇಗೋ ಬದುಕಿದರಾಯಿತು ಎಂದೆನ್ನದೆ ಹೀಗೇ ಬದುಕಬೇಕು ಎಂದು ಜೀವಿಸಿ ತೋರಿಸಿದವರು ಮಹಾತ್ಮರು. ಯಾಕೆಂದರೆ ಅವರು ಬಾಳಿನ ಮಹತ್ವವನ್ನು ಅರಿತ ಮಹನೀಯರು ಎಂದು ಹರಪನಹಳ್ಳಿಯ ತೆಗ್ಗಿನಮಠ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಶ್ರೀಮದ್ವೀರಶೈವ ಸದ್ಬೋಧನಾ ಸಂಸ್ಥೆಯ ಜಿಲ್ಲಾ ಘಟಕದಿಂದ ರೇಣುಕ ಮಂದಿರದಲ್ಲಿ ನಡೆಯುತ್ತಿರುವ 23ನೇ ವರ್ಷದ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಮತ್ತು ಜನಜಾಗೃತಿ ಧರ್ಮ ಸಮ್ಮೇಳನದ ಮೂರನೇ ದಿನವಾದ ಮಂಗಳವಾರ ಮಾತನಾಡಿದರು.

ಮಾನವರನ್ನು ಮಹಾಮಾನವರನ್ನಾಗಿ ಮಾಡುವವರು, ನಿತ್ಯ ಬದುಕನ್ನು ಸಚಿತ್ರ ಬದುಕನ್ನಾಗಿ ಪರಿವರ್ತಿಸುವ ನೂರಾರು ಗುರುಗಳು ಆಗಿಹೋಗಿದ್ದಾರೆ ಎಂದು ಹೇಳಿದರು.

‘ಕಾರ್ಮಿಕರತ್ನ’ ಪ್ರಶಸ್ತಿ ಸ್ವೀಕರಿಸಿದ ಕಮ್ಯುನಿಸ್ಟ್‌ ಪಕ್ಷದ ಎಚ್‌.ಕೆ. ರಾಮಚಂದ್ರ ಮಾತನಾಡಿ, ‘ರಾಜಕೀಯ ಮಾಡುವುದು ಸುಲಭ. ಆದರೆ, ಎಲ್ಲಾ ಮನುಷ್ಯರು ಸಮಾನರು ಎಂದು ತಿಳಿದು ಕಾರ್ಮಿಕರ ಪರ ಕೆಲಸ ಮಾಡುವುದು ಕಷ್ಟ. ನೂರಾರು ಸಮಸ್ಯೆಗಳು ಬರುತ್ತಲೇ ಇರುತ್ತವೆ. ಸಂಘರ್ಷ ಮತ್ತು ಸಂಧಾನ ಮೂಲಕ ಅವುಗಳನ್ನು ಪರಿಹರಿಸಬೇಕಾಗುತ್ತದೆ. ಅಂಥ ಕೆಲಸದಲ್ಲಿ ತೊಡಗಿಕೊಂಡಿದ್ದಕ್ಕಾಗಿ ಗುರುತಿಸಿ ಗೌರವಿಸಿದ್ದೀರಿ. ಈ ಗೌರವ ಎಲ್ಲಾ ಶೋಷಿತರಿಗೆ, ಎಲ್ಲ ಕಾರ್ಮಿಕರಿಗೆ ಸೇರಿದ್ದು’ ಎಂದರು.

‘ನಾವು ಸಾವಿರ ಬಾರಿ ಹೇಳಿದರೂ ಅರ್ಥಮಾಡಿಕೊಳ್ಳದಿದ್ದರೂ ಗುರುಗಳು ಒಂದೇ ಬಾರಿ ಹೇಳಿದರೂ ಪಾಲಿಸುವ ಜನ ಇರುವ ದೇಶ ಇದು. ಮಾನವ ಕುಲ ಒಂದೇ ಎಂಬ ರಂಭಾಪುರಿ ಮಠ ಹಾಕಿಕೊಟ್ಟ ದಾರಿಯಲ್ಲಿ ಎಲ್ಲರೂ ನಡೆದರೆ ಸಾಕು. ಎಲ್ಲರೂ ಸಮಾನರಾಗುವರು. ಕಾರ್ಲ್‌ಮಾರ್ಕ್ಸ್‌, ಲೆನಿನ್‌, ಭಗತ್‌ಸಿಂಗ್‌, ಸುಭಾಸ್‌ಚಂದ್ರ ಬೋಸ್‌, ಗಾಂಧಿಯಿಂದ ಪಡೆದ ಅರಿವಿನ ಸಿದ್ಧಾಂತ ನನ್ನದು. ಈ ಸಿದ್ಧಾಂತ ಇಟ್ಟುಕೊಂಡು ಕಮ್ಯುನಿಸ್ಟನಾಗಿಯೇ ಸಾಯುವೆ’ ಎಂದು ತಿಳಿಸಿದರು.

‘ಭಾರತದಲ್ಲಿ 4,650 ಜಾತಿ, 1,200 ಭಾಷೆಗಳಿವೆ. ವಿದೇಶಗಳಲ್ಲಿ ಕ್ರಿಶ್ಚಿಯನ್ನರಲ್ಲಿ ಕೆಥೋಲಿಕ್‌, ಪ್ರಾಟಸ್ಟೆಂಟ್‌, ಮುಸ್ಲಿಮರಲ್ಲಿ ಶಿಯಾ, ಸುನ್ನಿ ಎಂಬ ಜಾತಿಗಳಷ್ಟೇ ಇವೆ. ಆದರೆ ಭಾರತದ ಕ್ರಿಶ್ಚಿಯನ್ನರಲ್ಲಿ 450 ಜಾತಿಗಳು ಹಾಗೂ ಭಾರತದ ಮುಸ್ಲಿಮರಲ್ಲಿ 200 ಜಾತಿಗಳಿವೆ. ಇಷ್ಟಿದ್ದರೂ ಎರಡೆರಡೇ ಸಮುದಾಯಗಳಿರುವ ದೇಶಗಳಿಗಿಂತ ಚೆನ್ನಾಗಿ ವಿವಿಧತೆಯಲ್ಲಿ ಏಕತೆ ಇರುವ ದೇಶ ನಮ್ಮದು’ ಎಂದರು.

ಗುರು, ಸ್ವಾಮೀಜಿ ಪರಂಪರೆ ಗೌರವಯುತವಾದುದು. ಆದರೆ ಕೆಲವೇ ಸ್ವಾಮೀಜಿಗಳ ಅನಾಚಾರದಿಂದಾಗಿ ಎಲ್ಲ ಸ್ವಾಮೀಜಿಗಳಿಗೆ ಕೆಟ್ಟ ಹೆಸರು ಬರುತ್ತಿದೆ. ಗುರು ಪರಂಪರೆ ಬಗ್ಗೆ ಗೌರವ ಇರಲಿ. ಆದರೆ, ಈ ವೇಷದಲ್ಲಿ ಇರುವ ಕೆಲವೇ ಕೆಲವು ಸ್ವಾಮಿಗಳ ಬಗ್ಗೆ ಎಚ್ಚರಿಕೆ ಅಗತ್ಯ ಎಂದು ಇತ್ತೀಚೆಗೆ ಚರ್ಚೆಯಾಗುತ್ತಿರುವ ಮಠಗಳ ಬಗ್ಗೆ ಟೀಕಿಸಿದರು.

ಧರ್ಮ ಜಾಗರಣ ಸಮಿತಿಯ ಪ್ರಾಂತ್ಯ ಸಂಚಾಲಕ ಮುನಿಯಪ್ಪ ಮಾತನಾಡಿ, ‘ನ್ಯಾಯ, ಅನ್ಯಾಯ, ಸರಿ, ತಪ್ಪುಗಳ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೆ ಅದನ್ನು ಪಾಲಿಸುತ್ತಿಲ್ಲ. ಗೊತ್ತಿಲ್ಲದೆ ಮಾಡುವ ತಪ್ಪುಗಳಿಗೆ ದೇವರ ಕ್ಷಮೆ ಇದೆ. ಆದರೆ ಗೊತ್ತಿದ್ದೇ ನಾವು ತಪ್ಪು ಮಾಡುತ್ತೇವೆ. ಯಾವುದನ್ನು ಮಾಡಬೇಕೋ ಅದನ್ನು ಪ್ರಾಣ ಹೋದರೂ ಮಾಡಿಯೇ ತೀರುತ್ತೇವೆ ಎಂಬ ಸಂಕಲ್ಪ ಇರಬೇಕು. ಮಾಡಬಾರದ್ದನ್ನೂ ಯಾವ ಕಾರಣಕ್ಕೂ ಮಾಡುವುದಿಲ್ಲ ಎಂಬ ಹಠ ಇರಬೇಕು. ಮನೆಗಳಲ್ಲಿ ಒಟ್ಟಿಗೆ ಇದ್ದರೆ ಸಾಲದು ಮನದಲ್ಲೂ ಒಗ್ಗಟ್ಟಾಗಿರಬೇಕು ಎಂದು ಸಲಹೆ ನೀಡಿದರು.

ಸಮಾಜ ಚಲನಶೀಲವಾಗಿರುವುದಕ್ಕೆ, ಸದ್ಧರ್ಮದಲ್ಲಿ ನಡೆಯುತ್ತಿರುವುದಕ್ಕೆ ಯಾವ ಸರ್ಕಾರವೂ ಕಾರಣವಲ್ಲ. ಅದಕ್ಕೆ ಸಾಧು ಸಂತರು ಕಾರಣ. ಜ್ಞಾನದಾಸೋಹ, ಅನ್ನದಾಸೋಹವನ್ನು ಮೊದಲು ನೀಡಿದವರು ವೀರಶೈವ ಮಠಗಳು ಎಂದು ಶ್ಲಾಘಿಸಿದ ಅವರು, ಎಲ್ಲರಿಗೂ ಒಳ್ಳೆಯದನ್ನು ಬಯಸುವ ಸ್ಥಳವೇ ಮಠ ಎಂದು ತಿಳಿಸಿದರು.

ಬಾಳೆಹೊನ್ನೂರು ರಂಭಾಪುರಿ ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮರಿಯಮ್ಮನಹಳ್ಳಿ ಮಲ್ಲಿಕಾರ್ಜುನ ಸ್ವಾಮೀಜಿ, ಆವರಗೊಳ್ಳ ಪುರವರ್ಗ‌ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಹಲವರಿಗೆ ಗುರುರಕ್ಷೆ ನೀಡಿ ಗೌರವಿಸಲಾಯಿತು. ಬೂಸ್ನೂರು ವಿಶ್ವನಾಥ್‌ ಸ್ವಾಗತಿಸಿದರು. ಐನಹಳ್ಳಿ ವಸಂತ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !