ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ವರ್ಗಗಳಿಗೂ ನ್ಯಾಯ ಒದಗಿಸಲು ಚಿಂತನೆ: ಬೊಮ್ಮಾಯಿ

Last Updated 26 ಫೆಬ್ರುವರಿ 2021, 2:38 IST
ಅಕ್ಷರ ಗಾತ್ರ

ದಾವಣಗೆರೆ: ಮೀಸಲಾತಿಯ ಬೇಡಿಕೆ ಇಟ್ಟುಕೊಂಡು ಹೋರಾಟದ ಮೂಲಕ ಒತ್ತಡ ಹಾಕುತ್ತಿದ್ದಾರೆ. ಎಲ್ಲ ವರ್ಗಗಳಿಗೆ ನ್ಯಾಯ ಕೊಡಬೇಕು ಎಂಬ ಉದ್ದೇಶದಿಂದ ಮುಖ್ಯಮಂತ್ರಿ ಪರಾಮರ್ಶೆ ಮಾಡುತ್ತಿದ್ದಾರೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

‘ಸಂವಿಧಾನದ ಉಲ್ಲೇಖ, ಸುಪ್ರೀಂಕೋರ್ಟ್‌ ಉಲ್ಲೇಖಗಳು, ತೀರ್ಪುಗಳನ್ನು ಗಮನಿಸಿಕೊಂಡು ಶಾಶ್ವತವಾಗಿ ಒಬಿಸಿಗೆ ಯಾರು ಸೇರಬೇಕು ಎಂಬುದನ್ನು ಅಧ್ಯಯನ ಮಾಡಬೇಕು. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಯಾರು ಹಿಂದುಳಿದ್ದಾರೆ ಎಂಬುದನ್ನು ತಿಳಿಯಬೇಕು. ಹಿಂದುಳಿದ ಆಯೋಗಗಳಿವೆ. ಎಸ್‌ಸಿ, ಎಸ್‌ಟಿ ಆಯೋಗಗಳಿಂದ ಮೊದಲು ಶಿಫಾರಸು ಆಗಬೇಕು. ಬಳಿಕ ಅವುಗಳ ‍ಪರಾಮರ್ಶೆ ಮಾಡಬೇಕಾಗುತ್ತದೆ’ ಎಂದು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ರಾಜ್ಯದ ಇತಿಹಾಸದಲ್ಲಿ ಹಾವನೂರು ಆಯೋಗ, ವೆಂಕಟಸ್ವಾಮಿ ಆಯೋಗ, ಚನ್ನಪ್ಪ ರೆಡ್ಡಿ ಆಯೋಗಗಳ ವರದಿ ಆಧಾರದಲ್ಲಿ ಸೌಲಭ್ಯ ನೀಡಲಾಗಿತ್ತು. ಮಂಡಲ್‌ ಆಯೋಗದ ವರದಿ ಬಂದ ಬಳಿಕ ಯಾರು ಯಾವ ಕೆಟಗರಿ ಎಂಬುದು ನಿರ್ಧಾರವಾಯಿತು. ಈ ಕಾಲಕ್ಕೆ ಏನಾಗಬೇಕು ಎಂಬ ಚಿಂತನೆ ನಡೆಸಲಾಗುವುದು ಎಂದರು.

ಕಾರ್ಯಾಚರಣೆಗೆ ನಿರ್ಧಾರ: ಸ್ಫೋಟಕಕ್ಕೆ ಸಂಬಂಧಿಸಿದ ಕಾಯ್ದೆಯೇ ಇದೆ. ಆದರೆ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ. ಅದಕ್ಕಾಗಿ ವಿಶೇಷ ಸುತ್ತೋಲೆ ಹೊರಡಿಸುತ್ತಿದ್ದೇವೆ. ಅನುಮತಿ ಇಲ್ಲದೇ ಕೆಲವು ಗಣಿಗಳಲ್ಲಿ ಸ್ಫೋಟಕಗಳನ್ನು ಬಳಸಲಾಗುತ್ತಿದೆ. ಅನುಮತಿ ಪಡೆದ ಗಣಿಗಳಲ್ಲಿಯೂ ಅಧಿಕ ಸ್ಫೋಟಕಗಳು ಇವೆ. ಈ ಎಲ್ಲವನ್ನೂ ಪತ್ತೆಹಚ್ಚಿ ವಶಪಡಿಸಿಕೊಳ್ಳಲು ಕಾರ್ಯಾಚರಣೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ. ಅದಕ್ಕಾಗಿ ಗಣಿ ಇಲಾಖೆ ಮತ್ತು ಪೊಲೀಸ್‌ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಲಿವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT