ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಬಾಲಕಿಯರನ್ನು ಗುಜರಾತಿಗೆ ಒಯ್ದು ಮದುವೆ, ಮೂವರಿಗೆ ಶಿಕ್ಷೆ

Last Updated 15 ಡಿಸೆಂಬರ್ 2021, 2:52 IST
ಅಕ್ಷರ ಗಾತ್ರ

ದಾವಣಗೆರೆ: ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಭೇಟಿಯಾದ ಇಬ್ಬರು 14 ವರ್ಷದ ಬಾಲಕಿಯರನ್ನು ಕರೆದುಕೊಂಡು ಹೋಗಿ ಗುಜರಾತ್‌ನ ಯುವಕರಿಗೆ ಮದುವೆ ಮಾಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಮಂಗಳವಾರ ಶಿಕ್ಷೆ ನೀಡಿ ತೀರ್ಪಿತ್ತಿದೆ.

ಹಾವೇರಿ ತಾಲ್ಲೂಕು ಹೊಸರಿತ್ತಿ ಗ್ರಾಮದ ಕೊಟ್ರಪ್ಪ (65), ಅವರ ಮಗಳು ಮಲ್ಲಮ್ಮ, ಅಳಿಯ ಭರತ್‌ ಅಲಿಯಾಸ್‌ ಗೋಪಾಲ್‌ ಅಪರಾಧಿಗಳು.

2011ರಲ್ಲಿ ರೈಲ್ವೆ ನಿಲ್ದಾಣಕ್ಕೆ ಕೊಟ್ರಪ್ಪ ಬಂದಿದ್ದರು. ಇದೇ ಸಮಯದಲ್ಲಿ ಚಿತ್ರದುರ್ಗ ಜಿಲ್ಲೆಯ ವಸತಿನಿಲಯದಿಂದ ತಪ್ಪಿಸಿಕೊಂಡು ಬಂದಿದ್ದ ಇಬ್ಬರು ಬಾಲಕಿಯರು ಸಿಕ್ಕಿದ್ದರು. ಅವರನ್ನು ಕೊಟ್ರಪ್ಪ ತನ್ನ ಮನೆಗೆ ಕರೆದುಕೊಂಡು ಹೋಗಿದ್ದರು. ಅವರ ಮಗಳು ಮತ್ತು ಅಳಿಯ ಗುಜರಾತ್‌ನಲ್ಲಿದ್ದು, ಅವರ ಸಹಕಾರ ಪಡೆದು ಅಲ್ಲಿನ ಇಬ್ಬರು ಯುವಕರಿಗೆ ಈ ಬಾಲಕಿಯರನ್ನು ಮದುವೆ ಮಾಡಿ ಗುಜರಾತ್‌ಗೆ ಕಳುಹಿಸಿದ್ದರು.

ಆ ವಸತಿನಿಲಯದ ವಾರ್ಡನ್‌ ದೂರು ನೀಡಿದ್ದರು. ಆದರೆ ಬಾಲಕಿಯರು ಪತ್ತೆಯಾಗಿರಲಿಲ್ಲ. ಕೆಲವು ಸಮಯದ ಬಳಿಕ ಬಾಲಕಿಯರು ಗುಜರಾತ್‌ನ ಒಂದು ಎಸ್‌ಟಿಡಿ ಬೂತ್‌ನಿಂದ ಕರೆ ಮಾಡಿ ಸಂಕಷ್ಟ ತೋಡಿಕೊಂಡಿದ್ದರು. ಅದರ ಆಧಾರದಲ್ಲಿ ಬಾಲಕಿಯರನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಆಗಿನ ದಾವಣಗೆರೆ ಕೇಂದ್ರ ವೃತ್ತ ಇನ್‌ಸ್ಪೆಕ್ಟರ್‌ ಚಂದ್ರಹಾಸ್‌ ಲಕ್ಷ್ಮಣ ನಾಯ್ಕ್ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಮದುವೆಯಾಗಿರುವ ಗುಜರಾತಿನ ಇಬ್ಬರು ಆರೋಪಿಗಳು ಪತ್ತೆಯಾಗಿಲ್ಲ. ಕೊಟ್ರಪ್ಪ, ಮಲ್ಲಮ್ಮ, ಭರತ್‌ ಅಲಿಯಾಸ್‌ ಗೋಪಾಲ್‌ ಅವರ ಮೇಲಿನ ಆರೋಪ ಸಾಬೀತಾಗಿದೆ. ಅವರಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ ತಲಾ ₹ 6 ಸಾವಿರ ದಂಡ ವಿಧಿಸಿ ನ್ಯಾಯಾಧೀಶರಾದ ರಾಜೇಶ್ವರಿ ಎನ್‌. ಹೆಗಡೆ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಸ್‌.ವಿ. ಪಾಟೀಲ್‌ ವಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT