ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗಳೂರು: ಸಣ್ಣ ನೀರಾವರಿ ಇಲಾಖೆ ನಿರ್ಲಕ್ಷ್ಯಕ್ಕೆ ಕಂದಮ್ಮಗಳ ಬಲಿ

ಕೆರೆಯ ಗುಂಡಿಯಲ್ಲಿ ಮುಳುಗಿ ಮೃತಪಟ್ಟ ಮೂವರು ಬಾಲಕರು
Last Updated 15 ನವೆಂಬರ್ 2021, 4:10 IST
ಅಕ್ಷರ ಗಾತ್ರ

ಜಗಳೂರು: ಸಣ್ಣ ನೀರಾವರಿ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಪಟ್ಟಣಕ್ಕೆ ಹೊಂದಿಕೊಂಡಿರುವ ಕೆರೆಯಲ್ಲಿ ನಿರ್ಮಾಣವಾಗಿರುವ ದೈತ್ಯಗಾತ್ರದ ಹೊಂಡಗಳು, ಇನ್ನೂ ಬದುಕಿ ಬಾಳಬೇಕಿದ್ದ ಮೂವರು ಕಂದಮ್ಮಗಳ ಜೀವಗಳನ್ನು ಬಲಿ ತೆಗೆದುಕೊಂಡಿವೆ.

510 ಎಕರೆಗೂ ಹೆಚ್ಚು ವಿಶಾಲವಾಗಿರುವ ಐತಿಹಾಸಿಕ ಕೆರೆ ಪಟ್ಟಣಕ್ಕೆ ಹೊಂದಿಕೊಂಡಂತಿದೆ. ಕೆರೆಗೆ ನೀರು ಹರಿದುಬರುವ ಕಾಲುವೆಗಳ ಒತ್ತುವರಿಯಿಂದ ಸುಮಾರು ಎರಡು ದಶಕಗಳಿಂದ ಕೆರೆ ಭರ್ತಿಯಾಗದೇ ಖಾಲಿಯಾಗಿದೆ. ಕೆರೆ ಖಾಲಿಯಾಗಿರುವುದನ್ನು ಬಂಡವಾಳ ಮಾಡಿಕೊಂಡಿರುವ ಮಣ್ಣು ಲೂಟಿಕೋರರು ಕೆರೆಯೊಳಗೆ ಬೇಕಾಬಿಟ್ಟಿಯಾಗಿ ಜೆಸಿಬಿ ಯಂತ್ರಗಳಿಂದ ವ್ಯಾಪಕವಾಗಿ ಮಣ್ಣು ತೆಗೆದು ವಿವಿಧ ಕಾಮಗಾರಿಗಳಿಗೆ ಹಾಗೂ ಇಟ್ಟಿಗೆ ಭಟ್ಟಿ ನಿರ್ಮಾಣಕ್ಕೆ ಅಕ್ರಮವಾಗಿ ಬಳಸುತ್ತಿದ್ದಾರೆ. ಮಣ್ಣು ತೆಗೆದ ಸ್ಥಳದಲ್ಲಿ ನಿರ್ಮಾಣವಾಗಿರುವ ಆಳವಾದ ದೈತ್ಯ ಗುಂಡಿಗಳಲ್ಲಿ ಮಳೆ ನೀರು ತುಂಬಿಕೊಂಡಿದ್ದು, ಶನಿವಾರ ಮೂರು ಮಕ್ಕಳ ಈಜಲು ತೆರಳಿದಾಗ ಮುಳುಗಿ ಸಾವನ್ನಪ್ಪಿದ್ದಾರೆ.

ಕೆರೆಯ ಅಂಚಿನಲ್ಲಿ ಹೋಟೆಲ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಸಂತೆಮುದ್ದಾಪುರದ ಶೆಖಾವತ್ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ದುರ್ಘಟನೆಯಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ. ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು. ಶೆಖಾವತ್ ಕುಟುಂಬದ ಎರಡು ಕುಡಿಗಳಾದ ಅಫ್ರಾನ್ (8) ಹಾಗೂ ಹಾಸಿನ್ (9) ಹಾಗೂ ಅಬ್ದುಲ್ ಖಾನ್ ಅವರ ಪುತ್ರ ಪೈಜಾನ್ (9) ಸಂಜೆ ಒಟ್ಟಾಗಿ ಆಟವಾಡಲು ಹೊರ ಹೋದವರು ಶವವಾಗಿ ಮರಳಿರುವ ಘಟನೆ ಪಟ್ಟಣದ ಜನರಲ್ಲಿ ತೀವ್ರ ವೇದನೆ ಮೂಡಿಸಿದೆ.

ಕಣ್ಣುಗಳಂತಿದ್ದ ಎರಡೂ ಮಕ್ಕಳನ್ನು ಕಳೆದುಕೊಂಡೆ: ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಇಬ್ಬರು ಮಕ್ಕಳ ತಂದೆ ಶೆಖಾವತ್ ದಂಪತಿ ಘಟನೆಯಿಂದ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ. ‘ಸಂಜೆ ಆಟವಾಡಿಕೊಂಡಿದ್ದ ಮಕ್ಕಳು ಕೆಲವೇ ಗಂಟೆಗಳಲ್ಲಿ ಹೆಣವಾಗಿ ಬಂದಿದ್ದಾರೆ. ನನ್ನ ಕುಟುಂಬದ ಎರಡು ಕಣ್ಣುಗಳಿಂತಿದ್ದ ಇಬ್ಬರೂ ಮಕ್ಕಳನ್ನು ಒಟ್ಟಿಗೇ ಕಳೆದುಕೊಂಡಿದ್ದೇವೆ. ನಮಗೆ ಇನ್ಯಾರು ದಿಕ್ಕು’ ಎಂದು ಶೇಖಾವತ್ ರೋದಿಸುತ್ತಿದ್ದ ದೃಶ್ಯ ಹೃದಯ ಕಲಕುವಂತಿತ್ತು.

ಗುಂಡಿಗಳೇ ಸಾವಿಗೆ ಕಾರಣ: ‘ಕೆರೆಯಲ್ಲಿ ಹಲವು ವರ್ಷಗಳಿಂದ ಅಕ್ರಮವಾಗಿ ಮಣ್ಣು ತೆಗೆಯುತ್ತಿದ್ದರಿಂದ ದೊಡ್ಡದೊಡ್ಡ ಗುಂಡಿಗಳಾಗಿ ಮಳೆನೀರು ತುಂಬಿಕೊಂಡಿದ್ದರಿಂದ ದುರಂತಕ್ಕೆ ಕಾರಣವಾಗಿದೆ. ಕೆರೆಯಲ್ಲಿ ಬೇಕಾಬಿಟ್ಟಿ ಗುಂಡಿಗಳನ್ನು ನಿರ್ಮಿಸಿ ರಸ್ತೆ ಕಾಮಗಾರಿಗಳಿಗೆ ಬೇಕಾಗಿರುವ ಮಣ್ಣನ್ನು ತೆಗೆದಿರುವುದೂ ಘಟನೆಗೆ ಕಾರಣವಾಗಿದೆ’ ಎಂದು ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT