ಗುರುವಾರ , ಜನವರಿ 23, 2020
19 °C
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಸಲಹೆ

ಮೊಬೈಲ್ ಎಸೆಯಿರಿ, ಪುಸ್ತಕ ಓದಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಇಂದು ಬಹುತೇಕ ಕ್ಷೇತ್ರಗಳಲ್ಲಿ ಕೆಲಸ ಪಡೆಯಲು ಸ್ಫಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಮೊಬೈಲ್ ಅನ್ನು ಎಸೆದು ಪುಸ್ತಕ ಓದುವುದರಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಸಲಹೆ ನೀಡಿದರು.

ನಗರದ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ‘ವಿದ್ಯಾರ್ಥಿಗಳು ಇಂದು ಮೊಬೈಲ್ ಗೀಳಿಗೆ ಒಳಾಗಾಗಿ ಬರವಣಿಗೆ ಕೌಶಲವನ್ನು ಮರೆಯುತ್ತಿದ್ದಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ಮೊಬೈಲ್ ಮತ್ತು ಅಂತರ್ಜಾಲ ಬಳಕೆಯಲ್ಲಿ ತಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಶಿಕ್ಷಿತರು ಮತ್ತು ಅಪ್ರಾಪ್ತರಿಗೆ ಮೊಬೈಲ್ ಬಳಕೆಯ ಜ್ಞಾನ ಇರುವುದಿಲ್ಲ. ಇದರಿಂದಾಗಿ ಹೆಚ್ಚಿನ ಅಪರಾಧಗಳು ನಡೆಯುತ್ತಿದ್ದು ,ಅನಗತ್ಯವಾಗಿ ಯಾವುದೇ ಲಿಂಕ್‍ಗಳನ್ನು ಹಂಚಿಕೊಳ್ಳಬಾರದು. ಅಪರಿಚಿತರು ಸ್ನೇಹಕ್ಕೆ ಮನವಿ ಕಳುಹಿಸಿದರೆ ಅವುಗಳನ್ನು ತಿರಸ್ಕರಿಸಬೇಕು’ ಎಂದು ಸಲಹೆ ನೀಡಿದರು.

‘ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಅವರು ನಿಮಗೆ ಸ್ಫೂರ್ತಿಯಾಗಬೇಕು. ಕಿರಣ್ ಮಜುಮ್‌ದಾರ್, ವಿಜಯಲಕ್ಷೀ ಬಿದರಿಯಂತಹ ಮಹಿಳಾ ಸಾಧಕರ ಹಾದಿಯಲ್ಲಿ ವಿದ್ಯಾರ್ಥಿನಿಯರು ಸಾಗಬೇಕು’ ಎಂದು ಸಲಹೆ ನೀಡಿದರು.

‘ಯುವತಿಯರು ಹೆಚ್ಚಾಗಿ ಸೈಬರ್ ಪ್ರಕರಣಗಳಲ್ಲಿ ಅನಗತ್ಯ ತೊಂದರೆಗೆ ಒಳಗಾಗುತ್ತಿದ್ದು ಎಚ್ಚರಿಕೆಯಿಂದ ಇರಬೇಕು ಹಾಗೂ ಮಹಿಳೆಯರ ಸುರಕ್ಷತೆಗಾಗಿ ಅನೇಕ ಕಾನೂನು ಮತ್ತು ಕಾಯ್ದೆಗಳಿದ್ದು ಅದರ ಸದುಪಯೋಗಪಡೆದುಕೊಳ್ಳಬೇಕು’ ಎಂದು ಹೇಳಿದರು.

ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್‌ ಮುಷ್ತಾಕ್ ಅಹಮದ್ ಮಾತನಾಡಿ, ‘ಯಾವುದೇ ಅಪ್ಲಿಕೇಷನ್‍ಗಳನ್ನು ಡೌನ್‍ಲೋಡ್ ಮಾಡಿಕೊಳ್ಳುವ ಮುನ್ನ ಅದರ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಳ್ಳಬೇಕು. ಇಲ್ಲದಿದ್ದರೇ ನಿಮ್ಮ ಮೊಬೈಲ್‍ನ ಎಲ್ಲಾ ಡೇಟಾಗಳನ್ನು ಹ್ಯಾಕರ್‍ಗಳು ಕದಿಯಬಹುದು’ ಎಂದು ಎಚ್ಚರಿಸಿದರು.

ಆನ್‍ಲೈನ್ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ವಧು–ವರರ ಅನ್ವೇಷಣೆಯಿಂದಲೂ ಇಂದು ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಮ್ಯಾಟ್ರಿಮೊನಿ ವೆಬ್‍ಸೈಟ್‍ನಲ್ಲೂ ನಕಲಿ(ಫೇಕ್) ಫೋಟೋ ಮತ್ತು ಪ್ರೊಫೈಲ್ ನೀಡಿ ನಂತರ ಹಣ ಪಡೆದು ಮೋಸ ಮಾಡುವ ಘಟನೆಗಳು ಹೆಚ್ಚಾಗುತ್ತಿದ್ದು ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಶಿವಪ್ರಕಾಶ್ ಪಿ.ಎಸ್. ಮಾತನಾಡಿ, ‘ಕಾಲೇಜಿನ ಆವರಣದಲ್ಲಿ ಆಟೊಗಳು, ತಿಂಡಿಗಾಡಿಗಳಿಂದ ತೊಂದರೆಯಾಗುತ್ತಿದ್ದು, ಅವುಗಳನ್ನು ತೆರವುಗೊಳಿಸಬೇಕು’ ಎಂದು ಮನವಿ ಮಾಡಿದರು. ಆ ವೇಳೆ ಎಸ್‌ಪಿ ಪ್ರತಿಕ್ರಿಯಿಸಿ ‘ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಬಿ.ಪಿ. ಕುಮಾರ್ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು