ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಸಂಭ್ರಮದ ಗಣೇಶ ಮೂರ್ತಿ ವಿಸರ್ಜನೆ

Last Updated 11 ಸೆಪ್ಟೆಂಬರ್ 2022, 2:20 IST
ಅಕ್ಷರ ಗಾತ್ರ

ದಾವಣಗೆರೆ: ಒಂದೆಡೆ ಕೇರಳದ ಚಂಡೆಗಳ ಅಬ್ಬರ. ಇನ್ನೊಂದೆಡೆ ಮಕ್ಕಳನ್ನು ಸೆಳೆಯುತ್ತಿದ್ದ ಚಿಂಗಾರಿ ಮೇಳ, ಬೊಂಬೆಗಳ ಕುಣಿತ. ಮತ್ತೊಂದೆಡೆ ನಗೆ ಉಕ್ಕಿಸುವ ಜೋಕರ್ ಗೊಂಬೆಗಳು. ಇವುಗಳ ನಡುವೆ ವಿರಾಜಮಾನವಾಗಿ ಹೊರಟಿದ್ದ ಕೊಬ್ಬರಿ ಗಣಪ ಭಕ್ತರ ಮನಸೆಳೆಯಿತು.

ಹಿಂದೂ ಯುವ ಶಕ್ತಿ ವತಿಯಿಂದ ಶ್ರೀ ವಿನಾಯಕ ಮಹೋತ್ಸವದ ಅಂಗವಾಗಿ ನಗರದ ತೊಗಟವೀರ ಸಮುದಾಯ ಭವನದಲ್ಲಿ ಸುಮಾರು 201 ಕೆ.ಜಿ.ಗೂ ಹೆಚ್ಚು ಕೊಬ್ಬರಿಗಳನ್ನು ಬಳಸಿ ಪ್ರತಿಷ್ಠಾಪಿಸಿದ್ದ 13 ಅಡಿಯ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಗೆ ಶನಿವಾರ ಜನಪದ ಕಲಾ ತಂಡಗಳು ವಿಶೇಷ ಮೆರುಗು ನೀಡಿದವು.

ಗಣಪತಿಯ ಎದುರು ಕೇರಳದ ಕಲಾವಿದರು ಚಂಡೆ ಬಾರಿಸುತ್ತ ಸಾಗಿದರು. ಚಿನ್ನಾರಿ ಮೇಳ, ಕಲ್ಲಡ್ಕದ ಯಕ್ಷ ಬೊಂಬೆಗಳ ಕುಣಿತವು ಮಕ್ಕಳನ್ನು ರಂಜಿಸಿದವು. ಜೋಕರ್ ಹಾಗೂ ಮಿಸ್ಟರ್ ಬೀನ್ ಗೊಂಬೆಗಳು ಮಕ್ಕಳ ಕೈಕುಲುಕುತ್ತಾ ಮನರಂಜನೆ ನೀಡಿದವು.

ಕೇರಳದ ಕೇಟು ನೃತ್ಯದಲ್ಲಿ ದುರ್ಗೆ, ಸರಸ್ವತಿ, ಶ್ರೀಕೃಷ್ಣ ವೇಷಧಾರಿಗಳು ಗಮನ ಸೆಳೆದರು. ಮಹಾರಾಷ್ಟ್ರ ಹಾಗೂ ಕರ್ನಾಟಕದ ಡೊಳ್ಳುಕುಣಿತ, ವೀರಗಾಸೆ ನೃತ್ಯಗಳು ಜನರನ್ನು ರಂಜಿಸಿದವು. ಮಂಗಳವಾದ್ಯ ಕಿವಿಗೆ ಇಂಪು ನೀಡಿತು.

ಡಿ.ಜೆ ಬಳಸಿ ಸಿನಿಮಾ ಹಾಡುಗಳನ್ನು ಹಾಕಿಕೊಂಡು ಕುಣಿಯುತ್ತ ಗಣೇಶ ವಿಸರ್ಜನೆ ಮಾಡುವುದು ಮಾಮೂಲಿ ಆಗಿರುವ ಇಂದಿನ ದಿನಗಳಲ್ಲಿ ಜಾನಪದ ಕಲಾಮೇಳಗಳೊಂದಿಗೆ ವಿಸರ್ಜನೆ ಮಾಡಿರುವುದು ವಿಶೇಷವಾಗಿತ್ತು.

ತೊಗಟವೀರ ಕಲ್ಯಾಣ ಮಂಟಪದಿಂದ ವಿನೋಬನಗರದ 2ನೇ ಮುಖ್ಯ ರಸ್ತೆಯ ವಿನಾಯಕ ದೇವಸ್ಥಾನ, ರೆಡ್ಡಿ ಬಿಲ್ಡಿಂಗ್‌, ಬಕ್ಕೇಶ್ವರ ಶಾಲೆ, ಎಂ.ಸಿ.ಸಿ ‘ಎ’ ಬ್ಲಾಕ್‌ನ ಸಾಯಿ ಮಂದಿರ, ಪುರಂತರ ಆಸ್ಪತ್ರೆ, ಪಿ.ಜೆ. ಬಡಾವಣೆಯ ಚರ್ಚ್‌ ರಸ್ತೆ, ರಾಂ ಅ್ಯಂಡ್ ಕೊ ವೃತ್ತದವರೆಗೆ ಮೆರವಣಿಗೆ ನಡೆಯಿತು.

‘ಗಣೇಶ ವಿಸರ್ಜನೆಯ ವೇಳೆ ಕೊಬ್ಬರಿಯನ್ನು ಪ್ರಸಾದ ರೂಪದಲ್ಲಿ ಹಂಚಿದ ಬಳಿಕ ವಿಸರ್ಜನೆ ನೆರವೇರಿಸಲಾಗುವುದು’ ಎಂದು ಹಿಂದೂ ಯುವ ಶಕ್ತಿ ಸಂಘಟನೆಯ ಮುಖಂಡ ಪಿ.ಸಿ. ಶ್ರೀನಿವಾಸ್‌ ತಿಳಿಸಿದರು. ಮುಖಂಡರಾದ ಪಿ.ಸಿ. ರಾಮನಾಥ್, ಪಿ.ಸಿ. ಮಹಾಲಿಂಗಪ್ಪ, ಗುರುರಾಜ್ ಇದ್ದರು.

ರಾಂ ಅ್ಯಂಡ್ ಕೊ ವೃತ್ತದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ವಿಸರ್ಜನಾ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು. ಯುವಕರು ಡಿ.ಜೆ. ಸದ್ದಿಗೆ ನೃತ್ಯ ಮಾಡಿ ಸಂಭ್ರಮಿಸಿದರು. ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್ ಮೆರವಣಿಗೆಗೆ ಚಾಲನೆ ನೀಡಿದರು. ಪುನೀತ್ ರಾಜ್‌ಕುಮಾರ್ ಭಾವಚಿತ್ರ ಎಲ್ಲರ ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT