ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ದರ್ಜೆಗೆ ಏರಿದ ಸ್ಥಳೀಯ ಸಂಸ್ಥೆ: ಸೌಲಭ್ಯ ಬಲು ದೂರ..

ಹೋರಾಟಕ್ಕೆ ಸಿಗದ ಫಲ l ಜನರ ಅಸಾಮಾಧಾನ
Last Updated 14 ಫೆಬ್ರುವರಿ 2022, 5:13 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯ ಕೆಲವು ಸ್ಥಳೀಯ ಸಂಸ್ಥೆಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಆದರೆ, ನಾಗರಿಕ ಸೌಲಭ್ಯಗಳು ಮಾತ್ರ ದೂರವಾಗಿದೆ. ಹಲವು ಹೋರಾಟಗಳ ಫಲವಾಗಿ ಮೇಲ್ದರ್ಜೆಗೆ ಏರಿದ ಸ್ಥಳೀಯ ಸಂಸ್ಥೆಗಳಲ್ಲಿ ಮೂಲಸೌಲಭ್ಯ ಮರೀಚಿಕೆಯಾಗಿದೆ.

ಜಿಲ್ಲೆಯ ನ್ಯಾಮತಿಯನ್ನು ತಾಲ್ಲೂಕಾಗಿ, ಹೊನ್ನಾಳಿ ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ, ಮಲೇಬೆನ್ನೂರು ಗ್ರಾಮ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಆದರೆ, ಎಲ್ಲಿಯೂ ನಿರೀಕ್ಷಿತ ಅಭಿವೃದ್ಧಿ ಇಲ್ಲ.

ಹೊನ್ನಾಳಿಯಿಂದ ವಿಭಜನೆಗೊಂಡು ತಾಲ್ಲೂಕಾಗಿ 4 ವರ್ಷಗಳು ಕಳೆಯುತ್ತಿದ್ದರೂ ನ್ಯಾಮತಿಯಲ್ಲಿ ಯಾವುದೇ ಕಚೇರಿಗಳು ಸ್ಥಳಾಂತರವಾಗಿಲ್ಲ.

ಮೈಸೂರು ಒಡೆಯರ್‌ ಕಾಲದಲ್ಲಿ ನ್ಯಾಮತಿ ತಾಲ್ಲೂಕು ಕೇಂದ್ರ ಸ್ಥಾನವಾಗಿತ್ತು. ತಾಲ್ಲೂಕಿನ ಎಲ್ಲ ಲಕ್ಷಣಗಳನ್ನು ಹೊಂದಿರುವ ನ್ಯಾಮತಿಯನ್ನು ತಾಲ್ಲೂಕಾಗಿ ಘೋಷಿಸಬೇಕು ಎಂದು ಹೋರಾಟ ನಡೆದಿತ್ತು. ಇದರ ಫಲವಾಗಿ2018ರಫೆ.28ರಂದು ನ್ಯಾಮತಿ ತಾಲ್ಲೂಕು ಘೋಷಣೆಯಾಯಿತು.

ದಾಖಲೆಗಳಲ್ಲಿ ಮಾತ್ರ ತಾಲ್ಲೂಕು ಪಂಚಾಯಿತಿ.ತಾಲ್ಲೂಕು ಕೇಂದ್ರದಲ್ಲಿ 4 ವರ್ಷಗಳಲ್ಲಿ 12 ತಹಶೀಲ್ದಾರ್‌ ಬಂದು ಹೋಗಿದ್ದಾರೆ.ಕ್ರೀಡಾಂಗಣ ಇಲ್ಲ. ಸಮುದಾಯ ಆಸ್ಪತ್ರೆ ಮೇಲ್ದರ್ಜೆಗೆ ಏರಿಲ್ಲ. ಖಜಾನೆ ಇಲಾಖೆ ಕಚೇರಿ ಹೊರತುಪಡಿಸಿ ಎಲ್ಲ ಕೆಲಸಕ್ಕೆ ಹೊನ್ನಾಳಿಗೇ ಹೋಗಬೇಕಾದ ಅನಿವಾರ್ಯ ಇಲ್ಲಿನ ಜನರದ್ದು.

‘ತಾಲ್ಲೂಕಾಗಿ ಮೇಲ್ದರ್ಜೆಗೆ ಏರಿದರೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ. ಇಲ್ಲಿ ಮೊದಲಿನಿಂದಲೂ ಆಸ್ಪತ್ರೆ, ಪದವಿ ಕಾಲೇಜು ಸೇರಿ ತಾಲ್ಲೂಕಿನ ಎಲ್ಲ ಲಕ್ಷಣ ಇತ್ತು. ಹೀಗಾಗಿ ತಾಲ್ಲೂಕಿಗಾಗಿ ಹಲವು ಹೋರಾಟ ಮಾಡಿದ್ದೆವು. ಆದರೆ, ಸೌಲಭ್ಯ ಮಾತ್ರ ಸಿಕ್ಕಿಲ್ಲ’ ಎಂದರು ನ್ಯಾಮತಿ ತಾಲ್ಲೂಕು ಸಮಿತಿ ಹೋರಾಟಗಾರ ಹಾಗೂ ಮಾಜಿಶಾಸಕ ಡಾ.ಡಿ.ಬಿ. ಗಂಗಪ್ಪ.

ಗ್ರಾಮ ಪಂಚಾಯಿತಿಯಿಂದ ಒಮ್ಮೆಲೆ ಪುರಸಭೆಯಾಗಿ ಮೇಲ್ದರ್ಜೆಗೆ ಏರಿದ ಮಲೇಬೆನ್ನೂರಿನ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಪುರಸಭೆಯಾಗಿ 5 ವರ್ಷ ಕಳೆದರೂ ಕಾಯಂ ಕಚೇರಿಗಳು ಇಲ್ಲ. ರಸ್ತೆ, ಶೌಚಾಲಯ, ಸಮರ್ಪಕ ಕುಡಿಯುವ ನೀರು ಸೇರಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ.

ತುಂಗಭದ್ರಾ ನದಿಯಿಂದ ಶುದ್ಧ ಕುಡಿಯುವ ನೀರು ಸರಬರಾಜು ಬಹುಗ್ರಾಮ ಯೋಜನೆ ಸಮರ್ಪಕ ಅನುಷ್ಠಾನ ಆಗಿಲ್ಲ.

ಪುರಸಭೆಯಾಗಿ ಮೇಲ್ದರ್ಜೆಗೇರಿದ ಹೊನ್ನಾಳಿಯಲ್ಲೂ ಅಭಿವೃದ್ಧಿ ಇಲ್ಲ.

‘ಹೆಚ್ಚಿನ ಸಿಬ್ಬಂದಿ, ಪೌರಕಾರ್ಮಿಕರ ನೇಮಕವಾಗಿಲ್ಲ. ಬ್ರಿಟಿಷರ ಕಾಲದ ಪಟ್ಟಣ ಪಂಚಾಯಿತಿ ಕಚೇರಿಯನ್ನೇ ಪದೇ ಪದೇ ದುರಸ್ತಿ ಮಾಡಿ ಸುಣ್ಣ ಬಣ್ಣ ಹೊಡೆಸಲಾಗುತ್ತಿದೆ. ಹೆಸರಿಗಷ್ಟೇ ಪುರಸಭೆ ಆಗಿದೆ. ಇದುವರೆಗೂ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ’ ಎಂದು ದೂರುತ್ತಾರೆ ಹೋರಾಟಗಾರ ಕತ್ತಿಗೆ ನಾಗರಾಜ್‌.

ಕಾರ್ಯಾರಂಭ ಮಾಡದ ಸರ್ಕಾರಿ ಕಚೇರಿಗಳು

ಡಿ.ಎಂ.ಹಾಲಾರಾಧ್ಯ

ನ್ಯಾಮತಿ: ಪಟ್ಟಣದ ಜನರ ಬಹುವರ್ಷಗಳ ಬೇಡಿಕೆಯಾಗಿದ್ದ ನ್ಯಾಮತಿ ತಾಲ್ಲೂಕು ಕೇಂದ್ರ ಘೋಷಣೆಯ ಆಸೆಯೇನೂ ಈಡೇರಿತು. ಆದರೆ, ನೂತನ ತಾಲ್ಲೂಕು ಉದ್ಘಾಟನೆಗೊಂಡು ಫೆ.28ಕ್ಕೆ ಐದು ವರ್ಷಗಳಾಗಲಿವೆ. ಆದರೆ, ಇದುವರೆಗೂ ಒಂದೂ ಸರ್ಕಾರಿ ಕಚೇರಿ ತೆರೆದಿಲ್ಲ.

ಅಂದಿನ ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಪ್ರಯತ್ನದ ಫಲವಾಗಿ 2013ರಲ್ಲಿ ಮುಖ್ಯಮಂತ್ರಿಯಾಗಿದ್ದ ಜಗದೀಶ ಶೆಟ್ಟರ್ ಬಜೆಟ್‌ನಲ್ಲಿ ನ್ಯಾಮತಿ ತಾಲ್ಲೂಕು ಘೋಷಣೆ ಮಾಡಿದರು. ಬಳಿಕ 2018ರಲ್ಲಿ ಅಂದಿನ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮತ್ತು ಅಂದಿನ ಶಾಸಕ ಡಿ.ಜಿ. ಶಾಂತನಗೌಡ ನ್ಯಾಮತಿ ತಾಲ್ಲೂಕಿಗೆ ಚಾಲನೆ ನೀಡಿದ್ದರು.

ತಾಲ್ಲೂಕು ಹೆಸರಿಗಷ್ಟೇ ಸೀಮಿತವಾಗಿದೆ.ತಾಲ್ಲೂಕಿಗೆ 75 ಗ್ರಾಮಗಳು ಸೇರ್ಪಡೆಯಾಗಿದ್ದು, 37 ವಿವಿಧ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಬೇಕಿದೆ. ‌ಖಜಾನೆ ಇಲಾಖೆ 2020ರಲ್ಲಿ ಆರಂಭಗೊಂಡಿದೆ.

ಆಸ್ತಿ, ಜಮೀನು ಇತರೆ ನೋಂದಣಿ ಹಾಗೂ ಕೃಷಿ ಸೌಲಭ್ಯ ಪಡೆಯಲು ಹೊನ್ನಾಳಿಗೆ ಅಲೆಯಬೇಕಾದ ಸ್ಥಿತಿ ಇದೆ. ಕಚೇರಿಗಳ ಆರಂಭಕ್ಕೂ ಹೋರಾಟ ನಡೆಸಬೇಕಾಗಿದೆ ಎಂಬುದು ಸಂಘ–ಸಂಸ್ಥೆ, ರೈತ ಮುಖಂಡರ ಅಸಮಾಧಾನ.

ಹೊನ್ನಾಳಿಯಿಂದ ವಿಭಜನೆಗೊಂಡ ತಾಲ್ಲೂಕು ಪಂಚಾಯಿತಿಯ 11 ಸದಸ್ಯರು 8 ತಿಂಗಳ ಆಡಳಿತ ನಡೆಸಿ ಮಾಜಿ ಆಗಿದ್ದಾರೆ.ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿದ್ದು, 11 ವಾರ್ಡ್‌ಗಳಾಗಿ ವಿಭಾಗಿಸಲಾಗಿದೆ. ವಾರ್ಡ್‌ಗಳಿಗೆ ಮೀಸಲಾತಿ ಮತ್ತು ಚುನಾವಣೆ ಘೋಷಣೆ ಆಗಬೇಕಿದೆ. ಮೀಸಲಾತಿ ಪ್ರಕ್ರಿಯೆ ವಿಳಂಬದಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆಯಾಗಿದೆ ಎಂಬುದು ಸ್ಥಳೀಯರ ಆರೋಪ.

‘ತಾಲ್ಲೂಕು ಆಡಳಿತ ಸಂಕೀರ್ಣದಲ್ಲಿ ಕಂದಾಯ, ಖಜಾನೆ, ಸಬ್‌ ರಿಜಿಸ್ಟಾರ್ ಕಚೇರಿ ಒಳಗೊಂಡಂತೆ 37 ಕಚೇರಿಗಳು ಒಂದೆಡೆ ಕಾರ್ಯ ನಿರ್ವಹಿಸುವಂತೆ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಅನುದಾನಕ್ಕೆ ಬೇಡಿಕೆ ಇಟ್ಟಿದ್ದು, ಸರ್ಕಾರ ₹ 10 ಕೋಟಿ ನೀಡಲು ಸಿದ್ಧವಿದೆ. ಕನಿಷ್ಠ ₹ 16 ಕೋಟಿ ಬೇಕು ಎಂದು ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರಿಗೆ ಮನವಿ ಮಾಡಿದ್ದೇನೆ’ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ಹರಿದು ಬರಬೇಕಾಗಿದೆ ಅನುದಾನ

ಎನ್.ಕೆ. ಆಂಜನೇಯ

ಹೊನ್ನಾಳಿ: ಸ್ವಾತಂತ್ರ್ಯ ಬಂದ ಆರಂಭದಲ್ಲಿಯೇ ಹೊನ್ನಾಳಿ ಪುರಸಭೆಯಾಗಿತ್ತು. ಆ ನಂತರ ಪರಿವರ್ತಿತ ಮಂಡಲ್ ಪಂಚಾಯಿತಿಯಾಯಿತು. 10 ತಿಂಗಳ ಹಿಂದೆ ಪುರಸಭೆಯಾಗಿ ಮೇಲ್ದರ್ಜೆಗೇರಿದೆ.

ಹಿರೇಮಠ ಹಾಗೂ ದೇವನಾಯಕನಹಳ್ಳಿ ಗ್ರಾಮಗಳನ್ನು ಸೇರಿಸಿ ಪುರಸಭೆ ಘೋಷಣೆ ಮಾಡಿದ್ದರೂ ಗ್ರಾಮಗಳನ್ನು ಅಧಿಕೃತವಾಗಿ ಸೇರಿಸಿಕೊಂಡಿಲ್ಲ.

ಪುರಸಭೆಗೆ ಹೆಚ್ಚು ಸಿಬ್ಬಂದಿ, ಪೌರಕಾರ್ಮಿಕರ ನೇಮಕವಾಗಿಲ್ಲ. ಕಟ್ಟಡ ಶಿಥಿಲಗೊಂಡಿದೆ. ನೂರಕ್ಕೂ ಹೆಚ್ಚು ಸಿಬ್ಬಂದಿಗಳಿಗನುಗುಣವಾಗಿ ಪ್ರತ್ಯೇಕ ಕೊಠಡಿ ಇಲ್ಲ. ಶೌಚಾಲಯದಲ್ಲಿ ನೀರಿನ ವ್ಯವಸ್ಥೆ ಇಲ್ಲ.

‘ದೇವನಾಯ್ಕನಹಳ್ಳಿ, ಹಿರೇಮಠ ಗ್ರಾಮಗಳು ಈಗ ಪುರಸಭೆಗೆ ಸೇರಿರುವುದರಿಂದ ಅಲ್ಲಿನ ಆಡಳಿತ ಪುರಸಭೆಗೆ ಸೇರುತ್ತದೆ. ಅಲ್ಲಿ ಮೂಲಸೌಲಭ್ಯ ಕಲ್ಪಿಸಬೇಕು’ ಎಂದು ಒತ್ತಾಯಿಸುತ್ತಾರೆ ಹೋರಾಟಗಾರ ಎಂ.ವಿನಯ್.

ಕಡತಗಳ ಡಿಜಿಟಲೀಕರಣ ಅಗತ್ಯ:

ನೂರಾರು ವರ್ಷಗಳ ಕಡತಗಳನ್ನು ಸುಲಭವಾಗಿ ತಿದ್ದುಪಡಿ ಮಾಡಬಹುದಾದ ಆತಂಕ ಇರುವ ಕಾರಣ ಡಿಜಿಟಲೀಕರಣ ವ್ಯವಸ್ಥೆ ಅಗತ್ಯ ಇದೆ.

ದೇವನಾಯಕನಹಳ್ಳಿ ಗ್ರಾಮದಲ್ಲಿ ಗಿಡ್ಡಪ್ಪ ಬಡಾವಣೆ, ಏಲಕ್ಕಿ ಕೇರಿ, ಪೌರಕಾರ್ಮಿಕರ ಬೀದಿ, ಪೊಲೀಸ್ ವಸತಿ ಗೃಹ, ಮಸೀದಿ ರಸ್ತೆ, ಸೇತುವೆ ಸಮೀಪದ ರಸ್ತೆಗಳು ಕೊಳಚೆ ಪ್ರದೇಶಗಳಂತಿವೆ. ಇಲ್ಲಿ ಕಡು ಬಡವರು, ಕೂಲಿ ಕಾರ್ಮಿಕರು ಹೆಚ್ಚಿದ್ದಾರೆ. ರಸ್ತೆಗಳು ಕಿರಿದಾಗಿವೆ. ಚರಂಡಿ, ಬೀದಿ ದೀಪಗಳಿಲ್ಲ. ಈ ಭಾಗಕ್ಕೆ ಸರ್ಕಾರದ ಯೋಜನೆಗಳು ತಲುಪಿಲ್ಲ ಎಂಬುದು ನಿವಾಸಿಗಳ ಆರೋಪ. ‘ತಾಲ್ಲೂಕಿಗೆ ಸಾಂಸ್ಕೃತಿಕ ಭವನದ ಅಗತ್ಯ ಇದ್ದು, ಕನಕದಾಸ ರಂಗಮಂದಿರವನ್ನು ಆಧುನೀಕರಣಗೊಳಿಸಬೇಕು. ಸಮಸ್ಯೆಗಳಿಂದ ಕೂಡಿರುವ ‌ಕುರಿಸಂತೆ ಮತ್ತು ದನದ ಸಂತೆಯನ್ನು ಎಪಿಎಂಸಿಗೆ ವರ್ಗಾಯಿಸಬೇಕು’ ಎನ್ನುತ್ತಾರೆ ಹೋರಾಟಗಾರ ಕತ್ತಿಗೆ ನಾಗರಾಜ್‌.

‘ಪುರಸಭೆಯಾದ ಮೇಲೆ ₹ 3 ಕೋಟಿ ಅನುದಾನ ಬಂದಿದ್ದು, ಅದರಲ್ಲಿ ಕೆಲವು ಟೆಂಡರ್ ಹಂತದಲ್ಲಿವೆ. ಕೆಲವು ಕಾಮಗಾರಿಗಳು ಪ್ರಗತಿಯಲ್ಲಿವೆ. ನಗರೋತ್ಥಾನ ಯೋಜನೆಯಡಿ ₹ 10 ಕೋಟಿ ಬಿಡುಗಡೆ ಹಂತದಲ್ಲಿದೆ. ಕಡತಗಳನ್ನು ಹಂತಹಂತವಾಗಿ ಕಂಪ್ಯೂಟರೀಕರಣ ಮಾಡಲಾಗುವುದು’ ಎಂದರು ಹೊನ್ನಾಳಿ ಪುರಸಭೆ ಮುಖ್ಯಾಧಿಕಾರಿ ಪಂಪಾಪತಿ ನಾಯ್ಕ.

ಪ್ರಗತಿ ಕಾಣದ ಉನ್ನತೀಕರಿಸಿದ ಪುರಸಭೆ

ಎಂ. ನಟರಾಜನ್

ಮಲೇಬೆನ್ನೂರು:30 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆಯ ರಾಜ್ಯದಲ್ಲಿನ ಎರಡನೇ ದೊಡ್ಡ ಗ್ರಾಮ ಪಂಚಾಯಿತಿ ಮಲೇಬೆನ್ನೂರು ಪುರಸಭೆಯಾಗಿ ಉನ್ನತೀಕರಣ ಹೊಂದಿ 5 ವರ್ಷಗಳಾದರೂ ಹೆಚ್ಚಿನ ಪ್ರಗತಿ ಸಾಧಿಸಿಲ್ಲ.

ಗ್ರಾಮ ಪಂಚಾಯಿತಿ ನೇರವಾಗಿ ಪುರಸಭೆಯಾಗಿ ಉನ್ನತೀಕರಣಗೊಂಡಿದೆ. 5 ವರ್ಷ ಕಳೆದರೂ ಕಾಯಂ ಕಚೇರಿ ಹೊಂದುವ ಭಾಗ್ಯ ಸಿಕ್ಕಿಲ್ಲ.

ಹಳೆ ಗ್ರಾಮ ಪಂಚಾಯಿತಿ ಕಚೇರಿ, ಅಂಬೇಡ್ಕರ್ ಸಮುದಾಯ ಭವನದಲ್ಲಿ ಪುರಸಭೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 27 ಅಧಿಕಾರಿಗಳು ಪುರಸಭೆ ಮುಖ್ಯಾಧಿಕಾರಿಗಳಾಗಿ ಆಡಳಿತ ನಡೆಸಿದ್ದೇ ಸಾಧನೆ. ಕೊರೊನಾ ಅವಧಿ ವೇಳೆ ಒಮ್ಮೆಯೂ ಸಾಮಾನ್ಯ ಸಭೆ ನಡೆಯಲಿಲ್ಲ.

‘ಪಟ್ಟಣ ಹೆಸರಿಗೆ ಮಾತ್ರ ಉನ್ನತೀಕರಣವಾಗಿದೆ. ಅನುದಾನದ ಭರವಸೆ ಹುಸಿಯಾಗಿದೆ. ಕೆಲವು ರಸ್ತೆಗಳು, ಚರಂಡಿ ಮಾತ್ರ ಕಾಂಕ್ರೀಟ್ ಕಂಡಿವೆ. ನೀರಿನ ಸಮಸ್ಯೆ ಪರಿಹರಿಸಲು ಸಾಧ್ಯವಾಗಿಲ್ಲ. ಲಕ್ಷಾಂತರ ರೂಪಾಯಿ ಬಿಲ್ ಬಾಕಿ ಉಳಿದಿದೆ’ ಎಂದರು ಪುರಸಭೆ ಮಾಜಿ ಸದಸ್ಯ ಭಾನುವಳ್ಳಿ ಸುರೇಶ್.

‘ಕೊಳವೆಬಾವಿಗಳ ದುರಸ್ತಿ, ಪಂಪ್ ನಿರ್ವಹಣೆ, ಬೀದಿ ದೀಪಗಳ ನಿರ್ವಹಣೆ ಸಮರ್ಪಕವಾಗಿಲ್ಲ’ ಎನ್ನುತ್ತಾರೆ ಪುರಸಭೆ ಉಪಾಧ್ಯಕ್ಷರಾಗಿದ್ದ ಬಿ.ಎಂ. ಚನ್ನೇಶ್ ಸ್ವಾಮಿ.

‘ಆಡಳಿತ ಸೌಧ ಇಲ್ಲ. ಪಟ್ಟಣದ ಎರಡೂ ಕಡೆ ಸ್ವಾಗತ ಕಮಾನು ಅಳವಡಿಸಿಲ್ಲ. ಬಾಪೂಜಿ ಹಾಲ್, ಗ್ರಂಥಾಲಯ ಕಟ್ಟಡ ಪುನರ್ ನಿರ್ಮಾಣ ಆಗಬೇಕು. ಘನ ತ್ಯಾಜ್ಯವನ್ನು ಹರಿಹರಕ್ಕೆ ಕಳುಹಿಸುವ ಪರಿಸ್ಥಿತಿ ಇದೆ’ ಎನ್ನುತ್ತಾರೆ ಜ್ಯೋತಿ ನಾಗಭೂಷಣ.

‘ಪುರಸಭೆಗೆ ಆದಾಯದ ಕೊರತೆ ಇದೆ. ನಾಗರಿಕರು, ಉದ್ಯಮಿಗಳು, ವ್ಯಾಪಾರಸ್ಥರು ಲಕ್ಷಾಂತರ ರೂಪಾಯಿ ಕಂದಾಯ ಬಾಕಿ ಉಳಿಸಿಕೊಂಡಿದ್ದಾರೆ. ಸಂತೆ ಮೈದಾನ, ಮೀನು ಮಾಂಸದ ಮಾರುಕಟ್ಟೆ, ದೈನಂದಿನ ಕರ ವಸೂಲಿ ಹೊರತುಪಡಿಸಿದರೆ ಆದಾಯ ಮೂಲ ಇಲ್ಲ’ ಎಂದು ಪುರಸಭೆ ಮುಖ್ಯಾಧಿಕಾರಿ ರುಕ್ಮಿಣಿ ದೊಡ್ಡಮನಿ ಹೇಳಿದರು.

ನ್ಯಾಮತಿಗೆ ತಾಲ್ಲೂಕಿನ ಎಲ್ಲ ಲಕ್ಷಣ ಇತ್ತು. ಹಿಂದೆ ತಾಲ್ಲೂಕು ಕೇಂದ್ರ ಸ್ಥಾನವಾದ ಬಗ್ಗೆ ಉಲ್ಲೇಖ ಇತ್ತು. ಹೀಗಾಗಿ ತಾಲ್ಲೂಕಿಗಾಗಿ ಹಲವು ಹೋರಾಟ ಮಾಡಿದ್ದೆವು. ಆದರೆ ನಿರೀಕ್ಷಿತ ಅಭಿವೃದ್ಧಿ ಕಂಡಿಲ್ಲ.

ಡಾ.ಡಿ.ಬಿ. ಗಂಗಪ್ಪ, ಮಾಜಿ ಶಾಸಕ

ನ್ಯಾಮತಿಯಲ್ಲಿ 37 ಕಚೇರಿಗಳು ಒಂದೆಡೆ ಕಾರ್ಯ ನಿರ್ವಹಿಸುವಂತೆ ನೀಲನಕ್ಷೆ ತಯಾರಿಸಿ, 25 ಕೋಟಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಮಂಜೂರಾದ ಕೂಡಲೇ ಕಾಮಗಾರಿ ಆರಂಭಿಸಲಾಗುವುದು.

ಎಂ.ಪಿ. ರೇಣುಕಾಚಾರ್ಯ, ಶಾಸಕ

ಪಟ್ಟಣ ಪಂಚಾಯಿತಿ ವಾರ್ಡ್‌ಗಳ ರಚನೆಯಾಗಿದ್ದು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿದೆ. ಪಟ್ಟಿ ಸಿದ್ಧಗೊಂಡ ನಂತರ ಮುಂದಿನ ಪ್ರಕ್ರಿಯೆ ನಡೆಯಲಿದೆ.

ಎಂ. ರೇಣುಕಾ, ತಹಶೀಲ್ದಾರ್, ನ್ಯಾಮತಿ

ಹೊನ್ನಾಳಿ ಪುರಸಭೆ ಹೆಸರಿಗಷ್ಟೇ ಆಗಿದೆ. ಇದೂವರೆಗೂ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವಂತಹ ಯಾವುದೇ ಕಾರ್ಯಕ್ರಮಗಳನ್ನು ಹಾಕಿಕೊಂಡಿಲ್ಲ. ದೇವನಾಯಕನಹಳ್ಳಿ ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ.

ಕತ್ತಿಗೆ ನಾಗರಾಜ್‌, ಹೋರಾಟಗಾರ, ಹೊನ್ನಾಳಿ

ಕಚೇರಿ ಖರ್ಚುವೆಚ್ಚ ಹೆಚ್ಚಾಗಿದೆ. ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಆದಾಯ ಕ್ರೋಢಿಕರಣಕ್ಕೆ ಒತ್ತು ನೀಡಲಾಗುವುದು. ಕಚೇರಿಗೆ ಸ್ವಂತ ಕಟ್ಟಡ ಹೊಂದುವ ಪ್ರಯತ್ನ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದೆ.

ರುಕ್ಮಿಣಿ ದೊಡ್ಡಮನಿ, ಮುಖ್ಯಾಧಿಕಾರಿ, ಮಲೇಬೆನ್ನೂರು ಪುರಸಭೆ

ನಗರೋತ್ಥಾನ ಯೋಜನೆ ಅಡಿ ₹ 10 ಕೋಟಿ ಅನುದಾನ ಬಂದಿದೆ. ಕ್ರಿಯಾಯೋಜನೆ ರೂಪಿಸಲಾಗಿದೆ. ಪುರಸಭೆ ಕಟ್ಟಡಕ್ಕೆ ಕರ್ನಾಟಕ ನೀರಾವರಿ ನಿಗಮದಿಂದ 2 ಎಕರೆ ಜಮೀನು ಪಡೆಯಲಾಗುವುದು. ಉತ್ತಮ ಆಡಳಿತ ನೀಡಲಾಗುವುದು.

ಎಸ್. ರಾಮಪ್ಪ, ಶಾಸಕ, ಹರಿಹರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT