ಗುರುವಾರ , ಸೆಪ್ಟೆಂಬರ್ 19, 2019
22 °C
ಗಣಪನ ಪ್ರತಿಷ್ಠಾಪನೆ: ನಾನಾ ರೂಪಗಳಲ್ಲಿ ಕಂಗೊಳಿಸಲಿರುವ ವಿನಾಯಕ

ದಾವಣಗೆರೆಯಲ್ಲಿ ವಿವಿಧೆಡೆ ಗಣಪ | ವಿಲುಗರಿಗಳ ಸ್ಪರ್ಶ; ಕುರುಕ್ಷೇತ್ರ ವೈಭವ

Published:
Updated:
Prajavani

ದಾವಣಗೆರೆ: ಗೌರಿ ಗಣೇಶ ಹಬ್ಬಕ್ಕೆ ಬೆಣ್ಣೆದೋಸೆ ನಗರಿ ಸಜ್ಜಾಗುತ್ತಿದೆ. ಮಳೆ ಬರುತ್ತಿದ್ದರೂ ಹಬ್ಬದ ಉತ್ಸಾಹ ಮಾತ್ರ ಕುಂದಿಲ್ಲ. ವಿವಿಧ ಸಂಘ ಸಂಸ್ಥೆಗಳು ಗಣೇಶನ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ.

ವಿಘ್ನ ನಿವಾರಕನ ಆರಾಧಿಸಲು ಹಬ್ಬದ ತಯಾರಿ ಬಿರುಸುಗೊಂಡಿದೆ. ನಾನಾ ಬಗೆಯ ಗಣೇಶನ ಮೂರ್ತಿಗಳು ನಗರವನ್ನು ಪ್ರವೇಶಿಸಿವೆ. ಶಂಖದೊಳಗೆ ಕುಳಿತಿರುವ, ರಥದಲ್ಲಿ ಹೋಗುತ್ತಿರುವ, ಶಿವನ ರೂಪದಲ್ಲಿರುವ, ಹುತ್ತದಿಂದ ಮೂಡುತ್ತಿರುವ ವಿನಾಯಕನ ವಿಗ್ರಹಗಳು ಮನಸೆಳೆಯುತ್ತಿವೆ. ಅಲ್ಲದೇ ನವಿಲು ಗರಿಗಳಿಂದ ಏಕದಂತನ ವಿಗ್ರಹ ತಯಾರಿಸಲಾಗುತ್ತಿದೆ. ಕುರುಕ್ಷೇತ್ರದ ಗಣಪತಿ, ನಾಗಸರ್ಪದ ಬಳಿ ಇರುವ ಗಣಪತಿಯನ್ನು ನಿರ್ಮಿಸಲಾಗಿದೆ.

ಪ್ರತಿ ಗಣೇಶ ಹಬ್ಬದಲ್ಲೂ ವಿನೂತನ ಪ್ರಯೋಗಗಳ ಮೂಲಕ ಗಮನ ಸೆಳೆಯುತ್ತಿರುವ ದಾವಣಗೆರೆಯ ಹಿಂದೂ ಯುವ ಶಕ್ತಿ ಸಂಘಟನೆಯು ಈ ಬಾರಿ ಸುಮಾರು 5,000 ನವಿಲುಗರಿಗಳನ್ನು ಬಳಸಿ 13 ಅಡಿ ಎತ್ತರದ ಭವ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಿದೆ.

ನಗರದ ಎಂ.ಸಿ.ಸಿ ‘ಎ’ ಬ್ಲಾಕ್‌ನ ತೋಗಟವೀರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿರುವ 28ನೇ ವರ್ಷದ ವಿನಾಯಕ ಮಹೋತ್ಸವದಲ್ಲಿ ನವಿಲುಗರಿಯ ಗಣಪ ಈ ಬಾರಿಯ ವಿಶೇಷವಾಗಿದೆ. ಅಧ್ಯಕ್ಷ ಪಿ.ಸಿ. ಮಹಾಬಲೇಶ್ವರ ನೇತೃತ್ವದಲ್ಲಿ ಹಿಂದೂ ಯುವ ಶಕ್ತಿ ಸಂಘಟನೆಯ ಕಾರ್ಯಕರ್ತರು ಹೊಸ ಹೊಸ ಮಾದರಿಯ ವಕ್ರತುಂಡನನ್ನು ತಯಾರಿಸಿ ಹಬ್ಬಕ್ಕೆ ಪ್ರತಿ ಬಾರಿಯೂ ಹಬ್ಬಕ್ಕೆ ವಿಶೇಷ ಮೆರುಗು ನೀಡುತ್ತಿದ್ದಾರೆ.

‘ಆರಂಭದಲ್ಲಿ ಉಡುಪಿಯ ವೆಂಕಟರಮಣ ಭಟ್‌ ಅವರು ಗಣಪತಿ ತಯಾರಿಸಿದ್ದರು. ಅವರಿಂದ ಕಲಿತ ಹಿಂದೂ ಯುವಶಕ್ತಿ ಸಂಘಟನೆಯ ಗುರುರಾಜ್, ಹರೀಶ್, ಧನುಷ್, ಪ್ರಭು, ರಘು ಅವರು ಗಣಪನಿಗೆ ನವಿಲುಗರಿಗಳ ಸ್ಪರ್ಶ ನೀಡಿದ್ದಾರೆ. ಬೆಂಗಳೂರು ಹಾಗೂ ಕೋಲಾರಗಳಿಂದ ನವಿಲು ಗರಿಗಳನ್ನು ತರಿಸಿದ್ದೇವೆ’ ಎನ್ನುತ್ತಾರೆ ಅಧ್ಯಕ್ಷ ಪಿ.ಸಿ. ಮಹಾಬಲೇಶ್ವರ.

‘ಸೆಪ್ಟೆಂಬರ್ 11ರಂದು ಗಣಹೋಮ ಹಾಗೂ ಅನ್ನ ಸಂತರ್ಪಣೆ ಇರುತ್ತದೆ. 12ರಂದು ಅನಂತ ಚತುರ್ದಶಿಯಂದು ಜನಪದ ಕಲಾತಂಡಗಳೊಂದಿಗೆ ಪಿ.ಜೆ. ಬಡಾವಣೆ, ಎಂಸಿಸಿ ’ಎ’ ಬ್ಲಾಕ್‌ಗಳಲ್ಲಿ ಮೆರವಣಿಗೆ ನಡೆಸಿ ಬಾತಿ ಕೆರೆಯಲ್ಲಿ ಗಣಪತಿ ವಿಸರ್ಜನೆ ಮಾಡುತ್ತೇವೆ’ ಎನ್ನುತ್ತಾರೆ ಅವರು.

ಹೈಸ್ಕೂಲ್ ಮೈದಾನದಲ್ಲಿ ಮೈದಳೆದಿದೆ ಧರ್ಮಸ್ಥಳ:

ನಗರದ ಹೈಸ್ಕೂಲ್ ಮೈದಾನದಲ್ಲಿ ಈ ಬಾರಿ ಗಣೇಶನನ್ನುಪ್ರತಿಷ್ಠಾಪಿಸಲು 180 ಅಡಿ ಅಗಲ ಹಾಗೂ 130 ಅಡಿ ಉದ್ದದಲ್ಲಿ ಧರ್ಮಸ್ಥಳ ದೇವಸ್ಥಾನದ ಮಾದರಿಯ ಪೆಂಡಾಲ್ ನಿರ್ಮಿಸಲಾಗಿದೆ. 40 ದಿವಸದಿಂದ ಈ ಪೆಂಡಾಲ್‌ ಅನ್ನು ತಯಾರಿಸಿದ್ದು, ಅಲ್ಲಿ 15 ಅಡಿ ಎತ್ತರದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಹಿಂದೂ ಮಹಾಗಣಪತಿ ಟ್ರಸ್ಟ್‌ನಿಂದ ಸಿದ್ಧತೆ ನಡೆಸಲಾಗಿದೆ.

‘17 ದಿವಸ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಯಕ್ಷಗಾನ, ನಾಟಕ ಹಾಗೂ ಮಜಾಭಾರತದ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 21 ದಿನಗಳ ನಂತರ ಗಣಪತಿ ವಿಸರ್ಜನೆ ಮಾಡಲಾಗುತ್ತದೆ’ ಎನ್ನುತ್ತಾರೆ ಟ್ರಸ್ಟ್ ಅಧ್ಯಕ್ಷ ಗುರು ಜೊಳ್ಳಿ.

ಬೀರೇಶ್ವರ ದೇವಸ್ಥಾನದ ಬಳಿ ಕೋಲ್ಕೊತ್ತಾದ 8 ಕಲಾವಿದರು ಮಣ್ಣಿನ ಗಣಪತಿ ಮಾರಾಟದಲ್ಲಿ ನಿರತರಾಗಿದ್ದಾರೆ.

‘ಕೋಲ್ಕತ್ತದ ಗಂಗಾನದಿಯಿಂದ ಮಣ್ಣನ್ನು ತಂದು ಹುಲ್ಲು, ಕಟ್ಟಿಗೆ, ನಾರುಗಳನ್ನು ಸೇರಿಸಿ ಗಣಪತಿ ಮೂರ್ತಿಗಳನ್ನು ತಯಾರು ಮಾಡುತ್ತಿದ್ದೇವೆ ಈಗಾಗಲೇ 60 ಗಣಪತಿ ಮೂರ್ತಿಗಳು ಮಾರಾಟವಾಗಿವೆ’ ಎನ್ನುತ್ತಾರೆ ರಜತ್‌ಪಾಲ್.

Post Comments (+)