ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕಿಯ ವರ್ಗಾವಣೆ: ಪರ- ವಿರೋಧ ತಿಕ್ಕಾಟ

ಗೊಂದಲದ ಗೂಡಾದ ರಾಮಗೊಂಡನಹಳ್ಳಿಯ ಸರ್ಕಾರಿ ಪ್ರೌಢಶಾಲೆ
Last Updated 9 ನವೆಂಬರ್ 2019, 9:52 IST
ಅಕ್ಷರ ಗಾತ್ರ

ಮಾಯಕೊಂಡ: ವರ್ಗಾವಣೆಯಾಗಿ ಬಂದ ಶಿಕ್ಷಕರ ಪಾಠ ಕೇಳಲು ನಿರಾಕರಿಸಿದ ರಾಮಗೊಂಡನಹಳ್ಳಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಹಳೆ ಶಿಕ್ಷಕಿಯೇ ಪಾಠ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ. ಇದರಿಂದ ಗ್ರಾಮದಲ್ಲಿ ಹೊಸ ಶಿಕ್ಷಕ ಹಾಗೂ ಹಳೆ ಶಿಕ್ಷಕಿಯ ಪರ ವಿರೋಧ ತಿಕ್ಕಾಟ ಶುರುವಾಗಿದೆ.

ಗ್ರಾಮದಲ್ಲಿ 15ದಿನಗಳಿಂದ ನಡೆಯುತ್ತಿರುವ ಈ ತಿಕ್ಕಾಟ ಪೊಲೀಸರು ಬಂದು ಸಂಧಾನ ನಡೆಸಿದರೂ ಇನ್ನೂ ಬಗೆಹರಿದಿಲ್ಲ. ಹಳೆ ಶಿಕ್ಷಕಿ ಸತ್ಯವತಿ ಅವರೇ ಪಾಠ ಮಾಡಬೇಕೆಂದು ವಿದ್ಯಾರ್ಥಿಗಳು ಈಚೆಗೆ ಶಾಲೆಯಿಂದ ಹೊರಗುಳಿದು ಪ್ರತಿಭಟನೆಯನ್ನೂ ಮಾಡಿದ್ದರು. ಇದರಿಂದ ಗ್ರಾಮದಲ್ಲಿ ಇಬ್ಬರು ಶಿಕ್ಷಕರ ಪರ –ವಿರೋಧ ಗುಂಪುಗಳು ಹುಟ್ಟಿಕೊಂಡಿವೆ.

ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 49 ವಿದ್ಯಾರ್ಥಿಗಳಿದ್ದಾರೆ. 9 ಶಿಕ್ಷಕರಿದ್ದಾರೆ. ಮುಖ್ಯಶಿಕ್ಷಕ ಗಣೇಶಾಚಾರಿ ರಜೆಯಲ್ಲಿದ್ದಾರೆ. ಕನ್ನಡ ಶಿಕ್ಷಕ ಹಾಲಪ್ಪ ವರ್ಗಾವಣೆಯಾಗಿದ್ದಾರೆ.ಇಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕಿ ಸತ್ಯವತಿ ಕಲಾ ಶಿಕ್ಷಕಿಯಾಗಿದ್ದರೂ ಹತ್ತು ವರ್ಷಗಳಿಂದ ಶಿಕ್ಷಕರಿಲ್ಲದ ಕಾರಣ ಇಂಗ್ಲಿಷ್ ಬೋಧಿಸುತ್ತಿದ್ದರು. ಇವರನ್ನು ಈಚೆಗೆ ಆಯುಕ್ತರ ಅದೇಶದಂತೆ ದಾವಣಗೆರೆ ಉರ್ದು ಶಾಲೆಗೆ ವರ್ಗಾವಣೆ ಮಾಡಲಾಗಿತ್ತು.

ಸತ್ಯವತಿ ಪುನಃ ಇದೇ ಶಾಲೆಗೆ ತಾತ್ಕಾಲಿಕ ನಿಯೋಜನೆ ಅದೇಶ ಪಡೆದು ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಅವರು ವರದಿ ಮಾಡಿಕೊಳ್ಳುವ ಮುಂಚಿತವಾಗಿ ಇಲ್ಲಿಗೆ ನಿಯೋಜನೆಗೊಂಡಿದ್ದ ಇಂಗ್ಲಿಷ್ ಶಿಕ್ಷಕ ಹರೀಶ ಕರ್ತವ್ಯಕ್ಕೆ ಹಾಜರಾಗಿದ್ದರು.

ವಿದ್ಯಾರ್ಥಿಗಳು ಶಿಕ್ಷಕ ಹರೀಶ್ ಇಂಗ್ಲಿಷ್ ಪಾಠ ಮಾಡುವುದು ಬೇಡ. ಹಿಂದಿನ ಶಿಕ್ಷಕಿ ಸತ್ಯವತಿ ಅವರೇ ಇಂಗ್ಲಿಷ್ ಪಾಠ ಮಾಡಲಿ ಎಂದು ಅಗ್ರಹಿಸಿ ತರಗತಿ ಬಹಿಷ್ಕರಿಸಿದ್ದಾರೆ. ಶಾಲೆಗೆ ಹೋಗದೇ ಗ್ರಾಮಸ್ಥರ ಬಳಿ ತೆರಳಿ ಇಂಗ್ಲಿಷ್ ಶಿಕ್ಷಕಿ ಸತ್ಯವತಿ ಅವರನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ವಿಷಯ ತಿಳಿದ ಪಿಎಸ್‌ಐ ಶೈಲಜಾ ಮತ್ತು ಸಿಬ್ಬಂದಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿ, ಪೋಷಕರು ಮತ್ತು ಶಿಕ್ಷಕರೊಂದಿಗೆ ಚರ್ಚಿಸಿದರು. ಆದರೆ ಯಾವುದೇ ನಿರ್ಧಾರಕ್ಕೆ ಬರಲಾಗದೆ ವಾಪಸಾದರು.

ವಿದ್ಯಾರ್ಥಿಗಳಾದ ಸಿಂಚನಾ, ಮೇಘನಾ, ಸುಮಾ, ‘ನಮಗೆ 10 ವರ್ಷಗಳಿಂದ ಸತ್ಯವತಿ ಟೀಚರ್‌ ಇಂಗ್ಲಿಷ್ ವಿಷಯವನ್ನು ಉತ್ತಮವಾಗಿ ಬೋಧನೆ ಮಾಡಿದ್ದಾರೆ. ಅವರನ್ನು ಬಿಟ್ಟು ಬೇರೆ ಶಿಕ್ಷಕರು ಪಾಠ ಮಾಡುವುದು ಬೇಡ ಎಂದು ಹಲವು ಬಾರಿ ಡಿಡಿಪಿಐಗೆ ಮನವಿ ಮಾಡಿದರೂ ಪರಿಗಣಿಸಿಲ್ಲ. ಶಿಕ್ಷಕಿ ವರ್ಗಾವಣೆಯಿಂದ ನಮಗೆ ಅನ್ಯಾಯವಾಗುತ್ತದೆ’ ಎಂದು ಕಣ್ಣೀರಿಟ್ಟರು.

‘ನಾನು ವಿದ್ಯಾರ್ಥಿಗಳಲ್ಲಿ ಸತತ 10 ವರ್ಷಗಳಿಂದ ಬದಲಾವಣೆ ತಂದಿದ್ದೇನೆ. ಶಾಲೆಯಲ್ಲಿ ನಡೆದ ಹಲವು ಹಗರಣಗಳನ್ನು ಪ್ರಶ್ನಿಸಿದಕ್ಕೆ ನನಗೆ ಕಿರುಕುಳ ನೀಡಲಾಗುತ್ತಿದೆ. ಇಲಾಖೆ ಅಧಿಕಾರಿಗಳು ಮಾಡಿದ ಜಾತಿಯತೆಗೆ ನನ್ನನ್ನು ಬಲಿಪಶು ಮಾಡಲಾಗಿದೆ’ ಎಂದು ಶಿಕ್ಷಕಿ ಸತ್ಯವತಿ ಪೊಲೀಸರ ಎದುರು ಅಳಲು ತೋಡಿಕೊಂಡರು.

ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜಪ್ಪ, ಮುಖಂಡ ಸಿ.ಡಿ. ಮಲ್ಲಿಕಾರ್ಜುನ, ‘ಶಾಲೆಯಲ್ಲಿ ಹಲವು ಹಗರಣ ನಡೆದಿದ್ದು ಸತ್ಯವತಿ ಖಂಡಿಸಿದ್ದಾರೆ. ಪೋಷಕರೂ ಸತ್ಯವತಿ ಅವರ ಉತ್ತಮ ಕೆಲಸ ಮೆಚ್ಚಿದ್ದು, ವರ್ಗಾವಣೆ ಮಾಡದಂತೆ ಡಿಡಿಪಿಐ, ಬಿಇಒಗೆ ಮನವಿ ಮಾಡಿದ್ದಾರೆ. ಆದರೆ ಇಲ್ಲಿ ಕೆಲಸ ಮಾಡುವರನ್ನೇ ಓಡಿಸುವ ಯತ್ನ ನಡೆದಿದೆ. ಬಿಇಒ ಕೂಡಾ ಶಿಕ್ಷಕಿ ವರ್ಗಾವಣೆಗೆ ಪಿತೂರಿ ನಡೆಸಿದ್ದಾರೆ’ ಎಂದರು .

‘ಸತ್ಯವತಿ ಸಮಾಜ ವಿಜ್ಞಾನ ಶಿಕ್ಷಕಿ ಆಗಿದ್ದಾರೆ. ಅವರು ಇಂಗ್ಲಿಷ್ ಪಾಠ ಮಾಡಬಾರದಿತ್ತು. ಶಿಕ್ಷಕ ಹರೀಶ್ ಇಂಗ್ಲಿಷ್ ಶಿಕ್ಷಕರಾಗಿದ್ದು, ಇಂಗ್ಲಿಷ್ ಬೋಧಿಸಲು ಯೋಗ್ಯರು. ಸತ್ಯವತಿ ಮುಗ್ಧ ವಿದ್ಯಾರ್ಥಿಗಳ ತಲೆ ಕೆಡಿಸಿದ್ದಾರೆ. ಕೂಡಲೇ ಅವರ ವರ್ಗಾವಣೆ ಜಾರಿ ಮಾಡಬೇಕು’ ಎಂದು ಮುಖಂಡ ಸಿ.ಡಿ. ಮಹೇಂದ್ರಪ್ಪ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT