ಮಂಗಳವಾರ, ನವೆಂಬರ್ 12, 2019
19 °C

ಇಷ್ಟಲಿಂಗ ಪೂಜೆ ಮಾಡುವವರೇ ಖರೆ ವೀರಶೈವರು: ಶಿವಾಚಾರ್ಯ ಸ್ವಾಮೀಜಿ

Published:
Updated:
Prajavani

ದಾವಣಗೆರೆ: ಕಡ್ಡಾಯವಾಗಿ ಇಷ್ಟಲಿಂಗ ಧಾರಣೆ ಮತ್ತು ಪೂಜೆ ಮಾಡುವವರೇ ಖರೆ ವೀರಶೈವರು, ಲಿಂಗಾಯತರು ಎಂದು ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿಶ್ಲೇಷಿಸಿದರು.

ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿ ಸೇವಾ ಸಂಘದಿಂದ ಚೌಕಿಪೇಟೆಯ ಮಾಗಾನಹಳ್ಳಿ ಬಸಮ್ಮ ಬಸಪ್ಪ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಇಷ್ಟಲಿಂಗ ಮಹಾಪೂಜೆ ನೆರವೇರಿಸಿ, ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

‘ಸಮುದಾಯದಲ್ಲಿ ಜನ್ಮ ತಾಳಿದ ಮಾತ್ರಕ್ಕೆ ವೀರಶೈವರಾಗುವುದಿಲ್ಲ. ಗುರುಗಳಿಂದ ಲಿಂಗದೀಕ್ಷೆ ಪಡೆದು, ಲಿಂಗವನ್ನು ದೇಹದ ಮೇಲೆ ಸದಾ ಧರಿಸುವ ಜತೆಗೆ ನಿತ್ಯವೂ ಏಕಾಗ್ರಚಿತ್ತದಿಂದ ತಪ್ಪದೇ ಪೂಜಿಸುವವರೇ ವೀರಶೈವರು, ಲಿಂಗಾಯತರು’ ಎಂದು ಹೇಳಿದರು.

ಇಷ್ಡಲಿಂಗಕ್ಕೆ ವೇದದಲ್ಲಿ ಪವಿತ್ರ ಎಂದೇ ಕರೆಯಲಾಗಿದೆ. ಅಪವಿತ್ರ ಜಾಗವನ್ನೂ ಪವಿತ್ರಗೊಳಿಸುವ ಶಕ್ತಿ ಅದಕ್ಕಿದೆ. ಹಾಗಾಗಿ ಲಿಂಗಧಾರಣೆಗೆ ನೆವ ಹೇಳಿ ತಪ್ಪಿಸಿಕೊಳ್ಳಲು ಅವಕಾಶವಿಲ್ಲ. ಪೂಜೆಗೆ ಬಳಸುವ ಸಾಮಗ್ರಿಗಿಂತಲೂ ನಿಮ್ಮ ಭಕ್ತಿ ಪರಮ ಶ್ರೇಷ್ಠ. ಓಡುವ ಮನಸ್ಸಿಗೆ ಲಗಾಮು ಹಾಕಿ ಪೂರ್ಣಶ್ರದ್ಧೆಯಿಂದ ಪೂಜಿಸಬೇಕೆಂದು ಹೇಳಿದರು.

ಶಾಸ್ತ್ರದ ಪ್ರಕಾರ ದಿನಕ್ಕೆ ಆರು ಹೊತ್ತು ಲಿಂಗ ಪೂಜೆ ಮಾಡಬೇಕು. ರಿಯಾಯಿತಿ ನಂತರ ಅವಧಿ ಕಡಿಮೆಯಾಗಿದೆ. ದೇವರಿಗೆ ಸ್ವಲ್ಪ ಸಮಯವನ್ನಾದರೂ ನೀಡಬೇಕು. ನಮಗಾಗಿ ಎಲ್ಲ ಸೌಕರ್ಯಗಳನ್ನು ನೀಡುವ ದೇವರಿಗೆ ನಾವು ಕೃತಜ್ಞತೆ ಸಲ್ಲಿಸುವುದೇ ಲಿಂಗಪೂಜೆ.

ಬೆಂಗಳೂರಿನ ಶಿವಶಂಕರ ಶಾಸ್ತ್ರಿ ಭಕ್ತಿ ಸಂಗೀತ ನಡೆಸಿಕೊಟ್ಟರು. ಬಕ್ಕೇಶ್ವರ ಸ್ವಾಮಿ ಸೇವಾ ಸಂಘದ ಕಾರ್ಯದರ್ಶಿ ಅಥಣಿ ವೀರಣ್ಣ, ಶೀಲಾ, ಖಜಾಂಚಿ ಮಾಗಾನಹಳ್ಳಿ ವಿನಯ್, ಬಕ್ಕೇಶ್ವರ ರಥೋತ್ಸವ ಸಮಿತಿ ಅಧ್ಯಕ್ಷ ಆಲ್ದಳ್ಳಿ ಸಿದ್ದರಾಮೇಶ್ವರ, ಆರ್.ಟಿ.ಪ್ರಶಾಂತ್. ಬನ್ನಯ್ಯ ಶಾಸ್ತ್ರಿ ಇದ್ದರು.

ಪ್ರತಿಕ್ರಿಯಿಸಿ (+)