ಚನ್ನಗಿರಿ: ತುಮ್ಕೋಸ್ ಸಂಸ್ಥೆಗೆ 39 ವಸಂತ ಸಂದಿದೆ. 2022-23ನೇ ಸಾಲಿನಲ್ಲಿ ₹ 916.26 ಕೋಟಿ ವ್ಯಾಪಾರ ವಹಿವಾಟು ನಡೆಸಿದ್ದು, ₹ 11.38 ಕೋಟಿ ನಿವ್ವಳ ಲಾಭ ಗಳಿಸಿರುವುದು ಹೆಮ್ಮೆಯ ಸಂಗತಿ ಎಂದು ತುಮ್ಕೋಸ್ ಸಂಸ್ಥೆ ಅಧ್ಯಕ್ಷ ಆರ್.ಎಂ. ರವಿ ತಿಳಿಸಿದರು.
ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಭಾನುವಾರ ನಡೆದ 2022-23ನೇ ಸಾಲಿನ ವಾರ್ಷಿಕ ಮಹಾಸಭೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
1984ನೇ ಸಾಲಿನಲ್ಲಿ ಪ್ರಾರಂಭಗೊಂಡ ಈ ಸಂಸ್ಥೆ ಕೇವಲ 126 ಸದಸ್ಯರನ್ನು ಹೊಂದಿತ್ತು. ಅದು ಇಂದು 15,058 ಸದಸ್ಯರನ್ನು ಹೊಂದಿದ ಬೃಹತ್ ಸಹಕಾರಿ ಸಂಘವಾಗಿ ಹೊರಹೊಮ್ಮಿದೆ. ಸಂಘವು ಸದರಿ ಸಾಲಿನಲ್ಲಿ ಹಲವಾರು ತಂತ್ರಜ್ಞಾನವನ್ನು ಬಳಸಿಕೊಂಡು ಸದಸ್ಯರಿಗೆ ಅನುಕೂಲವಾಗುವ ದೃಷ್ಟಿಯಿಂದ ಮೊಬೈಲ್ ಆಪ್ಲಿಕೇಷನ್ ವ್ಯವಸ್ಥೆ ಜಾರಿಗೊಳಿಸಿದೆ. ಪ್ರಸ್ತಕ ಸಾಲಿನಲ್ಲಿ ಪಟ್ಟಣದ ಬಸ್ ನಿಲ್ದಾಣದ ಬಳಿ 30 ಸಾವಿರ ಚದುರ ಅಡಿ ವಿಸ್ತೀರ್ಣವುಳ್ಳ ಅತಿ ದೊಡ್ಡದಾದ ‘ಸೂಪರ್ ಮಾರ್ಕೆಟ್’ ಪ್ರಾರಂಭಿಸಲಾಗಿದೆ. ನೆರೆಯ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಅಡಿಕೆ ಖರೀದಿ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು.
ಅಡಿಕೆ ಕೂಲಿ ಕಾರ್ಮಿಕ ಆಕಸ್ಮಿಕವಾಗಿ ಅಡಿಕೆ ಮರದಿಂದ ಬಿದ್ದು ಮೃತಪಟ್ಟರೆ ಅವರ ಕುಟುಂಬಕ್ಕೆ ವಿಮಾ ಕಂಪನಿಯಿಂದ ₹ 3 ಲಕ್ಷ ಪರಿಹಾರ ನೀಡುವ ವ್ಯವಸ್ಥೆ ಮಾಡಲಾಗಿದೆ. ಶಾಶ್ವತ ಅಂಗವೈಫಲ್ಯ, ಕಣ್ಣು, ಕಾಲು ಹಾಗೂ ಕೈ ಕಳೆದುಕೊಂಡಲ್ಲಿ ಶೇ 50ರಷ್ಟು ಪರಿಹಾರ ನೀಡಲಾಗುವುದು. ಸದಸ್ಯರಿಗೆ ₹ 259 ಕೋಟಿ ಮುಂಗಡ ಸಾಲ ನೀಡಲಾಗಿದೆ. ₹ 52.07 ಕೋಟಿ ಅಡಿಕೆ ದಾಸ್ತಾನು ಸಾಲ ವಿತರಿಸಲಾಗಿದೆ. ಪ್ರಸ್ತುತ ಅಡಿಕೆ ದರ ಉತ್ತಮವಾಗಿದೆ. ಆದರೂ ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ಅಡಿಕೆ ಬೆಳೆಯಲ್ಲಿ ಕಾಳುಮೆಣಸು, ಕೋಕೋ ಮುಂತಾದ ಪರ್ಯಾಯ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು. ಅಡಿಕೆ ಬೆಳೆಗಾರರ ಹಿತ ಕಾಪಾಡಲು ತುಮ್ಕೋಸ್ ಸಂಸ್ಥೆ ಬದ್ಧ ಎಂದರು.
ಸಂಸ್ಥೆ ನಿರ್ದೇಶಕರಾದ ಎಚ್.ಎಸ್. ಶಿವಕುಮಾರ್, ಟಿ.ವಿ. ರಾಜು ಪಟೇಲ್, ಕೆ.ಜಿ. ಸಂತೋಷ್, ಎಂ.ಸಿ. ದೇವರಾಜ್, ಬಿ.ಸಿ. ಶಿವಕುಮಾರ್, ಜಿ.ಆರ್. ಶಿವಕುಮಾರ್, ಎಚ್. ಸುರೇಶ್, ಎ.ಎಂ. ಚಂದ್ರಶೇಖರಪ್ಪ, ಆರ್. ಕೆಂಚಪ್ಪ, ಎನ್. ಗಂಗಾಧರಪ್ಪ, ಎಂ.ಎಸ್. ರಮೇಶ್ ನಾಯ್ಕ, ಎಂ.ಎಸ್. ದೇವೇಂದ್ರಪ್ಪ, ಆರ್. ಪಾರ್ವತಮ್ಮ, ಜಿ.ಆರ್. ಪ್ರೇಮಾ, ವ್ಯವಸ್ಥಾಪಕ ನಿರ್ದೇಶಕ ಎನ್.ಪಿ. ಮಧು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.