ತುಮ್ಕೋಸ್‌ಗೆ ರಾಷ್ಟ್ರ ಮಟ್ಟದ ಪ್ರಶಸ್ತಿ

7
'ಅತ್ಯುತ್ತಮ ಜಿಲ್ಲಾ ಮಟ್ಟದ ಸಹಕಾರ ಸಂಘ' ಔಟ್‌ಲುಕ್ ಪ್ರಶಸ್ತಿ

ತುಮ್ಕೋಸ್‌ಗೆ ರಾಷ್ಟ್ರ ಮಟ್ಟದ ಪ್ರಶಸ್ತಿ

Published:
Updated:
Deccan Herald

ಚನ್ನಗಿರಿ: ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳ ಅಡಿಕೆ ಬೆಳೆಗಾರರ ಸಂಜೀವಿನಿ ಎಂದು ಹೆಸರು ಪಡೆದಿರುವ ಪಟ್ಟಣದ ತುಮ್ಕೋಸ್ ಸಂಸ್ಥೆಗೆ ದೆಹಲಿಯ ಔಟ್‌ಲುಕ್ ಪತ್ರಿಕೆ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇದು ತಾಲ್ಲೂಕಿಗೆ ಸಂದಿರುವ ಹೆಮ್ಮೆಯ ಸಂಗತಿ.

ಡಿ. 15ರಂದು ನವದೆಹಲಿಯ ಭಾರತೀಯ ಕೃಷಿ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ನಡೆದ ರಾಷ್ಟ್ರ ಮಟ್ಟದ ಎರಡನೇ ವರ್ಷದ 'ಔಟ್ ಲುಕ್ ಅಗ್ರಿಕಲ್ಚರ್ ಕಾನ್ ಕ್ಲೇವ್ ಅಂಡ್ ಸ್ವರಾಜ್ ಇನ್ನೋವೇಷನ್ ಅವಾರ್ಡ್-2018' ಸಮಾರಂಭದಲ್ಲಿ ದೇಶದ 'ಅತ್ಯುತ್ತಮ ಜಿಲ್ಲಾ ಮಟ್ಟದ ಸಹಕಾರ ಸಂಘ' ಎಂಬ 'ರಾಷ್ಟ್ರೀಯ ಪ್ರಶಸ್ತಿ' ಲಭಿಸಿದೆ. ತುಮ್ಕೋಸ್ ಸಂಸ್ಥೆ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ಕೇಂದ್ರ ಕೃಷಿ ಸಚಿವ ಡಾ. ರಾಧಾ ಮೋಹನ್ ಸಿಂಗ್ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.

ಈಗಾಗಲೇ ತುಮ್ಕೋಸ್ ಸಂಸ್ಥೆಗೆ 2007ರಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಹಾಗೂ 2017ರಲ್ಲಿ ಲಕ್ಷ್ಮಣ್ ರಾವ್ ಇನಾಂದರ್ ಜನ್ಮ ಶತಮಾನೋತ್ಸವದ ಅಂಗವಾಗಿ ನಡೆದ ಸಮಾರಂಭದಲ್ಲಿ 'ಅತ್ಯುತ್ತಮ ಸಹಕಾರ ಸಂಘ' ಎಂಬ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೀಡಿದ್ದರು. ರಾಷ್ಟ್ರ ಮಟ್ಟದಲ್ಲಿ ವಿವಿಧ ವಿಭಾಗದಿಂದ ಪ್ರಶಸ್ತಿ ನೀಡಲು ಔಟ್‌ಲುಕ್ ಪತ್ರಿಕೆ  8 ಸಹಕಾರ ಸಂಘಗಳನ್ನು ಆಯ್ಕೆ ಮಾಡಿತ್ತು. ಪ್ರಶಸ್ತಿಗಾಗಿ ತುಮ್ಕೋಸ್ ಸಂಸ್ಥೆ ಯಾವುದೇ ಅರ್ಜಿಯನ್ನು ಸಲ್ಲಿಸಿರಲಿಲ್ಲ.

ಸಂಸ್ಥೆಯ ಅಧ್ಯಕ್ಷ ಎಚ್.ಎಸ್. ಶಿವಕುಮಾರ್, ‘ಸಂಸ್ಥೆಗೆ ಮತ್ತೊಮ್ಮೆ 'ಜಿಲ್ಲಾ ಮಟ್ಟದ ಅತ್ಯುತ್ತಮ ಸಹಕಾರ ಸಂಘ' ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಪ್ರಶಸ್ತಿ ಸಿಗಲು ಕಾರಣರಾದ ನಮ್ಮ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ನೌಕರ ವರ್ಗಕ್ಕೆ ಅಭಾರಿಯಾಗಿದ್ದೇನೆ. ಈಗಾಗಲೇ ಒಂದು ರಾಜ್ಯ ಹಾಗೂ ಎರಡು ಬಾರಿ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ಈ ಸಂಸ್ಥೆ ಪಡೆದುಕೊಂಡಿದೆ. ಹಾಗೆಯೇ ಮುಂಬರುವ ದಿನಗಳಲ್ಲಿ ಈ ಸಂಸ್ಥೆ ಇನ್ನು ಅತ್ತುತ್ತಮ ಕಾರ್ಯವನ್ನು ಮಾಡುವ ಮೂಲಕ ಅಂತರ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಪಡೆದುಕೊಳ್ಳುವ ಕಡೆಗೆ ಗಮನಹರಿಸುತ್ತೇವೆ’ ಎಂದರು.

ತುಮ್ಕೋಸ್ ಸಂಸ್ಥೆ ಪ್ರಾರಂಭವಾಗಿ 34 ವರ್ಷಗಳು ಸಂದಿವೆ. ಅಂದಿನಿಂದ ಇಂದಿನವರೆಗೂ ಅಡಿಕೆ ಬೆಳೆಗಾರರ ಹಿತವನ್ನು ಕಾಪಾಡುತ್ತಾ ಬಂದಿದೆ. ಸಂಘದ ವಹಿವಾಟು ಒಟ್ಟು ₹ 528 ಕೋಟಿ ದಾಟಿದೆ. ಕಳೆದ ವರ್ಷ ಅಡಿಕೆ ತೋಟಗಳನ್ನು ಉಳಿಸಿಕೊಳ್ಳುವ ಸಲುವಾಗಿ ಅಡಿಕೆ ಬೆಳೆಗಾರರಿಗೆ ನೀರಿಗಾಗಿ ₹ 62 ಕೋಟಿ ಸಾಲ ಹಾಗೂ ₹ 170 ಕೋಟಿ ಅಡಿಕೆ ಸಂಸ್ಕರಣಾ ಸಾಲವನ್ನು ನೀಡಲಾಗಿದೆ. ಅಡಿಕೆ ಬೆಳೆ ಹಾಗೂ ಅಡಿಕೆ ಬೆಳೆಗಾರರ ಹಿತವನ್ನು ಕಾಪಾಡುವ ಮತ್ತು ಅವರ ಕುಂದು ಕೊರತೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿ ನಿವಾರಣೆ ಮಾಡುವ ಉದ್ದೇಶವನ್ನು ಸಂಸ್ಥೆ ಹೊಂದಿದೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !