ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಲ್ಲ’ ಅನ್ನೋದೇ ಕಷ್ಟ ಕಣ್ರೀ...

Last Updated 2 ಏಪ್ರಿಲ್ 2018, 20:24 IST
ಅಕ್ಷರ ಗಾತ್ರ

ಕಚೇರಿಯಲ್ಲಿರುವ ಮಲ್ಲಿಗೆಗೆ ಬೇಸಿಗೆ ಶಿಬಿರದಲ್ಲಿರುವ ಮಗ ಹೇಗಿರುವನೋ ಎಂಬ ಚಿಂತೆ. ಮನೆಗೆ ತೆರಳಿ ಯಾವ ಅಡುಗೆ ಮಾಡುವುದು ಎಂಬ ಗೊಂದಲ. ಕಚೇರಿಯಲ್ಲಿ ಈಗಾಗಲೇ ವಹಿಸಿರುವ ಕೆಲಸ ಮುಗಿದಿಲ್ಲ ಎಂದು ತಡಬಡಿಸುತ್ತಿರುವಾಗಲೇ ‘ಇದೊಂದು ಕೆಲಸವನ್ನು ಮಾಡಿಕೊಡು ಪ್ಲೀಸ್‌...’ ಸಹೋದ್ಯೋಗಿಯ ಮೊರೆ. ಅತ್ತ ‘ಇಲ್ಲ’ ಎನ್ನಲೂ ಆಗದೆ, ಮಾಡುತ್ತೇನೆ ಎಂದು ಒಪ್ಪಿಕೊಳ್ಳಲೂ ಆಗದೆ ಮಲ್ಲಿಗೆಯ ಮನವದು ಗೊಂದಲದ ಗೂಡು.

ಟಿಪ್ಪುವಿನ ಪರಿಸ್ಥಿತಿಯು ಇದಕ್ಕಿಂತ ಭಿನ್ನವೇನಲ್ಲ. ವಾರದ ಕೆಳಗೆ ಸ್ನೇಹಿತನ ಮಾತಿಗೆ ಕಟ್ಟುಬಿದ್ದು ಒಪ್ಪಿಕೊಂಡಿದ್ದ ಕೆಲಸವಿನ್ನೂ ಆರಂಭವೇ ಆಗಿಲ್ಲ. ಕಚೇರಿಯಲ್ಲಿಯೂ ಹೇಳಲಾಗದಷ್ಟು ಕೆಲಸದ ಒತ್ತಡ. ಅಷ್ಟರಲ್ಲಾಗಲೇ ಕಂಪನಿ ವಹಿಸಿದ ಹೊಸ ಜವಾಬ್ದಾರಿ. ಯಾವುದಕ್ಕೂ ‘ಇಲ್ಲ’ ಎನ್ನಲಾಗದ ಟಿಪ್ಪುವಿಗೆ ಒಪ್ಪಿಕೊಳ್ಳಲೂ ಭಯ, ಇಲ್ಲವೆನ್ನಲೂ ಭಯ. ‘ಇತ್ತೀಚೆಗೆ ನಿನ್ನ ಕೆಲಸಗಳಲ್ಲಿ ನಿನ್ನ ನಿಜವಾದ ಸಾಮರ್ಥ್ಯ, ಅನನ್ಯತೆ ಕಳೆದುಹೋಗುತ್ತಿವೆ’ ಎನ್ನುವ ಸಹೋದ್ಯೋಗಿಯ ಎಚ್ಚರಿಕೆ. ಈ ಎಲ್ಲದರ ನಡುವೆ ಹೈರಾಣಾಗಿರುವ ಟಿಪ್ಪುವಿಗೆ ‘ಇಲ್ಲ’ ಎಂಬ ಪದದ ನಾಜೂಕು ಬಳಕೆಯನ್ನು ಕಲಿಯುವ ತವಕ.

ಅವನ ಪರಿಸ್ಥಿತಿ ಅರ್ಥೈಸಿಕೊಂಡಾಗ ‘ಇಲ್ಲ’ ಎನ್ನುವುದು ಕನ್ನಡ ಪದಕೋಶದ ಅತ್ಯಂತ ಭಾವನಾತ್ಮಕ ಪದ ಎನಿಸಿತು. ಇದನ್ನು ಬಳಸಲು ನಾವು ಏಕೆ ಹಿಂಜರಿಯುತ್ತೇವೆ. ಆದರೂ ವಾಸ್ತವ ಪರಿಸ್ಥಿತಿಗೆ ಅನುಗುಣವಾಗಿಯೇ ಬಳಸಬೇಕಾಗಿರುವುದು ಅನಿವಾರ್ಯ. ಸಂಬಂಧಗಳಿಗೆ ಚ್ಯುತಿ ಬಾರದಂತೆ ಈ ಪದವನ್ನು ಬಳಸುವುದು ಸಂವಹನದ ಕೌಶಲ. ದಾಕ್ಷ್ಯಿಣ್ಯಕ್ಕೆ ಅಂಜಿ ಎಲ್ಲಾ ಕೆಲಸವನ್ನೂ ಒಪ್ಪಿಕೊಂಡರೆ, ಯಾವ ಕಾರ್ಯದಲ್ಲಿಯೂ ನಮ್ಮ ಸಾಮರ್ಥ್ಯ ಸಾಬೀತುಪಡಿಸಿಕೊಳ್ಳಲು ಸಾಧ್ಯವಾಗುವುದೇ ಇಲ್ಲ ಎನಿಸಿತು.

ಕೆಲವರಿಗೆ ‘ಇಲ್ಲ’ ಎಂದು ಹೇಳುವುದು ನೀರು ಕುಡಿದಷ್ಟೇ ಸಲೀಸು. ಎಂತಹ ಪರಿಸ್ಥಿತಿಯಲ್ಲಾದರೂ, ಎಷ್ಟೇ ಆಪ್ತರು ಕೇಳಿದರೂ, ಅವರಿಗೆ ಅರ್ಥವಾಗುವಂತೆ ಇಲ್ಲ ಎಂದು ಬಿಡುತ್ತಾರೆ. ಮತ್ತೆ ಕೆಲವರಿಗೆ ‘ಆಗಲ್ಲ’ ಎನ್ನುವುದು ಒಂದು ಯಾಗದಷ್ಟೇ ಸವಾಲು. ಕಡೆಗೆ ಎಲ್ಲವನ್ನೂ ಒಪ್ಪಿಕೊಂಡು ಯಾವುದನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗದೆ ಪರದಾಡುತ್ತಾರೆ. ನಯವಾಗಿ ನಿರಾಕರಿಸುವುದು ಹೇಗೆ ಎಂಬುದನ್ನು ಕಲಿಯುವ ಸಲುವಾಗಿಯೇ ಕೆಲವರು ಆಪ್ತಸಮಾಲೋಚರ ಬಳಿಯೂ ತೆರಳುತ್ತಾರೆ. ಕಾರ್ಪೊರೇಟ್‌ ಮನಃಶಾಸ್ತ್ರ (ಕಾರ್ಪೊರೇಟ್‌ ಸೈಕಾಲಜಿ) ಎಂಬ ವಿಭಾಗವೊಂದು ಈಚೆಗೆ ಹೆಚ್ಚು ಜನಪ್ರಿಯವಾಗುತ್ತಿದೆ.

‘ಸಹೋದ್ಯೋಗಿಗಳಿಗೆ ಆಗಲಿ, ಸ್ನೇಹಿತರಿಗೆ ಆಗಿರಲಿ ನಾನೇಕೆ ‘ಇಲ್ಲ’ ಎನ್ನುತ್ತಿದ್ದೇನೆ ಎನ್ನುವುದನ್ನು ಮನವರಿಕೆ ಮಾಡಬೇಕು. ‘ಈ ಕೆಲಸವನ್ನು ನನಗಿಂತ ನೀನು ಮಾಡಿದರೆ ಹೆಚ್ಚು ಉತ್ತಮ’, ‘ಆ ವಿಷಯದಲ್ಲಿ ನಾನು ಅಸಮರ್ಥ’, ‘ನನಗಿರುವ ಕೆಲಸದ ಒತ್ತಡದಲ್ಲಿ ಇದರತ್ತ ಗಮನ ಕೊಡಲು ಸಾಧ್ಯವಾಗುವುದಿಲ್ಲ’, ‘ನಾನು ಇದನ್ನು ಮಾಡುವುದರಿಂದ ಈಗಾಗಲೇ ವಹಿಸಿಕೊಂಡಿರುವ ಕೆಲಸಗಳ ಗುಣಮಟ್ಟ ಕಡಿಮೆಯಾಗುತ್ತದೆ...’ ಹೀಗೆ ನೀವು ಅದನ್ನು ನಿರ್ವಹಿಸಲು ಆಗದಿರುವ ನಿಜವಾದ ಕಾರಣಗಳನ್ನು ಹೇಳಬೇಕು. ಸುಳ್ಳು ಹೇಳುವುದು ಆ ಕ್ಷಣದಲ್ಲಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಡಬಹುದು. ಆದರೆ, ಸಮಸ್ಯೆಗೆ ಇದು ಶಾಶ್ವತ ಪರಿಹಾರವಲ್ಲ’ ಎನ್ನುವುದು ಆಪ್ತಸಮಾಲೋಚಕಿ ಸುನಿತಾ ರಾವ್‌ ಸಲಹೆ.

‘ನಾನು ಯಾವುದು ಸಾಧ್ಯವಾಗುತ್ತದೊ ಅದನ್ನು ಮಾತ್ರ ಒಪ್ಪಿಕೊಳ್ಳುತ್ತೇನೆ. ಆಗದಿದ್ದರೆ, ಇಲ್ಲ ಎಂದು ನೇರವಾಗಿ ಹೇಳಿಬಿಡುತ್ತೇನೆ. ಇದರಲ್ಲಿ ಯಾವುದೇ ಮುಜುಗರವಿಲ್ಲ. ನನ್ನಲ್ಲಿ ಎರಡೇ ಪ್ರತಿಕ್ರಿಯೆಗಳು ಒಂದು ‘ಆಯ್ತು ಮಚಿ, ಅದೇನೆ ಆಗಲಿ ಮಾಡುತ್ತೇನೆ’ ಅಥವಾ ‘ಆಗಲ್ಲ ಮಗ, ಇನ್ನೊಂದ್ ಸಲ ಪ್ರಯತ್ನಿಸುತ್ತೇನೆ’ ಎನ್ನುತ್ತಾರೆ ಗಾಯತ್ರಿ ನಗರದ ಅಪ್ಪು ಎಸ್‌.ಗೌಡ.

(ಅಪ್ಪು ಎಸ್‌.ಗೌಡ)

‘ಯಾವುದೇ ಕೆಲಸವಾದರೂ ಒಮ್ಮೆ ಒಪ್ಪಿಕೊಂಡ ಮೇಲೆ ಮಾಡಿ ಮುಗಿಸಲೇಬೇಕು ಎನ್ನುವುದು ನನ್ನ ನಿಲುವು. ಹಾಗಾಗಿ ಒಪ್ಪಿಕೊಳ್ಳುವ ಮುನ್ನ ಯೋಚಿಸುತ್ತೇನೆ. ನಿಗದಿತ ಸಮಯದಲ್ಲಿ ಕೆಲಸದ ಗುಣಮಟ್ಟದೊಂದಿಗೆ ರಾಜಿಮಾಡಿಕೊಳ್ಳದೆ ಕಾರ್ಯ ನಿರ್ವಹಿಸಬೇಕಾದ ಕಾರಣ ಹಲವು ಸಂದರ್ಭಗಳಲ್ಲಿ ಇಲ್ಲ ಎನ್ನುವುದು ಹೆಚ್ಚು ಸೂಕ್ತ’ ಎನ್ನುತ್ತಾರೆ ರಾಜಾಜಿನಗರದ ಕಾರ್ತಿಕ್‌.

(ಕಾರ್ತಿಕ್‌)

‘ಯಾರು ಏನು ಕೆಲಸ ಹೇಳಿದರೂ ನನಗೆ ಇಲ್ಲ ಎನ್ನಲು ಆಗುವುದಿಲ್ಲ. ಇದೇ ಕಾರಣದಿಂದ ಒತ್ತಡಕ್ಕೆ ಒಳಗಾದ ಪ್ರಸಂಗಗಳಿವೆ. ಇಂಥ ಸಂದರ್ಭಗಳಲ್ಲಿ ಮುಂದೆಂದೂ ಹೀಗೆ ಅನಗತ್ಯ ಜವಾಬ್ದಾರಿಗಳನ್ನು ಒಪ್ಪಿಕೊಳ್ಳಬಾರದು ಎಂದುಕೊಳ್ಳುತ್ತೇನೆ. ಆದರೂ, ಇಲ್ಲ ಎನ್ನಲು ಸಾಧ್ಯವಾಗದೆ ಒತ್ತಡಗಳಿಂದ ಬಳಲುತ್ತೇನೆ’ ಎನ್ನುವುದು ಬಸವನಗುಡಿಯ ಗಗನಚುಕ್ಕಿ ಅವರ ಅನುಭವದ ಮಾತು.

(ಗಗನಚುಕ್ಕಿ)

‘ಎಲ್ಲದಕ್ಕೂ ಆಗುತ್ತದೆ, ಮಾಡುತ್ತೇನೆ ಎಂದು ಒಪ್ಪಿಕೊಳ್ಳುತ್ತಿದ್ದರೆ ಕೆಲವರು ‘ಟೇಕನ್ ಫಾರ್ ಗ್ರಾಂಟೆಡ್’ ಭಾವದಲ್ಲಿ ನಮ್ಮನ್ನು ಪರಿಗಣಿಸುತ್ತಾರೆ. ಅವರ ಒತ್ತಡಗಳನ್ನು ನಮ್ಮ ಮೇಲೆ ಹೊರಿಸುವ ಅಪಾಯವೂ ಇದೆ. ಹಾಗಾಗಿ ಎಚ್ಚರಿಕೆಯಿಂದ ವ್ಯವಹರಿಸಬೇಕು. ಎಮೋಷನಲ್‌ ಫೂಲ್‌ ಆಗುವುದಕ್ಕಿಂತ್ ಪ್ರಾಕ್ಟಿಕಲ್‌ ಆಗಿ ಯೋಚಿಸುವುದು, ವ್ಯವಹರಿಸುವುದು ಉತ್ತಮ’ ಎನ್ನುವುದು ಪ್ರಕಾಶ್‌ ನಗರದ ರೇಖಾ ಅವರ ಅನಿಸಿಕೆ.

(ರೇಖಾ)

**

ವಿವೇಚನೆ ಇರಲಿ

‘ಇಲ್ಲ’ ಎನ್ನುವ ಪದವನ್ನು ಎಲ್ಲರೂ ಬಳಸುತ್ತಾರೆ. ಆದರೆ, ಯಾವ ಸಂದರ್ಭದಲ್ಲಿ ಹೇಗೆ ಉಪಯೋಗಿಸಬೇಕು ಎಂದು ಕಲಿತವನು ಸಂಬಂಧಗಳನ್ನು ನಿಭಾಯಿಸುವಲ್ಲಿ ನಿಪುಣನಾಗುತ್ತಾನೆ. ಅದರಲ್ಲಿ ಅಸಮರ್ಥನಾದವನು ಸಂಬಂಧಗಳನ್ನೂ ಕಳೆದುಕೊಳ್ಳುತ್ತಾನೆ. ಅವಕಾಶಗಳನ್ನೂ ತಪ್ಪಿಸಿಕೊಳ್ಳುತ್ತಾನೆ. ನಾವು ಮನುಷ್ಯರು, ಯಂತ್ರಗಳಲ್ಲ. ವಾಸ್ತವ ಪರಿಸ್ಥಿತಿ ಮತ್ತು ಭಾವನೆಗಳನ್ನು ಹದವರಿತು ನಿರ್ವಹಿಸಬೇಕು. ಭಾವನಾತ್ಮಕ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವುದು ಎಷ್ಟು ಮುಖ್ಯವೋ, ವಾಸ್ತವ ಮಿತಿಗಳನ್ನು ಒಪ್ಪಿಕೊಳ್ಳುವುದೂ ಅಷ್ಟೇ ಮುಖ್ಯ. ನಮ್ಮಿಂದ ನಿರ್ವಹಿಸಲು ಸಾಧ್ಯವಾಗದ ಕೆಲಸಗಳನ್ನು ನೇರವಾಗಿ ಹೇಳಿ. ಆದರೆ ನಯವಾಗಿ ‘ಆಗಲ್ಲ’ ಎಂದು ಹೇಳುವುದನ್ನು ಕಲಿತುಕೊಳ್ಳಬೇಕು. ‘ಇಲ್ಲ’ ಎಂದು ಹೇಳುವ ಮೊದಲು ವಿವೇಚನೆ ಬಳಸಿ.

–ಸುನೀತಾ ರಾವ್, ಆಪ್ತ ಸಮಾಲೋಚಕಿ

**

ಮಕ್ಕಳಿಗೆ ಬಾಲ್ಯದಿಂದಲೇ ಸಂವಹನ ಕೌಶಲ ಕಲಿಸಬೇಕು. ಪೋಷಕರು ಮಕ್ಕಳೊಂದಿಗೆ ವ್ಯವಹರಿಸುವಾಗ ‘ಇಲ್ಲ’, ‘ಆಗಲ್ಲ’ ಪದಗಳನ್ನು ಪ್ರಯೋಗಿಸಿದಾಗ ಏಕೆ ಹೀಗೆ ಹೇಳಿದಿರಿ ಎನ್ನುವುದನ್ನು ಮಕ್ಕಳ ಮನಮುಟ್ಟುವಂತೆ ವಿವರಿಸಬೇಕು. ಮಕ್ಕಳಿಗೆ ಸಂವಹನ ಕೌಶಲ ಕಲಿಯಲು ಇದು ನೆರವಾಗುತ್ತದೆ. ಮಗು ಬೆಳೆದ ನಂತರ ‘ಇಲ್ಲ’ ಎನ್ನುವುದನ್ನು ಇನ್ನೊಬ್ಬರ ಮನಸಿಗೆ ನೋವಾಗದಂತೆ ಹೇಳಲು ಯತ್ನಿಸುತ್ತದೆ.

–ಅರುಣ್ ರಾವ್‌, ಮನಃಶಾಸ್ತ್ರಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT