ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂರಾರು ಜನರಿಗೆ ಲಕ್ಷಾಂತರ ರೂ ವಂಚಿಸಿದ ಇಬ್ಬರ ಬಂಧನ

ಬಿಲಿಯನ್‌ ಮಾರ್ಕೆಟಿಂಗ್‌ ಕಂಪನಿ ಹೆಸರಿನಲ್ಲಿ ವಂಚನೆ
Last Updated 12 ಏಪ್ರಿಲ್ 2019, 19:01 IST
ಅಕ್ಷರ ಗಾತ್ರ

ದಾವಣಗೆರೆ: ತಮಿಳುನಾಡಿನ ‘2020 ಬಿಲಿಯನ್‌ ಮಾರ್ಕೆಟಿಂಗ್‌’ ಕಂಪನಿ ಹೆಸರಿನಲ್ಲಿ ಆನ್‌ಲೈನ್‌ನಲ್ಲಿ ಹಣ ಕಟ್ಟಿಸಿಕೊಂಡು ನೂರಾರು ಜನರಿಗೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿದ ಇಬ್ಬರು ಆರೋಪಿಗಳನ್ನು ನಗರದ ಸಿಇಎನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ಮದುರೈನ ಸೈಯದ್‌ ಇಬ್ರಾಹಿಂ (46) ಹಾಗೂ ಕೋಲಾರ ಜಿಲ್ಲೆಯ ಮುದವಾಡಿ ಗ್ರಾಮದ ಎಂ.ಆರ್‌. ರಾಜ (39) ಬಂಧಿತರು.

ಇಲ್ಲಿನ ‘ಗೌರಿಗಣೇಶ ಚಿಟ್ಸ್‌’ನ ವ್ಯವಸ್ಥಾಪಕ ರಾಮಕೃಷ್ಣ ಅವರು ಜಗಳೂರಿನ ಮಸ್ಟೂರು ಗ್ರಾಮದ ಸ್ನೇಹಿತ ತಿಪ್ಪೇಸ್ವಾಮಿ ಸಲಹೆಯಂತೆ ಸೈಯದ್‌ ಇಬ್ರಾಹಿಂ ಹಾಗೂ ಎಂ.ಆರ್‌. ರಾಜ ಅವರು ನಡೆಸುತ್ತಿದ್ದ ‘2020 ಬಿಲಿಯನ್‌ ಮಾರ್ಕೆಟಿಂಗ್‌’ (www.2020billion.com) ಕಂಪನಿಯಲ್ಲಿ 2018ರ ಜುಲೈ 30ರಂದು ₹ 1.10 ಲಕ್ಷ ಹೂಡಿಕೆ ಮಾಡಿದ್ದರು. ಹೂಡಿಕೆದಾರರಿಗೆ 200 ದಿನಗಳ ಕಾಲ ಪ್ರತಿ ದಿನ ₹ 1,000 ಮರುಪಾವತಿ ಮಾಡಲಿದೆ ಎಂದು ಭರವಸೆ ನೀಡಲಾಗಿತ್ತು. ಜೊತೆಗೆ ಬೇರೆಯವರಿಂದಲೂ ಹೂಡಿಕೆ ಮಾಡಿಸಿದರೆ ಪ್ರತ್ಯೇಕವಾಗಿ ಕಮಿಷನ್‌ ಕೊಡುವುದಾಗಿ ನಂಬಿಸಲಾಗಿತ್ತು. ಅದರಂತೆ ರಾಮಕೃಷ್ಣ ಅವರು 110 ಜನರಿಂದ ತಲಾ ₹ 1.10 ಲಕ್ಷವನ್ನು ಎಂ.ಆರ್‌. ರಾಜ ನೀಡಿದ ಬ್ಯಾಂಕಿನ ಖಾತೆಗೆ ಹಾಕಿಸಿದ್ದಾರೆ. ಆದರೆ, ಕೆಲ ದಿನಗಳ ಬಳಿಕ ಹಣ ಬರುವುದು ನಿಂತಿದೆ. ಹೀಗಾಗಿ ರಾಮಕೃಷ್ಣ ಅವರು 2018ರ ಅಕ್ಟೋಬರ್‌ನಲ್ಲಿ ಸಿಇಎನ್‌ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ ಸಿಇಎನ್‌ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಟಿ.ವಿ. ದೇವರಾಜ್‌ ನೇತೃತ್ವದ ತಂಡ ಇಬ್ಬರು ಆರೋಪಿಗಳನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆದಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ತಿಪ್ಪೇಸ್ವಾಮಿ ಅವರು ಸುಮಾರು 300 ಜನರಿಂದ ಹಾಗೂ ಅವರಿಗೆ ಈ ಕಂಪನಿ ಬಗ್ಗೆ ಮಾಹಿತಿ ನೀಡಿದ್ದ ಗೋವಿಂದರಾಜು ಅವರು 706 ಜನರಿಂದ ಹೂಡಿಕೆ ಮಾಡಿಸಿದ್ದಾರೆ. ಜನರನ್ನು ನಂಬಿಸಿ ಸುಮಾರು ₹ 8 ಕೋಟಿಗೂ ಹೆಚ್ಚು ಹಣವನ್ನು ಬ್ಯಾಂಕ್‌ ಖಾತೆಗೆ ಹಾಕಿಸಿಕೊಂಡಿದ್ದಾರೆ ಎಂದು ರಾಮಕೃಷ್ಣ ದೂರು ನೀಡಿದ್ದರು. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದ ಆರೋಪಿಗಳನ್ನು ಪುನಃ ವಶಕ್ಕೆ ಪಡೆದು ಮದುರೈ, ಕೋಲಾರ, ಬೆಂಗಳೂರು, ಚಿತ್ರದುರ್ಗಕ್ಕೆ ಕರೆದುಕೊಂಡು ಹೋಗಿ ತನಿಖೆ ನಡೆಸಿದಾಗ ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಹಾಗೂ ತುಮಕೂರು ಜಿಲ್ಲೆಗಳ ಅನೇಕ ಜನರಿಂದ ಹಣ ಹಾಕಿಸಿಕೊಂಡು ವಂಚಿಸಿರುವುದು ಖಾತ್ರಿಯಾಗಿದೆ’ ಎಂದು ಚೇತನ್‌ ಮಾಹಿತಿ ನೀಡಿದರು.

ಆರೋಪಿಗಳು ತಮ್ಮ ಹಾಗೂ ಸೈಯದ್‌ ಇಬ್ರಾಹಿಂ ಪತ್ನಿ ಮಮ್ತಾಜ್‌ ಹೆಸರಿನಲ್ಲಿರುವ ಒಟ್ಟು 14 ಬ್ಯಾಂಕ್‌ ಖಾತೆಗಳಿಗೆ ಹಣ ಹಾಕಿಸಿಕೊಳ್ಳುತ್ತಿದ್ದರು. ಇವರ ಬ್ಯಾಂಕ್‌ ಖಾತೆಗಳನ್ನು ಪರಿಶೀಲನೆ ನಡೆಸಿದಾಗ ₹ 8 ಕೋಟಿಗೂ ಹೆಚ್ಚು ಹಣ ವಹಿವಾಟು ನಡೆದಿರುವುದು ಕಂಡುಬಂದಿದೆ. ಎಲ್ಲಾ ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಕೊಳ್ಳಲಾಗಿದೆ. ಕಂಪನಿಗೆ ವೆಬ್‌ಸೈಟ್‌ ಯಾರು ಮಾಡಿಕೊಟ್ಟಿದ್ದಾರೆ? ಕಂಪನಿ ನಡೆಸಲು ಅಗತ್ಯ ಪರವಾನಗಿ ಪಡೆದಿದ್ದರೇ? ಜಿಎಸ್‌ಟಿ ಸಂಖ್ಯೆ ಪಡೆದಿದ್ದರೇ? ಇವರ ಬ್ಯಾಂಕ್‌ ಖಾತೆಯಿಂದ ಯಾರ ಯಾರ ಖಾತೆಗೆ ಹಣ ಹೋಗಿದೆ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಮಮ್ತಾಜ್‌ ಅವರನ್ನೂ ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತಿಳಿಸಿದರು.

ತನಿಖೆ ನಡೆಸಿದ ತಂಡಕ್ಕೆ ಬಹುಮಾನ ಘೋಷಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಬಿಲಿಯನ್‌ ಮಾರ್ಕೆಟಿಂಗ್‌ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೊಳಗಾಗಿದ್ದರೆ ಸಿಇಎನ್‌ ಠಾಣೆಯ ಇನ್‌ಸ್ಪೆಕ್ಟರ್‌ ದೇವರಾಜ್‌ (ಮೊ: 8277981962, ದೂ: 09192–225119) ಅವರಿಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.

**

ಕಷ್ಟಪಟ್ಟು ದುಡಿದು ಉಳಿಸಿದ ಹಣವನ್ನು ಜನ ವಂಚನೆ ಮಾಡುವ ಕಂಪನಿಗಳಲ್ಲಿ ಹೂಡಿಕೆ ಮಾಡುವುದರ ಬದಲು ವಿಶ್ವಾಸಾರ್ಹತೆ ಉಳಿಸಿಕೊಂಡ ಹಣಕಾಸು ಸಂಸ್ಥೆಗಳಲ್ಲಿ ತೊಡಗಿಸಬೇಕು.
– ಆರ್‌. ಚೇತನ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT