ಕಡರನಾಯ್ಕನಹಳ್ಳಿ: ಉಕ್ಕಡಗಾತ್ರಿ ಗ್ರಾಮದಲ್ಲಿ ಗುರು ಕರಿಬಸವೇಶ್ವರ ಸ್ವಾಮಿಯ ಬೆಳ್ಳಿ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು.
ಅಜ್ಜಯ್ಯನ ಉತ್ಸವ ಮೂರ್ತಿಯನ್ನು ಸನ್ನಿಧಿಯಿಂದ ವಿವಿಧ ವಾದ್ಯಗಳೊಂದಿಗೆ ರಥದ ಬಳಿ ತರಲಾಯಿತು. ಶೃಂಗಾರಗೊಂಡ ಬೆಳ್ಳಿ ರಥದ ಸುತ್ತ ಉತ್ಸವ ಮೂರ್ತಿಯನ್ನು ಪ್ರದಕ್ಷಿಸಲಾಯಿತು. ನಂತರ ನಂದಿಗುಡಿ ವೃಷಭಪುರಿ ಮಹಾಸಂಸ್ಥಾನ ಬೃಹನ್ಮಠದ ಸಿದ್ದರಾಮೇಶ್ವರ ಸ್ವಾಮೀಜಿಗಳಿಂದ ಅಜ್ಜಯ್ಯನ ರಥರೋಹಣವಾಯಿತು. ವೇದ ಮಂತ್ರಗಳು ಮೊಳಗಿದವು. ಶ್ರೀಗಳಿಂದ ರಂಗಪೂಜೆ ನಡೆಯಿತು.
ಅಷ್ಟದಿಕ್ಪಾಲಕರಿಗೆ ಬಲಿದಾನ ನೀಡಿ ರಥದ ಚಕ್ರಕ್ಕೆ ಕಾಯಿ, ಹಣ್ಣು, ಕರ್ಪೂರ ಅರ್ಪಿಸಿದರು. ಭಕ್ತರು ಕರಿಬಸವೇಶ್ವರ ಮಹಾರಾಜ್ ಕಿ ಜೈ, ಹರ ಹರ ಮಹಾದೇವ ಎಂಬ ಜೈಕಾರ ಕೂಗುತ್ತಾ ರಥ ಎಳೆದರು.
ವೀರಭದ್ರ ದೇವರ ಕುಣಿತ, ವೀರಗಾಸೆ, ಜಾನಪದ ತಂಡ, ಭಜನಾ ತಂಡಗಳು, ಜಾಂಜ್ ಮೇಳ, ಡೊಳ್ಳು ಕುಣಿತ, ಮಂಗಳವಾದ್ಯ, ವೇದ ಘೋಷಣೆಗಳು ರಥೋತ್ಸವಕ್ಕೆ ಮೆರಗು ತಂದವು. ದೇವಾಲಯ ಹಾಗೂ ರಾಜ ಬೀದಿಗಳು ವಿದ್ಯುದ್ದೀಪ, ತಳಿರು ತೋರಣಗಳಿಂದ ಶೃಂಗಾರಗೊಂಡಿವೆ.
ಕರಿಬಸವೇಶ್ವರ ಸ್ವಾಮಿಯ ಪುಣ್ಯ ತಿಥಿಯ ನಿಮಿತ್ತ ಶ್ರಾವಣ ಮಾಸದ ಮೂರನೇ ಸೋಮವಾರ ಬ್ರಾಹ್ಮೀ ಮುಹೂರ್ತದಲ್ಲಿ ಕರಿಬಸವೇಶ್ವರ ಸ್ವಾಮಿಯ ಕರ್ತೃ ಗದ್ದುಗೆಗೆ ಲೋಕ ಕಲ್ಯಾಣಾರ್ಥವಾಗಿ ಮಹಾ ರುದ್ರಾಭಿಷೇಕ ಗಣ ಹೋಮ, ರುದ್ರ ಹೋಮ ನಡೆಯಿತು.
ಸಮಿತಿ ಕಾರ್ಯದರ್ಶಿ ಎಸ್.ಸುರೇಶ್, ಸದಸ್ಯರಾದ ಪ್ರಕಾಶ್ ಕೋಟೇರ, ಬಸನಗೌಡ ಪಾಳೇದ, ಗದಿಗೆಯ್ಯ ಪಾಟೀಲ್, ಆನಂದ ಗೌಡ ಪಾಟೀಲ್, ವೀರನಗೌಡ ಹಲಗಪ್ಪನವರ, ಇಂದೂಧರ ಜಿಗಳಿ ಇದ್ದರು.
ನಂತರ ಉಕ್ಕಡಗಾತ್ರಿ ಕರಿಬಸವೇಶ್ವರ ಗದ್ದುಗೆ ಟ್ರಸ್ಟ್‌ನವರು ತುಂಗಭದ್ರಾ ನದಿಗೆ ಬಾಗಿನ ಅರ್ಪಿಸಿದರು.
ಕಡರನಾಯ್ಕನಹಳ್ಳಿ ಸಮೀಪದ ಉಕ್ಕಡಗಾತ್ರಿ ದೇವಸ್ಥಾನದ ಟ್ರಸ್ಟ್ ವತಿಯಿಂದ ತುಂಗಭದ್ರಾ ನದಿಗೆಬಾಗಿನ ಅರ್ಪಿಸಿದರು